ಗುರುವಾರ , ಡಿಸೆಂಬರ್ 5, 2019
22 °C

ಸಾಮಾಜಿಕ ಜಾಲತಾಣ ನಿರ್ವಹಣೆಗೂ ಬೇಕು ಪರಿಣತಿ

Published:
Updated:
prajavani

ಇದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ಹಾಗೂ ಉತ್ಪನ್ನಗಳ ಕುರಿತು ಮಾರುಕಟ್ಟೆ ಸೃಷ್ಟಿಸುವ ಜಮಾನ. ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜನರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದರಿಂದ ವ್ಯವಹಾರಗಳು ಅಲ್ಲಿಂದಲೇ ಆರಂಭವಾಗುತ್ತವೆ. ಕಂಪನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ಪ್ರಚಾರ ಪಡೆಯಲು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲೇ ಪರಿಣತಿ ಪಡೆದವರನ್ನು ನೇಮಿಸಿಕೊಳ್ಳುತ್ತಾರೆ.

ಅಂತಹ ವೃತ್ತಿಗಳು ಈಗ ಹೆಚ್ಚುತ್ತಿವೆ. ಜೊತೆಗೆ ಪರಿಣತರ ಅವಶ್ಯಕತೆಯೂ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುವ ಪೋಸ್ಟ್‌ಗಳ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದ್ದರೆ ಹಾಗೂ ನೀವು ಕೂಡ ಆ ವೃತ್ತಿಯಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ, ಅದರ ತಂತ್ರಗಳು ಏನು? ಅದರಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ವಿವರಗಳು ಇಲ್ಲಿವೆ.

ಕೌಶಲ ಮತ್ತು ಅರ್ಹತೆಗಳು

* ಸಾಮಾಜಿಕ ಮಾಧ್ಯಮಗಳಲ್ಲಿ ಅಂದರೆ‌, ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ, ಗೂಗಲ್ ಮೊದಲಾದವುಗಳ ಬಗ್ಗೆ ಹೆಚ್ಚಿನ ಜ್ಞಾನ.

* ವ್ಯವಹಾರ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನದ ಕುರಿತು ತಿಳಿವಳಿಕೆ.

* ಮಾರ್ಕೆಟಿಂಗ್ ಹಾಗೂ ಸಂವಹನ ಕೌಶಲಕ್ಕೆ ಸಂಬಂಧಿಸಿದಂತೆ ಪದವಿ.

* ಸರಳ ಮತ್ತು ಸಂಪೂರ್ಣ ಮಾಹಿತಿ ನೀಡುವ ಬರವಣಿಗೆ ಕಲೆಯಲ್ಲಿ ಪರಿಣತಿ.

* ಡಿಜಿಟಲ್ ನೆಟ್‌ವರ್ಕ್‌ಗಳ ಬಗ್ಗೆ ಇತ್ತೀಚಿನ ಮಾಹಿತಿ.

* ಬರವಣಿಗೆಯಲ್ಲಿ ಸೃಜನಶೀಲತೆ.

* ಸಮಯ ಪ್ರಜ್ಞೆ

* ಗ್ರಾಹಕರ ಅನುಭವ ಮತ್ತು ಡಿಜಿಟಲ್‌ ಮಾರ್ಕೆಟಿಂಗ್ ಸೃಷ್ಟಿಸುವ ಕಲೆಯಲ್ಲಿ ಪರಿಣತಿ.

* ಗ್ರಾಹಕರು ಮತ್ತು ಕಂಪನಿ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆಯಂತೆ ಕಾರ್ಯನಿರ್ವಹಣೆ.

* ಗ್ರಾಹಕರನ್ನು ಆಕರ್ಷಕ ವಿನ್ಯಾಸಗಳ ಮೂಲಕ ಹೇಗೆ ಸೆಳೆಯಬೇಕು ಎಂಬುದರ ಬಗ್ಗೆ ಅರಿವು.

ಕಾರ್ಯ ವಿಧಾನ

ಸಾಮಾಜಿಕ ಮಾಧ್ಯಮದ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಪೋಸ್ಟ್‌ಗಳ ಬಗ್ಗೆ ವಿನ್ಯಾಸಕಾರರಿಗೆ ನಿರ್ದೇಶನ ನೀಡಿ ಆಕರ್ಷಕವಾಗಿ ಪೋಸ್ಟ್‌ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆದು ಕಂಪನಿಯ ಮಾರ್ಕೆಟಿಂಗ್‌ ಹೆಚ್ಚುವಂತೆ ಮಾಡುವ ಕಾರ್ಯ ನಿರ್ವಹಿಸಬೇಕು.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮುನ್ನ ಅಂದಿನ ಸಮಯ ಹಾಗೂ ವಿಶೇಷತೆ ಏನು ಎಂಬುದು ಅರಿವಿರಬೇಕು. ಗ್ರಾಹಕರನ್ನು ಹಿಡಿದಿಡುವಂತೆ ಮಾಡುವ ಚುರುಕುತನವನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮಗಳಲ್ಲಿ ಹರಿದಾಡುವ ಪೋಸ್ಟ್‌ಗಳು ಕಂಪನಿಯ ಉತ್ಪನ್ನಗಳ ಮಹತ್ವದ ಪಾತ್ರಗಳನ್ನು ವಹಿಸುವುದರಿಂದ ಅವುಗಳನ್ನು ಬೇರೆಯವರು ಕದಿಯದಂತೆ ಹಾಗೂ ನಕಲು ಮಾಡದಂತೆ ತಂತ್ರಗಳನ್ನು ರೂಪಿಸಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಹೊಂದಿರಬೇಕು. 

ಪ್ರತಿ ವಾರದ ಮತ್ತು ತಿಂಗಳ ಅಂಕಿ– ಅಂಶ ವಿಶ್ಲೇಷಣೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾವ ಕಂಪನಿಯ ಪೋಸ್ಟ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ ಹಾಗೂ ಅದರ ವಿನ್ಯಾಸ ಹೇಗಿದೆ ಎಂದು ಗಮನಿಸಿ ಗ್ರಾಹಕರ ಅಭಿರುಚಿಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು. ಪೋಸ್ಟ್‌ ಆಗಿರಬಹುದು ಅಥವಾ ಧ್ವನಿ, ವಿಡಿಯೊ ಆಗಿರಬಹುದು ಅವುಗಳ ಸಂಪೂರ್ಣ ಮಾಹಿತಿ ಸೂಕ್ತವಾಗಿದೆಯೇ, ಅದು ಗ್ರಾಹಕರನ್ನು ಹೇಗೆ ಅರ್ಥೈಸುತ್ತದೆ ಹಾಗೂ ಎಲ್ಲರ ಗಮನ ಸೆಳೆಯುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಸಾಧ್ಯವಾದರೆ ಅವುಗಳನ್ನು ಕೆಲವು ಸ್ನೇಹಿತರಿಗೆ ತೋರಿಸಿ ಪ್ರತಿಕ್ರಿಯೆ ಪಡೆದರೆ ಇನ್ನೂ ಉತ್ತಮ. ಹೀಗೆ ಅವುಗಳನ್ನು ವಿಶ್ಲೇಷಣೆ ಮಾಡುವ ಕೌಶಲ ಕೂಡ ಬಹಳ ಮುಖ್ಯ.

ಇವುಗಳನ್ನು ಹೆಚ್ಚು ಕರಗತ ಮಾಡಿಕೊಂಡು ಮಾರ್ಕೆಟಿಂಗ್ ಮತ್ತು ಜಾಹೀರಾತು ಮ್ಯಾನೇಜ್‌ಮೆಂಟ್‌ ಕಂಪನಿಗಳಲ್ಲಿ ಮ್ಯಾನೇಜರ್‌ ಆಗಿ ಅಥವಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಬಹುದು. ಇತ್ತೀಚಿಗೆ ಈ ವೃತ್ತಿಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ನಿಮ್ಮ ಕಾರ್ಯವೈಖರಿ ಮೇಲೆ ವೇತನ ನಿಗದಿಯಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು