ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತಿಗೇರಿಯ ಕನ್ನಡ ಸರ್ಕಾರಿ ಶಾಲೆಯ ಯಶೋಗಾಥೆ

ಸಮುದಾಯ ಸಹಭಾಗಿತ್ವದ ವಿಶಿಷ್ಟ ಪ್ರಯತ್ನ
Last Updated 29 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಇದು ಒಂದೂವರೆ ಶತಮಾನದಷ್ಟು ಹಳೆಯದಾದ ಮಾದರಿ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿಯಾದ ಕಥೆ. ರಾಜ್ಯದ ಗಡಿಭಾಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಸತ್ತಿಗೇರಿಯಲ್ಲಿರುವ ಈ ಶಾಲೆಯನ್ನು, ಅದೇ ಶಾಲೆಯ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಸೇರಿ ‘ಸ್ಮಾರ್ಟ್‌’ – ಮಾದರಿ ಶಾಲೆಯಾಗಿಸಿದ್ದಾರೆ.

ಸುಮಾರು 153 ವರ್ಷಗಳಷ್ಟು ಹಳೆಯದಾದ ಈ ಸರ್ಕಾರಿ ಶಾಲೆಗೆ ನವಚೈತನ್ಯ ಬಂದಿದೆ. ಕಟ್ಟಡದ ನವೀಕರಣದ ಜತೆಗೆ, ಹಲವು ಸೃಜನಶೀಲ ಚಟುವಟಿಕೆಗಳೂ ಶಾಲೆಯ ಅಭಿವೃದ್ಧಿಗೆ ಸೇರಿಕೊಂಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

455 ಮಕ್ಕಳಿರುವ ಶಾಲೆ

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗಿದ್ದು, ಪ್ರಸ್ತುತ 455 ಮಕ್ಕಳು ಕಲಿಯುತ್ತಿದ್ದಾರೆ. ಸತ್ತಿಗೇರಿ, ಸತ್ತಿಗೇರಿ ತೋಟ, ಗುಡಮಕೇರಿ, ತುರಬಗಟ್ಟಿ ಸುತ್ತಲಿನ ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಒಟ್ಟು 15 ಮಂದಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಈ ಎಲ್ಲ ಅಭಿವೃದ್ದಿ ಕಾರ್ಯಗಳು ನಡೆದಿರುವುದು ವರ್ಷದಿಂದೀಚೆಗೆ. ಮುಖ್ಯಶಿಕ್ಷಕ ಎಂ.ಬಿ. ಸರಣ್ಣವರ ಸಹಕಾರದಲ್ಲಿ ಶಿಕ್ಷಕರಾದ ವಿಠ್ಠಲ ದಳವಾಯಿ, ಅರವಿಂದಗೌಡ ಪಾಟೀಲ ಹಾಗೂ ಶಿವಾನಂದ ಮಾಸ್ತಮರಡಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಉಳಿದ ಶಿಕ್ಷಕರು ಇವರ ಕಾರ್ಯಕ್ಕೆ ಬೆಂಬಲ ನೀಡುತ್ತಾರೆ.

ಈ ಶಾಲೆಯಲ್ಲಿ ಓದಿದ ರವಿ ಬಳಿಗಾರ, ಎನ್.ಆರ್. ಪಾಟೀಲ ಹಾಗೂ ಬಸವರಾಜ ಮಿಲ್ಲಾನಟ್ಟಿ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಕಳೆದ ವರ್ಷ ನಡೆದ ವಾರ್ಷಿಕೋತ್ಸವಕ್ಕೆ ಅವರನ್ನೆಲ್ಲ ಮುಖ್ಯಅತಿಥಿಗಳಾಗಿ ಆಹ್ವಾನಿಸ ಲಾಗಿತ್ತು. ಆ ವೇಳೆಯೇ ಹಳೆಯ ವಿದ್ಯಾರ್ಥಿಗಳ ಸಂಘ ರಚನೆಗೆ ಚಾಲನೆ ಸಿಕ್ಕಿತು. ತಲಾ ₹ 5ಸಾವಿರ ದೇಣಿಗೆ ಸಂಗ್ರಹಿಸಿ, ಸಂಘ ರಚನೆಗೆ ನಾಂದಿ ಹಾಡಿದರು. ಇದರಿಂದ ಪ್ರೇರಣೆ ಪಡೆದ ಸಂಘದ ಇತರರೂ ನೆರವಾದರು. ಒಟ್ಟು ₹ 70ಸಾವಿರ ದೇಣಿಗೆ ಸಂಗ್ರಹವಾಗಿತ್ತು.

ಆ ಹಣ ಸದ್ಬಳಕೆ ಮಾಡಿರುವ ಶಿಕ್ಷಕರು, ಕೊಠಡಿಯನ್ನು ಸ್ಮಾರ್ಟ್‌ ಕ್ಲಾಸ್‌ ಆಗಿಸಿದ್ದಾರೆ. ಆ ಕೋಣೆಯಲ್ಲಿ ಈಗ ಪ್ರೊಜೆಕ್ಟರ್‌ ಅಳವಡಿಸಿ, ವಿಡಿಯೊ ಪ್ರದರ್ಶನದೊಂದಿಗೆ ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ ಸೌಂಡ್‌ ಸಿಸ್ಟಂ ಇದೆ. ಅದನ್ನು ಬಳಸಿಕೊಂಡು ಕಾವ್ಯವಾಚನ, ನಾಟಕ, ನೃತ್ಯ ತರಬೇತಿಯಂತಹ ಸೃಜನಶೀಲ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ.

ಶಾಲೆಯ ಕೊಠಡಿಯೊಂದರಲ್ಲಿ ಗ್ರಂಥಾಲಯ ಆರಂಭಿಸಿ ದ್ದಾರೆ. ಅದಕ್ಕೆ ‘ಶ್ರದ್ಧಾ ವಾಚನಾಲಯ’ ಎಂದು ಹೆಸರಿಸಿದ್ದಾರೆ. ಅಲ್ಲಿ ಬಾಲಕರು ಹಾಗೂ ಬಾಲಕಿಯರು ಪ್ರತ್ಯೇಕವಾಗಿ ಕುಳಿತು ಓದಿಕೊಳ್ಳಲು ಕಂಪಾರ್ಟ್‌ಮೆಂಟ್‌ ಮಾಡಲಾಗಿದೆ. ಶಿಕ್ಷಕರು, ಈ ಗ್ರಂಥಾಲಯದ ಬಗ್ಗೆ ಫೇಸ್‌ಬುಕ್‌ನಲ್ಲಿ ‌ಪೋಸ್ಟ್‌ ಮಾಡಿದ್ದರು. ಇದನ್ನು ಗಮನಿಸಿದ ಹಲವರು, ಪುಸ್ತಕಗಳನ್ನು ಕಳುಹಿಸಿಕೊಡುವ ಮೂಲಕ ಗ್ರಂಥಾಲಯದ ‘ಬಲ’ ಹೆಚ್ಚಳಕ್ಕೆ ಸಹಕರಿಸಿದ್ದಾರೆ. ವಿಠ್ಠಲ ದಳವಾಯಿ ಸೇರಿದಂತೆ ಇತರ ಶಿಕ್ಷಕರು ಪುಸ್ತಕ ನೀಡಿದ್ದಾರೆ.

ಪುಸ್ತಕ, ಪುಸ್ತಕ ಸೇರಿ

‘ಶಾಲೆಯಲ್ಲಾಗಿರುವ ಸಕಾರಾತ್ಮಕ ಬದಲಾವಣೆಗೆ ಸಮುದಾ ಯದ ಸಹಭಾಗಿತ್ವವೇ ಕಾರಣ. ಹಳೆಯ ವಿದ್ಯಾರ್ಥಿಗಳ ಸಂಘದವರು ನೆರವಾಗಿದ್ದಾರೆ. ಹಲವರು ಆನ್‌ಲೈನ್‌ನಲ್ಲಿ ಪುಸ್ತಕ ಬುಕ್ ಮಾಡಿ, ಶಾಲೆಯ ವಿಳಾಸಕ್ಕೆ ನೇರವಾಗಿ ಕಳುಹಿಸುತ್ತಿದ್ದಾರೆ. ಹಿರಿಯ ಲೇಖಕ ಅಶೋಕ ಶೆಟ್ಟರ ಪುಸ್ತಕ ಖರೀದಿಗಾಗಿ ₹ 5ಸಾವಿರ ನೀಡಿದ್ದಾರೆ. ಮೇರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ರುದ್ರೇಶ ಮೇಟಿ ವ್ಯಾಕರಣ ಗ್ರಂಥಗಳ ಪ್ರತಿಗಳನ್ನು ನೀಡಿದ್ದಾರೆ’ ಎಂದು ಪಟ್ಟಿಯನ್ನೇ ಓದುತ್ತಾರೆ ಶಿಕ್ಷಕ ಹಾಗೂ ಕವಿ ವಿಠ್ಠಲ ದಳವಾಯಿ.

ಇಷ್ಟೇ ಅಲ್ಲ, ಒಬ್ಬರು ಪೋಡಿಯಂ ಕೊಡಿಸುವ ಭರವಸೆ ನೀಡಿದ್ದಾರೆ. ಇವರ ಸ್ನೇಹಿತರಾದ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ಎಂಜಿನಿಯರ್‌ ಆಗಿರುವ ಲಿಂಗರಾಜ ಮುದಿಯಪ್ಪನವರ– ಅನುಪಮಾ ದಂಪತಿ ₹ 4500 ಮೌಲ್ಯದ ಪುಸ್ತಕಗಳನ್ನು ಕೊಡಿಸಿದ್ದಾರೆ. ವೈವಿಧ್ಯ ಪುಸ್ತಕಗಳು ಸೇರಿ ಗ್ರಂಥಾಲಯ ಮೆರುಗು ಪಡೆಯುತ್ತಿದೆ. ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿ, ಪುಸ್ತಕ ಕಳುಹಿಸುವುದಾಗಿ ಹೇಳಿದ್ದಾರಂತೆ.

ಪ್ರಯೋಗಾಲಯ, ಉದ್ಯಾನದ ಗುರಿ

ಶಾಲೆಗೆ 150 ವರ್ಷ ತುಂಬಿರುವುದರಿಂದ ಇಲಾಖೆಯಿಂದ ವಿಶೇಷ ಅನುದಾನ ಸಿಕ್ಕರೆ, ವಿಜ್ಞಾನ ಪ್ರಯೋಗಾಲಯ ನಿರ್ಮಿಸಬೇಕು. ಉದ್ಯಾನ ಅಭಿವೃದ್ಧಿಪಡಿಸಬೇಕು ಎಂಬ ಯೋಜನೆ ಶಿಕ್ಷಕಕರದ್ದು. ‘ಸರ್ಕಾರಿ ಶಾಲೆಗಳು ಉಳಿಯಬೇಕು. ಗ್ರಾಮೀಣ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಆಗಬೇಕು ಎನ್ನುವುದು ನಮ್ಮ ಉದ್ದೇಶ’ ಎನ್ನುತ್ತಾರೆ ದಳವಾಯಿ.

ಸ್ಮಾರ್ಟ್‌ ಕ್ಲಾಸ್‌ ಆರಂಭಿಸಿದ ನಂತರ ಮಕ್ಕಳ ಗೈರುಹಾಜರಿ ಪ್ರಮಾಣ ಕಡಿಮೆಯಾಗಿದೆಯಂತೆ. ಮಕ್ಕಳು, ಶಾಲೆಗೆ ರಜೆ ಕೊಟ್ಟರೆ ಬೇಸರ ಪಟ್ಟುಕೊಳ್ಳುವ ಹಂತಕ್ಕೆ ಮಕ್ಕಳು ಬಂದಿದ್ದಾರೆ. ಅನಿವಾರ್ಯವಾಗಿ ರಜೆ ಬೇಕಾದರೆ ಅನುಮತಿ ಪಡೆಯುತ್ತಾರೆ. ಪೋಷಕರು ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ‘ಹೊಸ ಕಲಿಕೋಪಕರಣಗಳ ಮೂಲಕ ಕಲಿಕೆಯ ಆಸಕ್ತಿ ಹೆಚ್ಚಾಗುತ್ತಿದೆ. ಶಿಕ್ಷಕರು ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿಗಳಾದ ಸುಜಾತಾ ಇಟ್ನಾಳ ಹಾಗೂ ಸಲೀಂ ನದಾಫ. ಶಾಲೆಯ ಸಂಪರ್ಕಕ್ಕೆ ಮೊ:98803 00485.

ಸೈರನ್‌, ವಾರಕ್ಕೊಮ್ಮೆ ಕ್ವಿಜ್‌

ಶಾಲೆ ಆರಂಭ, ಪ್ರಾರ್ಥನೆ, ವಿರಾಮ, ಊಟದ ಬಿಡುವು, ತರಗತಿ ಮುಕ್ತಾಯ.. ಇವುಗಳ ಸಮಯ ತಿಳಿಸಲು ಇಲ್ಲಿ ಬೆಲ್‌ ಮಾಡುವುದಿಲ್ಲ. ಬದಲಿಗೆ ಸೈರನ್ ಮೊಳಗಿಸುತ್ತಾರೆ. ಚಟುವಟಿಕೆ ಸಮಯಕ್ಕೆ ತಕ್ಕಂತೆ ಪ್ರೊಗ್ರಾಂ ಸೆಟ್‌ ಮಾಡಿದರೆ, ಆಯಾ ಟೈಮ್‌ಗೆ ತಕ್ಕಂತೆ ಸೈರನ್‌ ಸದ್ದು ಮಾಡುತ್ತದೆ. ಆ ಶಬ್ಧ ಒಂದು ನಿಮಿಷದವರೆಗೆ ಮೊಳಗುತ್ತದೆ. ಆ ಸಮಯದೊಳಗೆ ಮಕ್ಕಳು ಕೊಠಡಿಯೊಳಗೆ ಬರಬೇಕು; ಹೊರಗೆ ಹೋಗುವ ಸಮಯವಾದರೆ ಹೊರ ಹೋಗಬೇಕು. ವಿದ್ಯಾರ್ಥಿಗಳು ಈ ನಿಯಮಕ್ಕೆ ತಕ್ಕಂತೆ ಶಿಸ್ತು ಪಾಲಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಈ ಶಾಲೆಯಲ್ಲಿ ವಾರಕ್ಕೊಮ್ಮೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ, ಮಕ್ಕಳನ್ನು ಕಲಿಕೆಯ ಆಸಕ್ತಿಯನ್ನೂ ವಿಸ್ತರಿಸಲಾಗುತ್ತಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT