ಸೋಮವಾರ, ಸೆಪ್ಟೆಂಬರ್ 16, 2019
27 °C
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಸ್ಟ್ರಕ್ಚರಲ್ ಎಂಜಿನಿಯರಿಂಗ್ ಉದ್ಯೋಗಾವಕಾಶಗಳೇನು?

Published:
Updated:
Prajavani

ನಾನು ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಮುಂದೆ ಎಂ.ಟೆಕ್ ಮಾಡಬೇಕೆಂದಿದೆ. ಅದರಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ. ಅದರಲ್ಲಿ ಮುಂದಿನ ಉದ್ಯೋಗಾವಕಾಶಗಳು ಹೇಗಿವೆ? 

ರಾಕೇಶ್ ಕೆ. ಎಂ., ಊರು ಬೇಡ

ರಾಕೇಶ್, ಬಹಳಷ್ಟು ಉದ್ಯೋಗಾವಕಾಶಗಳು ಇರುವ ಡಿಗ್ರಿಯನ್ನು ಓದಿಯು ಕೂಡ ಉದ್ಯೋಗಾವಕಾಶ ಪಡೆಯದವರು ಇದ್ದಾರೆ. ಬಹಳ ವಿರಳವಾದ ಕ್ಷೇತ್ರದ ಡಿಗ್ರಿಯನ್ನು ಮಾಡಿಯೂ ಉದ್ಯೋಗ ಪಡೆದುಕೊಂಡವರು ಇದ್ದಾರೆ. ಹಾಗಾಗಿ ಆ ಬಗ್ಗೆ ಹೆಚ್ಚು ಆಲೋಚಿಸಬೇಡಿ. ಉದ್ಯೋಗಾವಕಾಶಗಳು ಎಲ್ಲ ಕ್ಷೇತ್ರದಲ್ಲಿ ಇರುತ್ತವೆ ಮತ್ತು ಕೆಲವೊಮ್ಮೆ ಇರುವ ಅವಕಾಶವನ್ನು ಪಡೆಯಲು ಸ್ವಲ್ಪ ಪ್ರಯಾಸವು ಪಡಬೇಕಾಗುತ್ತದೆ. ನಿಮ್ಮ ಆಸಕ್ತಿ ಯಾವುದು ಎಂದು ಪರಿಗಣಿಸಿ ಆ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆಯಿರಿ. ಎಂ.ಟೆಕ್. ಮಾಡಲು ಉತ್ತಮ ಕಲಿಕಾ ವಾತಾವರಣ ಮತ್ತು ಹೆಸರಿರುವ ಸಂಸ್ಥೆಯನ್ನು ಆರಿಸಿ. ಆ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಪ್ರಕ್ರಿಯೆ, ಗೇಟ್ ಪರೀಕ್ಷೆ ಮತ್ತು ಅರ್ಹತೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಯಾರಿ ಮಾಡಿಕೊಳ್ಳಿ. ಭಾರತದಲ್ಲಿ ಮಾಡುವಿರಾದರೆ ಐ.ಐ.ಟಿ., ಎನ್.ಐ.ಟಿ. ಅಥವಾ ಬೇರೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾಡಲು ಪ್ರಯತ್ನಿಸಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಪಡೆಯಲು ಬೇಕಾದ ಜ್ಞಾನ ಮತ್ತು ಕೌಶಲವನ್ನು ಗಿಟ್ಟಿಸಿಕೊಳ್ಳಿ. ಎಂ.ಟೆಕ್. ಓದುವಾಗ ನಿಮ್ಮ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆ ಇತ್ಯಾದಿಗಳನ್ನು ಓದಿಕೊಂಡು ಆಸಕ್ತಿಕರವಾದ ಪ್ರಾಜೆಕ್ಟ್‌ಗಳನ್ನು ಅಧ್ಯಯನ ಮಾಡಿ. ನಿಮ್ಮ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಅದರ ಜೊತೆ ಉತ್ತಮ ಸಂಸ್ಥೆಗಳಲ್ಲಿ ಹುದ್ದೆ ಪಡೆಯಲು ಬೇಕಾದ ಸಂವಹನ ಕೌಶಲ, ಪ್ರಸ್ತುತಿ ಕೌಶಲ (ಪ್ರಸೆಂಟೇಷನ್ ಕೌಶಲ), ರಿಪೋರ್ಟಿಂಗ್, ಆತ್ಮವಿಶ್ವಾಸ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಿ.

ಸ್ಟ್ರಕ್ಚರಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಿಸೈನರ್, ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್, ಕನ್ಸ್‌ಲ್ಟೆಂಟ್, ಗುಣಮಟ್ಟ ಪರೀಕ್ಷಕರಾಗಿ, ಸಂಶೋಧಕರಾಗಿ ಕೆಲಸ ನಿರ್ವಹಿಸಬಹುದು. ಪ್ರತಿಷ್ಠಿತ ಕಂಪನಿಗಳಾದ ಎಲ್ಎಂಡ್‌ಟಿ, ಜಿಂದಾಲ್ ಸ್ಟೀಲ್ ವರ್ಕ್, ಗ್ಯಾಮನ್, ಟಾಟಾ, ಜಿ.ಎಮ್.ಆರ್. ಜೇಪಿ, ನಾಗಾರ್ಜುನ ಇತ್ಯಾದಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಸಂಶೋಧನೆ ಮತ್ತು ಅಧ್ಯಾಪನ ವೃತ್ತಿಗಳಲ್ಲಿ ಆಸಕ್ತಿ ಇದ್ದಲ್ಲಿ ಆ ಬಗ್ಗೆ ಮುಂದಿನ ಶಿಕ್ಷಣವಾದ ಪಿ.ಎಚ್‌ಡಿಯನ್ನು ಪಡೆದು ಸಂಶೋಧಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಬಹುದು. ಶುಭಾಶಯ.

***

ನಾನು ಬಿ.ಎಸ್‌ಸಿ. ಪದವಿ ಮುಗಿಸಿದ್ದೇನೆ. 1ನೇ ತರಗತಿಯಿಂದ 7ನೇ ತರಗತಿವರೆಗೆ ಆಂಧ್ರಪ್ರದೇಶದ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ನಂತರ 8ನೇ ತರಗತಿಯಿಂದ ಪದವಿವರೆಗೂ ಕರ್ನಾಟಕದಲ್ಲಿ ಓದಿದ್ದೇನೆ. ಇದರಿಂದ ನನಗೆ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆಯಲು ಏನಾದರೂ ತೊಂದರೆಯಾಗುತ್ತದೆಯೇ? ನನ್ನ ಎಲ್ಲಾ ದಾಖಲಾತಿಗಳು ಕರ್ನಾಟಕದಲ್ಲಿದ್ದು, ಕನ್ನಡ ಮಾಧ್ಯಮ & ಗ್ರಾಮೀಣ ವಿಭಾಗದಲ್ಲಿ ಮೀಸಲಾತಿ ಅನ್ವಯ ಆಗುತ್ತದೆಯೆ? ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.   

ಶ್ರೀರಾಮ್ ಡಿ., ಬಳ್ಳಾರಿ

ಶ್ರೀರಾಮ್, ನೀವು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಓದಿದ್ದಲ್ಲಿ ಕನ್ನಡ ಮಾಧ್ಯಮ ಮೀಸಲಾತಿ ಅನ್ವಯವಾಗುತ್ತದೆ. ಹಾಗಾಗಿ ಆಂಧ್ರ ಅಥವಾ ಕರ್ನಾಟಕದಲ್ಲಿ ಓದಿರುವುದು ಮುಖ್ಯವಾಗುವುದಿಲ್ಲ ಮತ್ತು ನೀವು ಕರ್ನಾಟಕ ಸರ್ಕಾರದ ಕನ್ನಡ ಮಾಧ್ಯಮ ಮೀಸಲಾತಿಯ ಅಡಿಯಲ್ಲಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದು ಸದ್ಯ ನಮಗೆ ತಿಳಿದಿರುವ ಮಾಹಿತಿ. ಯಾವುದಕ್ಕೂ ಒಮ್ಮೆ ನಿಮ್ಮ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿಚಾರಿಸಿಕೊಳ್ಳಿ. ಮಾತ್ರವಲ್ಲದೆ, ನೀವು ಓದಿದ ಶಾಲೆಗಳಿಂದ ಕನ್ನಡ ಮಾಧ್ಯಮ ಪ್ರಮಾಣ ಪತ್ರಕ್ಕೆ ಸಹಿ ಪಡೆದು ನಿಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೃಢೀಕರಿಸಿಕೊಳ್ಳಿ. ಆಗ ಈ ಮಾಹಿತಿಗಳು ನಿಮಗೆ ಹೆಚ್ಚು ನಿಖರವಾಗಿ ತಿಳಿಯುತ್ತವೆ. ಇನ್ನು ಗ್ರಾಮೀಣ ವಿಭಾಗಕ್ಕೆ ಬಂದರೆ, ನೀವು ಓದಿದ ಶಾಲೆಗಳು ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬಂದರೆ ಗ್ರಾಮೀಣ ಮೀಸಲಾತಿ ಅನ್ವಯವಾಗುತ್ತದೆ.
ಒಂದು ವೇಳೆ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿಗಳು ನಿಮಗೆ ಅನ್ವಯ ಆಗದಿದ್ದರೂ ಕರ್ನಾಟಕ ಸರ್ಕಾರದ ಕೆಲಸಗಳಿಗೆ ಅರ್ಜಿ ಹಾಕಲು ಯಾವುದೇ ತೊಂದರೆ ಆಗುವುದಿಲ್ಲ. ನಿಮ್ಮ ಕನ್ನಡ ಭಾಷೆಯ ಪರಿಣತಿಯನ್ನು ಪ್ರಕಟಪಡಿಸಲು ಕರ್ನಾಟಕ ಸರ್ಕಾರ ಕೈಗೊಳ್ಳುವ ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು ಮತ್ತು ನಿಮ್ಮ ಶೈಕ್ಷಣಿಕ ಅರ್ಹತೆ, ವಯಸ್ಸು ಇತ್ಯಾದಿ ಅರ್ಹತೆಯ ಆಧಾರದ ಮೇಲೆ ಸೂಕ್ತ ನೇಮಕಾತಿಗೆ ಅರ್ಜಿ ಸಲ್ಲಿಸಿ.. ಶುಭವಾಗಲಿ.

***

ನಾನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗದಲ್ಲಿ ಎಂ.ಎ(ಆರ್‌ಡಿಪಿಆರ್‌) ನಲ್ಲಿ ಸದ್ಯ 4ನೇಯ ಸೆಮಿಸ್ಟರ್ ಓದುತ್ತಿದ್ದೇನೆ. ಮುಂದೆ ಈ ಕ್ಷೇತ್ರದಲ್ಲಿ ಯಾವ ಬಗೆಯ ಉದ್ಯೋಗ ಅವಕಾಶಗಳಿವೆ ಎಂದು ತಿಳಿಸಿ.

ಮಹೇಂದ್ರ ಕುಮಾರ್ ಹಿರೇಮಠ, ರಾಯಚೂರು

ಮಹೇಂದ್ರ ಕುಮಾರ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು, ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ನೀವು ಪಡೆಯಬಹುದು. ಸರ್ಕಾರಿ ಕ್ಷೇತ್ರದಲ್ಲಿ ನಿಮ್ಮ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದ ಪರಿಣತಿ ಸಹಾಯಕ್ಕೆ ಬರುವ ಪಿ.ಡಿ.ಓ., ಕರ್ನಾಟಕ ಆಡಳಿತ ಸೇವೆ ಇತ್ಯಾದಿಗಳಲ್ಲಿ ರಾಜ್ಯ ಸರ್ಕಾರ ಕಾಲ ಕಾಲಕ್ಕೆ ಕರೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ನೇಮಕಾತಿ ಹೊಂದಿ ಸೇವೆ ಸಲ್ಲಿಸಬಹುದು. ಹಾಗೆ ಈ ಕ್ಷೇತ್ರದ ಜ್ಞಾನ ಅನ್ವಯವಾಗುವ ಕೇಂದ್ರ ಸರ್ಕಾರದ ಆಡಳಿತ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪ್ರಯತ್ನಿಸಬಹುದು. ರಾಜ್ಯ ಮತ್ತು ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ತಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರೆಯುವ ಯಂಗ್ ಪ್ರೊಫೆಶನಲ್, ಕನ್ಸ್‌ಲ್ಟೆಂಟ್ ಮತ್ತು ಇತರೆ ಅರೆಕಾಲಿಕ ಹುದ್ದೆಗಳಿಗೆ ಪ್ರಯತ್ನಿಸಬಹುದು.
ಅನೇಕ ಸರ್ಕಾರೇತರ ಸಂಘ ಸಂಸ್ಥೆಗಳು (ಎನ್.ಜಿ.ಓ) ಗ್ರಾಮೀಣ ಅಭಿವೃದ್ದಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವುಗಳಲ್ಲಿರುವ ಉದ್ಯೋಗವಕಾಶಗಳನ್ನು ಪಡೆಯಬಹುದು. ಗ್ರಾಮೀಣ ಅಭಿವೃದ್ಧಿಯ ಕ್ಷೇತ್ರದ ಬೇರೆ ಬೇರೆ ವಿಭಾಗಗಳಾದ ಗ್ರಾಮೀಣ ಆಡಳಿತ, ಗ್ರಾಮೀಣ ಸ್ವ–ಉದ್ಯೋಗ, ಮೈಕ್ರೋ ಫೈನಾನ್ಸ್, ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿ, ಗ್ರಾಮೀಣ ಆರೋಗ್ಯ, ಶಿಕ್ಷಣ, ನೀರು ಮತ್ತು ನೈರ್ಮಲ್ಯ, ವಸತಿ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಘ ಸಂಸ್ಥೆಗಳ ಜೊತೆ ಯೋಜನೆಗಳ ಅನುಷ್ಠಾನಕರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ಫೇಸಿಲಿಟೇಟರ್ ಆಗಿ, ಸಂಶೋಧಕರು ಮತ್ತು ವಿಷಯ ತಜ್ಞರಾಗಿ ಕೆಲಸ ನಿರ್ವಹಿಸಬಹುದು. ನಿಮ್ಮ ಜಿಲ್ಲೆ, ಕರ್ನಾಟಕ ಮತ್ತು ನಮ್ಮ ದೇಶದಲ್ಲಿ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದು ಆ ಸಂಸ್ಥೆಗಳಲ್ಲಿ ಇರುವ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಿ. ಮೊದಲೆರಡು ವರ್ಷ ವೇತನ, ಸ್ಥಳ ಮತ್ತು ಇತರ ವಿಚಾರಗಳ ಬಗ್ಗೆ ಆಲೋಚಿಸದೆ ಈ ಕ್ಷೇತ್ರದಲ್ಲಿ ಅನುಭವ ಪಡೆಯುವುದರ ಬಗ್ಗೆ ಹೆಚ್ಚು ಗಮನ ವಹಿಸಿ. ಮಂದೆ ಹೆಚ್ಚಿನ ಅವಕಾಶ, ವೇತನ ಎಲ್ಲವು ನಿಮ್ಮ ಅನುಭವ, ಜ್ಞಾನ ಮತ್ತು ಕೌಶಲದಂತೆ ಸಿಗುತ್ತದೆ. 

Post Comments (+)