ಗುರುವಾರ , ಏಪ್ರಿಲ್ 2, 2020
19 °C

ಕ್ರೀಡಾ ವ್ಯವಸ್ಥಾಪಕ ವೃತ್ತಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಕೆಲವೊಮ್ಮೆ ನಮ್ಮ ಆಸಕ್ತಿಯ ಕ್ಷೇತ್ರವೇ ನಮ್ಮ ವೃತ್ತಿಗೆ ಪೂರಕವಾಗಿರುತ್ತದೆ. ಅಂತಹ ವೃತ್ತಿಗಳಲ್ಲಿ ‘ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌’ ಅಥವಾ ‘ಕ್ರೀಡಾ ವ್ಯವಸ್ಥಾಪಕ ವೃತ್ತಿ’ ಕೂಡ ಒಂದು.

ಕ್ರಿಕೆಟ್‌, ಕಬಡ್ಡಿ, ಟೆನಿಸ್, ಬಾಡ್ಮಿಂಟನ್ ಹೀಗೆ ವಿವಿಧ ಬಗೆಯ ಕ್ರೀಡೆಗಳನ್ನು ಆಯೋಜಿಸುವ ಸಲುವಾಗಿ ಸಂಸ್ಥೆಗಳಿರುತ್ತವೆ. ಅಲ್ಲದೇ ಕ್ರೀಡಾಪಟುಗಳಿಗೆ ಸಲಹೆ ನೀಡುವ, ಅವರ ದಿನಚರಿಯನ್ನು ನಿರ್ವಹಿಸುವ ಕೆಲಸಗಳೂ ಇರುತ್ತವೆ. ನಿಮಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ವ್ಯವಹಾರ ನಿಪುಣರಾದರೆ ಅಂತಹ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಕೇವಲ ಕ್ರೀಡೆಯ ಬಗ್ಗೆ ಆಸಕ್ತಿ ಇದ್ದರಷ್ಟೇ ಸಾಲದು, ಕ್ರೀಡಾ ಕ್ಷೇತ್ರದಲ್ಲಿನ ನಿರ್ವಹಣೆ ಹಾಗೂ ಅಲ್ಲಿನ ವ್ಯವಹಾರಗಳ ಕುರಿತು ಜ್ಞಾನವೂ ಅಗತ್ಯ. ಇವೆಲ್ಲ ನಿಮ್ಮಲ್ಲಿದ್ದರೆ ನೀವೂ ಕ್ರೀಡಾ ವ್ಯವಸ್ಥಾಪನೆ ವೃತ್ತಿಯನ್ನು ಆಯ್ದುಕೊಳ್ಳಬಹುದು.

ಈ ವೃತ್ತಿಯು ಕ್ರೀಡಾ ಕ್ಷೇತ್ರದಲ್ಲಿನ ವ್ಯವಹಾರಗಳ ಮೇಲೆ ಹೆಚ್ಚು ಗಮನ ಹರಿಸುವಂತಹದ್ದು. ಸೌಲಭ್ಯ ನಿರ್ವಹಣೆ, ಪ್ರಚಾರಗಳು, ಮಾರುಕಟ್ಟೆ ವ್ಯವಹಾರ ಹಾಗೂ ಕಾರ್ಯಕ್ರಮ ಆಯೋಜನೆ ಮುಂತಾದ ವಿಷಯಗಳ ಮೇಲೆ ಕ್ರೀಡಾ ವ್ಯವಸ್ಥಾಪಕರು ಕೆಲಸ ಮಾಡಬೇಕು. ಜೊತೆಗೆ ಹಣಕಾಸು ನಿರ್ವಹಣೆ, ಕ್ರೀಡಾ ಆಡಳಿತ, ಸಾರ್ವಜನಿಕ ಸಂಪರ್ಕ ಹಾಗೂ ಲೆಕ್ಕ ಪರಿಶೋಧನೆ ಮುಂತಾದ ವಿಷಯಗಳ ಕುರಿತು ಅರಿವು ಹೊಂದಿರಬೇಕು.

ಕ್ರೀಡಾ ವ್ಯವಸ್ಥಾಪಕರು ತಾವು ಸೇರುವ ಕ್ರೀಡಾಸಂಸ್ಥೆ ಅಥವಾ ವಿಭಾಗಕ್ಕೆ ಪ್ರಚಾರ ನೀಡುವ ಹಾಗೂ ಸಂಸ್ಥೆಗೆ ಲಾಭ ತಂದುಕೊಡುವ ಭರವಸೆ ಹುಟ್ಟಿಸುವಂತವರಾಗಿರಬೇಕು.  

ಬಿಬಿಎಂ ಅಥವಾ ಬಿಬಿಎ ಪದವಿ ಪಡೆದು ವ್ಯವಹಾರ ಅಧ್ಯಯನ ವಿಷಯದಲ್ಲಿ ಸಮಾಲೋಚನೆ ಹಾಗೂ ಕೌಶಲಗಳ ಬಗ್ಗೆ ಅರಿತುಕೊಂಡಿದ್ದರೆ ಈ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದು. ಈ ವಿಷಯದಲ್ಲೇ ಸ್ನಾತಕೋತ್ತರ ಪದವಿಗೂ ಅವಕಾಶವಿದೆ. ನಿಮಗೆ ಕ್ರೀಡಾ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಆಸಕ್ತಿ ಇದ್ದರೆ ನೀವು ವ್ಯವಹಾರ ಅಧ್ಯಯನ ವಿಷಯದ ಜೊತೆಗೆ ಸಮೂಹ ಸಂವಹನ, ಇಂಗ್ಲಿಷ್ ಹಾಗೂ ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿಕೊಂಡು ಕ್ರೀಡಾ ವ್ಯವಸ್ಥಾಪಕರಾಗಬಹುದು. 

ಕ್ರೀಡಾ ವ್ಯವಸ್ಥಾಪಕರೆಂದರೆ..

ಯಾವುದೇ ಕ್ರೀಡೆ ಅಥವ ದೈಹಿಕ ಚಟುವಟಿಕೆಯ ಕ್ಷೇತ್ರವಿರಲಿ ಅದರಲ್ಲಿ ಯೋಜನೆ, ಸಂಯೋಜನೆ, ನಿರ್ವಹಣೆ ಹಾಗೂ ಬಜೆಟ್ ಮುಂತಾದ ಅಂಶಗಳನ್ನು ನಿಭಾಯಿಸಲು ಒಂದು ವಿಭಾಗವಿರುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರೇ ಕ್ರೀಡಾ ವ್ಯವಸ್ಥಾಪಕರು. ಇವರು ಸಂಸ್ಥೆಯ ವತಿಯಿಂದ ನಡೆಯುವ ಕಾರ್ಯಕ್ರಮಗಳು ಹಾಗೂ ಅದರ ವೇಳಾಪಟ್ಟಿಯನ್ನು ಸಮರ್ಥವಾಗಿ ನಿರ್ವಹಿಸುವ ಚಾಕಚಕ್ಯತೆಯನ್ನು ಹೊಂದಿರಬೇಕು. ಕ್ರೀಡಾಪಟುಗಳು ಕೂಡ ಪ್ರತ್ಯೇಕವಾಗಿ ನಿಯೋಜಿಸಿಕೊಳ್ಳಬಹುದು.  

ಉದ್ಯೋಗಾವಕಾಶಗಳು

ಕ್ರೀಡಾ ಏಜೆಂಟ್, ಮಾಹಿತಿ ನಿರ್ದೇಶಕರು, ಮಾರ್ಕೆಟಿಂಗ್ ಮ್ಯಾನೇಜರ್ ಹಾಗೂ ಕಾರ್ಯಕ್ರಮ ಆಯೋಜಕರು ಮುಂತಾದ ವಿಭಾಗಗಳಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿದ್ಯಾರ್ಹತೆ

ಕ್ರೀಡಾ ವ್ಯವಸ್ಥಾಪಕ ವೃತ್ತಿಯನ್ನು ಸೇರ ಬಯಸುವವರು ಈ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

ವೇತನ: ಹೊಸತಾಗಿ ಕೆಲಸಕ್ಕೆ ಸೇರಿರುವವರಿಗೆ ವರ್ಷಕ್ಕೆ 3ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಇರುತ್ತದೆ. ವೃತ್ತಿಯಲ್ಲಿ ಅನುಭವ ಹೊಂದಿದಂತೆ 10 ಲಕ್ಷ ರೂಪಾಯಿಗೂ ಅಧಿಕ ವೇತನ ಪ್ಯಾಕೇಜ್ ಸಿಗಬಹುದು.

ಕ್ರೀಡಾ ವ್ಯವಸ್ಥಾಪನೆ ಕೋರ್ಸ್ ಇರುವ ಕಾಲೇಜುಗಳು 

ಬಿಬಿಎ ಇನ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ನ್ಯಾಷನಲ್ ಅಕಾಡೆಮಿ ಆಫ್ ಸ್ಪೋರ್ಟ್ಸ್‌ (ಮುಂಬೈ), ಬಿಎ ಇನ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಜಾರ್ಜ್ ಕಾಲೇಜು ಕೋಲ್ಕತ್ತಾ, ಬಿಎ ಇನ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಮೌಲಾನಾ ಅಬುಲ್ ಕಲಾಂ ಆಜಾದ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ (ಪಶ್ಚಿಮ ಬಂಗಾಳ), ಬಿಎ ಇನ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್, ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌.

ಕ್ರೀಡೆಯಲ್ಲಿ ಆಸಕ್ತಿ ಇದ್ದು ಈ ವೃತ್ತಿಯನ್ನು ಆಯ್ದುಕೊಳ್ಳುವವರಿಗೆ ಉತ್ತಮ ಭವಿಷ್ಯವಿದೆ. ಆದರೆ ಈ ವೃತ್ತಿಯಲ್ಲಿನ ಸವಾಲುಗಳು, ಒತ್ತಡಗಳು, ಸಂಪನ್ಮೂಲಗಳ ಕ್ರೋಢಿಕರಣ ಮಾಡುವುದು ಕೊಂಚ ಕಷ್ಟವೇ ಆದರೂ ಅವುಗಳಲ್ಲಿ ಸಾಕಷ್ಟು ಆದಾಯವಿದೆ. ಮುಂದಿನ ಕೆಲವು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರವು ಇನ್ನಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದ್ದು ನೀವು ಈ ವೃತ್ತಿಯನ್ನು ಸೇರಬಯಸಿದರೆ ಕೋರ್ಸ್‌ನ ಜೊತೆಗೆ ಕ್ರೀಡಾ ಕ್ಷೇತ್ರದ ಕುರಿತು ಸವಿವರವಾಗಿ ತಿಳಿದುಕೊಳ್ಳುವುದು ಅಗತ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು