ಪಾಠಕ್ಕಿಂತ ಪ್ರಯೋಗ ಮುಖ್ಯ ಎನ್ನುವ ಮೆಚ್ಚಿನ ಶಿಕ್ಷಕ ಜಗದೀಶಪ್ಪ ಬನ್ನಿಕಲ್

7

ಪಾಠಕ್ಕಿಂತ ಪ್ರಯೋಗ ಮುಖ್ಯ ಎನ್ನುವ ಮೆಚ್ಚಿನ ಶಿಕ್ಷಕ ಜಗದೀಶಪ್ಪ ಬನ್ನಿಕಲ್

Published:
Updated:
Deccan Herald

ಕುರುಗೋಡು: ವಿಜ್ಞಾನ ಶಿಕ್ಷಕ ಜಗದೀಶಪ್ಪ ಬನ್ನಿಕಲ್ ಅವರ ಆಸಕ್ತಿಯ ಫಲವಾಗಿ ತಾಲ್ಲೂಕಿನ ಕಲ್ಲುಕಂಭ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ ತಲೆ ಎತ್ತಿದೆ.

ಶಾಲೆಯ ಮುಖ್ಯ ಶಿಕ್ಷಕರಿಗೆ ಪ್ರಯೋಗಾಲಯದ ಮಹತ್ವ ತಿಳಿಸಿಕೊಟ್ಟು, ಅದಕ್ಕೆ ಬೇಕಾಗಿರುವ ಅಗತ್ಯ ಪರಿಕರಗಳನ್ನು ಖರೀದಿಸಲು ಪ್ರೇರೇಪಿಸಿದವರು ಜಗದೀಶಪ್ಪ. ಅವರ ದೂರದೃಷ್ಟಿಯ ಫಲವಾಗಿ ವಿಜ್ಞಾನ ಪ್ರಯೋಗಾಲಯ ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆಯುವಂತೆ ರೂಪುಗೊಂಡಿದೆ. ಅದು ಪರಿಣಾಮಕಾರಿ ಬೋಧನೆಗೆ ಸಹಕಾರಿಯಾಗಿದೆ. ಪಾಠದ ಜತೆಗೆ ಮಕ್ಕಳಿಗೆ ಪ್ರಯೋಗ ಮಾಡಿ ಕಲಿಸುತ್ತಿರುವ ಕಾರಣ ಅವರಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.

‘ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಆದರೆ, ಅವರು ಕಲಿಯುವುದಕ್ಕೆ ಪೂರಕ ವಾತಾವರಣ ಇರುವುದಿಲ್ಲ. ಅದನ್ನು ನಮ್ಮ ಶಾಲೆಯಲ್ಲಿ ಕಲ್ಪಿಸಿದ್ದೇವೆ. ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ನಗರದ ಕಾನ್ವೆಂಟ್‌ಗಳಲ್ಲಿ ಓದುವ ಮಕ್ಕಳಿಗೆ ಪೈಪೋಟಿ ಕೊಡುತ್ತಿದ್ದಾರೆ’ ಎಂದು ಜಗದೀಶಪ್ಪ ಬನ್ನಿಕಲ್‌ ಹೆಮ್ಮೆಯಿಂದ ಹೇಳುತ್ತಾರೆ.

‘ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳು ಕಬ್ಬಿಣದ ಕಡಲೆಯಂತೆ ಭಾವಿಸಿದ್ದರು. ಪ್ರಯೋಗಾಲಯದಿಂದ ಅವರ ಓದಿನಲ್ಲಿ ಆಸಕ್ತಿ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ಅವರು ಗಳಿಸುತ್ತಿರುವ ಅಂಕಗಳು. ಹೋದ ವರ್ಷ ಶಾಲೆಯ ಒಟ್ಟು ಫಲಿತಾಂಶ ಶೇ 98ರಷ್ಟು ಬಂದಿದೆ’ ಎಂದರು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳುವಿನ ಜಗದೀಶ ಬನ್ನಿಕಲ್‌, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಚಿತ ಸೀಟು ಪಡೆದುಕೊಂಡಿದ್ದರು. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ಬಿ.ಇಡಿ. ಮುಗಿಸಿಕೊಂಡು ವಿಜ್ಞಾನ ಶಿಕ್ಷಕರಾದರು.

1998ರಲ್ಲಿ ಜೇವರ್ಗಿಯ ಇಜೇರಿಯಲ್ಲಿ ಕೆಲಸ ನಿರ್ವಹಿಸಿದರು. 2004ರಿಂದ ಕಲ್ಲುಕಂಭದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಪಾಠಗಳನ್ನು ಪ್ರಯೋಗಗಳನ್ನು ಮಾಡಿ ಮನದಟ್ಟು ಮಾಡಿಕೊಡುತ್ತಾರೆ. ಸರಳವಾಗಿ ವಿಷಯ ತಿಳಿಸಿಕೊಡುವುದರಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !