ಶುಕ್ರವಾರ, ನವೆಂಬರ್ 22, 2019
27 °C
ಈ ಶಾಲೆಯ ಬಡ ಮಕ್ಕಳಿಗೆ ಶಿಕ್ಷಕರೇ ಆಸರೆ, ಪಠ್ಯವಿತರಣೆ ಜತೆ ಅಗತ್ಯ ವಸ್ತುಗಳ ಪೂರೈಕೆ

ಖರ್ಚು ಉಳಿಸಲು ಸವಣೂರಲ್ಲಿ ಶಿಕ್ಷಕರೇ ಪೇಂಟರ್ !

Published:
Updated:

ಸವಣೂರ: ತಾಲ್ಲೂಕಿನ ತೆಗ್ಗಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣದಲ್ಲೇ ಪಠ್ಯಗಳನ್ನು ಕೊಡಿಸುತ್ತಾರೆ. ಖರ್ಚು ಉಳಿಸಲು ತಾವೇ ಪೇಂಟರ್‌ಗಳಾಗಿ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಯುತ್ತಾರೆ. ಆ ಬಣ್ಣದ ಗೋಡೆಗಳ ನಡುವೆ ಕೂರುವ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಆರೈಕೆ ಮಾಡುತ್ತಾರೆ...

1931ರಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆರಂಭವಾದ ಈ ಶಾಲೆ, ಅಂದಿನಿಂದಲೂ ಶಿಕ್ಷಣದ ಗುಣಮಟ್ಟ ಕಾಪಾಡಿಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೇ ಪೈಪೋಟಿ ನೀಡುವ ಹಂತ ತಲುಪಿರುವ ಈ ಶಾಲೆಯಲ್ಲಿ, ಸದ್ಯ 1 ರಿಂದ 8ನೇ ತರಗತಿವರೆಗಿನ 240 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 

‘ಮಕ್ಕಳ ದಾಖಲಾತಿ ಹೆಚ್ಚಾಗಲು 10 ಶಿಕ್ಷಕರು ವೈಯಕ್ತಿಕವಾಗಿ ಕಾಳಜಿಯನ್ನು ತೋರಿಸುತ್ತಿದ್ದಾರೆ. ಸಂಜೆ ನಂತರ ವಿಶೇಷ ತರಗತಿಯನ್ನು ಮಾಡಿ ಶಿಕ್ಷಣ ನೀಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಶಾಲೆಯ ಹಳೇ ವಿದ್ಯಾರ್ಥಿ ಎಸ್‌.ಟಿ.ಸವೂರ ಅವರು 5 ಕಂಪ್ಯೂಟರ್‌ಗಳನ್ನು ನೀಡಿ ಕಂಪ್ಯೂಟರ್‌ ಶಿಕ್ಷಣಕ್ಕೆ ನೆರವಾಗಿದ್ದಾರೆ. ತಾಲ್ಲೂಕು ಪಂಚಾಯ್ತಿ ಅನುದಾನ ಹಾಗೂ ಗ್ರಾಮಸ್ಥರಾದ ಚಮನಸಾಬ ಕಣವಿ ಅವರು ಸ್ಮಾರ್ಟ್‌ಕ್ಲಾಸ್‌ ನೀಡಿದ್ದಾರೆ’ ಎಂದು ಎನ್‌.ಎಸ್‌. ರಬನಾಳ ತಿಳಿಸಿದರು.

ಈ ಶಾಲೆಯ ದುರಸ್ತಿಗೆ ಸರ್ಕಾರ ₹20 ಸಾವಿರ ಅನುದಾನ ನೀಡಿತ್ತು. ಗೋಡೆಗಳಿಗೆ ಪೇಯಿಂಟ್ ಮಾಡಿಸಲು ಹೆಚ್ಚು ಖರ್ಚು ಬರುತ್ತದೆಂದು, ಶಿಕ್ಷಕರೇ ಮುರ್ನಾಲ್ಕು ದಿನ ಪೇಂಟರ್‌ಗಳಾಗಿದ್ದರು. ಮಕ್ಕಳ ಜತೆ ಸೇರಿ ತಾವೇ ಶಾಲೆ ಗೋಡೆಗಳಿಗೆ ರಂಗು ತುಂಬಿದ್ದರು. 

‘ಶಾಲೆಯ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆಗೆ ಗ್ರಾಮಸ್ಥರಾದ ಚಂದ್ರಪ್ಪ ಗುದಗಿ, ಈರಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಕ್ಷೌರದ, ಕೃಷ್ಣಪ್ಪ ತಳವಾರ ಅವರು ಕಲಿಕೆಗೆ ಅಗತ್ಯ ಪರಿಕರಗಳನ್ನು ದಾನವಾಗಿ ನೀಡುತ್ತಿದ್ದಾರೆ. ಅಲ್ಲದೇ, ಮೈಸೂರಿನಲ್ಲಿರುವ ಡಿ.ಬಿ.ಜೋಶಿ ಎಂಬುವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲು ಮುಂದೆ ಬಂದಿದ್ದಾರೆ’ ಎಂದು ಮುಖ್ಯ ಶಿಕ್ಷಕರಾದ ಡಿ.ಐ. ಉಳ್ಳಿಕಾಶಿ ತಿಳಿಸಿದರು.

‘ಶಿಕ್ಷಕ ಎನ್‌.ಎಸ್‌.ರಬನಾಳ ವೈಯಕ್ತಿಕ ₹30 ಸಾವಿರ ಹಾಗೂ ಸರ್ಕಾರದ ಅನುದಾನದಲ್ಲಿ ಹೈಟೆಕ್‌ ಬಿಸಿಯೂಟದ ಅಡುಗೆ ಕೋಣೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಅಡುಗೆ ಕೋಣೆ ಪ್ರಶಸ್ತಿಯೂ ಲಭಿಸಿದೆ’ ಎಂದೂ ಅವರು ವಿವರಿಸಿದರು.

‘ಇಲ್ಲಿಯ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿಯೂ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕ್ರೀಡೆಯಲ್ಲಿ ರಾಜ್ಯ ಮಟ್ಟದ ವಾಲಿಬಾಲ್, ಕುಸ್ತಿ, ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಚೆಸ್‌ ಆಟದಲ್ಲಿ ಪ್ರತಿನಿಧಿಸಿದ್ದಾರೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಕೆ.ಐ.ಗದವಾಲ ತಿಳಿಸಿದರು.

‘ದಾವಣಗೆರೆ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಹಾಗೂ ಗಣಿತ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಯನ್ನು ಮಾಡಿದ್ದಾರೆ. ಇಲ್ಲಿ ‘ವಿಷಯವಾರು ಮಾಸಾಚರಣೆ’ ಮಾದರಿ ಕಾರ್ಯಕ್ರಮವಾಗಿದ್ದು, ಅದನ್ನೇ ತಾಲ್ಲೂಕಿನ ಎಲ್ಲ ಶಾಲೆಗಳಿಗೂ ಅನುಸರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ್ದಾರೆ’ ಎನ್ನುತ್ತಾರೆ ಎಸ್‌.ಬಿ.ದೊಡ್ಡಮನಿ.

ಪ್ರತಿಕ್ರಿಯಿಸಿ (+)