ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯ ಪಡಿಪಾಟಲುಗಳ ‘ರಿ–ಸರ್ಚ್‌’

Last Updated 18 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಸಂಶೋಧನಾ ಕ್ಷೇತ್ರದಲ್ಲಿ ಅಧ್ಯಯನ ನಡೆಸುವ, ಪದವಿ ಪಡೆಯುವ ತನ್ನ ನಿರ್ಧಾರವೇ ಸ್ವಯಂಕೃತಾಪರಾಧ ಎನಿಸುವಷ್ಟರ ಮಟ್ಟಿಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳ ಕಷ್ಟ-ಕಾರ್ಪಣ್ಯಗಳಿವೆ ಎನ್ನುತ್ತಾರೆ ಲೇಖಕರು.

ಮೂಲಭೂತ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಯುವಜನತೆ ಹಿಂಜರಿಯುತ್ತಿದೆ ಮತ್ತು ಆಸಕ್ತಿ ವಹಿಸದು ಎಂಬ ಮಾತು ಆಗಾಗ ಕೇಳಿಬರುತ್ತದೆ. ದೇಶದ ಪ್ರಗತಿಗೆ ಮತ್ತು ಅನ್ವಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಮೂಲಭೂತ ಸಂಶೋಧನಾ ಕ್ಷೇತ್ರದ ಉನ್ನತಿ ಅತ್ಯಗತ್ಯ ಎಂಬುದು ನಿರ್ವಿವಾದ. ಅಂಥ ಅತಿ ಮಹತ್ವದ ಕ್ಷೇತ್ರ ದೇಶದಲ್ಲಿ ತಕ್ಕ ಮಟ್ಟಿನ ಉನ್ನತಿ ಸಾಧಿಸದಿರುವುದಕ್ಕೆ ಕಾರಣಗಳು ಅನೇಕ. ಮೂಲಭೂತ ಸಂಶೋಧನಾ ಕ್ಷೇತ್ರದ ಕಡೆಗಣಿಕೆಯ ಕಾರಣಗಳ ಜಾಡನ್ನು ಹಿಡಿದು ವಿಶ್ಲೇಷಿಸಲು ಹೊರಟೆವಾದರೆ, ಆ ಮಜಲಿನಲ್ಲಿ ಸಿಗುವ ಉತ್ತರಗಳು ಸೂಕ್ಷ್ಮಾತಿಸೂಕ್ಷ್ಮ. ಅಂಥ ಸೂಕ್ಷ್ಮಗಳನ್ನು ಹುಡುಕಿ ಅರ್ಥೈಸಿಕೊಂಡು, ಪ್ರಾಮಾಣಿಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ನಮಗಿದೆಯೇ?

ಮೂಲಭೂತ ಸಂಶೋಧನಾ ಕ್ಷೇತ್ರದ ಪ್ರಗತಿಗೆ ಮುಖ್ಯವಾದ ಅಂಶಗಳು: ಸಂಶೋಧನೆಯನ್ನು ಅವಿರತವಾಗಿ ಪೋಷಿಸುವ ಸಂಸ್ಥೆಗಳು, ಕಾಲಕ್ಕೆ ಸರಿಯಾಗಿ ಅನುದಾನ ನೀಡುವ ಸರ್ಕಾರ, ಉತ್ಕೃಷ್ಟ ಮಾರ್ಗದರ್ಶನ ನೀಡುವ ಪ್ರಾಧ್ಯಾಪಕ ವೃಂದ, ನಿಷ್ಠೆಯಿಂದ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಮತ್ತು ಸತತವಾಗಿ ಮೂಲಭೂತ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕೆಂದು ಮನಸ್ಸು ಹಂಬಲಿಸುವಂಥ ಶೈಕ್ಷಣಿಕ ವಾತಾವರಣದ ನಿರ್ಮಾಣ.

ಹೊರ ಜಗತ್ತಿನ ಅರಿವಿಗೆ ಬಾರದ ಅನೇಕ ಸೂಕ್ಷಗಳನ್ನು ವಿಶ್ಲೇಷಿಸಿದರೆ, ಸಂಶೋಧನಾ ವಿದ್ಯಾರ್ಥಿಗಳು ಎಂತೆಲ್ಲ ಗೋಜಲುಗಳನ್ನು ದಾಟಬೇಕು, ಎಷ್ಟೆಲ್ಲ ಕಷ್ಟ-ಕಾರ್ಪಣ್ಯಗಳನ್ನು ಸಹಿಸಬೇಕು ಮತ್ತು ಬೆಟ್ಟದಷ್ಟು ತಾಳ್ಮೆಯೂ ಅವರಿಗೆ ಕಡಿಮೆಯೇ ಎಂಬುದರ ಅರಿವಾಗದೆ ಇರದು. ಹೊರಗಿನಿಂದ ನೋಡುವವರಿಗೆ, ಆತನಿಗೇನು, ಉನ್ನತ ಪದವಿ ದೊರೆಯುತ್ತದೆ, ಲಕ್ಷಾಂತರ ರೂಪಾಯಿ ಸಂಪಾದನೆಗೆ ದಾರಿಯಾಗುತ್ತದೆ ಎಂದು ಅನಿಸಿದರೂ, ಸಂಶೋಧನಾ ವಿದ್ಯಾರ್ಥಿ ತನ್ನ ಸಂಶೋಧನಾ ಪದವಿ ಅಧ್ಯಯನದುದ್ದಕ್ಕೂ ಅನುಭವಿಸುವ ಕಷ್ಟಗಳ ಆಳ ಅರ್ಥವಾಗುವುದಿಲ್ಲ. ತಮ್ಮ ಸುತ್ತಣ ಸಮಾಜ, ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ತಮ್ಮ ನೈಜ ಕಷ್ಟಗಳನ್ನು ಹೇಳಿಕೊಳ್ಳಲೂ ಆಗದ ಸ್ಥಿತಿಯಲ್ಲಿ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಇರುವುದು ವಾಸ್ತವ. ಒಂದು ವೇಳೆ ಹೇಳಿಕೊಳ್ಳುವ ಧೈರ್ಯ ತೋರಿದರೂ, ಅದು ಸುತ್ತಣ ಸಮಾಜಕ್ಕೆ ಅರ್ಥವಾಗುವುದೂ ಕಠಿಣವೇ. ಅನೇಕ ಕಡೆ ವಿದ್ಯಾರ್ಥಿ ಸಂಶೋಧನೆಗೆ ತೊಡಗಿಕೊಳ್ಳುವ ಹಂತದಲ್ಲಿ ಇರುವ ಉತ್ಸಾಹ, ಹುಮ್ಮಸ್ಸು, ಹೊಸ ಆವಿಷ್ಕಾರವನ್ನು ಮಾಡಿಯೇ ತೀರುತ್ತೇನೆ ಎಂಬ ಧೈರ್ಯ ಎಲ್ಲವೂ ಹಂತ ಹಂತವಾಗಿ ನಶಿಸುತ್ತದೆ. ಅಷ್ಟರ ಮಟ್ಟಿಗೆ ಉಳಿದ ಸಂಗತಿಗಳು ಸಂಶೋಧನಾ ವಿದ್ಯಾರ್ಥಿಯ ಜೀವನದಲ್ಲಿ ಪ್ರಭಾವ ಬೀರುತ್ತವೆ. ಇದನ್ನೂ ಮೀರಿ, ಮೆಟ್ಟಿ ನಿಲ್ಲುವ, ಯಾವ ಒತ್ತಡಕ್ಕೂ ಮಣಿಯದ ಕೆಲವೇ ಕೆಲವು ವಿದ್ಯಾರ್ಥಿಗಳು ತಮ್ಮ ಜೀವಿತಾವಧಿಯಲ್ಲಿ ಸಂಶೋಧನೆಯ, ಸಾಧನೆಯ ಉತ್ತುಂಗಕ್ಕೆ ಏರಲು ಆಗುತ್ತದೆ. ಅಂಥ ಸಾಹಸಿಗಳ ಸಂಖ್ಯೆ ತೀರ ಗೌಣ.

ಸಂಶೋಧನೆಯ ಹಾದಿಯಲ್ಲಿ ಅನೇಕ ವಿದ್ಯಾರ್ಥಿಗಳು ಪ್ರತಿ ಹಂತದಲ್ಲೂ ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ತಾವು ಈ ಸಂಶೋಧನಾ ಕ್ಷೇತ್ರಕ್ಕೆ ಬಂದುದೇ ಸ್ವಯಂಕೃತಾಪರಾಧ ಎಂದು ಅನೇಕರಿಗೆ ಅನಿಸುವುದುಂಟು. ಸಂಶೋಧನಾ ಕ್ಷೇತ್ರದಲ್ಲಿ ಯುವಜನತೆ ನಿರಾಸಕ್ತಿ ವಹಿಸಲು, ಈಗಾಗಲೇ ತೊಡಗಿಕೊಂಡವರು ಈ ಅವಸ್ಥೆ ಬೇಡವೇ ಬೇಡ ಎನ್ನಲು ಕಾರಣಗಳೇನು ಎಂಬುದನ್ನು ಅವಲೋಕಿಸಿದಾಗ ಸಿಗುವ ಚಿತ್ರಣ ದಂಗುಬಡಿಸುವಂಥದ್ದು. ಮೊಟ್ಟಮೊದಲನೆಯದಾಗಿ, ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಮೂಲಭೂತ ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆ. ಆ ಅಲ್ಪ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸಂಶೋಧನೆಯೇ ತಮ್ಮ ಮೊದಲ ಆಯ್ಕೆ ಎಂದು ಬಂದವರಲ್ಲ ಎಂಬುದು ವಾಸ್ತವ. ತಂತ್ರಜ್ಞಾನ, ವೈದ್ಯಕೀಯ ಮತ್ತು ಇತರ ವೃತ್ತಿಪರ ಪದವಿಗೆ ಆಯ್ಕೆಗೊಳ್ಳದ ವಿದ್ಯಾರ್ಥಿಗಳನೇಕರಿಗೆ ಬಿ.ಎ., ಬಿ.ಎಸ್ಸಿ., ಮುಂತಾದ ಪದವಿ ತರಗತಿಗಳಿಗೆ ಸೇರಿಕೊಳ್ಳುವುದು ಅನಿವಾರ್ಯ ಎನ್ನಿಸುತ್ತದೆ. ಮುಂದೆ ಎಂ.ಎ., ಎಂ.ಎಸ್ಸಿ., ಎಂ. ಫಿಲ್., ಪಿಎಚ್‌.ಡಿ., ಪೋಸ್ಟ್-ಡಾಕ್ ಎಂದು ಪಯಣ ಸಾಗುತ್ತದೆ, ಅವರವರ ಸಾಮರ್ಥ್ಯಕ್ಕೆ, ತಾಳ್ಮೆಗೆ, ಅಗತ್ಯಕ್ಕೆ ತಕ್ಕಂತೆ.

ಎರಡನೆಯದಾಗಿ, ಸಂಶೋಧನಾ ಉನ್ನತ ಪದವಿಯ ಅಧ್ಯಯನಕ್ಕೆ ಆಯ್ಕೆಗೊಳ್ಳುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ಕ್ಷೇತ್ರ ಅಥವಾ ವಿಷಯವೇ ಆಯ್ಕೆಗೆ ದೊರೆತೀತು ಎಂದು ಹೇಳಲಾಗದು. ಸಂಶೋಧನಾ ಕ್ಷೇತ್ರದಲ್ಲೇ ಮುಂದುವರೆಯವ ನಿರ್ಧಾರ ತಗೆದುಕೊಂಡ ವಿದ್ಯಾರ್ಥಿ ಸಂಶೋಧನಾ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ನಿರ್ದಿಷ್ಟ ವಿಭಾಗದ ಸಂಶೋಧನಾ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕಾಗುತ್ತದೆ. ಸಂಶೋಧನಾ ವಿಷಯ ಮತ್ತು ಸಂಸ್ಥೆಯ ನಿಯಮಗಳಿಗನುಗುಣವಾಗಿ ಒಬ್ಬ ಮುಖ್ಯ ಸಂಶೋಧನಾ ಮಾರ್ಗದರ್ಶಿ ಪ್ರಾಧ್ಯಾಪಕ ಮತ್ತು ಒಂದು ಅಥವಾ ಹೆಚ್ಚು ಸಂಖ್ಯೆಯ ಸಹ ಸಂಶೋಧನಾ ಮಾರ್ಗದರ್ಶಿ ಪ್ರಾಧ್ಯಾಪಕರು ಇರುವುದು ರೂಢಿ. ವಿದ್ಯಾರ್ಥಿಗೆ ತನ್ನ ಆಯ್ಕೆಯ ಸಂಶೋಧನಾ ಪ್ರಾಧ್ಯಾಪಕರೂ ಮಾರ್ಗದರ್ಶಿಗಳಾಗಿ ದೊರೆವುದೂ ಅನೇಕ ಸಂದರ್ಭಗಳಲ್ಲಿ ಕನಸೇ ಸರಿ.

ಸಂಶೋಧನಾ ವಿದ್ಯಾರ್ಥಿಗೆ ಎದುರಾಗುವ ಮತ್ತೊಂದು ಸವಾಲೆಂದರೆ ಸಂಶೋಧನಾ ಸಮಸ್ಯೆಯ (research problems) ಆಯ್ಕೆ. ಸಂಶೋಧನಾ ಸಮಸ್ಯೆಯ ಆಯ್ಕೆಯೇ ಸಮಸ್ಯೆಯಾಗಿ ಪರಿಣಮಿಸಿದರೆ, ಮುಂದಣ ಅಧ್ಯಯನದುದ್ದಕ್ಕೂ ಎದುರಾಗುವ ಸಮಸ್ಯೆಗಳು ಅಪರಿಮಿತ ಎನ್ನಲು ಅಡ್ಡಿಯಿಲ್ಲ. ಸಂಶೋಧನಾ ಸಮಸ್ಯೆಯ ಕುರಿತು ಮಾರ್ಗದರ್ಶನ ನೀಡಿ, ವಿದ್ಯಾರ್ಥಿ ಸರಿಯಾದ ನಿರ್ಧಾರಕ್ಕೆ ಬರುವಂತೆ ಪ್ರೇರೇಪಿಸುವಲ್ಲಿ ವಿಫಲರಾಗುವ ಅನೇಕ ಪ್ರಾಧ್ಯಾಪಕರು ಕಾಣಸಿಗುತ್ತಾರೆ. ಅಂಥ ಸನ್ನಿವೇಶಗಳಲ್ಲಿ, ವಿದ್ಯಾರ್ಥಿಯ ಸ್ವಂತ ಸಾಮರ್ಥ್ಯದಿಂದ ಸಂಶೋಧನೆ, ಅಧ್ಯಯನದಲ್ಲಿ ಯಶಸ್ಸು ಫಲಿಸಿದರೆ, ಅದಕ್ಕೆ ತನ್ನ ಮಾರ್ಗದರ್ಶನವೇ ಕಾರಣ ಎಂದು ಲಾಭ ಪಡೆಯುವ ಪ್ರಾಧ್ಯಾಪಕರೂ ಇದ್ದಾರೆ. ವಿಫಲವಾದರೆ ಅದಕ್ಕೆಲ್ಲ ವಿದ್ಯಾರ್ಥಿಯೇ ಹೊಣೆ ಎಂದು ಆರೋಪ ಹೊರಿಸುವ ಪ್ರಾಧ್ಯಾಪಕರಿಗೇನೂ ಕೊರತೆಯಿಲ್ಲ.

ಸಂಶೋಧನೆಗೆ ತೊಡಗಿದ ಮೇಲೆ ಬರುವ ಇನ್ನೊಂದು ತೊಡಕು ಶಿಷ್ಯವೇತನಕ್ಕೆ (research fellowships) ಸಂಬಂಧಿಸಿದ್ದು. ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ತಕ್ಕ ಮಟ್ಟಿನ ಶಿಷ್ಯವೇತನ ಇದೆಯಾದರೂ, ಅವುಗಳ ಸಂಖ್ಯೆ ಸಾಲದು. ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಶಿಷ್ಯವೇತನದ ಕೊರತೆ ಎದ್ದುಕಾಣುತ್ತದೆ. ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ನೀಡುತ್ತಿರುವ ಶಿಷ್ಯವೇತನಗಳಲ್ಲಿ ತಾರತಮ್ಯವಿರುವುದು ಇನ್ನೊಂದು ವಿಚಾರ. 25-30 ವರ್ಷ ವಯೋ
ಮಾನದ ಸಂಶೋಧನಾ ವಿದ್ಯಾರ್ಥಿಗಳು ಶಿಷ್ಯವೇತನವೂ ಇಲ್ಲದೆ, ಇತರ ಯಾವ ಆದಾಯವೂ ಇಲ್ಲದೆ, ತಮ್ಮ ವಯಸ್ಸಾದ ಪಾಲಕರನ್ನು ಇಲ್ಲವೆ ಪತಿ/ಪತ್ನಿಯನ್ನು ದಿನನಿತ್ಯದ ಖರ್ಚಿಗಾಗಿ, ಸಂಶೋಧನೆಯ, ಅಧ್ಯಯನದ ವೆಚ್ಚಕ್ಕಾಗಿ ಅವಲಂಬಿಸಬೇಕಾದ ಪರಿಸ್ಥಿತಿಯೂ ಇದೆ. ವಿದ್ಯಾರ್ಥಿಗೆ ಬರುವ ಅತ್ಯಲ್ಪ ಶಿಷ್ಯವೇತನದಲ್ಲಿ ತಿಂಗಳಿಗೆ ತನಗೆ ಇಂತಿಷ್ಟು ಪಾಲು ಕೊಡು ಎಂದು ಕೇಳಿದ ಸಂಶೋಧನಾ ಪ್ರಾಧ್ಯಾಪಕರ ಉದಾಹರಣೆಯೂ ನಮ್ಮಲ್ಲಿದೆ. ಹಾಗೆ ಪಾಲು ಕೊಡಲು ಒಪ್ಪದ ವಿದ್ಯಾರ್ಥಿಯ ಕಷ್ಟಗಳು ಅವರಿಗೇ ಗೊತ್ತು.

ಪ್ರಾಧ್ಯಾಪಕರಿಗೆ ಸಾಕಷ್ಟು ಸಂಶೋಧನಾ ಅನುದಾನ ಇದ್ದಾಗಲೂ, ವಿದ್ಯಾರ್ಥಿಗೆ ಕಾಲಕ್ಕೆ ಸರಿಯಾಗಿ ಶಿಷ್ಯವೇತನ, ಸಂಬಳ ಕೊಡದವರೂ ಇದ್ದಾರೆ. ಇಂಥ ಮೋಸದ ವ್ಯವಹಾರದ ಮಧ್ಯೆಯೂ ವಿದ್ಯಾರ್ಥಿ ಸಂಶೋಧನೆ ಹೇಗೆ ಮಾಡಬಲ್ಲ ಎಂಬುದನ್ನು ತಾಳ್ಮೆಯಿಂದ ಯೋಚಿಸುವ ವ್ಯವಧಾನವೂ ಸಂಸ್ಥೆ ನಡೆಸುವವರಿಗೆ ಇರುವುದಿಲ್ಲ. ತಮ್ಮ ತಿಂಗಳ ವೇತನವನ್ನು ಸರಿಯಾಗಿಯೇ ಪಡೆಯುವ ಪ್ರಾಧ್ಯಾಪಕರು, ತಮ್ಮ ಶಿಷ್ಯಂದಿರಿಗೆ ಶಿಷ್ಯವೇತನ ಬಾರದಿದ್ದಾಗ ಅಂಥ ಸನ್ನಿವೇಶವನ್ನು ಸರಿಪಡಿಸುವ ಔದಾರ್ಯ ತೋರಿದ್ದಿದೆಯೇ? ವಿದ್ಯಾರ್ಥಿಗೆ ಸಿಕ್ಕ ಅತ್ಯಲ್ಪ ಸಂಶೋಧನಾ ಅನುದಾನವನ್ನು ಆತ ಹೇಗೆ ಖರ್ಚು ಮಾಡಬೇಕೆಂದು ಆದೇಶಿಸುವ, ನಿಯಂತ್ರಿಸುವ ಪ್ರಾಧ್ಯಾಪಕರಿಗೇನೂ ಕೊರತೆಯಿಲ್ಲ. ಸಂಶೋಧನಾ ಶಿಷ್ಯವೇತನ, ಅನುದಾನವನ್ನು ಕಾಲಕ್ಕೆ ಸರಿಯಾಗಿ ಪ್ರತಿ ತಿಂಗಳೂ ಬಿಡುಗಡೆಗೊಳಿಸದೆ ಸತಾಯಿಸುವ ಕಚೇರಿಯ ಗುಮಾಸ್ತರನ್ನೂ ಸಂಭಾಳಿಸುವ ನೈಪುಣ್ಯವನ್ನು ವಿದ್ಯಾರ್ಥಿ ಹೊಂದಿಲ್ಲದಿದ್ದರೆ ಆತನಿಗೇ ನಷ್ಟ.

ಸಂಶೋಧನಾ ವಿದ್ಯಾರ್ಥಿ ತನ್ನ ಪಾಡಿಗೆ ತಾನು ಸಂಶೋಧನೆ ಮಾಡಿಕೊಂಡಿರಲು ಸಾಧ್ಯವೆ?

ಮುಂದೆ ನೋಡೋಣ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT