ಶಿಥಿಲ ಕಟ್ಟಡದಲ್ಲೇ ಪಾಠ!

7
ಕಳಚಿ ಬೀಳುತ್ತಿರುವ ಮೇಲ್ಛಾವಣಿ; ಮಳೆ ಬಂದಾಗ ಜಲಾವೃತ

ಶಿಥಿಲ ಕಟ್ಟಡದಲ್ಲೇ ಪಾಠ!

Published:
Updated:
Deccan Herald

ಹೂವಿನಹಡಗಲಿ: ಶಿಥಿಲ ಶಾಲಾ ಕಟ್ಟಡ, ಸೋರುವ ಮೇಲ್ಛಾವಣಿ, ಕಳಚಿ ಬೀಳುತ್ತಿರುವ ಸಿಮೆಂಟ್‌ ಪದರು, ಸದಾ ಅಪಾಯದ ಭೀತಿಯಲ್ಲೇ ಮಕ್ಕಳ ಆಟ, ಪಾಠ.

ಇದು ತಾಲ್ಲೂಕಿನ ಗಡಿ ಗ್ರಾಮ ಹರವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯ ಕಟ್ಟಡ ಶಿಥಿಲಗೊಂಡು ಅನೇಕ ವರ್ಷ ಕಳೆದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿಲ್ಲ.

ಬೇರೆ ಕಡೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಗಳು ಮುಚ್ಚುವ ಹಂತ ತಲುಪಿದ್ದರೆ, ಹರವಿ ಶಾಲೆ ಮಾತ್ರ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸುಸುಜ್ಜಿತವಾದ ಕಟ್ಟಡ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ.

ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಶಾಲೆ ಪ್ರಾರಂಭವಾಗಿದ್ದರೂ 1950ರಿಂದ ಶಾಲಾ ದಾಖಲೆಗಳು ದೊರೆಯುತ್ತಿವೆ. ಕಳೆದ 35 ವರ್ಷಗಳ ಹಿಂದೆ ಸರ್ಕಾರ ಈ ಶಾಲೆಗೆ 6 ಕೋಣೆಗಳನ್ನು ನಿರ್ಮಿಸಿದೆ. ಈ ಪೈಕಿ ನಾಲ್ಕು ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಉಳಿದ ಎರಡು ಕೋಣೆಗಳು ಮಳೆ ಬಂದಾಗ ಸೋರುತ್ತಿವೆ.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 320 ವಿದ್ಯಾರ್ಥಿಗಳಿದ್ದಾರೆ. 1 ರಿಂದ 4ನೇ ತರಗತಿ ಮಕ್ಕಳನ್ನು ಈಚೆಗೆ ನಿರ್ಮಿಸಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ. 5 ರಿಂದ 7ನೇ ತರಗತಿ ವಿದ್ಯಾರ್ಥಿಗಳು ಬೀಳುವ ಸ್ಥಿತಿಯಲ್ಲಿರುವ ಹಳೆಯ ಶಿಥಿಲ ಕಟ್ಟಡದಲ್ಲೇ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ.

ಒಂದೆಡೆ ವಿದ್ಯಾರ್ಥಿಗಳಿಲ್ಲ ಎಂದು ಸರ್ಕಾರ ಶಾಲೆ ಮುಚ್ಚಲು ಕ್ರಮ ಕೈಗೊಂಡಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಅವರಿಗೆ ಭದ್ರವಾದ ಸೂರು ಒದಗಿಸದಿರುವುದು ಸೋಜಿಗ ಮೂಡಿಸಿದೆ.

ಶಿಥಿಲ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿಕೊಂಡುವಂತೆ ಎಸ್‌.ಡಿ.ಎಂ.ಸಿ. ಹಾಗೂ ಶಾಲೆಯ ಮುಖ್ಯಶಿಕ್ಷಕರು ಅನೇಕ ಬಾರಿ ಶಿಕ್ಷಣ ಇಲಾಖೆಗೆ ಪತ್ರ ವ್ಯವಹಾರ ನಡೆಸಿದ್ದಾರೆ. ‘ಅಧಿಕಾರಿಗಳು ಕಟ್ಟಡ ವೀಕ್ಷಣೆ ಮಾಡಿ ಹೋಗುತ್ತಾರೆ ಹೊರತು ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ತಕ್ತಪಡಿಸುತ್ತಿದ್ದಾರೆ.

ಶಾಲೆಯಲ್ಲಿ ಎರಡು ಎಕರೆಯಷ್ಟು ವಿಶಾಲವಾದ ಆಟದ ಮೈದಾನವಿದೆ. ಅನೇಕ ವರ್ಷಗಳಿಂದ ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಕ್ರೀಡಾ ತರಬೇತಿ ಕೊರತೆಯ ನಡುವೆಯೂ ಈ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಉಳಿದಂತೆ ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರು, ಬಿಸಿಯೂಟದ ವ್ಯವಸ್ಥೆ ಅಚ್ಚುಕಟ್ಟಾಗಿದೆ. ತಾಲ್ಲೂಕಿನ ಗಡಿ ಭಾಗದಲ್ಲಿರುವ ಹರವಿ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಶಾಲೆಯದ್ದು ಒಂದು ಸಮಸ್ಯೆಯಾದರೆ, ಗ್ರಾಮದಲ್ಲಿರುವ ಆಯುರ್ವೇದ ಆಸ್ಪತ್ರೆ, ಹೆರಿಗೆ ಆಸ್ಪತ್ರೆಗಳಲ್ಲಿ ಅನೇಕ ದಿನಗಳಿಂದ ವೈದ್ಯರೇ ಇಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಬೇಸತ್ತಿದ್ದಾರೆ. ನದಿಯ ರಸ್ತೆ ದುರಸ್ತಿ ಕಾಣದೇ ಕೆಸರು ಗದ್ದೆಯಂತಾಗಿದೆ. ತಾಲ್ಲೂಕಿನ ಗಡಿ ಗ್ರಾಮಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷಿಸದೇ ಅಲ್ಲಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !