ಸೋಮವಾರ, ಏಪ್ರಿಲ್ 6, 2020
19 °C

ಎಸ್ಸೆಸ್ಸೆಲ್ಸಿ ಗಣಿತ ಆನ್‌ಲೈನ್‌ ಪಾಠ ಉಚಿತ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

‘ನವಿಲನೆತ್ತಿಯ ತುರಾಯಿಯಂತೆ, ಹಾವಿನೆಡೆಯ ವಜ್ರದಂತೆ, ಗಣಿತವಿತ್ತು: ಸಮಸ್ತಜ್ಞಾನಗಳ ಶಿಖರದಂತೆ’ ಎಂಬ ಮಾತನ್ನು ಒಳಗೊಂಡ walikarhb.com ಅಂತರ್ಜಾಲದ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಚ್.ಬಿ.ವಾಲೀಕಾರ ಅವರು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಪಾಠ ಹೇಳಲಾರಂಭಿಸಿದ್ದಾರೆ.

ಡಾ. ವಾಲೀಕಾರ ಗಣಿತ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಇದೀಗ ಗಣಿತವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಡಿಯೊಗಳ ಮೂಲಕ ಉಚಿತ ತರಗತಿಗಳನ್ನು ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ಗಣಿತ ಪರಿಷತ್ ಮೂಲಕ ಇತ್ತೀಚೆಗೆ ಈ ತಾಣ ಲೋಕಾರ್ಪಣೆಗೊಂಡಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅವರು ಸರಳವಾಗಿ ಗಣಿತ ಪಠ್ಯವನ್ನು ಕಲಿಸುವ ಪ್ರಯತ್ನ ನಡೆಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವಂತೆ ಆರಂಭವಾಗಿರುವ ಈ ತಾಣದಲ್ಲಿ ಸದ್ಯಕ್ಕೆ 10ನೇ ತರಗತಿ ಗಣಿತ ವಿಷಯದ ವಿಡಿಯೊ ಪಾಠಗಳಿವೆ.

ವಿಡಿಯೊ ಪಾಠಗಳು

ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸುಮಾರು 300 ವಿಡಿಯೊಗಳಿವೆ. ವಿಷಯಗಳ ಗಾತ್ರಕ್ಕೆ ಅನುಗುಣವಾಗಿ 10ರಿಂದ 18 ನಿಮಿಷಗಳ ವಿಡಿಯೊ ಪಾಠ ಲಭ್ಯ.

ಯಾವುದೇ ಬ್ರೌಸರ್ ಮೂಲಕ walikarhb.com ಅಂತರ್ಜಾಲ ತಾಣ ಪ್ರವೇಶಿಸಿದರೆ ‘ಕೋರ್ಸಸ್‌’ ಎಂಬ ವಿಭಾಗ ಕಾಣಿಸುತ್ತದೆ. ಇಲ್ಲಿ ಮೂರು ಪ್ರಮುಖ ವಿಭಾಗಗಳಿವೆ. ಎನ್‌ಸಿಇಆರ್‌ಟಿ ಪಠ್ಯಕ್ರಮದ 10ನೇ ತರಗತಿ ಇಂಗ್ಲಿಷ್ ಮತ್ತು ಇದೇ ಪಠ್ಯಕ್ರಮದ ಕನ್ನಡ ವಿಡಿಯೊಗಳಿಗೆ ಪ್ರತ್ಯೇಕ ಟ್ಯಾಬ್‌ಗಳನ್ನು ನೀಡಲಾಗಿದೆ. ಮತ್ತೊಂದು ‘ಸ್ಪೆಷಲ್ ವಿಡಿಯೊಸ್’ ಎಂಬ ಟ್ಯಾಬ್ ಇದೆ. ಇದರಲ್ಲಿ ಡಾ. ವಾಲೀಕಾರ ಅವರು ತತ್ವಶಾಸ್ತ್ರದಲ್ಲಿರುವ ಗಣಿತವನ್ನು ತಿಳಿಸುವ ಪ್ರಯತ್ನ ನಡೆಸಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಅಲ್ಲಮನ ವಚನಗಳಲ್ಲಿನ ಗಣಿತದ ಅಂಶಗಳನ್ನು ಹೇಳಿದ್ದಾರೆ.

10ನೇ ತರಗತಿ ಗಣಿತ ವಿಷಯದ ಕನ್ನಡ ಮಾಧ್ಯಮ ವಿಭಾಗದಲ್ಲಿ ಸಮಾಂತರ ಶ್ರೇಢಿಗಳು, ಬಹುಪದೋಕ್ತಿಗಳು, ಸಮಕಾಲೀನ ಸಮೀಕರಣಗಳು, ತ್ರಿಕೋನಗಳು ಎಂಬ ನಾಲ್ಕು ಪ್ರಮುಖ ವಿಷಯಗಳ ಕುರಿತ ವಿಡಿಯೊ ಪಾಠಗಳಿವೆ. ಅದರಂತೆಯೇ ಇಂಗ್ಲಿಷ್‌ ವಿಭಾಗದಲ್ಲಿ
ಅರ್ಥ್‌ಮೆಟಿಕ್ ಪ್ರೊಗ್ರೆಷನ್ಸ್‌, ಪಾಲಿನಾಮಿಯಲ್ಸ್‌, ಸೈಮಲ್ಟೇನಿಯಸ್‌ ಿ ಇಕ್ವೇಷನ್ಸ್, ಟ್ರಯಾಂಗಲ್ಸ್ ಎಂಬ ಪ್ರಮುಖ ವಿಷಯಗಳಿವೆ. ಈ ವಿಷಯಗಳ ಕಲಿಕೆಗೆ ಸುಲಭ ಮಟ್ಟವನ್ನು ಡಾ. ವಾಲೀಕಾರ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ‘ಸ್ಟಾರ್ಟ್ ಕೋರ್ಸ್‌’ ಎಂಬ ಗುಂಡಿಯನ್ನು ಒತ್ತಿದರೆ ಆ ವಿಷಯದ ಪುಟ ತೆರೆದುಕೊಳ್ಳಲಿದೆ.

ಉದಾಹರಣೆ ಸಮೇತ ಲೆಕ್ಕ

ಪ್ರತಿ ವಿಷಯಗಳ ಅಡಿಯಲ್ಲಿರುವ ಪಾಠಗಳನ್ನು ಅತ್ಯಂತ ವಿವರವಾಗಿ ತಿಳಿಸಿರುವ ಡಾ. ವಾಲೀಕಾರ ಅವರು ಉದಾಹರಣೆ ಸಹಿತ ಲೆಕ್ಕಗಳನ್ನು ಬಿಡಿಸಿದ್ದಾರೆ. ಕಪ್ಪು ಹಲಗೆಯ ಟೆಂಪ್ಲೆಟ್ ಬಳಸಿರುವ ಇವರು ಪಿಚರ್ ಇನ್ ಪಿಚರ್ ಮೂಲಕ ಲೆಕ್ಕ ಬಿಡಿಸುವ ದೃಶ್ಯದ ಜತೆಗೆ, ಅವರು ವಿಷಯ ಹೇಳುವ ದೃಶ್ಯವನ್ನೂ ಏಕಕಾಲಕ್ಕೆ ವೀಕ್ಷಿಸಬಹುದಾಗಿದೆ.

ಶ್ರೇಢಿಗಳು ವಿಷಯ ಕುರಿತು 17 ವಿಡಿಯೊಗಳನ್ನು ಸಿದ್ಧಪಡಿಸಿದ್ದಾರೆ. ಬಹುಪದೋಕ್ತಿ ಕುರಿತು 20 ವಿಡಿಯೊಗಳಿವೆ. ಸಮಕಾಲೀನ ಸಮೀಕರಣ ಕುರಿತು 33 ವಿಡಿಯೊ ಪಾಠಗಳು, ತ್ರಿಕೋನ ವಿಷಯ ಕುರಿತು 57 ವಿಡಿಯೊಗಳಿವೆ. ಇಲ್ಲಿ ವಿಷಯಗಳನ್ನು ಅರ್ಥ ಮಾಡಿಸುವ ಪ್ರಯತ್ನ, ಆ ಸಿದ್ಧಾಂತದ ಹಿಂದಿನ ಇತಿಹಾಸ, ಸೂತ್ರ ಕಂಡುಹಿಡಿದ ಗಣಿತ ತಜ್ಞನ ಕುರಿತು ಸಂಕ್ಷಿಪ್ತ ಮಾಹಿತಿಗಳು ಲಭ್ಯ. ಜೊತೆಗೆ ಆಯಾ ಪಾಠಕ್ಕೆ ಸಂಬಂಧಿಸಿದ ಅಭ್ಯಾಸದಲ್ಲಿರುವ ಲೆಕ್ಕಗಳನ್ನು ಬಿಡಿಸುವ ಬಗೆಯನ್ನೂ ಅತ್ಯಂತ ಸರಳವಾಗಿ ಹೇಳಿದ್ದಾರೆ.

ಶೀಘ್ರ ಪದವಿಗೂ ವಿಸ್ತರಣೆ

ತಮ್ಮ ಈ ತಾಣದ ಕುರಿತು ಮಾತನಾಡಿದ ಡಾ. ಎಚ್.ಬಿ.ವಾಲೀಕಾರ, ‘10ನೇ ತರಗತಿ ಪಾಠದ ಮೂಲಕ ತಾಣವನ್ನು ಆರಂಭಿಸಲಾಗಿದೆ. ಇದನ್ನು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಶೀಘ್ರದಲ್ಲಿ ವಿಸ್ತರಿಸಲಾಗುವುದು. ಜೊತೆಗೆ ವಿದ್ಯಾರ್ಥಿಗಳ ಪ್ರಶ್ನೋತ್ತರಗಳಿಗೆ ನೇರವಾಗಿ ಉತ್ತರಿಸಲು ಪ್ರತಿ ಶನಿವಾರವನ್ನು ಮೀಸಲಿಡಲಾಗುವುದು. ಆನ್‌ಲೈನ್ ಮೂಲಕ ನೇರವಾಗಿ ತರಗತಿ ತೆಗೆದುಕೊಳ್ಳಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಹೊಂದಿಸಿಕೊಳ್ಳಲಾಗುತ್ತಿದೆ. ಗಣಿತವೇ ನನ್ನ ಉಸಿರಾಗಿದ್ದು, ಅದನ್ನು ಜನಪ್ರಿಯಗೊಳಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ ನನ್ನ ತರಗತಿಗಳು ಸಂಪೂರ್ಣ ಉಚಿತ’ ಎಂದಿದ್ದಾರೆ.

‘ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಗಣಿತದಲ್ಲಿ ಆಸಕ್ತಿ ಹೊಂದಿರುವವರಿಗೆ ಸಂಖ್ಯೆಗಳ ಇತಿಹಾಸ, ಜ್ಯಾಮಿತಿ ಹಾಗೂ ಬೀಜಗಣಿತ ಕುರಿತು ಮಾಹಿತಿ ನೀಡುವ ವಿಡಿಯೊಗಳನ್ನು ಸದ್ಯದಲ್ಲೇ ಅಪ್‌ಲೋಡ್ ಮಾಡಲಾಗುವುದು. ಡಾ. ಡಿ.ಸಿ.ಪಾವಟೆ ಅವರ ಕ್ಯಾಲ್ಕುಲಸ್ ಪಠ್ಯವನ್ನು ಸುಲಭವಾಗಿ ಎಲ್ಲರಿಗೂ ತಿಳಿಸುವ ವಿಡಿಯೊಗಳನ್ನೂ ನೀಡುವ ಉದ್ದೇಶವಿದೆ’ ಎಂಬುದು ಅವರ ಮಾತು.

ವಿದ್ಯಾರ್ಥಿಗಳು ಪ್ರಶ್ನೆಗಳನ್ನು walikarhb18@gmail.comಗೆ ಕಳಿಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು