ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಾರ್ಯಕ್ಕೂ ಬೇಕು ಅಧ್ಯಯನ!

Last Updated 3 ಜುಲೈ 2019, 6:48 IST
ಅಕ್ಷರ ಗಾತ್ರ

ಸೋಷಿಯಲ್‌ ವರ್ಕ್‌ ಎಂದರೆ ಬಹಳಷ್ಟು ಜನರಲ್ಲಿ ಈಗಲೂ ಕೂಡ ತಪ್ಪು ಅಭಿಪ್ರಾಯಗಳಿವೆ. ಹೀಗೆಂದರೆ ಸಮಾಜ ಸೇವೆಯೆಂದು ಪರಿಗಣಿಸುವವರು ಹಲವರಾದರೆ, ಈ ಕೆಲಸ ಮಾಡಲು ಯಾವುದೇ ಪದವಿ ಹಾಗೂ ಓದಿನ ಅಗತ್ಯವಿಲ್ಲ ಎನ್ನುವವರು ಇನ್ನು ಕೆಲವರು. ಆದರೆ ಸಮಾಜ ಕಾರ್ಯವು ಒಂದು ಕೋರ್ಸ್‌ ಆಗಿ ಅದರ ವ್ಯಾಪ್ತಿ ಇಂದು ಬಹಳ ವಿಸ್ತರಿಸಿದೆ.

ಇದಕ್ಕೆ ಬಹಳಷ್ಟು ಕಾರಣಗಳಿವೆ. ಮುಖ್ಯ ಕಾರಣ ಆಧುನಿಕ ಸಮಾಜದಲ್ಲಿ ಮಾನವ ಎದುರಿಸುತ್ತಿರುವ ಮನೋಸಾಮಾಜಿಕ ಸಮಸ್ಯೆಗಳು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದು. ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನಕ್ಕೆ ನೆಲಗಟ್ಟನ್ನು ಸಿದ್ಧಪಡಿಸುವುದು ಸಾಮಾಜಿಕ ಸೇವಾ ಕಾರ್ಯಕರ್ತರ ಕೆಲಸ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಯಾವ ಭಾಗದಲ್ಲಿ ಸಮಸ್ಯೆ ಇದೆ ಎಂದು ನಿಖರವಾಗಿ ಹೇಳಬಲ್ಲ ದಿಟ್ಟತನ ಸಾಮಾಜಿಕ ಸೇವಾ ಕಾರ್ಯಕರ್ತರಲ್ಲಿ ಎದ್ದು ಕಾಣುತ್ತಿರುವುದು ಇನ್ನೊಂದು ಕಾರಣ. ಸಮಾಜದ ಒಟ್ಟು ತೊಂದರೆಗೆ ಕಾರಣಗಳನ್ನು ನಿಚ್ಚಳವಾಗಿ ಪಟ್ಟಿ ಮಾಡಿ ಸಮಸ್ಯೆ, ಸವಾಲುಗಳಿಗೆ ಪರಿಹಾರ ನೀಡುವ, ಪರಿಣಾಮವನ್ನು ವಿಶ್ಲೇಷಿಸುವ ಹಲವಾರು ಮಾರ್ಗಗಳಲ್ಲಿ ಆಧುನಿಕ ಸಮಾಜ ಕಾರ್ಯವು ಮುಂಚೂಣಿಯಲ್ಲಿದೆ ಎನ್ನಬಹುದು.

ಮಕ್ಕಳಿಂದ ವೃದ್ಧರವರೆಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗೆಯೇ ವಿದ್ಯಾರ್ಥಿ ಜೀವನ, ಸಂವಹನ ಕೌಶಲ, ವಿಷಯದ ಜ್ಞಾನ, ಆಲೋಚನಾ ಪ್ರಕ್ರಿಯೆ, ವೃತ್ತಿ ಜೀವನ, ಕೌಟುಂಬಿಕ ಬದುಕು ಹೀಗೆ ಜೀವನದ ಹಲವಾರು ಘಟ್ಟಗಳಲ್ಲಿ ಸಾಮಾಜಿಕ ಮತ್ತು ಮಾನಸಿಕ ಒತ್ತಡ, ಆರ್ಥಿಕ ತೊಂದರೆಗಳು ಜಾಸ್ತಿಯಾಗುತ್ತಿವೆ. ಈ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ನಿವಾರಿಸಲು ವ್ಯಕ್ತಿಗತವಾಗಿ, ಸಾಮೂಹಿಕವಾಗಿ, ಸಾಮುದಾಯಿಕವಾಗಿ ನಿಭಾಯಿಸಲು ಆಪ್ತ ಸಮಾಲೋಚನೆ, ಕೇಂದ್ರೀಕೃತ ಗುಂಪು ಚರ್ಚೆಯ ಅಗತ್ಯವಿರುತ್ತದೆ. ಹೀಗಾಗಿ ವೃತ್ತಿಪರ ಸಮಾಜ ಕಾರ್ಯ ಅಧ್ಯಯನ ಮಾಡಿದವರಿಗೆ ಹೆಚ್ಚು ಹೆಚ್ಚು ಅವಕಾಶಗಳು ತೆರೆದಿವೆ.

ಬೃಹತ್‌ ಶಾಖೆ

ಹಲವಾರು ಕ್ಷೇತ್ರಗಳಲ್ಲಿ ಸಮಾಜ ಕಾರ್ಯದ ಅಗತ್ಯವನ್ನು ಕಾಣಬಹುದು. ಉದಾಹರಣೆಗೆ: ಆಸ್ಪತ್ರೆಗಳಲ್ಲಿ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ, ಅಪರಾಧಿಗಳ ಸುಧಾರಣೆ ಮತ್ತು ಪುನರ್ ವಸತಿ ಕಲ್ಪಿಸುವಲ್ಲಿ, ಸಮಾಜ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ, ಇಂಡಸ್ಟ್ರಿಯಲ್ ಸಮಾಜಕಾರ್ಯ, ಕಾರ್ಪೊರೇಟ್‌ ವಲಯದಲ್ಲಿ ಬೃಹತ್ ಶಾಖೆಗಳಾಗಿ ಇದು ಬೆಳೆಯುತ್ತಿದೆ.

20ನೇ ಶತಮಾನದಲ್ಲಿ ಉದಯವಾದ ನವ ಜ್ಞಾನ ಶಾಖೆಯಾದ ಸಮಾಜ ಕಾರ್ಯದ ಅಧ್ಯಯನ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳಿಂದಾಗಿ ವಿದ್ಯಾರ್ಥಿಗಳ ಗಮನವನ್ನು ಸೆಳೆಯುತ್ತಿದೆ.

ನಮ್ಮ ರಾಜ್ಯದಲ್ಲಿ ಸಮಾಜ ಕಾರ್ಯ ಅಧ್ಯಯನ ಪಿ.ಯು.ಸಿ. ನಂತರದ ಮೂರು ವರ್ಷಗಳ ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್‌ ಪದವಿ ಕೆಲವು ಕಾಲೇಜುಗಳಲ್ಲಿ ಮಾತ್ರ ಲಭ್ಯವಿದೆ. ಅದು ಐಚ್ಛಿಕ ವಿಷಯವಾದರೆ ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು. ಇದು ಕಲಾ ವಿಭಾಗದಲ್ಲಿಯೇ ಅತ್ಯಂತ ವಿಶಿಷ್ಟವಾದ ಮತ್ತು ಆಸಕ್ತಿದಾಯಕ ಕೋರ್ಸ್‌. ಪದವಿಯಲ್ಲಿ ಯಾವುದೇ ವಿಷಯ ಓದಿದರೂ ಸ್ನಾತಕೋತ್ತರ ಸಮಾಜ ಕಾರ್ಯ ವ್ಯಾಸಂಗಕ್ಕೆ ಸೇರಿಕೊಳ್ಳಬಹುದು. ಜೊತೆಗೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಮಾಜ ಕಾರ್ಯ ಅಧ್ಯಯನ ವಿಭಾಗ ಲಭ್ಯವಿದೆ.

ಕ್ಷೇತ್ರ ಅಧ್ಯಯನಕ್ಕೆ ಒತ್ತು

ಸಮಾಜ ಕಾರ್ಯ ಅಧ್ಯಯನವು ಅತ್ಯಂತ ಆಸಕ್ತಿದಾಯಕವಾದ ವಿಷಯ. ಮನುಷ್ಯ ಜೀವನದ ಬೇರೆ ಬೇರೆ ಅಂಶಗಳು, ಸಮಾಜದಲ್ಲಿನ ಸಮೂಹ ಬದುಕು, ವ್ಯಕ್ತಿತ್ವ ಇತ್ಯಾದಿಗಳ ಕಾರಣದಿಂದ ವಿಧ್ಯಾರ್ಥಿಗೆ ಪ್ರತೀ ಕ್ಷಣವೂ ಕಲಿಕೆಯು ಕುತೂಹಲವನ್ನು ಹುಟ್ಟಿಸುತ್ತದೆ. ಸಮಸ್ಯೆ ಪರಿಹಾರ, ಪುನರ್ವಸತಿ, ಅಭಿವೃದ್ಧಿ, ಉತ್ತೇಜನ, ಸುಧಾರಣೆ ಮೊದಲಾದ ಅಂಶಗಳಲ್ಲಿ ಪರಿಣತಿ ಸಾಧಿಸಬಹುದು. ಮೇರಿ ರಿಚ್ಮಂಡ್, ಜಾನ್ ಆ್ಯಡಮ್ಸ್‌, ಸಿಗ್ಮಂಡ್ ಫ್ರಾಯ್ಡ್‌ ಮೊದಲಾದ ಸಮಾಜ ಕಾರ್ಯ ತಜ್ಞರು ಮತ್ತು ಮನೋವಿಜ್ಞಾನಿಗಳ ಸಿದ್ಧಾಂತಗಳು ಮತ್ತು ಸಂಬಂಧಿಸಿದ ಸಮಾಜ ಶಾಸ್ತ್ರದ ಅಧ್ಯಯನವು ನಿಮ್ಮಲ್ಲಿ ಓದುವ ಹಂಬಲವನ್ನು ಹೆಚ್ಚು ಮಾಡುತ್ತದೆ. ಸೈದ್ಧಾಂತಿಕ ವಿಷಯಗಳ ತರಗತಿಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿ (ಫೀಲ್ಡ್‌ ವರ್ಕ್‌), ಗ್ರಾಮೀಣ ಶಿಬಿರಗಳಂತಹ ಪ್ರಾಯೋಗಿಕ ಅನುಭವಗಳನ್ನು ಒಳಗೊಂಡಿರುತ್ತದೆ.

ಉದಾಹರಣೆಗೆ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳ ವಾರ್ಡ್‌ಗೆ ಭೇಟಿ ನೀಡಿ ಅವರ ಆರೈಕೆ, ಚಿಕಿತ್ಸೆ ಮತ್ತು ಪುನರ್‌ವಸತಿಯಲ್ಲಿ ಆಪ್ತ ಸಮಾಲೋಚನೆಯ ಪ್ರಯೋಗ ಮಾಡಿಸಿದಾಗ ಭವಿಷ್ಯದ ವೃತ್ತಿಗೆ ಬೇಕಾದ ಕೌಶಲಗಳಾದ ಅವಲೋಕನ, ವಿಮರ್ಶೆ, ಅಭಿವೃದ್ಧಿಯ ಪರಿಕಲ್ಪನೆ, ಕೇಸ್ ಸ್ಟಡಿ ಮೊದಲಾದವುಗಳನ್ನು ಸಮರ್ಥವಾಗಿ ಬಳಸಿ, ನಿರ್ವಹಿಸುವ ಕಲೆ ಕರಗತವಾಗುತ್ತದೆ.

ಅಗತ್ಯ ಕೌಶಲಗಳು

ಸಮಾಜ ಕಾರ್ಯದಲ್ಲಿ ಅಧ್ಯಯನ ಮಾಡುವವರಿಗೆ ಕೆಲವೊಂದು ಕೌಶಲಗಳ ಅಗತ್ಯವಿದೆ. ಒಳ್ಳೆಯ ಸಂವಹನ ಕಲೆ, ಗ್ರಹಣ ಶಕ್ತಿ, ಬೇರೆಯವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ, ಭಾವನಾತ್ಮಕತೆ, ವಿಮರ್ಶಾತ್ಮಕವಾಗಿ ಯೋಚಿಸಿ ನಿರ್ಣಯ ಕೈಗೊಳ್ಳುವ ಗುಣ, ತಾಳ್ಮೆ, ಸೂಕ್ಷ್ಮ ದೃಷ್ಟಿ, ಪ್ರೇರೇಪಿಸುವ ಶಕ್ತಿ, ದೃಢತೆ, ಸಂಘಟಿಸುವ ಸಾಮರ್ಥ್ಯ ಮೊದಲಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ನಮ್ಮ ರಾಜ್ಯದಲ್ಲಿ ಪ್ರಸ್ತುತ ಬಿ.ಎಸ್.ಡಬ್ಲ್ಯೂ. ಮತ್ತು ಎಂ.ಎಸ್.ಡಬ್ಲ್ಯೂ. ಕೋರ್ಸ್‌ಗಳು ಒಟ್ಟು 24 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿವೆ. ಉಳಿದಂತೆ ಎಂ.ಎಸ್‌.ಡಬ್ಲ್ಯೂ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಲಭ್ಯ.

(ಲೇಖಕರು ಉಪನ್ಯಾಸಕರು, ಸಮಾಜಕಾರ್ಯ ಅಧ್ಯಯನ ವಿಭಾಗ ಸ್ನಾತಕೋತ್ತರ ಕೇಂದ್ರ, ರಾಯಚೂರು)

ಕೋರ್ಸ್‌ ಬಳಿಕ ಮುಂದೇನು?

ಸಮಾಜ ಕಾರ್ಯ ಪದವಿ, ಸ್ನಾತಕೋತ್ತರ ಪದವಿ ಪಡೆದು ಪಿಎಚ್‌.ಡಿ.ಯನ್ನು ಮಾಡಬಹುದು. ಸಮಾಜ ಕಾರ್ಯ ಶಿಕ್ಷಣದ ನಂತರ ಸಮುದಾಯ ಅಭಿವೃದ್ಧಿ ಅಧಿಕಾರಿ, ಕಾರ್ಮಿಕ ಕಲ್ಯಾಣಾಧಿಕಾರಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ, ಆಸ್ಪತ್ರೆಗಳಲ್ಲಿ, ವೈದ್ಯಕೀಯ, ಮನೋವೈದ್ಯಕೀಯ ಕಾರ್ಯಕರ್ತರು, ಪುನರ್ವವಸತಿ ನಿರ್ದೇಶನಾಧಿಕಾರಿ, ಮಾನವ ಹಕ್ಕು ಮತ್ತು ಸೇವಾ ತಜ್ಞ, ವಿಪತ್ತು ನಿರ್ವಹಣಾಧಿಕಾರಿ, ನೀತಿ ನಿರೂಪಕ, ಮಾದಕ ವ್ಯಸನ ಮುಕ್ತ ಸಮಾಲೋಚಕ, ವಿಶೇಷ ಶಿಶು ಅಭಿವೃದ್ಧಿ ಅಧಿಕಾರಿ, ಶಾಲಾ ಕಾಲೇಜುಗಳಲ್ಲಿ ಪ್ರಾಧ್ಯಾಪಕ, ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ.. ಹೀಗೆ ಹಲವಾರು ಕಡೆ ಔದ್ಯೋಗಿಕ ಅವಕಾಶ ಲಭ್ಯ. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಸಮಾಜ ಕಾರ್ಯ ಶಿಕ್ಷಣ ಬೆಂಬಲ ನೀಡುತ್ತದೆ. ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿರುವುದರಿಂದ ಸಮಾಜ ಕಾರ್ಯ ಅಧ್ಯಯನ ಒಳ್ಳೆಯ ಅವಕಾಶಗಳನ್ನು ತೆರೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಮರ್ಥ್ಯದೊಂದಿಗೆ, ನೊಂದವರ ಮನಸ್ಸನ್ನು ಅರಳಿಸಬಲ್ಲ ಹಾಗೂ ಬೇರೆಯವರನ್ನು ಮಾನಸಿಕವಾಗಿ ಉತ್ತೇಜಿಸಬಲ್ಲ ವಿವಿಧ ಉದ್ಯೋಗಗಳು ಸಾರ್ಥಕತೆಯನ್ನು, ಸಂತೃಪ್ತಿಯನ್ನು ತಂದುಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT