ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯಕ್ಕೆ ಸಿದ್ಧತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸರ್ಕಾರಿ ಪ್ರೌಢಶಾಲೆಯ ಹಿರಿಮೆಗೆ ಮತ್ತೊಂದು ಗರಿ
Last Updated 24 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದಡಿ ₹12 ಲಕ್ಷ ವೆಚ್ಚದಲ್ಲಿ ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಸ್ಥಾಪನೆಗೆ ಸಿದ್ಧತೆ ನಡೆದಿದೆ.

1946ರಲ್ಲಿ ಸ್ಥಾಪನೆಯಾದ ಈ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ, ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ ವೇತನ (ಎನ್‌ಎಂಎಂಎಸ್‌), ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ (ಎನ್‌ಟಿಎಸ್‌ಇ) ಫಲಿತಾಂಶ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಶಾಲೆಯಲ್ಲಿ ಓದಿರುವ ಹಲವು ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ ಗಳಿಸಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

2016–17ರಲ್ಲಿ ರಾಜ್ಯ ಸರ್ಕಾರ ಈ ಶಾಲೆ ಆವರಣದಲ್ಲಿ ₹26 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಮಾದರಿಯಾದ ವಿಜ್ಞಾನ ಪಾರ್ಕ್‌ (ಕೇಂದ್ರ) ಸ್ಥಾಪಿಸಿತ್ತು. ಇದರಿಂದ ಪ್ರಯೋಗಾಲಯದ ಮೂಲಕ ಮಕ್ಕಳಿಗೆ ವಿಜ್ಞಾನದ ಕಲಿಕೆ ಸುಲಭವಾಗುತ್ತಿದೆ. ವೈಜ್ಞಾನಿಕ ಚಿಂತನೆ, ಅನ್ವೇಷಣಾ ಮನೋಭಾವ ಮೂಡಿಸಲು ನೆರವಾಗುತ್ತಿದೆ. ಈ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

2018–19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ‘ನೀತಿ’ ಆಯೋಗದಡಿ ಕಾರ್ಯ ನಿರ್ವಹಿಸುತ್ತಿರುವ ಅಟಲ್‌ ಇನ್ನೊವೇಷನ್‌ ಮಿಷನ್‌ ದೇಶದ 715 ಜಿಲ್ಲೆಗಳಲ್ಲಿ 5,441ಕ್ಕೂ ಹೆಚ್ಚು ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಆರಂಭಿಸಿದೆ.

ಇದರಲ್ಲಿ ಈ ಶಾಲೆಯು ಆಯ್ಕೆಯಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಇದರಿಂದಾಗಿ ಈ ಶಾಲೆ ಸಾಧನೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಜಿಲ್ಲೆಗೆ ಮಾದರಿಯಾದ ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಇದಾಗಿದೆ. ಈ ರೀತಿಯ ಪ್ರಯೋಗಾಲಯ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಇನ್ನೂ ಸ್ಥಾಪನೆಯಾಗಿಲ್ಲ.

‘ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಪ್ರಯತ್ನದ ಫಲವಾಗಿ ಈ ಪ್ರಯೋಗಾಲಯದ ಸ್ಥಾಪನೆಯಾಗುತ್ತಿದೆ.

ರೋಬೊಟಿಕ್‌ ಹಾಗೂ ಡ್ರೋನ್‌ ತಂತ್ರಜ್ಞಾನ, ಪ್ರೊಟೋಟೈಪಿಂಗ್‌ ಟೂಲ್ಸ್‌ ಮತ್ತು ಎಲೆಕ್ಟ್ರಾನಿಕ್‌ ಟೂಲ್ಸ್‌, 3ಡಿ ಪ್ರಿಂಟರ್‌ ಸೇರಿ ಇನ್ನಿತರ ಅತ್ಯಾಧುನಿಕ ಸಾಧನ–ಸಲಕರಣೆಗಳು ಬಂದಿವೆ. ಇದರಿಂದ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಜ್ಞಾನ, ಆವಿಷ್ಕಾರದ ಮನೋಭಾವ ಬೆಳೆಸುವ ಮೂಲಕ ವಿಜ್ಞಾನಿಗಳನ್ನಾಗಿ ರೂಪಿಸಲು ನೆರವಾಗಲಿದೆ’ ಎಂದು ಅಟಲ್‌ ಟಿಂಕರಿಂಗ್‌ ಪ್ರಯೋಗಾಯಲದ ಉಸ್ತುವಾರಿ ಶಿಕ್ಷಕ ಜಿ.ಎಂ. ಈಶ್ವರಪ್ಪ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT