ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿಪರೀಕ್ಷೆ: ಪ್ರಬಂಧ ಬರೆಯುವುದು ಹೇಗೆ?

Last Updated 3 ಜೂನ್ 2020, 11:53 IST
ಅಕ್ಷರ ಗಾತ್ರ

ಶಾಲಾ– ಕಾಲೇಜುಗಳಲ್ಲಿ ನಿಬಂಧ ಅಥವಾ ಪ್ರಬಂಧ ಬರವಣಿಗೆ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೆ ಇನ್ನು ಕೆಲವರಿಗೆ ಲೀಲಾಜಾಲವಾಗಿ ಸಿದ್ಧಿಸುವ ಕಲೆ; ಅದು ಸೃಜನಶೀಲವೂ ಹೌದು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಂತೂ ಈ ಕಿರುಬರಹದ ಬರವಣಿಗೆಯೆಂದರೆ ಅಂಕ ಗಳಿಸುವ ಸುಲಭ ವಿಧಾನ ಎಂದೇ ಬಿಂಬಿತವಾಗಿದೆ. ಆದರೆ ಇದು ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ರೂಢಿಸಿಕೊಂಡಿರುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ.

ಪ್ರಾಥಮಿಕ ಶಾಲಾ ತರಗತಿಗಳಲ್ಲೇ ಈ ಪ್ರಬಂಧ ಬರವಣಿಗೆಗೆ ಅಗತ್ಯವಿರುವಷ್ಟು ಆದ್ಯತೆ ನೀಡಿದರೆ ಅದು ನಿಮಗೆ ಕರಗತವಾಗುವುದರಲ್ಲಿ ಸಂಶಯವಿಲ್ಲ. ಹಾಗಂತ ಈಗ ಪರೀಕ್ಷೆ ಸಮೀಪಿಸುತ್ತಿರುವಾಗ ಅದನ್ನು ಅಭ್ಯಾಸ ಮಾಡಲು ಸಾಧ್ಯವೇ ಎಂಬ ಚಿಂತೆ ಬೇಡ. ಸ್ವಲ್ಪ ಶ್ರಮವಹಿಸಿದರೆ, ಕೊಂಚ ಬುದ್ಧಿಮತ್ತೆಯನ್ನು ಬಳಸಿದರೆ, ಹೆಚ್ಚು ನಿಗಾ ವಹಿಸಿದರೆ ಕನ್ನಡ, ಇಂಗ್ಲಿಷ್‌ ಅಥವಾ ಹಿಂದಿ ಭಾಷಾ ಪರೀಕ್ಷೆಯಲ್ಲಿ ಈ ಬರವಣಿಗೆಗೆ ಸಂಪೂರ್ಣ ಅಂಕವನ್ನು ಗಳಿಸಲು ಸಾಧ್ಯ. ಇದು ಹೇಗೆನ್ನುತ್ತೀರಾ?

ತರಗತಿಗಳಲ್ಲಿ ಹೆಚ್ಚಿನ ಬಾರಿ ಶಿಕ್ಷಕರೇ ಪ್ರಬಂಧದ ವಿಷಯವನ್ನು ಕೊಟ್ಟು ಬರೆಸುವುದು ಸಂಪ್ರದಾಯ. ಹೀಗಾಗಿ ಇಲ್ಲಿ ನಿಮಗೆ ಆಯ್ಕೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಆದರೆ ಪರೀಕ್ಷೆಯಲ್ಲಿ ಕೆಲವೊಮ್ಮೆ 2–3 ಆಯ್ಕೆಗಳನ್ನು ಕೊಡುತ್ತಾರೆ. ನಿಮಗೆ ಯಾವ ವಿಷಯದಲ್ಲಿ ಆಳವಾದ ತಿಳಿವಳಿಕೆ ಇದೆಯೋ ಅದನ್ನೇ ಆಯ್ದುಕೊಳ್ಳುವುದು ಜಾಣತನ. ಅದು ಬಿಟ್ಟು ಜನಪ್ರಿಯ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಅಂಕ ಹೆಚ್ಚು ಸಿಗಬಹುದೇನೋ ಎಂಬ ಚಿಂತನೆ ತಪ್ಪು.

ವಿಷಯ ಸಂಗ್ರಹ

ವಿಷಯದ ಬಗ್ಗೆ ವಿವರವನ್ನು ಹೇಗೆ ಸಂಗ್ರಹಿಸಬಹುದು ಎಂಬುದನ್ನು ನೋಡೋಣ. ಒಂದು ವಿಧವೆಂದರೆ ನಿಮ್ಮ ಪಠ್ಯದಲ್ಲೇ ಕೆಲವೊಮ್ಮೆ ಅದರ ಬಗ್ಗೆ ಪ್ರಸ್ತಾಪ ಬಂದಿರಬಹುದು. ಉದಾಹರಣೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ. ಆ ಪಾಠವನ್ನು ಸರಿಯಾಗಿ ಓದಿಕೊಳ್ಳುವುದರ ಜೊತೆಗೆ ದಿನಪತ್ರಿಕೆ ಅಥವಾ ನಿಯತಕಾಲಿಕಗಳಲ್ಲಿ ಬರುವ ಲೇಖನಗಳನ್ನು ಓದಬೇಕಾಗುತ್ತದೆ. ಇಲ್ಲಿಯವರೆಗೆ ನೀವು ಓದಿರಬಹುದಾದ ವಿಷಯದಲ್ಲಿ ಪ್ರಸಕ್ತ ಎನಿಸಿರುವುದನ್ನು ಟಿಪ್ಪಣಿ ಮಾಡಿಕೊಂಡು ನೆನಪಿಟ್ಟುಕೊಂಡರೆ ಅಷ್ಟೇ ಸಾಕು. ಇನ್ನು ಕೆಲವೊಮ್ಮೆ ಪ್ರಸಕ್ತ ವಿದ್ಯಮಾನಗಳ ಕುರಿತು ಕೇಳಬಹುದು. ಉದಾಹರಣೆಗೆ ಜಾಗತಿಕ ತಾಪಮಾನದ ದುಷ್ಪರಿಣಾಮ ಮತ್ತು ಪರಿಹಾರ. ಹೀಗಾಗಿ ಪತ್ರಿಕೆಗಳು ಮತ್ತು ಇನ್ನಿತರ ನಿಯತಕಾಲಿಕಗಳಲ್ಲಿ ಬರುವ ಲೇಖನಗಳನ್ನು ಹೆಚ್ಚು ಓದುವುದರಿಂದ ‌ಎಲ್ಲ ವಿಷಯಗಳ ಬಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳಬಹುದು.

ಪ್ರಸಿದ್ಧ ವ್ಯಕ್ತಿಗಳ ಬಗ್ಗೆಯೂ ಕಿರುಬರಹ ಬರೆಯಲು ಹೇಳಬಹುದು. ಅಪರೂಪದ ಸಾಧನೆ ಮಾಡಿದವರ, ಸುದ್ದಿಯಲ್ಲಿರುವವರ ಅಥವಾ ಇತ್ತೀಚೆಗೆ ಮರಣ ಹೊಂದಿದ ಸಾಧಕರ ಬಗ್ಗೆ ಕೇಳಬಹುದು. ಆಗಲೂ ಕೂಡ ನಿಮ್ಮ ಪತ್ರಿಕೆಯ ಓದು ನೆರವಿಗೆ ಬರುತ್ತದೆ.

ಬರೆಯುವ ಬಗೆ ಹೇಗೆ?

ಪ್ರಬಂಧಕ್ಕೆ ಆರಂಭ ಅಥವಾ ಪೀಠಿಕೆ ಮತ್ತು ಮುಕ್ತಾಯ ತುಂಬಾ ಮುಖ್ಯ. ಇವೆರಡೂ ಮಧ್ಯೆ ಇರುವ ವಿವರಗಳ ಮಹತ್ವವನ್ನು ಹೆಚ್ಚಿಸುತ್ತವೆ. ಆರಂಭದಲ್ಲಿ ವಿಷಯದ ಪ್ರಸ್ತಾಪ ಮಾಡಬೇಕು. ಅಂದರೆ ಅದು ಪರಿಚಯಾತ್ಮಕವಾಗಿರಬೇಕು. 2–3 ವಾಕ್ಯಗಳಲ್ಲಿ ಇದನ್ನು ನೀವು ಬರೆಯಬಹುದು. ಈ ಪೀಠಿಕೆ ಎನ್ನುವುದು ನೀವು ಮುಂದೆ ಏನನ್ನು ಹೇಳಲು ಹೊರಟಿದ್ದೀರಿ ಎಂಬುದನ್ನು ಸಂಕ್ಷಿಪ್ತವಾಗಿ ಮನವರಿಕೆ ಮಾಡುವಂತಿರಲಿ. ಅದರಲ್ಲೇ ಗೊಂದಲಗಳಿದ್ದರೆ ಮುಂದಿನ ವಿವರಗಳು ಇನ್ನಷ್ಟು ಗೊಂದಲಮಯವಾಗುವ ಸಾಧ್ಯತೆ ಇರುತ್ತದೆ.

ನಂತರ ನೀವು ಪ್ರಸ್ತಾಪಿಸಿದ ವಿಷಯದ ಬಗ್ಗೆ ವಿವರಗಳನ್ನು ನೀಡುತ್ತ ಹೋಗಬೇಕು. ಉದ್ದಕ್ಕೆ ಬರೆಯುತ್ತ ಹೋಗುವುದಕ್ಕಿಂತ ಇದನ್ನು ಮುಖ್ಯಾಂಶಗಳ ರೀತಿಯಲ್ಲಿ ಚುಕ್ಕೆ ಗುರುತು ಹಾಕುತ್ತ ಹೋದರೆ ಒಳ್ಳೆಯದು. ಇದು ಉತ್ತರ ಪತ್ರಿಕೆಗಳನ್ನು ನೋಡುವವರ ಗಮನವನ್ನು ಬೇಗ ಸೆಳೆಯುತ್ತದೆ.

ಶಬ್ದ ಭಂಡಾರ

ಪ್ರಬಂಧವನ್ನು ಮುಗಿಸುವಾಗಲೂ ಕೂಡ ಗಮನವಿರಲಿ. ವಿವರಗಳು ಸಂಪೂರ್ಣವಾಗಿ ಬಂದಿವೆ ಎಂಬುದನ್ನು ಅದು ಸೂಚಿಸುವಂತಿರಬೇಕು. ಇಲ್ಲದಿದ್ದರೆ ಪ್ರಬಂಧ ಅರ್ಧಕ್ಕೆ ಮುಗಿದಿದೆ; ಇನ್ನೂ ಬೇಕಾದಷ್ಟು ವಿಷಯಗಳು ಬಾಕಿ ಇವೆ ಎಂಬ ಭಾವನೆ ಬರಬಹುದು. ಇನ್ನೊಂದು ಮುಖ್ಯವಾದ ಅಂಶವೆಂದರೆ ಭಾಷಾ ಜ್ಞಾನದ ಜೊತೆಗೆ, ಶಬ್ದಗಳ ಭಂಡಾರ ಚೆನ್ನಾಗಿದ್ದರೆ ಪ್ರಬಂಧ ಓದಿಸಿಕೊಂಡು ಹೋಗುತ್ತದೆ. ಇವೆರಡಿದ್ದರೆ ಬರವಣಿಗೆ ಶೈಲಿಯೂ ಉತ್ತಮ ರೀತಿಯಲ್ಲಿ ಮೂಡಿ ಬರುತ್ತದೆ. ನೆನಪಿನಲ್ಲಿಡಬೇಕಾದ ಅಂಶವೆಂದರೆ ಒಮ್ಮೆ ಬಳಸಿದ ಶಬ್ದವನ್ನು ಇನ್ನೊಮ್ಮೆ ಬಳಸದಿರುವುದು ಒಳಿತು. ನಿಘಂಟು, ಶಬ್ದಕೋಶಗಳನ್ನು ನೋಡುವ ಹವ್ಯಾಸವಿದ್ದರೆ ಪರ್ಯಾಯ ಶಬ್ದಗಳು ನೆನಪಿನಲ್ಲಿರುತ್ತವೆ. ಜೊತೆಗೆ ಶೈಕ್ಷಣಿಕ ಬರವಣಿಗೆಗೆ ಪೂರಕವಾಗಿರಬೇಕು. ಅಂದರೆ ‘ಫ್ರೀ ಹ್ಯಾಂಡ್‌’ ಬರವಣಿಗೆ ಇಲ್ಲಿ ಸೂಕ್ತವಲ್ಲ.

ಪ್ರಬಂಧಗಳು ಐದು ಅಂಕಗಳಿಗೆ ಸೀಮಿತವಾಗಿರುತ್ತವೆ. ಇದಕ್ಕೆಷ್ಟು ಬರೆಯಬೇಕೋ ಅಷ್ಟನ್ನು, ಆದರೆ ಮಹತ್ವದ ವಿಷಯ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ ಬರೆಯಬೇಕಾಗುತ್ತದೆ. ವಿವರಗಳು ಗೊತ್ತು ಎಂಬ ಹುಮ್ಮಸ್ಸಿನಲ್ಲಿ ಉದ್ದಕ್ಕೆ ಬರೆಯುತ್ತ ಹೋದರೆ ಬೇರೆ ಪ್ರಶ್ನೆಗಳಿಗೆ ಸಮಯ ಸಾಕಾಗಲಾರದು. ಒಮ್ಮಿಂದೊಮ್ಮೆಲೇ ಅಲ್ಲಿಗೇ ನಿಲ್ಲಿಸುವ ಪ್ರಮೇಯ ಬಂದು ಪ್ರಬಂಧ ಅಪೂರ್ಣವಾಗಬಹುದು.

ನೀವು ಯಾವುದಾದರೂ ವಿಷಯ ಮಂಡಿಸಿದಾಗ, ಚರ್ಚಿಸಿದಾಗ ಅದಕ್ಕೆ ಪೂರಕವಾಗಿ ಉದಾಹರಣೆ ಕೊಡುತ್ತ ಹೋಗಬೇಕು. ಜಾಗತಿಕ ತಾಪಮಾನದ ವಿಷಯ ಬಂದಾಗ ಅದು ಎಲ್ಲೆಲ್ಲಿ ಹೆಚ್ಚು ದುಷ್ಪರಿಣಾಮ ಉಂಟು ಮಾಡಿದೆ ಎಂಬುದಕ್ಕೆ ಉದಾಹರಣೆ ನೀಡಿದರೆ ಪ್ರಬಂಧ ಹೆಚ್ಚು ಮೌಲಿಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT