ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸ್ಥೈರ್ಯ ತುಂಬುವ ಸಮಾಜಕಾರ್ಯ

Last Updated 28 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಹೋ, ನಮಸ್ಕಾರ ಸರ್, ಹೇಗಿದೀರಾ? ಮಗಳಾ ಸರ್? ತುಂಬಾ ಸಣ್ಣವಳಿರುವಾಗ ನೋಡಿದ್ದೆ. ಗುರುತು ಇದ್ಯಾಮ್ಮ ನಂದು? ಏನ್ ಓದ್ತಿದೀಯಾ ಈಗ?’ ಅಂತ ಇತ್ತೀಚೆಗೆ ಸಿಕ್ಕಿದ ಅಪ್ಪನ ಗೆಳೆಯರೊಬ್ಬರು ನಮಗೆ ಮಾತನಾಡಲು ಅವಕಾಶವೇ ನೀಡದೇ ಪುಂಖಾನುಪುಂಖವಾಗಿ ಪ್ರಶ್ನೆಗಳ ಮಳೆಗರೆದರು.

‘ಡಿಗ್ರೀ ಓದ್ತಿದಾಳೆ’ ಅಂದರು ಅಪ್ಪ. ಅಷ್ಟಕ್ಕೇ ನಿಲ್ಲದ ಅವರ ಕುತೂಹಲದ ಪ್ರಶ್ನೆ ‘ಹೋ ಹೌದಾ ಏನು ಸೈನ್ಸ್? ಅಥವಾ ಕಾಮರ್ಸಾ’ ಅಂತ ಪ್ರಶ್ನಿಸಿ, ನನ್ನ ಉತ್ತರಕ್ಕೂ ಕಾಯುವ ತಾಳ್ಮೆ ತೋರದೇ, ‘ಈಗ ಎಲ್ಲಾ ಮಕ್ಕಳು ಇದನ್ನೇ ಅಲ್ವಾ ಸರ್ ತಗೊಳ್ಳದು, ಉದ್ಯೋಗಾವಕಾಶ ಚೆನ್ನಾಗಿ ಇದೆ. ವಿದೇಶಕ್ಕೂ ಹೋಗ್ಬೋದು’ – ಅಂತ ನಮಗೆ ಗೊತ್ತಿಲ್ಲದ ವಿಷಯ ಎನ್ನುವ ರೀತಿಯಲ್ಲಿ ಹೇಳುತ್ತಹೋದರು.

ಅವರ ಎಲ್ಲಾ ಮಾತುಗಳನ್ನೂ ತಾಳ್ಮೆಯಿಂದ ಕೇಳಿದ ನಾನು ಸಣ್ಣ ನಗುವಿನೊಂದಿಗೆ, ತಣ್ಣಗೇ ‘ಬಿ.ಎಸ್.ಡಬ್ಲ್ಯೂ. ಓದ್ತಿದೀನಿ’ ಎಂದೆ. ಆಶ್ಚರ್ಯಚಕಿತರಾದ ಅವರು, ಮತ್ತೊಮ್ಮೆ ಕೇಳಿದರು. ನಾನು ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್ ಎಂದು ವಿಸ್ತರಿಸಿ, ‘ಸಮಾಜಕಾರ್ಯ ಪದವಿ’ ಎಂದು ತಿಳಿಸಿ ಹೇಳಿದೆ. ಅಲ್ಲಿಯವರೆಗೆ ತನಗೆ ಎಲ್ಲವೂ ತಿಳಿದಿದೆ ಎಂಬಂತೆ ಮಾತನಾಡುತ್ತಿದ್ದ ಅವರು ಇದ್ಯಾವುದು ಹೊಸ ಕೋರ್ಸ್ ಎಂಬಂತೆ ಪ್ರಶ್ನಾರ್ಥಕ ಮುಖ ಮಾಡಿದರು. ಹೌದು, ಅನೇಕ ಜನರಿಗೆ ಈ ಪದವಿಯ ಕುರಿತು ತಿಳಿವಳಿಕೆ ಇಲ್ಲ.

ಏನಿದು ಬಿ.ಎಸ್.ಡಬ್ಲ್ಯೂ.?
‘ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್’ ಅಥವಾ ‘ಸಮಾಜಕಾರ್ಯ ಪದವಿ’ ಎಂಬುದು ಎಂಬತ್ತು ವರ್ಷಗಳಿಗೂ ಹಿಂದಿನದ್ದಾದರೂ ಅಷ್ಟಾಗಿ ಬೆಳಕಿಗೆ ಬಂದಿಲ್ಲ. ತಮ್ಮ ಕಾರ್ಯವನ್ನು ಹೇಳಿಕೊಳ್ಳಲಿಚ್ಛಿಸದ ಸಾಮಾಜಿಕ ಕಾರ್ಯಕರ್ತರು ಎಲೆಮರೆಯ ಕಾಯಿಯಂತೆ ಸಮಾಜದ ಉನ್ನತಿಗೆ ಬಹಳ ಹಿಂದಿನಿಂದಲೂ ಶ್ರಮಿಸುತ್ತಲೇ ಬಂದಿದ್ದಾರೆ. ಯಾವುದೇ ವಿಷಯಗಳಲ್ಲಿ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಪೂರೈಸಿದ ನಂತರ ಪದವಿ ಶಿಕ್ಷಣಕ್ಕೆ ಈ ವಿಷಯವನ್ನು ಆಯ್ದುಕೊಳ್ಳಬಹುದಾಗಿದೆ ಅಥವಾ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಯಾವುದೇ ಕ್ಷೇತ್ರದಲ್ಲಿ ಮುಗಿಸಿದ ಯುವಕ/ಯುವತಿಯರು ತಮ್ಮ ಸ್ನಾತಕೋತ್ತರ ಪದವಿಗಾಗಿ ಎಮ್.ಎಸ್.ಡಬ್ಲ್ಯೂ. (ಮಾಸ್ಟರ್ ಆಫ್ ಸೋಷಿಯಲ್ ವರ್ಕ್) ಆರಿಸಿಕೊಳ್ಳಬಹುದಾಗಿದೆ.

ವಿಭಾಗಗಳು
ಸಮಾಜಕಾರ್ಯ ವಿಷಯದಲ್ಲಿ ಮೂರು ವಿಭಾಗಗಳಿದ್ದು, ವೈದ್ಯಕೀಯ ಮನೋವಿಜ್ಞಾನ (Medical Psychiatry), ಮಾನವ ಸಂಪನ್ಮೂಲ ನಿರ್ವಹಣೆ (Human Resource Management) ಹಾಗೂ ಸಮುದಾಯ ಅಭಿವೃದ್ಧಿ (Community Development) ಎಂದು ವಿಂಗಡಿಸಲಾಗಿದೆ. ಪದವಿಯ ಸಂದರ್ಭದಲ್ಲಿ ಮೂರು ವಿಷಯಗಳನ್ನು ಅಭ್ಯಸಿಸುವ ಅವಕಾಶ
ವಿದ್ದು, ಸ್ನಾತಕೋತ್ತರ ಪದವಿಗೆ ತಮ್ಮ ಆಸಕ್ತಿಯ ಯಾವುದಾದರೂ ಒಂದು ವಿಭಾಗವನ್ನು ಗುರುತಿಸಿ, ಆಯ್ಕೆ ಮಾಡುವ ಅವಶ್ಯಕತೆಯಿರುತ್ತದೆ. ಇದರಿಂದ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವಿದ್ಯಾರ್ಥಿಯು ಪರಿಣತಿ ಹೊಂದಲು ಹಾಗೂ ಉದ್ಯೋಗ ಪಡೆಯಲು ಸಹಾಯಕವಾಗುತ್ತದೆ. ವ್ಯಕ್ತಿಗತ ಸಮಾಜಕಾರ್ಯ, ವೃಂದಸಮಾಜಕಾರ್ಯ, ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆ, ಆಡಳಿತ, ಸಂಶೋಧನೆ ಮಂತಾದ ವಿಧಾನಗಳನ್ನು ಇದು ಒಳಗೊಂಡಿದೆ.

ಕ್ಷೇತ್ರಕಾರ್ಯ (Field Work)
ಕೇವಲ ತರಗತಿಯಲ್ಲಿ ಕುಳಿತುಕೊಂಡು, ಅಧ್ಯಾಪಕರ ಪಾಠ ಕೇಳುವುದು ಈ ಕೋರ್ಸ್‌ನ ಉದ್ದೇಶವಲ್ಲ. ಬದಲಿಗೆ ತರಗತಿಯಲ್ಲಿ ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವುದರ ಮೂಲಕ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದುವುದೇ ಇದರ ಗುರಿ. ಹಾಗಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕನಿಷ್ಠ ವಾರದ ಎರಡು ದಿನವನ್ನು ಕ್ಷೇತ್ರಕಾರ್ಯಕ್ಕಾಗಿ (Field Work) ಮೀಸಲಿಡಲಾಗಿದೆ. ಸಮುದಾಯ, ಆಸ್ಪತ್ರೆ, ಸ್ವಯಂ ಸೇವಾ ಸಂಸ್ಥೆ, ಸರ್ಕಾರಿ ಹಾಗೂ ಖಾಸಗಿ ಸಂಘ-ಸಂಸ್ಥೆಗಳಲ್ಲಿ ವಿದ್ಯಾರ್ಥಿಜೀವನದಲ್ಲೇ ತರಬೇತಿ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಅಲ್ಲದೇ ರಜೆಯ ದಿನಗಳಲ್ಲಿ ಇಂಟರನ್‌ಶಿಪ್‌ ಮಾಡುವ ಮೂಲಕ ಹೆಚ್ಚಿನ ತರಬೇತಿ ಪಡೆಯಬಹುದಾಗಿದೆ. ಕೌಶಲಾಭಿವೃದ್ಧಿ, ವ್ಯಕ್ತಿತ್ವ ಬೆಳವಣಿಗೆಗೆ ಇದು ಸಹಾಯಕವಾಗುತ್ತದೆ.

ಉದ್ಯೋಗಾವಕಾಶಗಳು
ದೇಶವಲ್ಲದೇ ವಿದೇಶಗಳಲ್ಲೂ ಉದ್ಯೋಗಾವಕಾಶಗಳು ಹೇರಳವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುವ ಅವಕಾಶವಿದೆ. ಮಾನವ ಸಂಪನ್ಮೂಲ ವಿಭಾಗ, ಆಪ್ತ ಸಮಾಲೋಚನೆ, ಮಕ್ಕಳ ಮತ್ತು ಮಹಿಳಾ ಸಹಾಯವಾಣಿ, ಕೌಟುಂಬಿಕ ಸಲಹಾ ಕೇಂದ್ರ, ಮಾದಕವ್ಯಸನ ವರ್ಜನ ಕೇಂದ್ರ, ಸಾಮಾಜಿಕ ಹೋರಾಟ, ಮಕ್ಕಳ ಕಲ್ಯಾಣ ಇಲಾಖೆ, ಸಮುದಾಯ ಅಭಿವೃದ್ಧಿ, ವೃತ್ತಿಮಾರ್ಗದರ್ಶನ, ಅಧ್ಯಾಪನ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಹೊಣೆಗಾರಿಕೆಗಳನ್ನು ನಿಭಾಯಿಸುವ ಜವಾಬ್ದಾರಿ ಇರುತ್ತದೆ. ಸಮಾಜಕಾರ್ಯವನ್ನು ಕಲಿತ ವಿದ್ಯಾರ್ಥಿ ಯಾವ ಕ್ಷೇತ್ರದಲ್ಲೂ ಮಿಂಚಬಲ್ಲ, ತನ್ನ ಕೆಲಸವನ್ನು ಸಮರ್ಥವಾಗಿ ಪೂರೈಸಬಲ್ಲ ಅಲ್ಲದೇ ಜೀವನದಲ್ಲೂ ಸಂತೃಪ್ತಿಯನ್ನು ಹೊಂದಬಲ್ಲ.

ಮನುಷ್ಯರಲ್ಲಿ ಮಾನವೀಯತೆ, ಸಹಾಯ ಮನೋಭಾವನೆ, ಪ್ರೀತಿ, ಕರುಣೆ ನಶಿಸುತ್ತಿರುವ ಇಂದಿನ ದಿನಮಾನದಲ್ಲಿ, ಕೆಲಸದ ಒತ್ತಡ, ಮಾನಸಿಕ ಹಿಂಸೆಯಿಂದ ಬಳಲುತ್ತಿರುವ ನಮ್ಮ ಸಮಾಜದಲ್ಲಿ ಸಮಾಜಕಾರ್ಯದ ಅನಿವಾರ್ಯತೆ ಸರ್ಕಾರಿ ಯೋಜನೆಗಳಿಂದ ಹಿಡಿದು, ಎಲ್ಲ ಕ್ಷೇತ್ರಗಳಲ್ಲೂ ಇದ್ದೇ ಇದೆ. ಅರ್ಹರಿಗೆ ಉದ್ಯೋಗಾವಕಾಶಗಳು ಸಾಕಷ್ಟಿದೆ. ಅನೇಕ ವೃತ್ತಿಪರರೂ ತಮ್ಮ ಕೆಲಸದ ಹೊರೆಯಿಂದ ಮುಕ್ತಿ ಪಡೆಯಲು, ಮನಃಶಾಂತಿ ಪಡೆದು ತೃಪ್ತಿ ಹೊಂದಲು ಬಿಡುವಿನ ಸಮಯಗಳಲ್ಲಿ ಸಮಾಜಕಾರ್ಯದ ಮೊರೆ ಹೋಗುವುದನ್ನೂ ನಾವು ಕಾಣಬಹುದು

ಸಮಾಜಕಾರ್ಯವನ್ನು ಆರಿಸಿಕೊಂಡ ವಿದ್ಯಾರ್ಥಿಯ ಮನೋಬಲ ವೃದ್ಧಿಗೊಳ್ಳುವುದಲ್ಲದೇ, ಧೈರ್ಯ, ಸಾಹಸ ಮನೋಭಾವ ಬೆಳೆಯುವುದಂತೂ ಸತ್ಯ. ಜೀವನದ ಯಾವುದೇ ಕಷ್ಟದ ಸಂದರ್ಭಗಳನ್ನು ಸೂಕ್ತವಾಗಿ ನಿಭಾಯಿಸಲು ಆತ ಶಕ್ತನಾಗುತ್ತಾನೆ.

***

‘ಸೋಷಿಯಲ್ ವರ್ಕ್ ಕೋರ್ಸ್ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತದೆ. ಈ ಕೋರ್ಸ್ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಗಳಲ್ಲಾಗಿರುವ ಬದಲಾವಣೆಯನ್ನು ನೋಡಲು ನಂಗೆ ಖುಷಿ ಅನ್ನಿಸುತ್ತದೆ. ಇಂದಿನ ನಮ್ಮ ಸಮಾಜದಲ್ಲಿ ಇತರರ ಮೇಲೆ ಪ್ರೀತಿ, ಕಾಳಜಿ ಹೊಂದಿರುವ, ಇತರರ ಒಳಿತಿಗಾಗಿ ಶ್ರಮಿಸುವ ಸಾಮಾಜಿಕ ಕಾರ್ಯಕರ್ತರ, ಉತ್ತಮ ವ್ಯಕ್ತಿಗಳ ಅಗತ್ಯತೆ ಇದೆ.’
-ಪ್ರೊ. ಆಶಾ ಲೋಬೋ,ಸ್ಕೂಲ್ ಆಫ್ ಸೋಷಿಯಲ್ ವರ್ಕ್,ಮಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT