ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಶಾಲೆಯತ್ತ ಮಕ್ಕಳ ಹೆಜ್ಜೆ...

ವಿದ್ಯಾರ್ಥಿಗಳ ಸ್ವಾಗತಕ್ಕೆ ತಳಿರು, ತೋರಣ, ರಂಗೋಲಿಯಿಂದ ಸಿಂಗಾರಗೊಂಡ ಶಾಲೆಗಳು
Last Updated 27 ಮೇ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೇಸಿಗೆ ರಜೆಯನ್ನು ಮುಗಿಸಿ ಶಾಲೆಗೆ ತೆರಳಲು ಮಕ್ಕಳು ಅಣಿಯಾಗಿದ್ದಾರೆ. ಶಾಲೆಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು, ಅಧಿಕಾರಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ರಜೆಯಲ್ಲಿ ಅಜ್ಜ, ಅಜ್ಜಿ, ಬಂಧುಗಳ ಮನೆಗೆ, ದೂರದ ಊರು, ನಗರಗಳಿಗೆ ತೆರಳಿದ್ದ ಮಕ್ಕಳನ್ನು ಈಗಾಗಲೇ ಮನೆಗಳಿಗೆ ಕರೆದುಕೊಂಡು ಬಂದಿರುವ ಪೋಷಕರು, ತಮ್ಮ ಮಕ್ಕಳಿಗೆ ಅಗತ್ಯ ಇರುವ ಪಠ್ಯಪುಸ್ತಕ, ಬ್ಯಾಗ್‌, ಸಮವಸ್ತ್ರ, ಶೂ, ಸಾಕ್ಸ್‌ಗಳನ್ನು ಖರೀದಿಸಿ ಶಾಲೆಗೆ ಕಳುಹಿಸಲು ಭರದ ಸಿದ್ಧತೆಯಲ್ಲಿ ನಿರತವಾಗಿದ್ದಾರೆ. ಜೊತೆಗೆ ದೂರದ ಶಾಲೆಗೆ ತೆರಳಲು ಮಕ್ಕಳಿಗೆ ಅಗತ್ಯವಿರುವ ಆಟೊ ರಿಕ್ಷಾ, ಬಸ್‌ ಮತ್ತಿತರರ ವಾಹನಗಳ ವ್ಯವಸ್ಥೆಯಲ್ಲಿ ಪೋಷಕರು ತೊಡಗಿದ್ದಾರೆ.

ಜಿಲ್ಲೆಯಲ್ಲಿ ಇರುವ ಸಿಬಿಎಸ್‌ಇ ಶಾಲೆಗಳು ಸೋಮವಾರದಿಂದಲೇ ಅಧಿಕೃತವಾಗಿ ಬಾಗಿಲು ತೆರೆದಿವೆ. ಮೇ 29ರಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಪುನರಾರಂಭವಾಗುತ್ತಿವೆ.

ವೈವಿಧ್ಯಮಯ ಕಾರ್ಯಕ್ರಮ:

ಶಾಲೆಯತ್ತ ಮಕ್ಕಳನ್ನು ಸೆಳೆಯಲು ಶಿಕ್ಷಣ ಇಲಾಖೆಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದೆ. ಮೇ 28ರಂದು ಶಿಕ್ಷಣ ಇಲಾಖೆ ಅಧಿಕಾರಿಗಳು, ಆಯಾ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಉಪನಿರ್ದೇಶಕ(ಡಿಡಿಪಿಐ) ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲಾ ಪ್ರಾರಂಭೋತ್ಸವದಂದು ಪಠ್ಯಪುಸ್ತಕ ವಿತರಣೆ ಜೊತೆಗೆ ಮಕ್ಕಳಿಗೆ ಸಿಹಿ ಊಟವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲೆಗೆ ಈಗಾಗಲೇ ಶೇ 85ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಆಯಾ ಶಾಲೆಗಳಿಗೆ ಒದಗಿಸಲಾಗಿದೆ. ಶಾಲಾ ಪ್ರಾರಂಭೋತ್ಸವದ ದಿನ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಶಾಲೆಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸಕ್ತ ವಿತರಿಸಲಾಗುವುದು. ಇನ್ನೂ ಸಮವಸ್ತ್ರ, ಶೂ, ಸಾಕ್ಸ್‌ ಬರುವುದು ಬಾಕಿ ಇದ್ದು, ಜೂನ್‌ ಅಂತ್ಯದೊಳಗೆ ಬರುವ ಸಾಧ್ಯತೆ ಇದೆ ಎಂದರು.

ಶಾಲೆ ಕಡೆ ನನ್ನ ನಡೆ:

ಮೇ 20ರಿಂದ ಮೇ 31ರ ವರೆಗೆ ‘ಶಾಲೆ ಕಡೆ ನನ್ನ ನಡೆ’, ‘ಶಾಲೆಗೆ ಬರಲು ನನಗೊಂದು ಅವಕಾಶ’ ಎಂಬ ವಿಶೇಷ ದಾಖಲಾತಿ ಆಂದೋಲನ ಆಯಾ ಶಾಲಾ ವ್ಯಾಪ್ತಿಯಲ್ಲಿ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತಿದೆ. ಶಾಲೆಯಿಂದ ಹೊರಗುಳಿದ, ಶಾಲೆಗೆ ದಾಖಲಾಗಿ ಶಾಲೆಗೆ ಬಾರದೇ ಇರುವ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಆಂದೋಲನ ಇದಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿದ 1658 ಮಕ್ಕಳನ್ನು ಗುರುತಿಸಲಾಗಿದ್ದು, ಇವರ ದಾಖಲಾತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಾಮಾನ್ಯ ದಾಖಲಾತಿ:

1ನೇ ತರಗತಿಗೆ ಹೊಸದಾಗಿ ಮಕ್ಕಳ ಸೇರ್ಪಡೆ ಹಾಗೂ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮಧ್ಯಂತರದಲ್ಲಿ ಶಾಲೆ ಬಿಡದಂತೆ ಅಂದರೆ, ಪ್ರಾಥಮಿಕ ಶಾಲಾ ಹಂತದಿಂದ ಮಾಧ್ಯಮಿಕ ಶಾಲೆ ಹಾಗೂ ಮಾಧ್ಯಮಿಕ ಶಾಲೆಯಿಂದ ಪ್ರೌಢಶಾಲೆಗಳಿಗೆ ಮಕ್ಕಳು ದಾಖಲಾಗುವಂತೆ ಜೂನ್‌ 1ರಿಂದ 30ರ ವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ನಡೆಯಲಿದೆ ಎಂದು ತಿಳಿಸಿದರು.

ಮಿಂಚಿನ ಸಂಚಾರ:

ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಚಟುವಟಿಕೆ, ಪಠ್ಯಪುಸ್ತಕ ವಿತರಣೆ, ಶೈಕ್ಷಣಿಕ ವಾರ್ಷಿಕ ಯೋಜನೆಯನ್ನು ಶಿಕ್ಷಕರು ರೂಪಿಸಿದ್ದಾರೆ ಎಂಬುದರ ಕುರಿತು ಪರಿಶೀಲನೆಗಾಗಿ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾಮಟ್ಟದ ಅಧಿಕಾರಿಗಳ 4 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮೇ 29ರಿಂದ ಜೂನ್ 8ರ ವರಗೆ ಶಾಲೆಗಳಿಗೆ ಏಕಾಏಕಿ ಭೇಟಿ ನೀಡಿ, ಪರಿಶೀಲನೆ ನಡೆಸಲಿವೆ ಎಂದು ಅವರು ಹೇಳಿದರು.

ಡೊನೇಷನ್‌ ಹಾವಳಿ:

ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಮಕ್ಕಳ ಸೇರ್ಪಡೆಗೆ ಪೋಷಕರು ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ದಾಖಲಾತಿ ಪೂರ್ಣಗೊಂಡಿದೆ, ಸೀಟ್‌ ಖಾಲಿ ಇಲ್ಲ ಎಂದು ಖಾಸಗಿ ಶಾಲೆಗಳ ಮುಖ್ಯಸ್ಥರು ಹೇಳುತ್ತಿದ್ದಾರೆ. ಇನ್ನೊಂದೆಡೆ ಶೈಕ್ಷಣಿಕ ಶುಲ್ಕದ ಜೊತೆಗೆ ಡೋನೇಷನ್‌ ಹಾವಳಿಯೂ ಮಿತಿಮೀರಿದೆ. ಅನಿವಾರ್ಯ ಸ್ಥಿತಿಯಲ್ಲಿರುವ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಕ್ಕಳ ಭವಿಷ್ಯದ ಕನಸು ಕಂಡು ಅಗ್ಗದ ಶುಲ್ಕದ ಜೊತೆ ಡೊನೇಷನ್‌ ತುಂಬುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT