ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಅನುವಂಶೀಯತೆ, ಜೀವ ವಿಕಾಸ

Last Updated 25 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಪ್ರಕೃತಿ ವೈವಿಧ್ಯಮಯ ಜೀವರಾಶಿಗಳಿಂದ ತುಂಬಿದೆ. ಈ ಜೀವ ವಿಕಾಸವಾಗುವುದು ಅನುವಂಶೀಯತೆಯಿಂದ. ತಾಯಿಯಲ್ಲಿ XX ವರ್ಣತಂತುಗಳಿದ್ದು, ತಂದೆಯಲ್ಲಿ XY ವರ್ಣತಂತುಗಳಿರುತ್ತವೆ. ಹೀಗಾಗಿ ಜನಿಸುವ ಮಗುವಿನ ಲಿಂಗವು ಕೇವಲ ತಂದೆಯ ವರ್ಣತಂತುವನ್ನು ಅವಲಂಬಿಸಿದೆ. ಅನುವಂಶೀಯವಾಗಿ ಸಂಭವಿಸುವ ಭಿನ್ನತೆಗಳಿಂದಾಗಿ ಅವುಗಳ ಸಂತತಿ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಹೇಳಬಹುದು.

ಮೆಂಡಲ್‌ನ ನಿಯಮಗಳು

ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಇಬ್ಬರು ಪೋಷಕರ ಒಂದೊಂದು ವರ್ಣತಂತುಗಳು ಸಂಯೋಗಗೊಂಡು ಮುಂದಿನ ಪೀಳಿಗೆಯ ಜೀವಿಯಲ್ಲಿ ಪ್ರವಹಿಸುವ ವಿಷಯವನ್ನು ಹಿಂದಿನ ತರಗತಿಯಲ್ಲಿ ಕಲಿತಿದ್ದೀರಿ. ಈ ಕುರಿತು ನಿಯಮಗಳ ಮೂಲಕ ಪ್ರತಿಪಾದಿಸಿದ ಗ್ರೆಗರ್ ಜೋಹಾನ್ ಮೆಂಡಲ್‌ನನ್ನು ಅನುವಂಶೀಯತೆಯ ಪಿತಾಮಹ ಎನ್ನುವರು. ಅವನು ತನ್ನ ಪ್ರಯೋಗಗಳಿಗೆ ವಿಭಿನ್ನ ಗುಣಗಳನ್ನು ಹೊಂದಿರುವ ಬಟಾಣಿ ಗಿಡಗಳನ್ನು ಆರಿಸಿಕೊಂಡ. ಎರಡು ಗುಣಗಳ ಅನುವಂಶೀಯತೆಯನ್ನು ಅಭ್ಯಸಿಸುವ ಸಲುವಾಗಿ ಎತ್ತರದ ದುಂಡುಬೀಜದ ಗಿಡಗಳನ್ನು ಕುಬ್ಜ ಸುಕ್ಕುಗಟ್ಟಿದ ಬೀಜದ ಗಿಡಗಳೊಡನೆ ಪರಕೀಯ ಪರಾಗಸ್ಪರ್ಶಕ್ಕೆ ಒಳಪಡಿಸಿದಾಗ F1 ಪೀಳಿಗೆಯಲ್ಲಿ ಎಲ್ಲಾ ಗಿಡಗಳೂ ಎತ್ತರ ಹಾಗೂ ದುಂಡನೆಯ ಬೀಜವನ್ನು ಹೊಂದಿದ್ದವು– ಅವುಗಳ ಜೀನ್ಸ್‌ನ ಸಂಯೋಗ (Tt Rr) ಇದ್ದರೂ ಸಹ. ಜೀವಿಯಲ್ಲಿ ಎರಡು ವಿಭಿನ್ನ ವಂಶವಾಹಿ ಇದ್ದಾಗಲೂ ಯಾವ ಗುಣ ಪ್ರಕಟಗೊಳ್ಳುತ್ತದೆಯೋ ಅದನ್ನು ಪ್ರಬಲ ಲಕ್ಷಣ (ಡಾಮಿನಂಟ್‌ ಟ್ರೇಟ್‌) ಎಂದೂ ಇನ್ನೊಂದನ್ನು ದುರ್ಬಲ ಲಕ್ಷಣ ಎಂದೂ ಕರೆಯುತ್ತಾರೆ. ಇದು ಮೆಂಡಲ್‌ನ ಪ್ರಥಮ ನಿಯಮ– ‘ಲಾ ಆಫ್‌ ಡಾಮಿನನ್ಸ್‌’ (ಪ್ರಾಬಲ್ಯದ ನಿಯಮ).

F1 ಪೀಳಿಗೆಯ ಗಿಡಗಳನ್ನು ಸ್ವಕೀಯ ಪರಾಗಸ್ಪರ್ಶಕ್ಕೆ ಒಳಪಡಿಸಿದಾಗ ಮೊದಲೆರಡು ಗುಣಗಳಿರುವ ಗಿಡಗಳೊಡನೆ ಎತ್ತರವಿರುವ ಹಾಗೂ ಸುಕ್ಕುಗಟ್ಟಿದ ಬೀಜಗಳ ಗಿಡಗಳೂ ಹಾಗೂ ಕುಬ್ಜ ದುಂಡನೆಯ ಬೀಜ ಹೊಂದಿದ ಗಿಡಗಳೂ ಕಂಡುಬಂದವು. F1 ಪೀಳಿಗೆಯಲ್ಲಿ ಅವುಗಳ ಅನುಪಾತ 9:3:3:1 ಆಗಿತ್ತು. ವಂಶವಾಹಿಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಸ್ವತಂತ್ರವಾಗಿ ಪ್ರವಹಿಸುತ್ತವೆ ಎಂಬುದು ಎರಡು ಹೊಸ ಗುಣಗಳಿರುವ ಗಿಡಗಳು ಪ್ರಕಟಗೊಂಡಿದ್ದರಿಂದ ಸಾಬೀತಾಯಿತು. ಇದು ಮೆಂಡಲ್‌ನ ಎರಡನೇ ನಿಯಮ– ಲಾ ಆಫ್‌ ಇಂಡಿಪೆಂಡೆಂಟ್‌ ಅಸೋರ್ಟ್‌ಮೆಂಟ್‌ (ಪ್ರತ್ಯೇಕತೆಯ ನಿಯಮ).

ಪ್ರಭೇದಗಳು

ನಿಮ್ಮ ಪಠ್ಯದಲ್ಲಿ ನೀಡಿರುವ ಜೀರುಂಡೆಯ ಉದಾಹರಣೆಗೆ ಅನುಸಾರವಾಗಿ ಭಿನ್ನತೆಯು ನೈಸರ್ಗಿಕ ಆಯ್ಕೆ (ಹಸಿರು), ಆಕಸ್ಮಿಕ(ನೀಲಿ) ಅಥವಾ ಸಣ್ಣ ಸಮೂಹದಲ್ಲಿನ ಅವಘಡಗಳು ವಂಶವಾಹಿಗಳ ಪರಿವರ್ತನೆಯನ್ನು ಬದಲಾಯಿಸಿ ದಿಕ್ಚ್ಯುತಿ (ಜೆನೆಟಿಕ್‌ ಡ್ರಿಫ್ಟ್‌)ಯಿಂದ ಕಂದು ಬಣ್ಣ ಉಂಟಾಗಬಹುದು. ಅಲೈಂಗಿಕ ಅಂಗಾಂಶಗಳ ಬದಲಾವಣೆಯಿಂದಾಗಿ ಉಂಟಾದ ಗುಣ(ತೂಕ) ಡಿಎನ್‌ಎಗೆ ವರ್ಗಾವಣೆಯಾಗದ ಕಾರಣ ಅದು ಅನುವಂಶೀಯವಲ್ಲ. ಪ್ರತಿ ಪೀಳಿಗೆಯಲ್ಲೂ ವಂಶವಾಹಿಗಳ ಹರಿವು ಮತ್ತು ಭೌಗೋಳಿಕ ಬೇರ್ಪಡುವಿಕೆಯಿಂದಾಗಿ ಉಂಟಾಗುವ ಭಿನ್ನತೆಯಿಂದಾಗಿ ಅವು ಸ್ಥಳೀಯ ಜೀವಿಗಳೊಂದಿಗೆ ಸಂತಾನೋತ್ಪತ್ತಿ ಮಾಡಲು ವಿಫಲವಾಗುವ ಕಾರಣ ಪ್ರಭೇದೀಕರಣ ಉಂಟಾಗುತ್ತದೆ.

ಪ್ರಭೇದಗಳ ಶ್ರೇಣೀಕರಣ, ರಚನಾರೂಪಿ ಅಂಗಾಂಗಗಳು, ಪಳೆಯುಳಿಕೆಗಳ ಅಧ್ಯಯನ ಜೀವವಿಕಾಸದ ಹಾದಿಯನ್ನು ಸ್ಪಷ್ಟಪಡಿಸುತ್ತವೆ. ಜೀವ ವಿಕಾಸವೆಂದರೆ ಕೆಳಹಂತದಿಂದ ಉನ್ನತ ಹಂತಕ್ಕೆ ಪ್ರಗತಿ ಹೊಂದುವುದಲ್ಲ. ಸರಳ ವಿನ್ಯಾಸಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಂಕೀರ್ಣ ವಿನ್ಯಾಸಗಳನ್ನು ಉಂಟುಮಾಡುವ ಪ್ರಕ್ರಿಯೆ. ಮನುಷ್ಯ ಯಾವ ಮೂಲದಿಂದಲೇ ಬಂದಿದ್ದರೂ ಸಹ ಅವನದ್ದು ಒಂದೇ ಪ್ರಭೇದ-ಹೋಮೋಸೇಪಿಯನ್ಸ್.

(ಲೇಖಕಿ ನಿವೃತ್ತ ವಿಜ್ಞಾನ ಉಪನ್ಯಾಸಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT