ಶನಿವಾರ, ಡಿಸೆಂಬರ್ 7, 2019
22 °C

ಆಲೆಟ್ಟಿ (ನಾರ್ಕೊಡ್) | ಶಾಲಾಭಿವೃದ್ಧಿಯ ಮಂತ್ರ ಜಪಿಸಿದ ಪದ್ಮಾ ರಂಗನಾಥ್

Published:
Updated:
Prajavani

ಸಮಾಜದಲ್ಲಿ ಎಲ್ಲರೂ ದುಡಿಯುವವರೆ. ಹಾಗಂತ ಇಲ್ಲಿ ಎಲ್ಲರೂ ಹೊಣೆಗಾರಿಕೆಯಿಂದ ದುಡಿಯಲಾರರು. ಕೆಲವರು ಅಗತ್ಯತೆಗೆ ಕೆಲಸ ಮಾಡಿದರೆ ಇನ್ನೂ ಕೆಲವರು ಅನಿವಾರ್ಯತೆಗೆ ದುಡಿಯುತ್ತಾರೆ. ಆದರೆ ಇವರೆಲ್ಲರ ನಡುವೆ ಬೆರಳೆಣಿಕೆಯಷ್ಟು ಮಂದಿ ಭವಿಷ್ಯದ ಸದೃಢ ಸಮಾಜದ ಏಳಿಗೆಗಾಗಿ ಕೆಲಸ ನಿರ್ವಹಿಸುತ್ತಾರೆ. ಅಂತಹವರಲ್ಲೊಬ್ಬರು ಶಿಕ್ಷಕಿ ಪದ್ಮಾ ರಂಗನಾಥ್.

ಇವರ ಹುಟ್ಟೂರು ಬಳ್ಳಾರಿ. ಬಡತನದಲ್ಲಿ ಬೆಳೆದ ಇವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ತರಕಾರಿ ಮಾರಿ ತಂದ ಪುಡಿಗಾಸು ಮನೆಯ ಮೂಲ ವರಮಾನವಾಗಿತ್ತು. ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜಿಗೆ ಹೋಗುವ ಮಹದಾಸೆಯನ್ನು ಹೊತ್ತುಕೊಂಡಿದ್ದರು. ಆದರೆ, ತಮ್ಮ ಹಾಗೂ ತಂಗಿಯ ಭವಿಷ್ಯಕ್ಕೆ ಕೆಡುಕಾಗಬಾರದೆಂಬ ದೃಷ್ಟಿಯಿಂದ, ಟಿಸಿಎಚ್‌ಗೆ ಸೇರಿಕೊಂಡರು. ಈ ಸಂದರ್ಭದಲ್ಲಿ ಸ್ವಂತ ಪುಸ್ತಕ ಕೊಂಡುಕೊಳ್ಳುವ ಸೌಲಭ್ಯವಿಲ್ಲದೆ ಬೇರೆಯವರ ಪುಸ್ತಕ ಕೇಳಿ ಪಡೆದು ಟಿಸಿಎಚ್‌ ತೇರ್ಗಡೆಯಾಗುತ್ತಾರೆ. ನಂತರ ಬಳ್ಳಾರಿಯ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಆರಂಭಿಸುತ್ತಾರೆ.

ಆನಂತರ ಸುಳ್ಯ ತಾಲ್ಲೂಕಿನ ನಾಗಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಹೊಂದಿದಾಗ, ಆ ಶಾಲೆಯಲ್ಲಿ 45 ಮಕ್ಕಳಿಗೆ ಕೇವಲ ಎರಡು ಸಣ್ಣ ಕೊಠಡಿಗಳಿದ್ದ, ಸೌಲಭ್ಯ ವಂಚಿತ ಶಾಲೆಯನ್ನು ಅಭಿವೃದ್ಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಂಚಾಯಿತಿ ಸಹಾಯದಿಂದ ಮೊದಲು ಶೌಚಾಲಯವನ್ನು ನಿರ್ಮಿಸುತ್ತಾರೆ. ಜತೆಗೆ ಶಾಲಾ ಆವರಣವನ್ನು ವಿನ್ಯಾಸಗೊಳಿಸುತ್ತಾರೆ ಹಾಗೂ ಶಾಲೆಯ ಸುತ್ತ ಸುಮಾರು 450 ಸಸಿಗಳನ್ನು ನೆಡಿಸಿದ್ದಾರೆ. ಲಯನ್ಸ್ ಕ್ಲಬ್, ಗ್ರಾಮ ಪಂಚಾಯಿತಿ ಮತ್ತು ಊರಿನ ಜನರ ಸಹಾಯದಿಂದ ಶ್ರಮದಾನ ಮಾಡಿಸಿ ಮಕ್ಕಳಿಗೆ ವಿಶಾಲವಾದ ಆಟದ ಮೈದಾನ ನಿರ್ಮಾಣ ಮಾಡಿದ್ದಲ್ಲದೇ, ಈ ಶಾಲೆಯ ಮಕ್ಕಳನ್ನು ಮೊರಾರ್ಜಿ ಶಾಲೆಯ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಿದ್ದಾರೆ.

ಪದ್ಮಾ ಅವರು ಸಾಮಾನ್ಯ ಶಿಕ್ಷಕಿಯಾಗಿ ಶ್ರಮವಹಿಸಿ ಮಾಡಿದ ಈ ಮಾದರಿ ಶಾಲಾ ಯೋಜನೆ ಎಲ್ಲೆಡೆ ಪಸರಿಸಲು, ಹಿರಿಯಡ್ಕ, ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆಗಳ ಹಾಗೂ ಮಕ್ಕಳ ಏಳಿಗೆಗಾಗಿ ಪ್ರಾಂಶುಪಾಲರನ್ನಾಗಿಸಿದರು. ಈ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿ ಸಂಘ, ಪೋಷಕರು ರೋಟರಿ ಕ್ಲಬ್, ಕೆಎಫ್‌ಡಿಸಿ, ಗ್ರಾಮ ಪಂಚಾಯತಿ ಸಹಾಯದಿಂದ ಶೌಚಾಲಯ, ಆಟದ ಮೈದಾನ, ತರಗತಿಗೆ ಬೇಕಾದ ವೃತ್ತಾಕಾರದ ಟೇಬಲ್ ಮತ್ತು ಕುರ್ಚಿ, ವೇದಿಕೆಗೆ ಬೇಕಾದ ಕುರ್ಚಿಗಳು ಹಾಗೂ ಕಚೇರಿಗೆ ಅಲಮಾರುಗಳು, ಆಟದ ಮೈದಾನ, ಕೈ ತೋಟ, ಟೀವಿ ಮತ್ತು ಡಿಷ್ ಇನ್ಪೋಸಿಸ್‌ನಿಂದ 10 ಗಣಕಯಂತ್ರ, ನಲಿಕಲಿ ಹೀಗೆ ಶೈಕ್ಷಣಿಕ ಹಾಗೂ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವಂತೆ ಮಾಡಿದ್ದಾರೆ. ಹೀಗೆ ಇವರು ಅನೇಕ ಪ್ರಗತಿದಾಯಕ ಕಾರ್ಯಗಳನ್ನು ಮಾಡಿದ್ದಾರೆ.

ಪ್ರಸ್ತುತ ಆಲೆಟ್ಟಿ (ನಾರ್ಕೊಡ್) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಲೆಟ್ಟಿ ಶಾಲೆಯಲ್ಲಿಯೂ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಮಾತ್ರವಲ್ಲ ವಿಶಿಷ್ಟ ರೀತಿಯ ಶಾಲೆಯ ದ್ವಾರವನ್ನು ಪೆನ್ಸಿಲ್ ಮಾದರಿಯಲ್ಲಿ ನಿರ್ಮಾಣ ಮಾಡಿ ಎಲ್ಲರ ಆಕರ್ಷಣೆಗೆ ಆಲೆಟ್ಟಿ ಶಾಲೆಯನ್ನು ಪಾತ್ರವಾಗಿಸಿದ ಕೀರ್ತಿ ಪದ್ಮಾ ಅವರದ್ದು. ಇವರ ಈ ಕಾರ್ಯಗಳನ್ನು ಮೆಚ್ಚಿ 2014ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ರಾಜೀವ ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ರಾಜ್ಯ ಪ್ರಶಸ್ತಿ, 2015–16ರ ಸಾಲಿನಲ್ಲಿ ಉತ್ತಮ ಶಿಕ್ಷಕಿ ಜಿಲ್ಲಾ ಪ್ರಶಸ್ತಿ, 2018ರಲ್ಲಿ ರೋಟರಿ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಮತ್ತು ಪ್ರಸ್ತುತ 2019ರಲ್ಲಿ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಉಳಿದೆಲ್ಲಾ ಶಿಕ್ಷಕರಿಗೆ ಮಾದರಿಯಾದವರು ಪದ್ಮಾ ರಂಗನಾಥ್.

ಸಮಯದ ಗಡಿ ಇರಬಾರದು

ಶಿಕ್ಷಕರೆಂದರೆ ಸಮಯದ ಗಡಿ ಇಟ್ಟುಕೊಂಡು ಕೆಲಸ ನಿರ್ವಹಿಸಬಾರದು. ಒಬ್ಬ ಶಿಕ್ಷಕನ ಆಲೋಚನೆಗಳು ಸಮಯವನ್ನು ಮರೆತು ಸದಾ ಮಕ್ಕಳ ನಾಳೆಗಳ ಬಗ್ಗೆ, ಯೋಗ್ಯ ಸಮಾಜದ ನಿರ್ಮಾಣದ ಬಗ್ಗೆಯೇ ಇರಬೇಕು. ಆಗ ಮಾತ್ರ ಸಮರ್ಥ ಶಿಕ್ಷಕ ಎನಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಪದ್ಮಾ ರಂಗನಾಥ್
 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು