ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶುದ್ಧ ವಿಜ್ಞಾನದತ್ತ ವಿದ್ಯಾರ್ಥಿಗಳ ಚಿತ್ತ

Last Updated 12 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಯಾವ ಶಿಕ್ಷಣ ಪಡೆದರೆ, ಮುಂದೆ ಉದ್ಯೋಗ ಗಿಟ್ಟಿಸಲು ಸಹಾಯವಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಮೂಲ ವಿಜ್ಞಾನ (ಬೇಸಿಕ್‌ ಸೈನ್ಸ್‌) ದಲ್ಲಿ ಶಿಕ್ಷಣ ಪಡೆದರೆ ಖಂಡಿತ ಉದ್ಯೋಗ ಅವಕಾಶಗಳು ಇವೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದಕ್ಕೆ ಬೇಕಾಗಿರುವುದು ತಾಳ್ಮೆ ಮತ್ತು ಕಠಿಣ ಪರಿಶ್ರಮ. ಇವೆರಡೂ ಇಲ್ಲದೆ, ವಿಜ್ಞಾನ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲೂ ಪ್ರತಿಫಲ ಸಿಗುವುದಿಲ್ಲ. ಖ್ಯಾತ ವಿಜ್ಞಾನಿಗಳಾದ ಸಿ.ಎನ್‌.ಆರ್‌.ರಾವ್‌ ಈ ಇಳಿವಯಸ್ಸಿನಲ್ಲೂ ಕಠಿಣ ಪರಿಶ್ರಮ ಹಾಕುತ್ತಾರೆ. ಮತ್ತೊಬ್ಬ ವಿಜ್ಞಾನಿ ಟಿ.ಎಸ್‌.ಸುದರ್ಶನ ಅವರೂ ಶ್ರಮಜೀವಿ. ಇವರಿಗೆ ನೊಬೆಲ್‌ ಸಿಗಬೇಕಿತ್ತು. ಎರಡೆರಡು ಬಾರಿ ತಪ್ಪಿ ಹೋಯಿತು. ಹಾಗೆಂದು ಕೈಕಟ್ಟಿ ಕೂತವರಲ್ಲ.

ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸಾಧನೆಯ ಮೂಲಕ ಸಿಗುವ ಫಲಿತಾಂಶ ಮರಳಿನ ಕಣದಷ್ಟಿರಬಹುದು. ಅದಕ್ಕೆ ಭಾರಿ ಮಹತ್ವ ಇದ್ದೇ ಇದೆ. ಒಂದೊಂದೇ ಕಣಗಳನ್ನು ಸೇರಿಸುತ್ತಾ ಹೋದರೆ ಹನಿ– ಹನಿಗೂಡಿದರೆ ಹಳ್ಳ ಎಂಬಂತೆ ಕ್ರಮೇಣ ಅದು ಸಾಗರವಾಗಬಲ್ಲದು. ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು ಮರದ ಮೇಲಿಂದ ಸೇಬು ನ್ಯೂಟನ್‌ ತಲೆ ಮೇಲೆ ಬಿತ್ತು. ಅದರಿಂದ ನ್ಯೂಟನ್‌ ಗುರುತ್ವ ಸಿದ್ಧಾಂತ ಹುಟ್ಟಲು ಕಾರಣವಾಯಿತು. ಹಾಗೆಂದು ಎಲ್ಲರ ತಲೆ ಮೇಲೆ ಸೇಬು ಹಣ್ಣು ಬಿದ್ದಾಕ್ಷಣ ಮತ್ತೊಂದು ಭೌತ ಸಿದ್ಧಾಂತ ಹುಟ್ಟಲು ಸಾಧ್ಯವಿಲ್ಲ. ಹೊಸ ವಿಚಾರ ಹುಟ್ಟಲು ಸಾಕಷ್ಟು ಚಿಂತನೆ ನಡೆಸಬೇಕು. ಅದರಿಂದ ಹುಟ್ಟುವ ವಿಚಾರದ ಎಳೆಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಹಾಕಬೇಕು. ಗಣಿತದ ಲೆಕ್ಕಾಚಾರವೂ ಇರಬೇಕು.

ಸಿದ್ಧಾಂತದ ಮೂಲಕ ಹುಟ್ಟಿದ ವಿಚಾರವನ್ನು ಸಮಾಜದ ಕಲ್ಯಾಣಕ್ಕೆ ಅನ್ವಯಗೊಳಿಸುವುದಕ್ಕೆ ಅನ್ವಯಿಕ ವಿಜ್ಞಾನಿಗಳು ಬೇಕೇ ಬೇಕು. ಎಲ್ಲರೂ ಮೂಲ ವಿಜ್ಞಾನದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಸೈದ್ಧಾಂತಿಕವಾಗಿ ಮೂಡಿದ ವಿಚಾರ ಜನೋಪಯೋಗಿ ವಸ್ತುವಾಗಿ ಬಳಕೆಗೆ ಬರಲು ಅಥವಾ ಅನ್ವಯಗೊಳಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಇಂದು ಯೋಚಿಸಿದ ವಿಚಾರ 50 ವರ್ಷಗಳ ಬಳಿಕ ಅನ್ವಯವಾಗಬಹುದು.

ಜೇಮ್ಸ್‌ ಮ್ಯಾಕ್ಸ್‌ವೆಲ್‌ ವಿಚಾರವನ್ನೇ ತೆಗೆದುಕೊಳ್ಳಿ. ಆತ ಎಲೆಕ್ಟ್ರೋಮ್ಯಾಗ್ನೆಟಿಕ್‌ ರೇಡಿಯೇಷನ್‌ ಸಿದ್ಧಾಂತವನ್ನು ಮಂಡಿಸಿದಾಗ ಬ್ರಿಟನ್ ರಾಜಕಾರಣಿಗಳು ಇದರಿಂದ ಜನ ಸಾಮಾನ್ಯರಿಗೇನು ಉಪಯೋಗ ಎಂದು ಪ್ರಶ್ನಿಸಿ ವ್ಯಂಗ್ಯ ಮಾಡಿದರು. ಅದಕ್ಕೆ ಆತ ಶಾಂತವಾಗಿ ಉತ್ತರಿಸಿದ್ದು, ಮುಂದೊಂದು ದಿನ ಈ ಸಿದ್ಧಾಂತವನ್ನು ಆಧರಿಸಿದ ತಂತ್ರಜ್ಞಾನ ಬಂದಾಗ ತೆರಿಗೆ ಹಾಕಿ ಹಣ ವಸೂಲಿ ಮಾಡುತ್ತೀರಿ ಎಂದು. ವೈರ್‌ಲೈಸ್‌ ಸಂವಹನ ಇದೇ ಸಿದ್ಧಾಂತವನ್ನು ಆಧರಿಸಿದ್ದು. ಇದರರ್ಥ ಇಷ್ಟೇ, ಪ್ರಯೋಗಾಲಯದಲ್ಲಿ ಆಗಿದ್ದು, ತಕ್ಷಣಕ್ಕೆ ಅನ್ವಯಿಸಲು ಸಾಧ್ಯವಾಗದು.

ಸಂಶೋಧನೆ ಮಾಡ ಬಯಸುವ ವಿದ್ಯಾರ್ಥಿಗಳು ಅತ್ಯಂತ ಜಾಗರೂಕತೆಯಿಂದ ಚಿಂತನೆ ನಡೆಸಬೇಕು. ಕೊನೆಯಲ್ಲಿ ಅದಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ.

ಸಂಸ್ಥೆಗಳು– ಕಾಲೇಜುಗಳ ಮಧ್ಯೆ ಸಂವಾದ ಅಗತ್ಯ
ಮೂಲ ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ವಿಜ್ಞಾನಕ್ಕೆ ಸಂಬಂಧಿಸಿದ ದೊಡ್ಡ ದೊಡ್ಡ ಇನ್ಸ್‌ಟಿಟ್ಯೂಟ್‌ಗಳು ಕಾಲೇಜುಗಳ ಜತೆ ಸಂವಾದ ನಡೆಸುವುದು ಅಗತ್ಯ. ದೊಡ್ಡ ವಿಜ್ಞಾನ ಸಂಸ್ಥೆಗಳಲ್ಲಿರುವ ಎಲ್ಲ ಸೌಲಭ್ಯಗಳನ್ನು ಕಾಲೇಜುಗಳಲ್ಲಿ ಒದಗಿಸಲು ಆಗುವುದಿಲ್ಲ. ಅಷ್ಟು ಹಣವೂ ಇರುವುದಿಲ್ಲ. ಸಂಸ್ಥೆಗಳೇ ಸಹಾಯ ಹಸ್ತ ಚಾಚಬೇಕು. ಅಲ್ಲದೆ, ಇಂತಹ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬಂದು ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು. ವಿಜ್ಞಾನದ ಸಂಸ್ಥೆಗಳಿಗೆ ಭೇಟಿ ನೀಡುವುದರಿಂದ ಸಾಕಷ್ಟು ಕಲಿಯಲು ಸಾಧ್ಯವಾಗುತ್ತದೆ. ವಿಜ್ಞಾನದ ಸಂಸ್ಥೆಗಳು ಮತ್ತು ಕಾಲೇಜುಗಳ ಮಧ್ಯೆ ಕೊಂಡಿ ಬೆಸೆಯುವ ಕೆಲಸ ಆಗಬೇಕಿದೆ.

ಈ ರೀತಿ ಮಾಡುವುದರಿಂದ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳು ಸಂಶೋಧನೆಯ ಬಗ್ಗೆ ಆಸಕ್ತಿ ತಳೆಯಲು ಸಾಧ್ಯವಿದೆ. ಈಗ ಕೆಳ ಹಂತದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿಲ್ಲ. ದೇಶದಲ್ಲಿ ವಿಜ್ಞಾನಿಗಳ ದೊಡ್ಡ ಸಮುದಾಯವನ್ನೇ ಸೃಷ್ಟಿಸುವ ಅಗತ್ಯವಿದೆ.

ನಮ್ಮಲ್ಲಿ ಬೋಧನಾ ಕ್ರಮವೂ ಸರಿಯಾಗಿಲ್ಲ. ಅದನ್ನು ಸರಿಪಡಿಸಿಕೊಂಡರೆ, ಮೂಲ ವಿಜ್ಞಾನದ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬಹುದು. ಮುಖ್ಯವಾಗಿ ವಿದ್ಯಾರ್ಥಿಗಳು ಕುತೂಹಲ ಬೆಳೆಸಿಕೊಳ್ಳುವ, ಪ್ರಶ್ನೆ ಕೇಳುವ ಮತ್ತು ವಿಶ್ಲೇಷಣೆ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು.

ಸಂದರ್ಶನ ಎಂದರೆ ಕೇವಲ ಜ್ಞಾನದ ಪರೀಕ್ಷೆ ಅಲ್ಲ
ವಿಜ್ಞಾನದಲ್ಲಿ ಸಂದರ್ಶನ ಎಂದರೆ ವಿದ್ಯಾರ್ಥಿಯ ಜ್ಞಾನದ ಮಟ್ಟ ಅಳೆಯುವುದಲ್ಲ. ವಿದ್ಯಾರ್ಥಿ ಒಂದು ವಿಷಯದ ಬಗ್ಗೆ ಎಷ್ಟು ತರ್ಕಬದ್ಧವಾಗಿ ವಾದ ಮಾಡುತ್ತಾನೆ ಮತ್ತು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಗಮನಿಸಲಾಗುತ್ತದೆ. ಎರಡು ವಿದ್ಯಮಾನಗಳನ್ನು ಯಾವ ರೀತಿಯಲ್ಲಿ ಗ್ರಹಿಸಿ ಅಂತಿಮ ನಿರ್ಧಾರಕ್ಕೆ ಬರುತ್ತಾನೆ ಎಂಬುದು ಮುಖ್ಯವಾಗುತ್ತದೆ. ಇಂತಹ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹೇಳಬೇಕೆಂಬ ತಿಳಿವಳಿಕೆಯ ಕೊರತೆ ಶಿಕ್ಷಕರಲ್ಲಿದೆ.

ಇದರ ಜೊತೆಯಲ್ಲಿ ತಾರ್ಕಿಕ ಸಾಮರ್ಥ್ಯ (ರೀಸನಿಂಗ್‌), ಆಲೋಚನೆ ಮತ್ತು ಕಠಿಣ ಪರಿಶ್ರಮಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು. ಮೊದಲೇ ಹೇಳಿದಂತೆ ಕುತೂಹಲ ತಳೆಯುವ ಮತ್ತು ಅದಕ್ಕೆ ಪೂರಕವಾಗಿ ಪ್ರಶ್ನೆಗಳನ್ನು ಕೇಳುವ ಮನೋಭಾವವನ್ನೂ ಬೆಳೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT