ಸೋಮವಾರ, ಡಿಸೆಂಬರ್ 16, 2019
23 °C

ಸ್ಟೇಜ್ ಫಿಯರ್‌? ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ!

ಭಾರ್ಗವಿ ಕೆ.ಆರ್. Updated:

ಅಕ್ಷರ ಗಾತ್ರ : | |

ಶೈಕ್ಷಣಿಕ ದಿನಗಳಲ್ಲಿ ವೇದಿಕೆ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನೊಳಗಿನ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಹಾಗೂ ಇತರರಿಗೆ ಪರಿಚಯಿಸಲು ಸಿಗುವ ಉತ್ತಮ ಅವಕಾಶ. ಭಾಷಣ ಮಾಡುವುದು, ಹಾಡು ಹೇಳುವುದು, ನೃತ್ಯ ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ಕ್ಷೇತ್ರದ ಬಗ್ಗೆ ಆಸಕ್ತಿ ಇರುತ್ತದೆ. ಯಾರು ತಮಗೆ ಸಿಗುವ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೊ ಅವರಿಗೆ ತಾವಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದರೆ, ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಕಾಡುವ ಅತಿ ದೊಡ್ಡ ಸಮಸ್ಯೆ ಎಂದರೆ ಸ್ಟೇಜ್ ಭಯ.

ವೇದಿಕೆ ಮೇಲೆ ಹೋಗುತ್ತಿದ್ದಂತೆ ಮುಂದೆ ಕುಳಿತಿರುವ ಸಭೆಯನ್ನು ನೋಡಿ ಭಯಪಡುತ್ತಾರೆ. ಎಷ್ಟೇ ಪೂರ್ವ ತಯಾರಿ ನಡೆಸಿದ್ದರೂ ಕೂಡ ಜನರನ್ನು ನೋಡಿ ತಡವರಿಸುತ್ತಾರೆ. ಹೆದರಿ ನಡುಕದಿಂದ ಬೆವತು ಹೋಗುತ್ತಾರೆ. ಯಾವ ಕಲೆಯನ್ನು ಪ್ರದರ್ಶಿಸಲು ವೇದಿಕೆ ಹತ್ತಿದ್ದೇನೆ ಎಂಬುದನ್ನೇ ಮರೆತುಹೋಗುತ್ತಾರೆ. ಕಷ್ಟಪಟ್ಟು ತಯಾರಿ ನಡೆಸಿದ್ದೆಲ್ಲವೂ ವ್ಯರ್ಥವಾಗಿ ಎಲ್ಲರ ಮುಂದೆ ತಲೆ ಎತ್ತಲು ನಾಚಿಕೆ ಪಡುತ್ತಾರೆ. ಈ ರೀತಿ ಒಂದು ಗುಂಪಿನ ಮುಂದೆ ನಿಂತು ಮಾತನಾಡಲು ಹಾಗೂ ಪ್ರದರ್ಶನ ಕೊಡಲು ಭಯಪಡುವವರು ಹಾಗೂ ಗುಂಪು ನೋಡಿ ಹೆದರುವವರು ಸೋಷಿಯಲ್ ಫೋಬಿಯಾ (ಸಾಮಾಜಿಕ ಭಯ)ದಿಂದ ಬಳಲುವ ಸಾಧ್ಯತೆ ಇರುತ್ತದೆ. ವೇದಿಕೆಗೆ ಹೋಗುತ್ತಿದ್ದಂತೆ ಆತ್ಮವಿಶ್ವಾಸ ಹಾಗು ಆತ್ಮಗೌರವವನ್ನು ಕಳೆದುಕೊಳ್ಳುತ್ತಾರೆ. ಪ್ರೇಕ್ಷಕರ ಮುಂದೆ ಹೋಗಬೇಕಾದ ಸಂದರ್ಭದಲ್ಲಿ ಒಂದು ರೀತಿಯ ಆತಂಕ ಎದುರಾಗುತ್ತದೆ. ಕ್ರಮೇಣ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು, ಸ್ನೇಹಿತರು, ಬಂಧು-ಬಳಗ ಯಾರೇ ಇರಲಿ ಅವರೊಂದಿಗೆ ನಿಂತು ಧೈರ್ಯವಾಗಿ ಮಾತನಾಡಲು ಕೂಡ ಮುಜಗರ ಪಡುತ್ತಾರೆ.

ಸ್ಟೇಜ್ ಭಯದಿಂದ ಹೊರಬರುವುದು ಹೇಗೆ?

ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳು ತಮ್ಮಲ್ಲಿರುವ ಈ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ಕಲಿಯುವ ಹಂತದಲ್ಲಿ ಪ್ರಯತ್ನಗಳು ವಿಫಲವಾಗುವುದು ಸಹಜ. ‘ನನಗೆ ಸ್ಟೇಜ್ ಫಿಯರ್ ಇದೆ, ಇನ್ನು ಮುಂದೆ ನಾನು ಯಾವುದರಲ್ಲೂ ಭಾಗವಹಿಸಲು ಸಾಧ್ಯವಿಲ್ಲ’ ಎಂಬ ಭಾವನೆಯನ್ನು ಬೇರೂರಲು ಬಿಡಬಾರದು. ವೇದಿಕೆ ಬಳಸುವ ಯಾವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು.

ನಕಾರಾತ್ಮಕ ಯೋಚನೆಯಿಂದ ಹೊರಬನ್ನಿ

ಅಯ್ಯೋ ನಾಳೆ ಅಷ್ಟೊಂದು ಜನರ ಮುಂದೆ ಭಾಷಣ ಮಾಡಬೇಕು, ಏನು ಮಾಡ್ಲಿ, ಹೇಗೆ ಮಾಡ್ಲಿ, ಯಾರಾದರೂ ಏನಾದ್ರೂ ಹೇಳಿದರೆ ಎಂಬಿತ್ಯಾದಿ ಆಲೋಚನೆಗಳಿಂದ ಹೊರಬನ್ನಿ. ನಮ್ಮ ಮೇಲೆ ನಾವು ಯಾವತ್ತೂ ಭರವಸೆ ಕಳೆದುಕೊಳ್ಳಬಾರದು. ನೆಗೆಟಿವ್ ಯೋಚನೆಗಳು ನಮ್ಮನ್ನು ಇನ್ನಷ್ಟು ಕುಗ್ಗುವಂತೆ ಮಾಡುತ್ತದೆ.

ಮನೆಯ ಸದಸ್ಯರ ಮುಂದೆ ಅಭ್ಯಾಸ

ಹೆತ್ತವರಿಗೆ ತಮ್ಮ ಮಕ್ಕಳು ಎಲ್ಲದರಲ್ಲೂ ಮುಂದಿರಬೇಕು ಎಂದಿರುತ್ತದೆ. ಹೀಗಾಗಿ ಪೋಷಕರನ್ನೇ ‍ಪ್ರೇಕ್ಷಕರನ್ನಾಗಿಸಿ ನಿಮ್ಮ ಮುಂದೆ ಕುಳ್ಳಿರಿಸಿಕೊಳ್ಳಿ. ಆಗ ಅವರು ಏನೇ ತಪ್ಪುಗಳಿದ್ದರೂ ತಿದ್ದಿ ಹೇಳುತ್ತಾರೆ, ಧೈರ್ಯ ತುಂಬುತ್ತಾರೆ. ನಿಮ್ಮ ಪ್ರತಿಭೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅಲ್ಲಿರುವುದು ಕೇವಲ ನಾಲ್ಕೇ ಜನ ಆದ್ರೂ ಅವರನ್ನು ಹೇಗೆ ಎದುರಿಸುವುದು ಎಂಬುದು ತಿಳಿಯುತ್ತದೆ. ವೇದಿಕೆ ಮೇಲೆ ಭಯವಿಲ್ಲದೆ ಪ್ರದರ್ಶನ ನೀಡುತ್ತೇನೆ ಎಂಬ ಭರವಸೆ ಮೂಡುತ್ತದೆ.

ಸಕ್ರಿಯವಾಗಿರಬೇಕು

ಶಿಕ್ಷಕರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಆತ್ಮೀಯವಾದ ಸಂಬಂಧ ಬೆಳೆಸಿಕೊಳ್ಳಿ. ಅವರೊಂದಿಗೆ ಬೇರೆ ಬೇರೆ ವಿಷಯಗಳ ಕುರಿತು ಚರ್ಚೆ ಮಾಡಿ. ಈ ರೀತಿಯ ಅವರೊಂದಿಗಿನ ಸಂವಹನ ನಾಳೆ ನೀವು ವೇದಿಕೆಯ ಮೇಲೆ ನಿಂತು ಅವರನ್ನು ನೋಡುವಾಗ ಭಯ ಉಂಟುಮಾಡುವ ವಾತಾವರಣದಿಂದ ಹೊರಬರಲು ಸಹಾಯ ಮಾಡುತ್ತದೆ. ಇದು ಕಳೆದು ಹೋದ ಆತ್ಮವಿಶ್ವಾಸವನ್ನು ಮರುಕಳಿಸುವಂತೆ ಮಾಡುತ್ತದೆ.

ಶಿಕ್ಷಕರಿಗೆ ಕಿವಿಮಾತು

ಯಾವ ಮಕ್ಕಳು ಹೇಗೆ ಎಂಬುದು ನಿಮಗಲ್ಲದೆ ಇನ್ಯಾರಿಗೆ ತಿಳಿದಿರುತ್ತದೆ. ಹೀಗಿರುವಾಗ ವೇದಿಕೆ ಎಂದರೆ ಆತಂಕ ಪಡುವ ಮಕ್ಕಳನ್ನು ಗುರುತಿಸಿ ಅವರಿಗಾಗಿ ವಿಶೇಷ ಅವಕಾಶ ಕೊಡಬೇಕು. ದೊಡ್ಡ ವೇದಿಕೆಯ ಮುಂದೆ ಅವರನ್ನು ಪರಿಚಯಿಸುವುದಕ್ಕಿಂತ ಮುಂಚೆ ಕೊಠಡಿಯಲ್ಲೇ ಅವರಿಗಾಗಿ ಒಂದು ಸಣ್ಣ ವೇದಿಕೆಯನ್ನು ಮಾಡಿ, ಅಲ್ಲೇ ದಿನಕ್ಕೊಂದು 5–10 ನಿಮಿಷ ಏನಾದರೂ ವಿಷಯದ ಕುರಿತು ಮಾತನಾಡಲು ಹೇಳಿ. ಇದರಿಂದ ಗುಂಪನ್ನು ಹೇಗೆ ಎದುರಿಸಬೇಕು, ದೃಷ್ಟಿಯಿಟ್ಟು ಹೇಗೆ ಮಾತನಾಡಬೇಕು, ಒಂದು ವಿಷಯದ ಬಗ್ಗೆ ಮಾತನಾಡಲು ಅದಕ್ಕೆ ಏನೇನು ಪೂರ್ವತಯಾರಿ ಬೇಕು ಎಲ್ಲವೂ ತಿಳಿಯುತ್ತದೆ.

ಏಕಾಗ್ರತೆ

ಯಾವ ವಿಚಾರವನ್ನು ಪ್ರಸ್ತುತಪಡಿಸಬೇಕೆಂದು ತಯಾರಿ ನಡೆಸಿದ್ದೀರಿ ಎಂಬುದರ ಮೇಲೆ ನಿಮ್ಮ ಏಕಾಗ್ರತೆಯನ್ನು ಕೇಂದ್ರೀಕರಿಸಿ. ಅದರ ಆಳಕ್ಕೆ ಇಳಿದಾಗ ಮಾತ್ರ ಅದರಲ್ಲಿ ಇಷ್ಟ ಆಗುವ ಎಷ್ಟೋ ಅಂಶಗಳು ತಿಳಿಯುವುದು. ಆಗ ಮಾತ್ರ ಪ್ರೇಕ್ಷಕರಿಗೆ ಅದರ ಕುರಿತು ಸಂಪೂರ್ಣ ಮಾಹಿತಿ ನೀಡಲು ಸಾಧ್ಯ. ಒಂದು ಸಲ ಪ್ರೇಕ್ಷಕರ ಗಮನ ನಿಮ್ಮತ್ತ ಸೆಳೆದರೆ ಸಾಕು, ಮತ್ತೆ ತದೇಕಚಿತ್ತದಿಂದ ಅವರ ಕಣ್ಣುಗಳು ನಿಮ್ಮೊಳಗೇ ಬೆರೆತಿರುತ್ತವೆ. ವೇದಿಕೆಗೆ ಹೋಗುತ್ತಿದ್ದಂತೆ ಅಲ್ಲಿರುವ ಜನರೆಲ್ಲ ನಿಮ್ಮ ವಶವಾಗುವಂತೆ ಮಾಡಿಕೊಳ್ಳಬೇಕು.

ವೇದಿಕೆಯ ಬಳಕೆ

ವೇದಿಕೆಯಲ್ಲಿ ಎಲ್ಲಿ, ಹೇಗೆ ನಿಲ್ಲಬೇಕು ಎಂಬುದನ್ನು ತಿಳಿದುಕೊಳ್ಳಿ. ಹೋದ ಕೂಡಲೇ ಅವಸರ ಬೇಡ. ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳಿ. ಎಲ್ಲರನ್ನೂ ನೋಡಿ ಆರಾಮಾಗಿ ನಿಂತಿದ್ದೀರ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತಪ್ಪುಗಳನ್ನು ತೋರಿಸಿಕೊಳ್ಳಬೇಡಿ

ಭಾಷಣ ಮಾಡುವಾಗ ಕೆಲವು ಅಂಶಗಳು ಮರೆತು ಹೋದವು ಅಥವಾ ವಾಕ್ಯಗಳ ಸಾಲು ತಪ್ಪಿದರೆ, ನೃತ್ಯ ಮಾಡುವಾಗ ಹೆಜ್ಜೆ ಹಾಕಲು ಗೊಂದಲ ಆಯ್ತು.. ಅಂತ ಅದನ್ನು ಜನರ ಮುಂದೆ ತೋರಿಸಿಕೊಳ್ಳಬೇಡಿ. ಧೈರ್ಯದಿಂದ ಯಾರ ಗಮನಕ್ಕೂ ಬಾರದಂತೆ ಮುಂದುವರಿಸಿಕೊಂಡು ಹೋಗಿ. ನಿಮ್ಮ ತಪ್ಪುಗಳು ಅವರ ಗಮನಕ್ಕೆ ಬಂದರೆ ಅವರೂ ಕೂಡ ‘ಅಯ್ಯೋ ಮುಂದೆ ಹೇಗೆ ಮಾಡುತ್ತಾರೊ’ ಎಂಬ ಚಿಂತೆಯಿಂದ ನೋಡುತ್ತಾರೆ.

ಒಂದು ಸಲ ವೇದಿಕೆಯನ್ನು ಎದುರಿಸುವ ಹಿಡಿತ ಸಿಕ್ಕಿತೆಂದರೆ ವಿದ್ಯಾರ್ಥಿ ಜೀವನವನ್ನು ಮತ್ತಷ್ಟು ಸುಂದರ ಹಾಗೂ ಸ್ಮರಣೀಯ ಆಗಿಸಬಹುದು. ಯಾವ ಸ್ಪರ್ಧೆಗಳಿಗೂ ಹೆದರಬೇಕಿಲ್ಲ. ಎಲ್ಲದರಲ್ಲೂ ಅಂಜಿಕೆಯಿಲ್ಲದೆ ಪಾಲ್ಗೊಳ್ಳಬಹುದು. ಅಕಾಡೆಮಿಕ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಖುಷಿಯಿಂದ ಅನುಭವಿಸಬಹುದು. ಅಷ್ಟೇ ಅಲ್ಲ ಅದು ಮುಂದಿನ ನಿಮ್ಮ ವೃತ್ತಿ ಜೀವನಕ್ಕೂ ತುಂಬಾ ಸಹಕಾರಿಯಾಗುತ್ತದೆ. 

ಕನ್ನಡಿ ಮುಂದೆ ನಿಂತು ಕಲಿಕೆ

ಭಾಷಣ, ಹಾಡು, ನೃತ್ಯ ಏನೇ ಇರಲಿ, ವೇದಿಕೆಯಲ್ಲಿ ಯಾವ ಕಲೆ ಪ್ರದರ್ಶಿಸಬೇಕೆಂದು ಅಂದುಕೊಂಡಿದ್ದೀರೊ ಅದನ್ನು ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ಮಾಡಿ. ನಿಮ್ಮ ಹಾವಭಾವ, ನಿಮ್ಮ ಆತ್ಮವಿಶ್ವಾಸ ಎಲ್ಲವೂ ಇಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಲು ಸಾಧ್ಯ. ವೇದಿಕೆ ಮೇಲೆ ನಿಂತಾಗ ನಾವು ಹೇಗೆ ಕಾಣುತ್ತೇವೆ ಎಂದು ತಿಳಿಯುತ್ತದೆ. ಏನಾದರೂ ಕುಂದು–ಕೊರತೆ ಇದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು. ಯಾವುದೇ ಕಲೆಯನ್ನು ವೇದಿಕೆಯಲ್ಲಿ ಹೇಗೆ ಪ್ರಸ್ತುತ ಪಡಿಸುತ್ತೀರಿ ಎಂಬುದು ತಿಳಿಯುತ್ತದೆ ಹಾಗೂ ಅದನ್ನು ಸುಧಾರಿಸಿಕೊಳ್ಳಬಹುದು. ವೇದಿಕೆಯ ಮೇಲೆ ಹೋಗುವಾಗ ಮುಖದಲ್ಲಿ ನಗು ಹಾಗೂ ನೋಟ ಬಹಳ ಮುಖ್ಯ, ಕನ್ನಡಿಯ ಮುಂದೆ ನಿಂತಾಗ ಮಾತ್ರ ಅದನ್ನು ಕಲಿಯಲು ಸಾಧ್ಯ.

ಪ್ರತಿಕ್ರಿಯಿಸಿ (+)