ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಸ್ನೇಹಿತರಂತೆ...

Last Updated 22 ಜನವರಿ 2019, 19:30 IST
ಅಕ್ಷರ ಗಾತ್ರ

ಒಬ್ಬ ಶಿಕ್ಷಕ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಂಡಾಗ ಮಾತ್ರ ಆತ ಸಮರ್ಥ ಶಿಕ್ಷಕ ಎನಿಸಿಕೊಳ್ಳಬಲ್ಲ. ಒಬ್ಬ ಶಿಕ್ಷಕನ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗಬಹುದು, ವಿದ್ಯಾರ್ಥಿಗಳ ಜೀವನದಲ್ಲಿ ಕೆಲವು ಶಿಕ್ಷಕರು ಮಾತ್ರ ಬರುತ್ತಾರೆ, ಅವರಲ್ಲಿ ಇಷ್ಟದ ಶಿಕ್ಷಕರನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ.

ಕಾಲೇಜು ದಿನಗಳಲ್ಲಿ ಬರುವ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಂಡಾಗ ಮಾತ್ರ ಅವರ ಶಿಕ್ಷಕ ವೃತ್ತಿ ಯಶಸ್ವಿಯಾಗುವುದು.

ಕಾಲೇಜು ದಿನಗಳಲ್ಲಿ ನಾನು ಅತಿ ಕಟ್ಟುನಿಟ್ಟಾದ ವಿದ್ಯಾರ್ಥಿನಿ ಆಗಿದ್ದೆ, ದಿನವೂ ತಪ್ಪದೇ ತರಗತಿಗಳಿಗೆ ಹಾಜರಾಗುತ್ತಿದ್ದೆ, ಏನೇ ಕೆಲಸ ಕೊಟ್ಟರೂ ನನ್ನ ಸಹಪಾಠಿಗಳಿಗಿಂತ ಮೊದಲೇ ನಾನು ಅದನ್ನು ಪೂರ್ಣಗೊಳಿಸುತ್ತಿದ್ದೆ. ಹೀಗಾಗಿ ಶಿಕ್ಷಕರ ಅಚ್ಚುಮೆಚ್ಚಿನ ವಿಧ್ಯಾರ್ಥಿನಿ ಆಗಿದ್ದೆ. ಕೆಲವೊಮ್ಮೆ ನನ್ನ ಉದಾಹರಣೆಯನ್ನು ಕೊಟ್ಟು ತರಗತಿಯಲ್ಲಿ ಇನ್ನುಳಿದ ವಿದ್ಯಾರ್ಥಿಗಳಿಗೆ ‘ಅವಳನ್ನು ನೋಡಿ ಕಲಿಯಿರಿ’ ಎಂದಾಗ ನನಗೆ ರೆಕ್ಕೆ ಪುಕ್ಕಗಳು ಬರುತ್ತಿದ್ದವು.

ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ನನ್ನ ಸ್ನೇಹಿತರು ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಇಡೀ ವಿದ್ಯಾಲಯವೇ ನಮ್ಮೆಲ್ಲರ ಸ್ನೇಹ ಸಂಬಂಧವನ್ನು ಕೊಂಡಾಡುತ್ತಿತ್ತು. ಪಠ್ಯದ ವಿಷಯದಲ್ಲಿ ಅಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ನಮ್ಮ ಗುಂಪು ಮುಂದೆ ಇರುತ್ತಿತ್ತು.
ಶಿಕ್ಷಕರೂ ನಮ್ಮೊಂದಿಗೆ ಅತಿ ಆತ್ಮೀಯರಾಗಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ನಮಗೆ ಉತ್ಸಾಹ ತುಂಬುತ್ತಿದ್ದರು. ಮೀಡಿಯಾ ಫೆಸ್ಟ್, ಸೆಮಿನಾರ್‌ಗಳಲ್ಲಿ ಭಾಗವಹಿಸಲು ನಮ್ಮನ್ನು ಬೇರೆ ಬೇರೆ ಕಾಲೇಜುಗಳಿಗೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ಅವರು ನಮ್ಮೊಂದಿಗೆ ಬರುತ್ತಿದ್ದರು. ಭಾಗವಹಿಸಿದ ಸ್ಪರ್ಧೆಯಲ್ಲಿ ವಿಜೇತರಾಗಿ ಬಂದರೆ ಖುಷಿ ಪಡುತ್ತಿದ್ದರು, ಇಲ್ಲವಾದರೆ ನಮಗೆ ಧೈರ್ಯ ಹೇಳುತ್ತಿದ್ದರು. ಏನೇ ಆದರೂ ಎಲ್ಲದಕ್ಕೂ ಅವರು ನಮ್ಮ ಬೆನ್ನಿಗೆ ನಿಂತರು. ಎಷ್ಟೋ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಮ್ಮನ್ನು ಸ್ಪರ್ಧೆಗೆ ಕಳಿಸಿದ್ದೂ ಉಂಟು.

ನಾವು ಪದವಿಯ ಅಂತಿಮ ವರ್ಷದಲ್ಲಿದ್ದಾಗ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಒಂದೊಂದು ಖಾತೆಗಳನ್ನು ನೀಡಿದರು. ನನಗಿಷ್ಟವಾದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥಳಾಗಿ ನಾನು ಆಯ್ಕೆಯಾದೆ. ನನ್ನ ಸ್ನೇಹಿತರಿಗೂ ಸಹ ಬೇರೆ ಬೇರೆ ವಿಭಾಗಗಳು ದೊರೆತವು. ಎಲ್ಲರೂ ಒಗ್ಗಟ್ಟಾಗಿ ನಮಗೆ ವಹಿಸಿದ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದೆವು.

ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾರಣ ಆ ವರ್ಷದಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನಾವೇ ಜವಾಬ್ದಾರಿಯಿಂದ ಮಾಡಿದೆವು. ಅದರಲ್ಲೂ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ವಿಶೇಷವಾಗಿ ಹಿಂದೆಂದೂ ಮಾಡದ ರೀತಿಯಲ್ಲಿ ಸೃಜನಾತ್ಮಕವಾಗಿ ನಡೆಸಿಕೊಟ್ಟು, ಅವರ ಆ ದಿನದ ಖುಷಿಗೆ ನಮ್ಮ ಪ್ರಯತ್ನ ಕಾರಣವಾಗುವಂತೆ ಮಾಡಿದೆವು. ನಮ್ಮ ಶಿಕ್ಷಕರು ನಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ಕಂಡು ಸಮರ್ಥ ಶಿಕ್ಷಕರು ಎನಿಸಿಕೊಂಡರು.

ಪದವಿ ಪಡೆದು ಮಹಾವಿದ್ಯಾಲಯದಿಂದ ಹೊರಬಂದರೂ ನಮ್ಮ ಶಿಕ್ಷಕರು ಇಂದಿಗೂ ನಮ್ಮನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಾರೆ. ನಮ್ಮೆಲ್ಲ ಆಗುಹೋಗುಗಳನ್ನು ವಿಚಾರಿಸಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಬೆನ್ನ ಹಿಂದೆ ಗುರು, ಕಣ್ಣ ಮುಂದೆ ಗುರಿ, ಸತತ ಪ್ರಯತ್ನ ಇದ್ದಾಗ ಒಬ್ಬ ವಿದ್ಯಾರ್ಥಿ ಗುರಿ ತಲುಪಬಲ್ಲ.

ಮೇಘನಾ ಪ್ರ. ಪಾಟೀಲ, ಕನಕದಾಸ ಶಿಕ್ಷಣ ಸಮಿತಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT