ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿಗೆ ಆಪ್ತ ಸಲಹೆ

7
ಬೆಂಗಳೂರು ದಕ್ಷಿಣ ಬಿಇಒ ಕಚೇರಿ ವ್ಯಾಪ್ತಿಯ 20 ಸರ್ಕಾರಿ, 17 ಅನುದಾನಿತ ಪ್ರೌಢಶಾಲೆಗಳಲ್ಲಿ ಒಂದು ತಿಂಗಳು ಅಭಿಯಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿಗೆ ಆಪ್ತ ಸಲಹೆ

Published:
Updated:

‘ಎಷ್ಟೇ ಓದಿದರೂ ತಲೆಗೆ ಹೋಗುತ್ತಿಲ್ಲ. ಶಾಲಾ ಪರೀಕ್ಷೆಗಳಲ್ಲಿ ಉತ್ತಮವಾದ ಅಂಕಗಳೂ ಬಂದಿಲ್ಲ. ಇತ್ತೀಚೆಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ಉತ್ತಮ ಅಂಕಗಳಿಸುವುದು ಹೇಗೆ?’
– ಇದು ಗರುಡಾಚಾರ್‌ ಪಾಳ್ಯದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬನ ಅಳಲು.

‘ಮನಸ್ಸು ಚಂಚಲವಾಗಿದೆ. ಶಿಕ್ಷಕರು ಮಾಡಿದ ಪಾಠ, ಓದಿದ್ದು ಮರೆತು ಹೋಗುತ್ತಿದೆ. ಪರೀಕ್ಷೆ ಪಾಸಾಗುವುದು ಹೇಗೆ? 10ನೇ ತರಗತಿ ಫೇಲ್‌ ಆದರೆ ಓದು ಅಲ್ಲಿಗೆ ಮುಗಿದು ಹೋಯಿತಾ?’
– ಇದು ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿಯ ಆತಂಕ.

ಶಾಲಾ ಜೀವನದ ಮಹತ್ವದ ತಿರುವು ಎಂದು ಪರಿಗಣಿಸಲಾಗಿರುವ 10ನೇ ತರಗತಿಯ ಪರೀಕ್ಷೆ ಸಮೀಪಿಸುತ್ತಿದೆ. ಮಾರ್ಚ್‌ 21ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿವೆ. ಬಹುತೇಕ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿದ್ದಾರೆ. ಪರೀಕ್ಷಾ ಭಯ ಎನ್ನುವುದು ಚೆನ್ನಾಗಿ ಓದಿದವರನ್ನೂ ಕಾಡಬಹುದು. ಓದಿದ್ದನ್ನೂ ಮರೆಯುತ್ತಿದ್ದೇವೆ ಎಂಬ ಆತಂಕ ಅವರನ್ನಾವರಿಸುವುದು ಸಹಜ.

ಪರೀಕ್ಷಾ ಭಯ ನಿವಾರಣೆ, ಒತ್ತಡ ನಿಯಂತ್ರಣ ಮತ್ತು ನಿರ್ವಹಣೆ, ಸ್ಮರಣಾ ಶಕ್ತಿ ವೃದ್ಧಿ ಜತೆಗೆ ಸಕಾರಾತ್ಮಕ ಚಿಂತನೆಗೆ ಪ್ರೇರೇಪಿಸಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಪ್ರಯತ್ನ ಬೆಂಗಳೂರು ದಕ್ಷಿಣ ವಲಯ (04) ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ನಡೆಯುತ್ತಿದೆ. ಜನವರಿ 18ರಿಂದ ಚಾಲನೆಗೊಂಡಿರುವ ಈ ಅಭಿಯಾನ ಫೆಬ್ರುವರಿ 28ರವರೆಗೂ ನಡೆಯಲಿದೆ. ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಪರೀಕ್ಷೆಗೆ ಸಜ್ಜುಗೊಳಿಸುವ ಪ್ರಯತ್ನ ಮನೋತಜ್ಞರಿಂದ ನಡೆಯುತ್ತಿದೆ.

2017–18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ ಬ್ಲಾಕ್‌ನ 20 ಸರ್ಕಾರಿ ಪ್ರೌಢ ಶಾಲೆಗಳು ಮತ್ತು 17 ಅನುದಾನಿತ ಪ್ರೌಢಶಾಲೆಗಳನ್ನು ಗುರುತಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷಾ ಅವರು ಈ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಮತ್ತು ಪರೀಕ್ಷಾ ಒತ್ತಡ ನಿರ್ವಹಿಸುವ ಕುರಿತು ಮನೋ ತಜ್ಞರಿಂದ ಮಾರ್ಗದರ್ಶನದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಶಾಲಾವಾರು ವೇಳಾಪಟ್ಟಿ ಸಿದ್ಧಪಡಿಸಿ, ಮಕ್ಕಳ ಆಪ್ತ ಸಮಾಲೋಚನಾ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ.

‘ಮನೆಯ ವಾತಾವರಣ, ಅಲ್ಲಿನ ಆರ್ಥಿಕ, ಸಾಮಾಜಿಕ ಪರಿಸರ, ಪೋಷಕರ ಆರೋಗ್ಯ ಸಮಸ್ಯೆಗಳು ಕೆಲ ಬಾರಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಸ್ನೇಹಿತರೊಂದಿಗಿನ ಹೋಲಿಕೆಗಳೂ ಕೆಲವರನ್ನು ಖಿನ್ನತೆಗೆ ನೂಕುತ್ತವೆ. ದುಃಖ, ಕೋಪ, ಭಯ, ಮತ್ಸರ, ಕೀಳರಿಮೆ, ಆಕ್ರಮಣಕಾರಿ ಭಾವನೆಗಳು ಮೂಡುತ್ತವೆ. ಧೂಮಪಾನ, ಮದ್ಯಪಾನ, ಲೈಂಗಿಕ ದುರ್ವರ್ತನೆಗಳಂಥ ದುರಾಭ್ಯಾಸಗಳಿಗೂ ಮಕ್ಕಳು ಒಳಗಾಗುವ ಸಾಧ್ಯತೆಯಿರುತ್ತವೆ. ಅಂತಹವರಿಗೆ ಸಕಾರಾತ್ಮಕ ಚಿಂತನೆ, ಸ್ವಾಭಿಮಾನ ಮೂಡಿಸುವ ಹಾಗೂ ತೀರ ಅಗತ್ಯ ಇರುವವರಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಈ ಮೂಲಕ ಮಾಡಲಿದ್ದೇವೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷಾ.

ಯಾವ ಶಾಲಾ ಮಕ್ಕಳಿಗೆ: ಗರುಡಾಚಾರ್‌ ಪಾಳ್ಯ, ವರ್ತೂರು, ಕಾಡುಗುಡಿ, ದೊಡ್ಡಬನಹಳ್ಳಿ, ಜೆ.ಬಿ.ನಗರ, ಕೆ.ಆರ್‌.ಪುರ, ಥಣಿಸಂದ್ರ, ರಾಮಮೂರ್ತಿನಗರ, ಜ್ಯೋತಿಪುರ, ಬಿದರಹಳ್ಳಿ, ಬಿ. ನಾರಾಯಣಪುರ, ಗುಂಜೂರು, ಇಮ್ಮಡಿಹಳ್ಳಿ, ಕನ್ನಮಂಗಲ, ದೊಡ್ಡನೆ ಕ್ಕುಂದಿ, ಹೂಡಿ, ಕಾಡುಸೊಣ್ಣನಹಳ್ಳಿ, ಕಲ್ಕೆರೆ, ಜೋಡಿ ಹುಸ್ಕೂರು, ಬಿಳಿಶಿವಾಲೆಯ ಸರ್ಕಾರಿ ಪ್ರೌಢಶಾಲೆಗಳು.

ವಿಮಾನಪುರ ಪ್ರೌಢಶಾಲೆ, ಚನ್ನಕೇಶವ ಪ್ರೌಢಶಾಲೆ, ಐಟಿಐ ವಿದ್ಯಾಮಂದಿರ, ಸೇಂಟ್‌ ಜೇಮ್ಸ್‌ ಪ್ರೌಢಶಾಲೆ, ವೀರಭದ್ರಸ್ವಾಮಿ ಪ್ರೌಢಶಾಲೆ, ಸೇಕ್ರಡ್‌ ಹಾರ್ಟ್‌ ಪ್ರೌಢಶಾಲೆ, ಡಾ. ಅಂಬೇಡ್ಕರ್‌ ಪ್ರೌಢಶಾಲೆ, ವಿಕಾಸ ಪ್ರೌಢಶಾಲೆ, ವಿಶ್ವೇಶ್ವರಯ್ಯ ಪ್ರೌಢಶಾಲೆ, ಬಿ.ವಿ.ಎನ್‌.ಎಚ್‌.ಎಸ್‌, ಸೇಂಟ್‌ ಆಂಥೋಣಿ ಪ್ರೌಢಶಾಲೆ, ಅಂಜನಾದ್ರಿ ಪ್ರೌಢಶಾಲೆ, ಕೈರಾಳಿನಿಲಯಂ ಪ್ರೌಢಶಾಲೆ, ವೀರಭದ್ರ ಪ್ರೌಢಶಾಲೆ ದೊಡ್ಡಗುಬ್ಬಿ, ವಿಕಾಸ ಪ್ರೌಢಶಾಲೆ, ರೇಣುಕ ಪ್ರೌಢಶಾಲೆ, ಯುವಕ ವಿಕಾಸ ಪ್ರೌಢಶಾಲೆಗಳ ಮಕ್ಕಳಿಗೆ ಮನೋತಜ್ಞರಿಂದ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ.

ಮಕ್ಕಳನ್ನು ಕಾಡುವ ಸಮಸ್ಯೆಗಳು: 10ನೇ ತರಗತಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಹಲವು ಮಾನಸಿಕ ತೊಳಲಾಟಗಳು. ಏಕಾಗ್ರತೆ ಕೊರತೆ, ಕಲಿಯುವ ಇಚ್ಛೆ ಇಲ್ಲದಿರುವುದು, ಚಿಂತೆ, ಒತ್ತಡಗಳು, ಟಿ.ವಿ/ ಮೊಬೈಲ್‌ ಹಾವಳಿ, ಭಾವೋದ್ವೇಗಗಳು, ಮರೆವು, ಪರೀಕ್ಷಾ ಭೀತಿಗಳು ಪ್ರಮುಖ. ಇವು ಕಲಿಕೆಗೆ ಸಮಸ್ಯೆಯಾಗಿ ಮಕ್ಕಳನ್ನು ಕಾಡುತ್ತವೆ. ಇವುಗಳಿಂದ ಮುಕ್ತವಾಗಲು ಅಗತ್ಯ ಸಲಹೆ, ಸೂಚನೆಯನ್ನು ನೀಡುತ್ತೇವೆ. ತೊಂದರೆ ಇರುವ ಮಕ್ಕಳನ್ನು ಶಿಕ್ಷಕರಿಂದ ಗುರುತಿಸಿ ಅವರಿಗೆ ಪ್ರತ್ಯೇಕವಾಗಿ ಸಮಯ ನಿಗದಿ ಮಾಡಿ ಸಮಸ್ಯೆಗಳನ್ನು ಆಲಿಸಿ, ಪರಿಹಾರೋಪಾಯಗಳನ್ನು ತಿಳಿಸುತ್ತೇವೆ ಎನ್ನುತ್ತಾರೆ ಮನೋತಜ್ಞ ಡಾ.ಚೇತನ್.


ಮನೋತಜ್ಞ ಟಿ. ಕುಮಾರ್‌ ಜೊತೆ 10ನೇ ತರಗತಿ ವಿದ್ಯಾರ್ಥಿ

ಎಂಥ ಆಪ್ತ ಸಮಾಲೋಚನೆ
‘ಹದಿಹರೆಯದ ಮಕ್ಕಳಲ್ಲಿ ಬಾಲ್ಯದ ಮುಗ್ದತೆ ಕಳೆದುಹೋಗಿ, ತಿಳುವಳಿಕೆ, ಕೌಶಲ ತುಂಬಿದ ಪ್ರೌಢತ್ವ ಆವರಿಸತೊಡಗುತ್ತದೆ. ದೇಹ ಮತ್ತು ಮನಸ್ಸು ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಪ್ರಾರಂಭಿಕ ಅವಧಿಯಲ್ಲಿ ದೈಹಿಕ ಬದಲಾವಣೆಯಾದರೆ, ಕ್ರಮೇಣ ಮಾನಸಿಕ ಪಕ್ವತೆಯೂ ಬರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳನ್ನು ಕಾಡುವ ಕೋಪ, ಖಿನ್ನತೆ, ಆತಂಕಗಳಿಂದ ದೂರ ಮಾಡಿದರೆ ಪರೀಕ್ಷೆಯನ್ನಷ್ಟೇ ಅಲ್ಲ ಭವಿಷ್ಯವನ್ನು ಚೆನ್ನಾಗಿ ಎದುರಿಸಲು ಪಕ್ವವಾಗುತ್ತಾರೆ’ ಎನ್ನುತ್ತಾರೆ ಮಕ್ಕಳಿಗೆ ಅಪ್ತ ಸಮಾಲೋಚನೆ ಮಾಡುತ್ತಿರುವ ಮನೋತಜ್ಞರ ತಂಡದಲ್ಲಿರುವ ಡಾ. ಚೇತನ್‌.

ಪ್ರಮುಖ ಸಲಹೆಗಳು
‘ಮಕ್ಕಳಿಗೆ ಸ್ಪಷ್ಟ ಗುರಿ, ಅದಕ್ಕೆ ಬೇಕಾದ ಆತ್ಮವಿಶ್ವಾಸ, ಕೈಗೊಳ್ಳಬೇಕಾದ ಸಕಾರಾತ್ಮಕ ನಿರ್ಧಾರಗಳು, ಸೃಜನಶೀಲ ವಿಧಾನಗಳು, ಪರೀಕ್ಷಾ ತಯಾರಿ ವೇಳಾಪಟ್ಟಿ, ನಿದ್ರಿಸಬೇಕಾದ ಅವಧಿ, ಪರೀಕ್ಷಾ ಸಮಯ ಪರಿಪಾಲನೆ, ಓದಲು ಯಾವ ಸಮಯ ಮತ್ತು ವಾತಾವರಣ ಸೂಕ್ತ ಎಂಬುದರ ಮಾಹಿತಿಯನ್ನು ಮಕ್ಕಳಿಗೆ ತಿಳಿಸುತ್ತೇವೆ. ಸೃಜನಶೀಲ ಚಟುವಟಿಕೆ ವೃದ್ಧಿಸಿಕೊಳ್ಳಲು ಸಾಹಿತ್ಯ, ಸಂಗೀತ, ಕ್ರೀಡೆ, ಯೋಗ, ಧ್ಯಾನಕ್ಕೆ ನಿತ್ಯವೂ ಕೆಲ ಸಮಯ ಮೀಸಲಿಡುವಂತೆ ಸೂಚಿಸುತ್ತೇವೆ. ಓದಿದ್ದನ್ನು ಮನನ ಮಾಡುವ, ಪ್ರಮುಖಾಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಹಾಗೂ ಸಹಪಾಠಿಗಳೊಂದಿಗೆ ಚರ್ಚಿಸುವ, ಶಿಕ್ಷಕರ ಮಾರ್ಗದರ್ಶನ ಪಡೆಯುವುದರ ಕುರಿತೂ ತಿಳಿಸಿಕೊಡುತ್ತೇವೆ. ಈ ಮೂಲಕ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗುವಂತೆ ಮಾಡಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವಂತೆ ರೂಪಿಸುವ ಉದ್ದೇಶ ಹೊಂದಿದ್ದೇವೆ. ಜತೆಗೆ ಜೀವನ ಕೌಶಲವನ್ನೂ ತಿಳಿಸಿಕೊಡುತ್ತೇವೆ ಎನ್ನುತ್ತಾರೆ ಮನೋತಜ್ಞ ಟಿ. ಕುಮಾರ್‌.

**

ಇತರರೊಂದಿಗೆ ಹೋಲಿಕೆಗಳು ಕೆಲ ಮಕ್ಕಳನ್ನು ಖಿನ್ನತೆಗೆ ದೂಡುತ್ತದೆ. ಇದರಿಂದ ಮಕ್ಕಳು ದುರಾಭ್ಯಾಸಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂಥವರಿಗೆ ಸಕಾರಾತ್ಮಕ ಚಿಂತನೆ ಮೂಡಿಸುವ ಕೆಲಸವನ್ನು ಆಪ್ತ ಸಮಾಲೋಚನೆ ಮೂಲಕ ಮಾಡಲಾಗುತ್ತಿದೆ
- ಸಲೀಂ ಪಾಷಾ, ಬಿಇಒ, ಬೆಂಗಳೂರು ದಕ್ಷಿಣ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !