ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ವಿಜ್‌ ಎಂದರೆ ಕಲಿಕಾ ವಿಧಾನ’

Last Updated 18 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಬೌದ್ಧಿಕ ಸಾಮರ್ಥ್ಯವನ್ನು ಓರೆಗೆ ಹಚ್ಚುವ, ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸ್ಪರ್ಧೆಗಳಲ್ಲಿ ರಸಪ್ರಶ್ನೆ ಸ್ಪರ್ಧೆಯೂ ಒಂದು. ನಾವು ಗ್ರಹಿಸಿದ ಮಾಹಿತಿ, ತಿಳಿದುಕೊಂಡ ವಿಷಯಗಳು ಸಕಾಲಕ್ಕೆ ಅಭಿವ್ಯಕ್ತವಾಗುತ್ತವೆಯೇ, ಪ್ರಶ್ನೆ ಕೇಳಿದ ಕೂಡಲೇ ಆ ಮಾಹಿತಿ ನೆನಪಿನ ಕೋಶದಿಂದ ಹೊರಬರುತ್ತದೆಯೇ ಎಂಬುದನ್ನು ಪರಿಶೀಲಿಸುವ ಮಾರ್ಗವೇ ರಸಪ್ರಶ್ನೆ ಸ್ಪರ್ಧೆ ಅಥವಾ ಕ್ವಿಜ್‌.

ಈ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಗಳನ್ನು ಕುತೂಹಲ ಕಾಡುವಂತೆ ರಸವತ್ತರವಾಗಿ ನಡೆಸಿಕೊಡುವ ಕ್ವಿಜ್‌ ಮಾಸ್ಟರ್‌ಗಳೇ ಕಾರ್ಯಕ್ರಮದ ಸಾರಥಿಗಳು. ಈವರೆಗೆ ಕ್ವಿಜ್‌ ಮಾಸ್ಟರ್‌ಗಳಾಗಿ ಹೆಸರು ಮಾಡಿರುವವರು ಬಹುತೇಕ ಪುರುಷರು. ಈ ಕ್ಷೇತ್ರದಲ್ಲಿ ಮಹಿಳೆಯರೂ ಸಾಧನೆ ಮಾಡಬಲ್ಲರು ಎನ್ನುವುದನ್ನು ತೋರಿಸಲು ಇದನ್ನೇ ವೃತ್ತಿಯಾಗಿ ಸ್ವೀಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿದ್ದಾರೆ ಚಿಕ್ಕಮಗಳೂರಿನ ಮೇಘವಿ ಮಂಜುನಾಥ್.

ಪ್ರಜಾವಾಣಿಯ 5ನೇ ಆವೃತ್ತಿಯ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಡಲಿರುವ ಇವರು ತಮ್ಮ ಆಸಕ್ತಿ, ವೃತ್ತಿಜೀವನದ ಕುರಿತು ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಿಮಗೆ ಕ್ವಿಜ್‌ನಲ್ಲಿ ಆಸಕ್ತಿ ಹೇಗೆ ಮೂಡಿತು?

ರಸಪ್ರಶ್ನೆ ಮತ್ತು ಭಾಷಣಸ್ಪರ್ಧೆ ಎಂದರೆ ಚಿಕ್ಕಂದಿನಿಂದಲೂ ಇಷ್ಟ. ನನಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಸದಾ ಕಾಡುತ್ತಿರುತ್ತದೆ. ಟಿ.ವಿ.ಗಳಲ್ಲಿ ಪ್ರಸಾರವಾಗುವ ಕ್ವಿಜ್ ಕಾರ್ಯಕ್ರಮಗಳನ್ನು ಹೆಚ್ಚು ವೀಕ್ಷಿಸುತ್ತಿದ್ದೆ. ಹಲವು ಕ್ವಿಜ್‌ಗಳಲ್ಲೂ ಭಾಗವಹಿಸುತ್ತಿದ್ದೆ. ಕ್ರಮೇಣ ಆಸಕ್ತಿ ಹೆಚ್ಚಾಯಿತು. ಈಗ ಅದೇ ಜೀವನವಾಗಿದೆ.

ಮೊದಲ ಕಾರ್ಯಕ್ರಮ ಹೇಗಿತ್ತು?

ನಮ್ಮ ಕಾಲೇಜಿನಲ್ಲಿ ಒಮ್ಮೆ ಅಂತರ ಕಾಲೇಜು ಮಟ್ಟದ ಕ್ವಿಜ್‌ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂದು ಕ್ವಿಜ್‌ ನಡೆಸಿಕೊಡುವ ಮಾಸ್ಟರ್‌ ಬಂದಿರಲಿಲ್ಲ. ನಮ್ಮ ಪ್ರಾಧ್ಯಾಪಕರು ಕಾರ್ಯಕ್ರಮದ ನಿರೂಪಣೆ ಮಾಡುವಂತೆ ಸೂಚಿಸಿದರು. ಹೀಗೆ ಆಶ್ಚರ್ಯಕರ ರೀತಿಯಲ್ಲಿ ಕ್ವಿಜ್‌ ಮಾಸ್ಟರ್‌ ಆದೆ. ಅಂದಿನಿಂದ ಹಿಂತಿರುಗಿ ನೋಡಲಿಲ್ಲ.

ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಬಯಕೆ ಹೇಗೆ ಬಂತು?

ಸಾಮಾನ್ಯವಾಗಿ ಕ್ವಿಜ್‌ ನಡೆಸಿಕೊಡುವವರೆಲ್ಲಾ ಪುರುಷರೇ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರು ತೀರಾ ಕಡಿಮೆ. ಕಾಲೇಜಿನಲ್ಲಿ ನಡೆಸಿಕೊಟ್ಟ ಸ್ಪರ್ಧೆ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು. ಇದನ್ನು ಪ್ರವೃತ್ತಿಯಾಗಿ ಅಲ್ಲದೇ, ವೃತ್ತಿಯಾಗಿ ಸ್ವೀಕರಿಸಬೇಕು ಎಂದು ನಿರ್ಧರಿಸಿದೆ. ಪೋಷಕರು, ಸ್ನೇಹಿತರ ಬಳಿ ಈ ವಿಷಯ ತಿಳಿಸಿದಾಗ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇದರಲ್ಲೇ ಸಾಧನೆ ಮಾಡುವ ಬಯಕೆ ಇದೆ.

ವೃತ್ತಿಜೀವನ ಹೇಗೆ ಆರಂಭವಾಯಿತು?

ಪದವಿ ಪಡೆದ ಕೂಡಲೇ ಕ್ವಿಜ್ ಕಾರ್ಯಕ್ರಮಗಳನ್ನು ನಡೆಸಿಕೊಡಲು ಮುಂದಾದೆ. ಆರಂಭದಲ್ಲಿ, ನಾನಾಗಿಯೇ ಕೆಲವು ಸಂಸ್ಥೆಗಳಿಗೆ, ಶಾಲೆಗಳಿಗೆ ಹೋಗಿ, ಅವಕಾಶ ಕೇಳಿದೆ. ವೃತ್ತಿಜೀವನವನ್ನು ಆರಂಭಿಸಿ ಎಂಟು ವರ್ಷಗಳಾದವು. ವರ್ಷದಿಂದ ವರ್ಷಕ್ಕೆ ಅವಕಾಶಗಳು ಹೆಚ್ಚಾಗುತ್ತಲೇ ಇವೆ.

ಈವರೆಗೆ ಎಷ್ಟು ಕ್ವಿಜ್‌ಗಳನ್ನು ನಡೆಸಿಕೊಟ್ಟಿದ್ದೀರಿ?

ಸುಮಾರು 400 ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಿಕೊಟ್ಟಿದ್ದೇನೆ. ಜಿಲ್ಲಾ ಮಟ್ಟ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ, ಬಹುತೇಕ ದೇಶದ ಎಲ್ಲ ರಾಜ್ಯಗಳಲ್ಲಿ ಸ್ಪರ್ಧೆ ನಡೆಸಿಕೊಟ್ಟಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಮುರು ಸ್ಪರ್ಧೆಗಳನ್ನು ನಡೆಸಿಕೊಟ್ಟಿದ್ದೇನೆ.

ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಹೇಗಿತ್ತು?

ಥಾಯ್ಲೆಂಡ್‌, ಸಿಂಗಪುರ ಮತ್ತು ಕುವೈತ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ನಡೆಸಿಕೊಟ್ಟಿದ್ದೇನೆ. ಸಂತೋಷದ ವಿಷಯವೆಂದರೆ ಈ ಎಲ್ಲ ಸ್ಪರ್ಧೆಗಳು ಕನ್ನಡದ ಸಂಸ್ಕೃತಿ, ಕಲೆ, ಭಾಷೆಗೆ ಸಂಬಂಧಿಸಿದ ಸ್ಪರ್ಧೆಗಳಾಗಿದ್ದವು.

ಯಾವ ವಿಷಯಗಳನ್ನಾಧರಿಸಿದ ಕ್ವಿಜ್‌ಗಳನ್ನು ನಡೆಸಿಕೊಟ್ಟಿದ್ದೀರಿ?

ಹಲವು ವಿಧದ ಕ್ವಿಜ್‌ಗಳನ್ನು ನಡೆಸಿಕೊಟ್ಟಿದ್ದೀನಿ. ಅದರಲ್ಲೂ ಸ್ವಾರಸ್ಯ ಎನಿಸುವಂತಹ ವಿಷಯಗಳ ಬಗ್ಗೆಯಷ್ಟೇ ಕ್ವಿಜ್ ನಡೆಸಿಕೊಟ್ಟಿದ್ದಿದೆ. ರಾಜ್ಯ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಜೈವಿಕ ತಂತ್ರಜ್ಞಾನ ಕ್ವಿಜ್‌ ಅನ್ನು ಸುಮಾರು ಏಳು ವರ್ಷಗಳಿಂದ ನಡೆಸಿಕೊಟ್ಟಿದ್ದೇನೆ. ಆಟೊಮೊಬೈಲ್, ಮಾಹಿತಿ ತಂತ್ರಜ್ಞಾನ, ವನ್ಯಜೀವಿಗಳು, ಕಂಪ್ಯೂಟರ್‌ಗಳ ಬಗ್ಗೆ, ಮುತ್ತು, ರತ್ನ, ಹವಳ, ಚಿನ್ನಾಭರಣಗಳ ಬಗ್ಗೆಯೂ ಕ್ವಿಜ್‌ ನಡೆಸಿಕೊಟ್ಟಿದ್ದೇನೆ.

ಕ್ವಿಜ್‌ನ ಆಕರ್ಷಣೆ ಏನು?

ನನ್ನ ಪ್ರಕಾರ ಕ್ವಿಜ್‌ನಲ್ಲಿ ವಿಷಯ ಮತ್ತು ಪ್ರಶ್ನೆಗಳಿಗಿಂತ ಭಾಗವಹಿಸುವ ಪ್ರೇಕ್ಷಕರೇ ಪ್ರಮುಖ ಆಕರ್ಷಣೆ. ಸ್ಪರ್ಧಿಗಳಂತೆ ಅವರಲ್ಲೂ ಹೆಚ್ಚು ಕುತೂಹಲವಿರುತ್ತದೆ. ಹೀಗಾಗಿ ಅವರನ್ನು ಆಕರ್ಷಿಸುವಂತೆ ಕಾರ್ಯಕ್ರಮ ನಡೆಯಬೇಕು?

ಕ್ವಿಜ್‌ ಬಗ್ಗೆ ಸರಳವಾಗಿ ಹೇಗೆ ಹೇಳುವಿರಿ?

ಇದೊಂದು ಸ್ಪರ್ಧೆ, ಆಟ ಎನ್ನುವುದಕ್ಕಿಂತ ಉತ್ತಮ ಕಲಿಕಾ ವಿಧಾನ ಎನ್ನಬಹುದು. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಾ ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಮನದಟ್ಟಾಗುತ್ತದೆ. ಕ್ವಿಜ್ ಕೂಡ ಅಷ್ಟೇ. ವಿಷಯ ತಿಳಿಯುವುದಕ್ಕೆ, ತಿಳಿಸುವುದಕ್ಕೆ ಉತ್ತಮ ವಿಧಾನ.

ಕ್ವಿಜ್‌ನಲ್ಲಿ ಭಾಗವಹಿಸಬೇಕೆಂದರೆ ಏನು ಮಾಡಬೇಕು?

ಒಂದೇ ಮಾತಲ್ಲಿ ಹೇಳುವುದಾದರೆ ಓದಬೇಕು. ಹೆಚ್ಚು ಹೆಚ್ಚು ಓದಬೇಕು. ಕ್ವಿಜ್‌ನಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳು ಒಗಟು ರೂಪದಲ್ಲಿ ಇರುತ್ತವೆ. ಅವನ್ನು ಬಿಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕೆ ಕ್ವಿಜ್‌ ಕಾರ್ಯಕ್ರಮಗಳನ್ನು ನೋಡಿ ಅಧ್ಯಯನ ಮಾಡಬೇಕು.

‘ಪ್ರಜಾವಾಣಿ ಕ್ವಿಜ್’ ಬಗ್ಗೆ ಏನು ಹೇಳುತ್ತೀರಿ?

ನಮ್ಮ ರಾಜ್ಯದಲ್ಲಿ ಇಂತಹ ಪ್ರಯತ್ನವನ್ನು ಯಾರು ಮಾಡಿಲ್ಲವೆಂದೇ ಹೇಳಬಹುದು. ‘ಪ್ರಜಾವಾಣಿ’ ಪತ್ರಿಕೆಯು ಮಕ್ಕಳ ಜ್ಞಾನಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷವೂ ಉತ್ತಮವಾಗಿ ಆಯೋಜಿಸುತ್ತಿದೆ. ಮಕ್ಕಳನ್ನು ಆಕರ್ಷಿಸುವಂತಹ ಸ್ವಾರಸ್ಯಕರ ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಒಟ್ಟಿನಲ್ಲಿ ಆಕರ್ಷಕವಾಗಿರುತ್ತದೆ. ನಾವು ಕೂಡ ಹೀಗೆಯೆ ಆಕರ್ಷಕವಾಗಿ ನಡೆಸಲು ಉದ್ದೇಶಿಸಿದ್ದೇವೆ. ಇದಕ್ಕಾಗಿ ಹಲವು ದಿನಗಳಿಂದ ತಯಾರಿ ನಡೆಸಿದ್ದೇವೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಉತ್ತಮ ಅನುಭವ ನೀಡುವುದೇ ನಮ್ಮ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT