ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹಾಡು ತಂದ ನಾಯಿಪಾಡು

Last Updated 12 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಅದು ನಾನು ಪದವಿ ಓದುತ್ತಿದಾಗಿನ ಘಟನೆ..

ಪ್ರಥಮ‌ ವರ್ಷದ ಪದವಿಯ ಸಂದರ್ಭದಲ್ಲಿ ತರಗತಿಯಲ್ಲಿ ಪ್ರತಿಭಾವಂತರ ದೊಡ್ಡ ಗುಡಾಣವೇ ಇತ್ತು. ನೃತ್ಯ, ಗಾಯನ, ಭಾಷಣ, ನಟನಾ ಚಾತುರ್ಯ ಇದ್ದವರಿಗೂ ಕೊರತೆ ಇರಲಿಲ್ಲ.

ಇಂತಹ ಪ್ರತಿಭೆಗಳ ಖದರ್ ತೋರಿಸಲು ಇದ್ದ ಸದಾವಕಾಶ ಎಂದರೆ ಕಾಲೇಜು ವಾರ್ಷಿಕೋತ್ಸವ.

ಅದಕ್ಕಾಗಿ ನನ್ನ ಸಹಪಾಠಿಗಳು ತರಹೇವಾರಿ ಕಾರ್ಯಕ್ರಮಗಳ ನೀಡುವ ತಯಾರಿಯಲ್ಲಿದ್ದರು. ಆಗ ನನಗೂ ಏನಾದರೂ ಕಾರ್ಯಕ್ರಮ ನೀಡುವ ಹಂಬಲ ಉಂಟಾಗಿ ‘ಯುಗಳ ಗೀತೆ’ ಹಾಡಲು ಇಚ್ಛೆ ವ್ಯಕ್ತಪಡಿಸಿದ್ದೆ. ಅದಕ್ಕಾಗಿ ನಮ್ಮದೇ ತರಗತಿಯ ಹುಡುಗಿಗೆ ನನ್ನ ಜೊತೆ ಹಾಡುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಆಕೆ ಸಮ್ಮತಿ ಸೂಚಿಸಿ ತುಳು ಹಾಡನ್ನು ಹಾಡೋಣ ಅನ್ನೋ ಸಲಹೆ ನೀಡಿದಳು. ನಾನು ಅದಕ್ಕೊಪ್ಪಿ ಹಾಡೀನ ತಾಲೀಮಿನಲ್ಲಿ ನಿರತನಾದೆ.

ಇಬ್ಬರಿಗೂ ಶಾಸ್ತ್ರೀಯ ಸಂಗೀತದ ತಿಳಿವು ಇರದಿದ್ದರಿಂದ ಆಲಾಪನೆ, ಗಮಕಗಳ ಒಲವು ಅಷ್ಟಿರಲಿಲ್ಲ. ನಮಗೆ ಹಾಡಲು ನಿಗದಿ ಆಗಿದ್ದ ದಿನದ ಹಿಂದಿನ ದಿನ ನನ್ನ seniors ನನಗೆ ಕೆಲವು ಅಮೂಲಾಗ್ರ ಸಲಹೆಗಳನ್ನ ನೀಡಿದ್ದರು. ‘ಡುಯೆಟ್ ಹಾಡೋವಾಗ ಯಾವುದೇ ಕಾರಣಕ್ಕೂ ಮುಖ ಊದಿಸಿಕೊಂಡು, ಒಬ್ಬರನೊಬ್ಬರು ನೋಡಿಕೊಳ್ಳದೆ ಅಥವಾ ತಲೆಬಾಗಿಸಿ ಹಾಡಬೇಡಿ. ಹಿಂದಿನ ವರ್ಷ ಒಂದು ಜೋಡಿ ಈ ರೀತಿ ಹಾಡಿದಕ್ಕೆ ಯಾರೋ ಪೋಲಿ ಹುಡುಗರು ವೇದಿಕೆ ಮೇಲೇರಿ ಅವನ ಕಿವಿಗೆ ಗುಲಾಬಿ ಹೂವು ಇಟ್ಟಿದ್ದರು’ ಎಂದಾಗ ನನ್ನ ಎದೆಯಲ್ಲೂ ಏನೋ ತಳಮಳ.

‘ಅದಲ್ಲದೆ ನೀವಿಬ್ಬರೂ ತುಂಬಾ ದೂರದಲ್ಲಿ ನಿಂತು ಹಾಡುವುದೂ ಸರಿಯಲ್ಲ’ ಎಂಬಂಥಾ ಬಿಟ್ಟಿ ಸಲಹೆಗಳೂ ಲಭ್ಯವಾಗಿತ್ತು.

ನಾನಂತೂ ಉತ್ಸಾಹದಿಂದ ಪ್ರತಿಯಾಗಿ ನೀವು ನಾನು ವೇದಿಕೆ ಏರೋವಾಗ ಜೋರಾಗಿ ಕಿರುಚಿ, ಬೆಂಬಲ ವ್ಯಕ್ತಪಡಿಸಿ ಎಂದು ಅರುಹಿದ್ದೆ. ಅದಕ್ಕವರು ‘ನಿನ್ನ ಹಾಡು ಬಂದಾಗ ತಾನೇ? ಚಿಂತೆ ಬೇಡ, ಧಮಾಲ್ ಎಬ್ಬಿಸುತ್ತೇವೆ’ ಎಂಬ ಅಭಯ ಇತ್ತಿದ್ದರು.

ಈ ಸಲಹೆ ಸೂಚನೆ ನನಗೆ ಕೂಲಂಕುಷವಾಗಿ ತಿಳಿದಿತ್ತು. ನನ್ನ ಹಾಡಿನ‌ ಜೊತೆಗಾರ್ತಿಗೆ ಗೊತ್ತಿರಲಿಲ್ಲ. ಕಾಲೇಜ್ ಡೇ ದಿವಸ ಮಧ್ಯಾಹ್ನದ ಹೊತ್ತು ನಮ್ಮ ಹಾಡೆಂದು ನಿರ್ಧಾರವಾಗಿತ್ತು. ನಮ್ಮ ಹೆಸರು ನಿರೂಪಕರಿಂದ ಉದ್ಘೋಷಿತಗೊಂಡಿತು. ಮೊದಲೇ ಒಪ್ಪಂದದ ಹಾಗೆ ಭಾರಿ buildup, ಅಬ್ಬರದ ನಡುವೆ ವೇದಿಕೆ ಏರಿದ್ದೆವು. ನನ್ನ ದೌರ್ಭಾಗ್ಯವೋ ಏನೋ ವೇದಿಕೆ ಏರೋ ಮುಂಚೆಯೆ ಹಾಡಿನ ಟ್ಯೂನ್ ಪ್ಲೇ ಆಗಿಬಿಟ್ಟಿತ್ತು. ಓಡಿಹೋಗಿ ಸ್ಟೇಜ್‌ನ ಮೂಲೇಲಿ ನಿಂತು ತಾಳ ತಪ್ಪಿದರೂ ಹಾಡು ಮುಂದುವರಿಸತೊಡಗಿದೆ. ಹೇಗೂ ಸೀನಿಯರ್ಸ್ ಸಲಹೆ ನೀಡಿದ್ದರಲ್ಲ. ಹತ್ತಿರ ನಿಂತು ಮುಖ ನೋಡಿಕೊಂಡೇ ಹಾಡಲು. ಅದಕ್ಕಾಗಿ ಹಾಡುಗಾರ್ತಿಯ ಮುಖ ನೋಡತೊಡಗಿದೆ. ಅವಳೂ ಗಾಬರಿಗೊಂಡು ಒಂದು ಹೆಜ್ಜೆ ಬದಿಗೆ ಸರಿದು ನಿಂತಳು. ಅರೇ! ನನಗೂ ಆಶ್ಚರ್ಯ. ಇವಳಿಗೆ ಸ್ಟೇಜ್ ಸೆನ್ಸ್ ಇಲ್ವಾ? ಎಂದು ಮನದಲ್ಲೇ ಬಯ್ಯುತ್ತಾ ತಾಳ ತಪ್ಪಿದ ಹಾಡನ್ನು ಮುಂದುವರಿಸುತ್ತಾ ನಿಂತಿದ್ದೆ. ಆಕೆಯಂತೂ ಬದಿಗೆ ಸರಿಯುತ್ತಾ ಸರಿಯುತ್ತಾ ನನಗರಿವಿಲ್ಲದೆ ವೇದಿಕೆಯ ನಿರ್ಗಮನ ಬಾಗಿಲಿನ ತನಕವೂ ಬೆ(ದ)ವರಿ ಬಂದಿದ್ದಳಂತೆ. ನಮ್ಮ ಈ ಮಂಗಾಟ ನೋಡಿದ ಸಭಾಸದರೆಲ್ಲಾ ಬಿದ್ದುಬಿದ್ದು ನಗುತ್ತಿದ್ದರಂತೆ. ಪಾಪ! ನಾನಂತೂ ಸೀನಿಯರ್ಸ್ ಮಾತನ್ನ ಅರ್ಧಂಬರ್ಧ ಕೇಳಿಸಿಕೊಂಡು ಆಕೆಗೆ ದಿಗ್ಭ್ರಮೆ, ಜನರಿಗೆ ಉಚಿತ ಮನೋರಂಜನೆ ನೀಡಿ ಬೇಸ್ತು ಬಿದ್ದಿದ್ದೆ. ಈ ಘಟನೆ ನೆನಪಿಸಿಕೊಂಡಾಗಲೆಲ್ಲಾ ಪದವಿ ದಿನದ ಸವಿನೆನಪುಗಳು ಕಣ್ಣಂಚಲ್ಲಿ ಹಾದು ಹೋಗುವಾಗ ಆ ದಿನಗಳು ಎಷ್ಟು ಚಂದ ಅಲ್ವಾ? ಅನ್ನಿಸುತ್ತೆ ..

ಪ್ರವಾಸೋದ್ಯಮ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT