ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ: ಜಾನಿ- ಸಾಧು ಜುಗಲ್‌ಬಂದಿ

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಿಂದಿಯ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಮತ್ತು ಕನ್ನಡದ ಹೆಸರಾಂತ ಹಾಸ್ಯ ನಟ ಸಾಧು ಕೋಕಿಲ ಅವರನ್ನು ಒಗ್ಗೂಡಿಸಿ ನಿರ್ದೇಶಕ ಕೆ.ಆರ್. ಮುರಳೀಕೃಷ್ಣ ಅವರು ‘ಗರ’ ಸಿನಿಮಾ ಸಿದ್ಧಪಡಿಸಿದ್ದಾರೆ. ಇಷ್ಟೇ ಇಲ್ಲ. ಈ ಚಿತ್ರದಲ್ಲಿ ಇನ್ನೊಂದು ವೈಶಿಷ್ಟ್ಯ ಕೂಡ ಇದೆಯಂತೆ.

ಈ ವೈಶಿಷ್ಟ್ಯದ ಬಗ್ಗೆ ಮುರಳೀಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ‘ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳನ್ನು ಈ ಚಿತ್ರದಲ್ಲಿ ಸೃಷ್ಟಿಸಿದ್ದೇನೆ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಲಾಯರ್ ಆಗಿ ಕೆಲಸ ಮಾಡಿದವನು ನಾನು. ಒಂದು ಸಿನಿಮಾದ ನಿರ್ದೇಶನ ಹೇಗೆ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಮಾಡಿದ್ದೇನೆ ಎಂಬುದು ನಿಜ’ ಎಂದು ತಮ್ಮ ಬಗ್ಗೆಯೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಮಾತು ಆರಂಭಿಸಿದರು ಮುರಳೀಕೃಷ್ಣ.

‘ನನ್ನನ್ನು ನಾನು ಕಂಡುಕೊಂಡ ಕಥೆ ಗರ. ಇದರಲ್ಲಿ ಬರುವ ಎರಡು ಪಾತ್ರಗಳು ನಾನೇ. ಆಕಸ್ಮಿಕಾ ಎಂಬ ಹುಡುಗಿಯ ಪಾತ್ರವೊಂದು ಈ ಚಿತ್ರದಲ್ಲಿದೆ. ಈಕೆಯ ಜೀವನದಲ್ಲಿ ಎಲ್ಲವೂ ಆಕಸ್ಮಿಕಗಳೇ ಆಗಿಬಿಡುತ್ತವೆ’ ಎಂದೂ ಅವರು ಹೇಳಿದರು.

ಚಿತ್ರೀಕರಣ‌ ಮುಗಿದಿದೆ. ಆದರೆ, ಚಿತ್ರದ ನಿರ್ಮಾಪಕರು ಇಲ್ಲಿಗೆ (ಪತ್ರಿಕಾಗೋಷ್ಠಿಗೆ) ಬರಲು ಸಿದ್ಧರಿಲ್ಲ. ಚಿತ್ರದ ನಿರ್ಮಾಪಕರು ಯಾರು ಎಂಬುದನ್ನು ಮುಂದೊಮ್ಮೆ ತಿಳಿಸಲಾಗುವುದು ಎಂದರು.

ಕೇರಳದ ನಟಿ ಆವಂತಿಕಾ ಮೋಹನ್, ಕನ್ನಡತಿ ನೇಹಾ ಪಾಟೀಲ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೆಹಮಾನ್ ಹಾಸನ್ ಕೂಡ ಒಂದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಜಾನಿ ಲಿವರ್ ಮತ್ತು ಸಾಧು ಕೋಕಿಲ ಇದರಲ್ಲಿ ಸಹೋದರರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕನ್ನಡದ ಸೊಗಡಿನ ಚಿತ್ರ‌ ಇದು. ಪರಭಾಷೆಗಳ ನೆರಳು ಇದರಲ್ಲಿ ಇಲ್ಲ. ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಎಲ್ಲ ಪಾತ್ರಗಳೂ ನೆನಪಲ್ಲಿ ಉಳಿಯುತ್ತವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಟ್ಟರು ರೆಹಮಾನ್.

ಕಾರಣಾಂತರಗಳಿಂದ ತುಸು ತಡವಾಗಿ ಪತ್ರಿಕಾಗೋಷ್ಠಿಗೆ ಬಂದ ಜಾನಿ, ಸಭಾಂಗಣ ಪ್ರವೇಶಿಸುವಾಗಲೇ ಎಲ್ಲರ ಮುಖದಲ್ಲೂ ನಗು ಮೂಡಿಸಿದರು. ‘ಸಾಧು ಭಾಯ್ ಜೊತೆ ಕೆಲಸ ಮಾಡಿದ್ದು ನಂಗೆ ಬಹಳ ಖುಷಿ ಕೊಟ್ಟಿತು’ ಎಂದು ತಮ್ಮದೇ ಶೈಲಿಯ ಕನ್ನಡದಲ್ಲಿ ಹೇಳಿದರು.

‘ನಾನು ಆಂಧ್ರ ಪ್ರದೇಶದವನು. ಆದರೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕೆಲಸ ಮಾಡಿದ್ದು ಇದೇ ಮೊದಲು. ಆರಂಭದಲ್ಲಿ ತುಸು ಅಳುಕು ಇತ್ತಾದರೂ ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಂಭಾಷಣೆ ಒಪ್ಪಿಸುವುದನ್ನು ರೂಢಿಸಿಕೊಂಡೆ’ ಎಂದರು.

ಜಾನಿ ಅವರು ಈ ಚಿತ್ರದಲ್ಲಿ ಅಭಿನಯಿಸುವಾಗ ಸಾಧು ಅವರ ಸಹಾಯ ದೊಡ್ಡದಿತ್ತಂತೆ. ‘ನಾನು ಚಿತ್ರದ ಡಬ್ಬಿಂಗ್ ಕೆಲಸದಲ್ಲಿಯೂ ಪಾಲ್ಗೊಳ್ಳುವೆ’ ಎಂದರು ಜಾನಿ.

‘ಬೇರೆ ಭಾಷೆಯಲ್ಲಿ ಸಂಭಾಷಣೆ ಒಪ್ಪಿಸಿ, ಆ ಮೂಲಕ ಹಾಸ್ಯ ಸೃಷ್ಟಿಸುವುದು ಕಷ್ಟ. ಹಾಗೆ ಮಾಡಲು ಭಾಷೆ ಮೇಲೆ ಗಟ್ಟಿಯಾದ ಹಿಡಿತ ಬೇಕಾಗುತ್ತದೆ. ಆದರೆ ಜಾನಿ ಅದನ್ನು ಮಾಡಿದ್ದಾರೆ’ ಎಂದರು ಸಾಧು.

ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರೂ ಪತ್ರಿಕಾಗೋಷ್ಠಿಗೆ ಬಂದಿದ್ದರು. ಕನ್ನಡ ಸಿನಿಮಾ ಜನರ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಇಲ್ಲಿನ ಜನ ಮುಂಬೈ ಜನರಿಗಿಂತ ಹೆಚ್ಚು ವೃತ್ತಿಪರರು’ ಎಂದು ಖುಷಿ ವ್ಯಕ್ತಪಡಿಸಿದರು.

ನೇಹಾ ಮತ್ತು ಆವಂತಿಕಾ ಚುಟುಕಾಗಿ ಎರಡು ಮಾತುಗಳನ್ನು ಆಡಿದರು. ‘ನಂದು ಮುಖ್ಯವಾದ ಪಾತ್ರ. ನನ್ನ ಪಾತ್ರದಿಂದಾಗಿ ಸಿನಿಮಾದಲ್ಲಿ ಒಂದು ಟ್ವಿಸ್ಟ್ ಸಿಗುತ್ತದೆ. ಆದರೆ ಪಾತ್ರದ ಬಗ್ಗೆ ಹೆಚ್ಷು ಹೇಳುವುದಿಲ್ಲ’ ಎಂದರು ನೇಹಾ. ‘ನಂದು ಇದರಲ್ಲಿ ಬಬ್ಲಿ ಹುಡುಗಿಯ ಪಾತ್ರ’ ಎಂದಷ್ಟೇ ಹೇಳಿದರು ಆವಂತಿಕಾ.


ನೇಹಾ ಪಾಟೀಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT