5

ಟೀಕಿಸುವುದನ್ನು ನಿಲ್ಲಿಸಿ...

Published:
Updated:

ರಜೆ ಮುಗಿಸಿಕೊಂಡು ಮರಳಿ ಶಾಲೆಗೆ ಬಂದ ಮಕ್ಕಳಿಗೆ ‘ನಿಮ್ಮ ಮನೆಯಲ್ಲಿ ನೀವು ಎದುರಿಸುವ ಸಾಮಾನ್ಯ ಸಮಸ್ಯೆ ಏನು?’ ಎಂಬ ಪ್ರಶ್ನೆಯನ್ನು ಕೇಳಿದೆ. ಬಹುತೇಕ ಮಕ್ಕಳ ಉತ್ತರ ಹೀಗಿತ್ತು; ‘ಹೆತ್ತವರು ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ. ಪದೇ ಪದೇ ಬಯ್ಯುತ್ತಾರೆ, ಹಂಗಿಸುತ್ತಾರೆ’. ಇದನ್ನು ಕೇಳಿ ಬೆಚ್ಚಿಬೀಳುವಂತಾಯ್ತು, ಈ ಬಗ್ಗೆ ಯೋಚಿಸುವಂತಾಯ್ತು. ಹಾಗಾದರೆ ನಮ್ಮ ಪಾಲಕರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆಯೇ? ಅಥವಾ ಮಕ್ಕಳ ಮೇಲಿನ ಅತಿಯಾದ ನಿರೀಕ್ಷೆಗಳಿಂದ ಹೀಗೆಲ್ಲಾ ಆಗುತ್ತಿದೆಯಾ?

ಟೀಕೆಯಿಂದಾಗುವ ಪರಿಣಾಮಗಳು: ಟೀಕೆಗಳು ಸಂಬಂಧಗಳ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳನ್ನು ಟೀಕಿಸಿದಾಗ ಅವರು ಹೆತ್ತವರ ಪ್ರೀತಿಯನ್ನೇ ಪ್ರಶ್ನಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಮಕ್ಕಳಾಗಿದ್ದಾಗ ಪಾಲಕರ ಪ್ರೀತಿಯನ್ನು ಕಳೆದುಕೊಂಡು ವಯಸ್ಕರಾದಾಗ ಬೇರೆಡೆ ಪ್ರೀತಿಯನ್ನು ಹುಡುಕುತ್ತಾ ಕೆಲವು ಮಾನಸಿಕ ದೌರ್ಬಲ್ಯಗಳಿಗೂ ತುತ್ತಾಗಬಹುದು.

ಟೀಕೆಯಿಂದ ಮಕ್ಕಳಲ್ಲಿ ನಾಚಿಕೆ ಸ್ವಭಾವ ಬೆಳೆಯುತ್ತದೆ. ಪದೇ ಪದೇ ಟೀಕೆಗೆ ಒಳಗಾಗುವುದರಿಂದ ತಾನು ಮಾಡುವ ಕೆಲಸದಲ್ಲಿ ಏನೋ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಅವಮಾನದ ಭೀತಿಯಿಂದ ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯಬಹುದು.

ಸೋಮಾರಿ, ಮೂಗ, ಸ್ಟುಪಿಡ್, ಯೂಸ್‍ಲೆಸ್ – ಈ ರೀತಿ ನಕಾರಾತ್ಮಕ ಪದಗಳನ್ನು ಪಾಲಕರು ಪದೇ ಪದೇ ಬಳಸುವುದರಿಂದ ಮಗುವಿನ ಮನಸ್ಸಿನ ಮೇಲೆ ಭಾವನಾತ್ಮಕ ಗಾಯಗಳಾಗುತ್ತವೆ; ಅವು ಸಂವೇದನಾಶೀಲತೆಯನ್ನು ಹಾಳು ಮಾಡುತ್ತವೆ. ಕಠಿಣವಾದ ಟೀಕೆಯು ಮಗುವಿನ ಸಾಮರ್ಥ್ಯವನ್ನೂ ಆತ್ಮವಿಶ್ವಾಸವನ್ನೂ ಆತ್ಮಾಭಿಮಾನವನ್ನೂ ಅಲುಗಾಡಿಸುತ್ತದೆ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗುತ್ತಾರೆ; ಹೀಗಾಗಿ ಅವರು ಮಾಡುವ ಕೆಲಸಗಳಲ್ಲಿ ಕಳಪೆ ಗುಣಮಟ್ಟವನ್ನು ಪ್ರದರ್ಶಿಸುತ್ತಾರೆ. ಟೀಕೆಯು ಮಗುವನ್ನು ಕುಬ್ಜಗೊಳಿಸುತ್ತದೆ; ಅವನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಟೀಕೆ ಮಾಡದಿರಿ; ಮಾರ್ಗದರ್ಶನ ಮಾಡುತ್ತಿರಿ: ಮಕ್ಕಳ ಭವಿಷ್ಯನಿರ್ಮಾಣದಲ್ಲಿ ಪೋಷಕರ ಪಾತ್ರ ನಿರ್ಣಾಯಕವಾದದ್ದು. ನಮ್ಮ ಟೀಕೆ ಅಥವಾ ನಡೆವಳಿಕೆಗಳು ಹೆಚ್ಚಾಗಿ ಮಕ್ಕಳ ಜೀವನವನ್ನು ಪ್ರಭಾವಿಸುತ್ತವೆ. ಹಾಗಾಗಿ ಟೀಕೆಯು ಕೇವಲ ಮಗುವಿನ ಮನಸ್ಸನ್ನು ನೋಯಿಸುವ ಸಂಗತಿಯಾಗಬಾರದು. ಟೀಕೆಯು ರಚನಾತ್ಮಕವಾಗಿರಬೇಕು. ಅವರ ತಪ್ಪನ್ನು ತಿದ್ದಿಕೊಳ್ಳಲು ವಿಶ್ವಾಸವನ್ನು ತುಂಬುವಂತಿರಬೇಕು. ಅವು ತಮ್ಮ ಕಲಿಕೆಯ ಭಾಗ ಎಂದು ಒಪ್ಪುವಂತೆ ಪಾಲಕರ ಟೀಕೆಗಳು ಸಕಾರಾತ್ಮಕವಾಗಿರಬೇಕು.

ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅಥವಾ ಅಪಾಯಕಾರಿ ಕೆಲಸಗಳನ್ನು ಮಾಡಿದಾಗ ನೇರವಾಗಿ ಅವರನ್ನು ಟೀಕಿಸುತ್ತೇವೆ, ಅಪಹಾಸ್ಯ ಮಾಡುತ್ತೇವೆ ಅಥವಾ ಏರುಧ್ವನಿಯಲ್ಲಿ ಮಗುವನ್ನು ಗದರಿಸುತ್ತೇವೆ. ಅದರ ಬದಲಾಗಿ ಪ್ರೀತಿಯ ಮಾತುಗಳನ್ನೇ ಬಳಸಿ, ಆ ತಪ್ಪಿನಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಡಬೇಕು. ಮಾರ್ಗದರ್ಶನದ ಮೂಲಕ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ಉದಾಹರಣೆಗೆ ಮಗು ಟಿ.ವಿ. ರಿಮೋಟನ್ನು ಬೀಳಿಸಿದ ಕೂಡಲೇ ಬಾಯಿಗೆ ಬಂದಂತೆ ಬಯ್ಯುತ್ತೇವೆ. ಬದಲಾಗಿ ಅದನ್ನು ಬೀಳಿಸಿದರೆ ಆಗುವ ತೊಂದರೆಗಳನ್ನು ತಿಳಿಸಿ ಇನ್ನೊಮ್ಮೆ ಬೀಳಿಸದಂತೆ ಮಾರ್ಗದರ್ಶನ ನೀಡುವುದು ಅಗತ್ಯ. ಸ್ನೇಹಭಾವದ ರೀತಿಯಲ್ಲಿ ಮಗುವಿಗೆ ಮಾರ್ಗದರ್ಶನ ನೀಡಬೇಕು.

ಮಕ್ಕಳನ್ನು ಟೀಕಿಸುವುದು ಸುಲಭ. ಆದರೆ ಮಾರ್ಗದರ್ಶನ ಮಾಡುವುದು ತುಂಬ ಕಠಿಣ. ಮಾರ್ಗದರ್ಶನ ಒಂದು ರೀತಿಯ ತಪಸ್ಸು ಇದ್ದಂತೆ. ಪಾಲಕರು ಕೂಡ ತಮ್ಮ ನಡೆವಳಿಕೆಗಳನ್ನು ಆಗಾಗ ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕು.

ಮಕ್ಕಳ ತಪ್ಪುಗಳು ಪುನರಾವರ್ತನೆಯಾದರೆ ಪಾಲಕರು ಅದಕ್ಕೆ ಕಾರಣಗಳನ್ನು ಹುಡುಬೇಕು. ಮಗು ಉದ್ದೇಶಪೂರ್ವಕವಾಗಿಯೇ ಆ ತಪ್ಪು ಮಾಡುತ್ತಿದೆಯೋ ಅಥವಾ ತಿಳಿಯದೇ ತಪ್ಪು ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕು. ಮಗುವಿನ ಮನಃಸ್ಥಿತಿ ಮತ್ತು ವಯಸ್ಸಿಗೆ ಪೂರಕವಾದ ಮಾತುಗಳಿಂದ ಮಗುವನ್ನು ತಿದ್ದುವ ಪ್ರಯತ್ನವನ್ನು ಪಾಲಕರು ಮಾಡಬೇಕು.

ಕಲಿಕೆಯ ವಿಷಯಗಳಲ್ಲಿಯೂ ಮಕ್ಕಳು ಹಿಂದೆ ಬೀಳುವುದು ಸಹಜ. ಇತರ ಮಕ್ಕಳೊಡನೆ ಅವರನ್ನು ಹೋಲಿಸಿ ಹೀಯಾಳಿಸದೇ, ಮಗುವಿಗೆ ತಲೆದೋರಿರುವ ಸಮಸ್ಯೆಗಳನ್ನು ಗುರುತಿಸಿಕೊಳ್ಳಬೇಕು. ಉದಾಹರಣೆಗೆ, ಎಲ್ಲ ವಿಷಯಗಳಲ್ಲಿ ಮುಂದೆ ಇರುವ ಮಗು ಗಣಿತದಲ್ಲಿ ಮಾತ್ರ ಹಿಂದಿದೆ ಎಂದಿಟ್ಟುಕೊಳ್ಳಿ. ಆಗ ಮಗುವನ್ನು ನೇರವಾಗಿ ದೂಷಿಸದೇ ಪ್ರೀತಿಯ ಮಾತುಗಳಿಂದ ‘ನೀನು ಎಲ್ಲಾ ವಿಷಯಗಳಲ್ಲಿ ಚೆನ್ನಾಗಿದ್ದೀಯ. ಆದರೆ ಗಣಿತದಲ್ಲಿ ಮಾತ್ರ ಒಂಚೂರು ಹಿಂದೆ ಇರುವೆ. ಪರವಾಗಿಲ್ಲ, ಚಿಂತೆ ಮಾಡ್ಬೇಡ, ಚೆನ್ನಾಗಿ ಅಭ್ಯಾಸ ಮಾಡು. ಕಠಿಣ ಸಮಸ್ಯೆಗಳನ್ನು ಗುರುಗಳ ಬಳಿ ಕೇಳಿ ತಿಳಿದುಕೋ. ಮುಂದಿನ ಪರೀಕ್ಷೆಯಲ್ಲಿ ಖಂಡಿತವಾಗಿ ಉತ್ತಮ ಫಲಿತಾಂಶ ಸಾಧಿಸುವೆ ಎಂಬ ಭರವಸೆ ನನಗಿದೆ’ ಎಂದು ನಲ್ನುಡಿಯಿಂದ ಮಗುವಿನ ತಲೆ ನೇವರಿಸಿ ಹೇಳಿ ನೋಡಿ. ಖಂಡಿತವಾಗಿ ಮಗುವಿನ ಕಲಿಕೆಯಲ್ಲಿ ಸುಧಾರಣೆಯನ್ನು ಕಾಣುವಿರಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !