ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ | ಇತಿಹಾಸದಲ್ಲಿ ಇಸವಿ ಸ್ಮರಣೆ ವಿಧಾನ

Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಹಿಂದಿನ ಲೇಖನದಲ್ಲಿ ನಾವು ಹೇಗೆ ನಮ್ಮದೇ ಆದ ಕೆಲವು ವಾಕ್ಯಗಳು ಅಥವಾ ಪದಗಳನ್ನು ರಚಿಸಿಕೊಂಡು ಸಮಾಜ ವಿಜ್ಞಾನ ಪಾಠದ ಹಲವಾರು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ತಿಳಿದೆವು. ಈಗ ಈ ರೀತಿಯ ಇನ್ನಷ್ಟು ಸರಳ ವಿಧಾನಗಳನ್ನು ಅರಿಯಲು ಪ್ರಯತ್ನಿಸೋಣ.

ಸಮಾಜ ವಿಜ್ಞಾನದಲ್ಲಿ, ಅದರಲ್ಲೂ ಇತಿಹಾಸದ ಪಾಠಗಳನ್ನು ಓದಿ ನೆನಪಿನಲ್ಲಿಡುವುದು ಬಹಳ ಸುಲಭ. ಈ ಪಾಠಗಳನ್ನು ಓದುವಾಗ ಅಲ್ಲಲ್ಲಿಯೇ ಪಾಠದ ಮುಖ್ಯ ಅಂಶಗಳನ್ನು ದೃಶ್ಯೀಕರಣ (ವಿಶುವಲೈಜೇಶನ್‌) ದ ಮೂಲಕ ನೆನಪಿನಲ್ಲಿಟ್ಟುಕೊಳ್ಳಬಹುದು.

ಮುಖ್ಯ ಅಂಶಗಳನ್ನು ದೃಶ್ಯೀಕರಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿ.

*ಪಾಠದ ಮುಖ್ಯ ಅಂಶಗಳನ್ನು ಒಮ್ಮೆ ಓದಿ (ಸಾಧ್ಯವಾದರೆ ಜೋರಾಗಿ ಓದಿ).

*ಈ ಮುಖ್ಯ ಅಂಶಗಳಲ್ಲಿ ಇರಬಹುದಾದ ಪ್ರಮುಖ ಪದಗಳನ್ನು ಮಾತ್ರ ಮತ್ತೊಮ್ಮೆ ಓದಿ.

*ಈಗ ಕಣ್ಣು ಮುಚ್ಚಿ ಪ್ರಮುಖ ಪದಗಳನ್ನು ನೋಡಲು ಪ್ರಯತ್ನಿಸಿ.

*ಎರಡು - ಮೂರು ಬಾರಿ ಹೀಗೆ ಮಾಡಿ.

*ಈಗ ಕಣ್ಣು ಬಿಡಿ. ಪ್ರಮುಖ ಪದಗಳು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆಯಲ್ಲವೇ? (ಈಗಲೇ ಪ್ರಯತ್ನಿಸಿ ನೋಡಿ!)

ಈಗ ಈ ಪ್ರಮುಖ ಪದಗಳ ಸಹಾಯದಿಂದ ಇಡೀ ಉತ್ತರವೇ ನಿಮ್ಮ ಮನಸ್ಸಿಗೆ ಹೊಳೆಯುತ್ತಿದೆ ಅಲ್ಲವೇ? ಎಷ್ಟು ಸರಳ ವಿಧಾನ ನೋಡಿ !

ಉದಾಹರಣೆಗೆ: ಬಕ್ಸಾರ್ ಕದನದ ಪರಿಣಾಮಗಳು ಏನು?

ಇಲ್ಲಿಯ ಉತ್ತರದ ಪ್ರಮುಖ ಅಂಶಗಳು: ‘ಈಸ್ಟ್ ಇಂಡಿಯಾ ಕಂಪನಿ - ದಿವಾನಿ ಹಕ್ಕು -ಷಾ ಅಲಂ – 26 ಲಕ್ಷ + - ಷುಜ್ ಉದ್ ದೌಲ್– 50 ಲಕ್ಷ - ಮೀರ್ ಜಾಫರ್‌ನ ಮಗನಿಗೆ ವಿಶ್ರಾಂತಿ – ಈಸ್ಟ್ ಇಂಡಿಯಾ ಕಂಪನಿ’

ಈಗ ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಾಯಿತಲ್ಲವೇ!

ಸಮಾಜ ವಿಜ್ಞಾನದ ವಿಷಯದ ಬಗ್ಗೆ ಹಲವಾರು ವಿದ್ಯಾರ್ಥಿಗಳಲ್ಲಿ ಬಹು ಚರ್ಚಿತ ವಿಷಯ ಎಂದರೆ ಅದು ಸಮಯ ಮತ್ತು ಇಸವಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು !

ಸಮಯ ಸೂಚಿ ಅಂತರ

ಇಸವಿಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ಹಲವಾರು ವಿಧಾನಗಳಿವೆ. ಈಗ ನಾವು ಅವುಗಳಲ್ಲಿ ಒಂದು ವಿಧಾನವನ್ನು ತಿಳಿಯೋಣ. ಈ ವಿಧಾನದ ಹೆಸರು ‘ಸಮಯ ಸೂಚಿ ಅಂತರ’ ವಿಧಾನ. ಈ ವಿಧಾನದಲ್ಲಿ ಮೊದಲು ಇಸವಿಗಳನ್ನು ಒಂದರ ಕೆಳಗೆ ಒಂದರಂತೆ ಬರೆಯಿರಿ. ನಂತರ ಎರಡು ಘಟನೆಗಳ ನಡುವಿನ ಅಂತರವನ್ನು ಮಾತ್ರ ನೆನಪಿಡಿ. ಈ ಅಂತರದ ಸಹಾಯದಿಂದ ಸಂಬಂಧಿಸಿದ ಎಲ್ಲ ಇಸವಿಗಳನ್ನು ನೆನಪಿಡಬಹುದು.

ಉದಾಹರಣೆಗೆ: ಕೆಳಗಿನ ಪಟ್ಟಿಯನ್ನು ಗಮನಿಸಿ.

ಮೊದಲನೆಯ ಕಾರ್ನಾಟಿಕ್ ಯದ್ಧ – 1746 – 1748. ಇಲ್ಲಿ 1746ನ್ನು ಮಾತ್ರ ನೆನಪಿಡಿ. ಯುದ್ಧ ನಡೆದಿದ್ದು 2 ವರ್ಷ.

ಎರಡನೆಯ ಕಾರ್ನಾಟಿಕ್ ಯುದ್ಧ – 1749 – 1754. ನಂತರದ ಯದ್ಧ 5 ವರ್ಷ.

ಮೂರನೆಯ ಕಾರ್ನಾಟಿಕ್ ಯುದ್ಧ – 1756 - 1763. ಎರಡು ವರ್ಷದ ನಂತರ 7 ವರ್ಷ.

ಈ ಮೇಲಿನ ಉದಾಹರಣೆಯಲ್ಲಿ ನೀವು ಕೇವಲ ‘ಕಾರ್ನಾಟಿಕ್ ಯದ್ಧ – 1746 – 2 – 5 – 2 – 7’ ನ್ನು ಮಾತ್ರ ನೆನಪಿಟ್ಟರೆ ಸಾಕು ಅಲ್ಲವೇ. ಎಷ್ಟು ಸುಲಭವಾಯಿತು ನೋಡಿ!

ಹೀಗೇ ಸಮಾಜ ವಿಜ್ಞಾನದಂತಹ ಸುಂದರವಾದ ಮತ್ತು ಆಸಕ್ತಿದಾಯಕವಾದ ವಿಷಯದ ಪರೀಕ್ಷೆಗೆ ಸಂತೋಷವಾಗಿ ತಯಾರಾಗಲು ಮತ್ತು ಹೆಚ್ಚಿನ ಅಂಕಗಳನ್ನು ಪಡೆಯಲು ಹಲವಾರು ಸರಳ ವಿಧಾನಗಳಿವೆ. ಇಲ್ಲಿ ನಾವು ಕೇವಲ ಕೆಲವು ವಿಧಾನಗಳ ಬಗ್ಗೆ ಚರ್ಚಿಸಿದ್ದೇವೆ.

(ಲೇಖಕ: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT