ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ: ಅಲ್ಪಾವಧಿ ಕೋರ್ಸ್‌ ಫ್ಯಾಷನ್‌ ಡಿಸೈನಿಂಗ್‌

Last Updated 30 ಜುಲೈ 2019, 19:30 IST
ಅಕ್ಷರ ಗಾತ್ರ

ನಾನು ಡಿ.ಎಡ್‌. ಮುಗಿಸಿದ್ದೇನೆ. ಆದರೆ ಬಿ.ಎ. ಓದನ್ನು ಅರ್ಧಕ್ಕೇ ನಿಲ್ಲಿಸಿದ್ದೇನೆ. ಇದನ್ನು ಪೂರ್ಣಗೊಳಿಸುವುದು ಹೇಗೆ? ಒಂದು ವರ್ಷದ ಕೋರ್ಸ್‌ ಇದೆಯೇ? ಹಾಗೆಯೇ ಎಲ್ಲಾ ಪರೀಕ್ಷೆಗಳು ಅಂದರೆ ಎಫ್‌ಡಿಎ, ಟಿಇಟಿ ಮೊದಲಾದವುಗಳಿಗೆ ಕೂತರೂ ಯಾವುದೂ ಪಾಸ್‌ ಆಗಿಲ್ಲ. ನನಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದು, ರೆಗ್ಯುಲರ್‌ ತರಗತಿಗೆ ಹೋಗೋಕೆ ಆಗಲ್ಲ. ಸದ್ಯ ಪಶ್ಚಿಮ ಬಂಗಾಳದಲ್ಲಿದ್ದು, ನನ್ನ ಪತಿ ಮಿಲಿಟರಿಯಲ್ಲಿದ್ದಾರೆ. ನಾನು ಉದ್ಯೋಗಕ್ಕೆ ಸೇರುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಗೊಂದಲವಿದೆ. ದಯವಿಟ್ಟು ಸಹಾಯ ಮಾಡಿ.

ಹೆಸರು, ಊರು ಬೇಡ

ಎಷ್ಟನೇ ವರ್ಷದ ಬಿ.ಎ. ಓದಿದ್ದೀರಿ ಮತ್ತು ಓದು ಬಿಟ್ಟು ಎಷ್ಟು ವರ್ಷಗಳಾಗಿವೆ ಎಂದು ನೀವು ಹೇಳದಿರುವುದರಿಂದ ನಿಖರವಾದ ಉತ್ತರ ನೀಡುವುದು ಕಷ್ಟ. ನಿಮ್ಮ ಬಿ.ಎ. ಶಿಕ್ಷಣವನ್ನು ಮುಂದುವರಿಸುವ ಅವಕಾಶ ಇದೆಯೇ ಎಂದು ನಿಮ್ಮ ಪದವಿ ಕಾಲೇಜಿನಲ್ಲಿ ಒಮ್ಮೆ ಕೇಳಿ ತಿಳಿಯಿರಿ. ಇಲ್ಲವಾದಲ್ಲಿ ಯಾವುದಾದರೂ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ. ಶಿಕ್ಷಣ ಓದಬಹುದು.

ಇನ್ನು ಒಂದು ವರ್ಷದ ಕೋರ್ಸ್‌ ಬಗ್ಗೆ.. ಮೊದಲು ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು, ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ನಿರ್ಧರಿಸಿ. ಆಗ ಅದಕ್ಕೆ ಸೂಕ್ತವಾದ ಕೋರ್ಸ್‌ಗಳನ್ನು ಹುಡುಕಿ ಮಾಡಬಹುದು.ಉದಾಹರಣೆಗೆ, ಫ್ಯಾಷನ್ ಡಿಸೈನಿಂಗ್, ಹಾಸ್ಪಿಟಾಲಿಟಿ, ಅರೆ ವೈದ್ಯಕೀಯ, ಕಂಪ್ಯೂಟರ್ ಸಂಬಂಧಿತ ಕೋರ್ಸ್‌ಗಳು ಇತ್ಯಾದಿ ಅನೇಕ ರೀತಿಯ ಕೋರ್ಸ್‌ಗಳಿರುತ್ತವೆ. ಆದರೆ ಯಾವುದಕ್ಕೂ ನಿಮ್ಮ ಆಸಕ್ತಿಯ ಕ್ಷೇತ್ರ ನಿರ್ಧರಿಸಿಕೊಳ್ಳಿ. ನಂತರ ಅದಕ್ಕೆ ಸಂಬಂಧಿಸಿದ ಕೋರ್ಸ್‌ ಅನ್ನು ಹುಡುಕಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮತ್ತು ತಾಳ್ಮೆ ಮುಖ್ಯ. ಒಂದೆರಡು ಬಾರಿ ಕೂತರೆ ಆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಯಾವ ಪರೀಕ್ಷೆ ಬರೆಯುತ್ತೀರೊ ಅದಕ್ಕೆ ಸೂಕ್ತ ತಯಾರಿ ಮುಖ್ಯವಾಗುತ್ತದೆ. ಆದರೂ ಹೆಚ್ಚಿನ ಸ್ಪರ್ಧೆ ಮತ್ತು ಪರೀಕ್ಷಾ ಸ್ವರೂಪದಿಂದ ಉತ್ತಮ ಫಲಿತಾಂಶ ಬರದೇ ಇರಬಹುದು. ಆಗ ಆ ಪರೀಕ್ಷೆಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳಿ, ಯಾವ ವಿಭಾಗದಲ್ಲಿ ಅಂಕ ಕಡಿಮೆ ಆಗಿದೆ, ಅದನ್ನು ಹೆಚ್ಚಿಸಲು ಇನ್ನೇನು ತಯಾರಿ ಬೇಕಾಗುತ್ತದೆ ಎಂದು ಆಲೋಚಿಸಿ. ಪುನಃ ಅಂತಹ ಪರೀಕ್ಷೆಗಳಿಗೆ ಪ್ರಯತ್ನಿಸಿ, ಸೂಕ್ತ ತಯಾರಿ ಮಾಡಿಕೊಳ್ಳಿ.

ಉದ್ಯೋಗ ಅಂದರೆ ಕೇವಲ ಸರ್ಕಾರಿ ಕೆಲಸ ಅಲ್ಲ ಅಲ್ಲವೇ? ನಿಮ್ಮ ಡಿ.ಎಡ್. ಶಿಕ್ಷಣದ ಆಧಾರದ ಮೇಲೆ ಉತ್ತಮ ಅನುಭವ ಮತ್ತು ವೇತನ ನೀಡುವ ಖಾಸಗಿ ಶಾಲೆಗಳಲ್ಲೂ ಉದ್ಯೋಗಕ್ಕೆ ಯಾಕೆ ಪ್ರಯತ್ನಿಸಬಾರದು. ಉದ್ಯೋಗ ಮಾಡುವ ಆಸಕ್ತಿ ಇದ್ದಲ್ಲಿ ಖಾಸಗಿ ಮತ್ತು ಸರ್ಕಾರಿ ಎಂಬ ವ್ಯತ್ಯಾಸ ಹೆಚ್ಚು ಬಾಧಿಸುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಯೋಜನ ಮತ್ತು ಮಿತಿಗಳಿವೆ. ಖಾಸಗಿ ಕ್ಷೇತ್ರಗಳಲ್ಲಿ ಉತ್ತಮ ವೇತನ, ಸೌಲಭ್ಯ, ಕಲಿಕೆ ಎಲ್ಲವೂ ಇರುತ್ತದೆ. ನಿಮ್ಮ ಸುತ್ತಲಿರುವ ಅವಕಾಶವನ್ನು ಬಳಸಿಕೊಳ್ಳಿ.

ಜೀವನದಲ್ಲಿ ಗೊಂದಲಗಳು ಸಹಜ. ಆದರೆ ಹೆಚ್ಚು ಗೊಂದಲ ಮಾಡಿಕೊಳ್ಳದೆ ನಿಮಗೆ ಈಗಾಗಲೇ ಪರಿಣತಿ ಇರುವ ಅಥವಾ ಅಲ್ಪ ಸಮಯದಲ್ಲಿ ಪರಿಣತಿ ಪಡೆಯಲು ಸಾಧ್ಯವಿರುವ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಗುರಿಯನ್ನು ಹೊಂದಿ. ಆ ಗುರಿಯನ್ನು ಸಾಧಿಸಲು ಏನು ಮಾಡಬೇಕು ಎಂದು ಯೋಜನೆ ರೂಪಿಸಿಕೊಳ್ಳಿ. ಅದರಂತೆ ಮುಂದುವರೆಯಿರಿ. ಶುಭಾಶಯ.

***

ಎಂ.ಎಸ್‌.ಡಬ್ಲ್ಯು. ಮುಗಿಸಿದ್ದೇನೆ. ಮುಂದೇನು ಮಾಡಲಿ?

ಶಿವಾನಂದ್‌ ಕೆ., ಊರು ಬೇಡ

ಶಿವಾನಂದ್, ಮುಂದೇನು ಎಂದು ನಿಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಳ್ಳುವವರು ನೀವೇ ಆಗಿದ್ದು ಆ ಬಗ್ಗೆ ಚಿಂತಿಸಿ ನಿರ್ಧರಿಸಿ. ನಿಮ್ಮ ಆಸಕ್ತಿ, ಗುರಿ, ಅನುಭವ, ಸಾಮರ್ಥ್ಯ ಇತ್ಯಾದಿಗಳನ್ನು ಪರಿಗಣಿಸಿ ತೀರ್ಮಾನಿಸಿ. ಮುಂದೆ ಕೆಲಸ ಮಾಡುವ ಉದ್ದೇಶ ಇದ್ದಲ್ಲಿ ನಿಮ್ಮ ಕ್ಷೇತ್ರ ಮತ್ತು ಆಸಕ್ತಿಯ ಅನುಗುಣವಾಗಿ ಅವಕಾಶಗಳನ್ನು ನೋಡಿ. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅನೇಕ ಉದ್ಯೋಗ ಅವಕಾಶಗಳಿವೆ. ನೀವು ಸಮಾಜ ಕಾರ್ಯದಲ್ಲಿ ಯಾವ ವಿಭಾಗ ಎಂದು ಇಲ್ಲಿ ತಿಳಿಸದೆ ಇರುವುದರಿಂದ ಅದೇ ಕ್ಷೇತ್ರಕ್ಕೆ ಸೂಕ್ತವಾದ ಉದ್ಯೋಗವಕಾಶಗಳನ್ನು ಸೂಚಿಸುವುದು ಕಷ್ಟ.

ಸಮುದಾಯ ಅಭಿವೃದ್ದಿ ಕ್ಷೇತ್ರವಾಗಿದ್ದಲ್ಲಿ, ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ.) ಶಿಕ್ಷಣ, ಆರೋಗ್ಯ, ಜಲಾನಯನ ನಿರ್ವಹಣೆ, ಪರಿಸರ, ಕೃಷಿ, ಉದ್ಯೋಗ, ಸಮಾಜ ಕಲ್ಯಾಣ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು ಆ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದು.

ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜಕಾರ್ಯ ಕ್ಷೇತ್ರವಾದರೆ ಸಾಮಾನ್ಯ ಆರೋಗ್ಯ, ಮಾನಸಿಕ ಆರೋಗ್ಯ, ಕ್ಷಯ, ಡಯಾಬಿಟೀಸ್, ಲೈಂಗಿಕ ಶಿಕ್ಷಣ, ಜೀವನ ಕೌಶಲ, ವಿಶೇಷ ಶಿಕ್ಷಣ, ಹದಿಹರೆಯದ ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಆಸ್ಪತ್ರೆ, ಎನ್.ಜಿ.ಒ., ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಪಡೆಯಬಹುದು.

ಮಾನವ ಸಂಪನ್ಮೂಲ ಅಭಿವೃದ್ದಿ ಕ್ಷೇತ್ರವಾದಲ್ಲಿ ಬೇರೆ ಬೇರೆ ಕ್ಷೇತ್ರದ ಉದ್ಯಮ, ಕಂಪನಿ, ಸಂಘ– ಸಂಸ್ಥೆ, ಸರ್ಕಾರಿ ಸಂಸ್ಥೆ ಇತ್ಯಾದಿಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ, ವೆಲ್‌ಫೇರ್ ಡಿಪಾರ್ಟ್‌ಮೆಂಟ್, ನೇಮಕಾತಿ, ತರಬೇತಿ, ಇತ್ಯಾದಿ ವಿಭಾಗಗಳಲ್ಲಿ ಕೆಲಸ ಪಡೆಯಬಹುದು.

ಓದು ಅಥವಾ ಅಧ್ಯಯನ ಮಾಡುವ ಆಸಕ್ತಿ ಇದ್ದರೆ ಯು.ಜಿ.ಸಿ. ನೆಟ್ ಅಥವಾ ಜೆ.ಆರ್.ಎಫ್. ಅರ್ಹತೆ ಪಡೆದು ಪಿಎಚ್.ಡಿ. ವ್ಯಾಸಂಗವನ್ನು ಮಾಡಬಹುದು

Devnetjobsindia, ngobox ಗಳು ಸಮಾಜಕಾರ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವ ವೆಬ್‌ಸೈಟ್‌ಗಳಾಗಿದ್ದು, ಅವುಗಳಲ್ಲಿ ಅವಕಾಶಕ್ಕಾಗಿ ಪರಿಶೀಲಿಸಿ. ಅದಲ್ಲದೆ ಇತರ ಜಾಬ್ ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರು, ಶಿಕ್ಷಕರು ಮತ್ತು ಅಂತರ್ಜಾಲದ ಸಹಾಯ ಪಡೆದು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಆಲ್ ದಿ ಬೆಸ್ಟ್.

***

ನನ್ನ ಬಿ.ಕಾಂ. ಪದವಿ ಪೂರ್ಣವಾಗಲಿಲ್ಲ. ಪಾಸ್‌ ಮಾಡಿಕೊಳ್ಳಲು ಇದ್ದ ಕೊನೆಯ ಅವಕಾಶದಲ್ಲಿಯೂ ಕೂಡ ಆಗದೆ ವಿಶ್ವವಿದ್ಯಾಲಯದ ಸೂಚನೆಯಂತೆ ನಾನು ಪರೀಕ್ಷೆ ಬರೆಯಲು ಆಗುವುದಿಲ್ಲ. ಮತ್ತೆ ಪದವಿ ಕಟ್ಟಲೇ? ನನಗೆ 25 ವರ್ಷ. ಮುಂದೆ ನಾನು ಏನು ಮಾಡಬೇಕು?

ಹೆಸರು, ಊರು ಬೇಡ

ಶಿಕ್ಷಣ ಮುಂದುವರಿಸುವ ಉದ್ದೇಶ ಇದ್ದಲ್ಲಿ ದೂರ ಶಿಕ್ಷಣದ ಮುಖಾಂತರ ನೀವು ಮತ್ತೆ ಬಿ.ಕಾಂ. ಪದವಿಯನ್ನು ಮಾಡಬಹುದು. ಅಲ್ಲಿಯ ತನಕ ನಿಮ್ಮ ಹಿಂದಿನ ಶಿಕ್ಷಣ ಅಂದರೆ ಪಿ.ಯು.ಸಿ. ಆಧಾರದ ಮೇಲೆ ಇರುವ ಉದ್ಯೋಗ ಅವಕಾಶಗಳನ್ನು ಪ್ರಯತ್ನಿಸಬಹುದು. ಟ್ಯಾಲಿ ಕಂಪ್ಯೂಟರ್ ಕೋರ್ಸ್‌ಗಳನ್ನು ಓದಿ ಅದರ ಮೇಲೆ ಕೆಲಸ ಪಡೆದು ಮುಂದೆ ಬಿ.ಕಾಂ. ಆದ ನಂತರ ಅಕೌಂಟೆಂಟ್ ಆಗಬಹುದು. ಬೇರೆ ಕಡಿಮೆ ಸಮಯದ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಮಾಡಿ ಕೆಲಸ ಪಡೆಯಬಹುದು, ಉದಾಹರಣೆಗೆ ಓಟಿ ಟೆಕ್ನೀಷಿಯನ್, ಸೇಲ್ಸ್ ಮತ್ತು ಹಾಸ್ಪಿಟಾಲಿಟಿ ಇತ್ಯಾದಿ. ನಿಮ್ಮ ಶಿಕ್ಷಣವನ್ನು ಮುಂದುವರಿಸುತ್ತ ಕೆಲಸ ಮಾಡಿದಲ್ಲಿ ಶಿಕ್ಷಣ ಮುಗಿದ ನಂತರ ನಿಮ್ಮ ಶಿಕ್ಷಣ ಮತ್ತು ಅನುಭವದಿಂದ ಉತ್ತಮ ಕೆಲಸ ಪಡೆಯಬಹುದು. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT