ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ–ಶಿಕ್ಷಣ ಪ್ರೀತಿ

Last Updated 4 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬಳ್ಳಾರಿಯ ಯುವಕ ಈಗ ಅಮೆರಿಕದ ಪ್ರಜೆ. ಪ್ರತಿ ಸೆಪ್ಟೆಂಬರ್‌ ತಿಂಗಳಲ್ಲಿ ತವರು ಜಿಲ್ಲೆ ಬಳ್ಳಾರಿಯನ್ನು ನೆನಪಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ 5ರಂದು ತಾನು ಓದಿದ ಬಳ್ಳಾರಿಯ ರೇಡಿಯೊ ಪಾರ್ಕ್‌ ಸರ್ಕಾರಿ ಶಾಲೆಯಲ್ಲಿ, ತನ್ನ ತಾಯಿಯವರ ನೇತೃತ್ವದಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತಾರೆ. ಅಂದು ತನಗೆ ಪಾಠ ಮಾಡಿದ ಶಿಕ್ಷಕರನ್ನು ಗೌರವಿಸುತ್ತಾರೆ. ಶಿಕ್ಷಕರಿಗೆಲ್ಲ ಪ್ರೀತಿಯಿಂದ ಊಟ ಹಾಕಿಸಿ, ಬೀಳ್ಕೊಡುತ್ತಾರೆ. ಇದು 2006ರಿಂದಲೂ ಬೆಳೆಸಿಕೊಂಡಿರುವ ಪರಿಪಾಠ.

ಇವರ ಹೆಸರು ಬಸವರಾಜ ಪತ್ರಿ. ಬಾಲ್ಯದಲ್ಲಿ, ಶಿಕ್ಷಣ ಕಲಿಯುವ ವೇಳೆ ಅನುಭವಿಸಿದ ಕಡು ಕಷ್ಟದ ದಿನಗಳನ್ನು ಅವರು ಮರೆತಿಲ್ಲ. ಆ ನೆನಪಿಗಾಗಿ ಪ್ರತಿ ವರ್ಷ ತಮ್ಮ ಶಾಲೆಯ ಶಿಕ್ಷಕರನ್ನು ಮತ್ತು ಶಿಕ್ಷಣ ಕೇತ್ರಕ್ಕೆ ಪೂರಕವಾಗಿ ಸೇವೆ ಸಲ್ಲಿಸುವವರನ್ನು ಗೌರವಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಬದುಕಿನ ಬಗ್ಗೆ ವರ್ಷವಿಡೀ ಇದೇ ಶಿಕ್ಷಕರಿಂದ ಸಲಹೆ, ಮಾರ್ಗದರ್ಶನ ಪಡೆಯುತ್ತಿರುತ್ತಾರೆ.

ಕಡುಕಷ್ಟದ ದಿನಗಳವು...

ಬಸವರಾಜ ಅವರದ್ದು ಸಂಡೂರು ತಾಲ್ಲೂಕು, ಚೋರನೂರು ಗ್ರಾಮ. ತಂದೆ ಬಳ್ಳಾರಿಯ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕರಾಗಿದ್ದರು. ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದರು. ಅದೊಂದು ದಿನ ಅವರು ಆಕಸ್ಮಿಕವಾಗಿ ಕಾಲವಾದರು. ಅವರ ಮರಣಾನಂತರ ಅನುಕಂಪದ ಆಧಾರದ ಮೇಲೆ ಹಿರಿಯ ಮಗ ಬಸವರಾಜ ಅವರಿಗೆ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೌಕರಿ ಸಿಕ್ಕಿತು. ಹಾಗೆಯೇ ಜವಾಬ್ದಾರಿಗಳೂ ಹೆಚ್ಚಿದವು. ಇನ್ನೂ ಓದುತ್ತಿದ್ದ ತಮ್ಮ ತಂಗಿಯರನ್ನೂ ಬದುಕಿನ ದಡ ಮುಟ್ಟಿಸಬೇಕಿತ್ತು. ಅದರೆ ಪತ್ರಿ ಅವರಿಗೆ ನೌಕರಿಯನ್ನೂ ಮೀರಿ ಇನ್ನೆನೋ ಸಾಧಿಸಬೇಕು ಎಂಬ ತುಡಿತ ಇತ್ತು.

‌ತನ್ನ 18ನೇ ವಯಸ್ಸಿನಲ್ಲಿ ಡಿಪ್ಲೊಮಾ-ಇನ್-ಎಲೆಕ್ಟ್ರಾನಿಕ್ಸ್ ಓದು ಮುಗಿಸಿದ್ದರು. ಆದರೆ, ಸಿಕ್ಕಿದ್ದು ಮಾತ್ರ ದ್ವಿತೀಯ ದರ್ಜೆ ಸಹಾಯಕನ ನೌಕರಿ. ತಾಂತ್ರಿಕ ಶಿಕ್ಷಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಹೊಂದುವ ಬಯಕೆ ಬಸವರಾಜ್ ಅವರದ್ದು. ನೌಕರಿ ಬಿಡುವಂತಿರಲಿಲ್ಲ. ಕುಟುಂಬಕ್ಕೆ ನೌಕರಿಯೇ ಆಸರೆ. ಜೊತೆಗೆ ದುಡಿಯಲು ಏನಾದರೂ ಒಂದು ಉದ್ಯೋಗ ಮಾಡಲೇಬೇಕಿತ್ತು. ಈ ಮಧ್ಯೆ ತಮ್ಮನಿಗೆ ಒಂದು ಪುಟ್ಟ ಉದ್ಯೋಗ ಕೊಡಿಸಿದರು.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವರು ಅಮೆರಿಕದಲ್ಲಿ ಒಂದು ಕೋರ್ಸ್‌ಗೆ ಆಯ್ಕೆಯಾದರು. ಇಲಾಖೆಯಲ್ಲಿ ವೇತನರಹಿತ ರಜೆ ಪಡೆದು ವಿದೇಶಕ್ಕೆ ತೆರಳಿದರು. ವಿದ್ಯಾಭ್ಯಾಸದ ಅವಧಿಯ ಬಿಡುವಿನ ವೇಳೆಯಲ್ಲಿ ದುಡಿದರು.

ಅಪ್‌ಡೇಟ್‌ ಆಗುತ್ತಾ ಆಗುತ್ತಾ..

‘ನಿರಂತರವಾಗಿ ಅಪ್‌ಡೇಟ್‌ ಆಗದಿದ್ದರೆ ಜಗತ್ತು ನಮ್ಮನ್ನು ಹಿಂದೆ ತಳ್ಳಿಬಿಡುತ್ತದೆ’ ಎಂದುಕೊಂಡು ಹೆಚ್ಚಿನ ವ್ಯಾಸಂಗ ಮಾಡಲು ಅಣಿಯಾದರು. ಸರ್ಕಾರಿ ನೌಕರಿಗೆ ರಾಜಿನಾಮೆ ನೀಡಿದರು. ವಿದೇಶದಲ್ಲಿ ವ್ಯಾಸಂಗ ಮುಂದುವರಿಸಿದರು. ತನ್ನ ಓದಿನ ಖರ್ಚಿನ ಜೊತೆ ಬಳ್ಳಾರಿಯಲ್ಲೇ ಇದ್ದ ತಾಯಿ, ತಮ್ಮ ತಂಗಿಯರ ಜೀವನ ನಿರ್ವಹಣೆ, ಓದಿನ ಖರ್ಚು ಎಲ್ಲವನ್ನೂ ನಿಭಾಯಿಸುತ್ತಿದ್ದರು. ಈ ಮಧ್ಯೆ ಸಹೋದರ ತೀರಿಕೊಂಡರು. ಕೆಲಕಾಲದ ಬಳಿಕ ಸಹೋದರಿಯ ಮದುವೆ ಮಾಡಿಸಿದರು. ತಮ್ಮ ಸಂಗಾತಿಯನ್ನೂ ಅಮೆರಿಕದಲ್ಲೇ ಹುಡುಕಿದರು. ಈ ವೇಳೆ ಅಮೆರಿಕದ ಪೌರತ್ವವೂ ಸಿಕ್ಕಿತು. ವೈಯಕ್ತಿಕ ಬದುಕೇನೋ ಒಂದು ಹಂತಕ್ಕೆ ಸುಗಮವಾಯಿತು.

ಕರ್ತವ್ಯ ಮರೆಯದವರು..

ಹಾಗೆಂದು ಹತ್ತಿದ ಏಣಿಯನ್ನು ಮರೆಯಲಿಲ್ಲ. ಈಗಲೂ ಪ್ರತಿ ವರ್ಷ ತಮ್ಮೂರಿನ ಶಿಕ್ಷಕರನ್ನು ಸನ್ಮಾನಿಸುತ್ತಾರೆ. ಸಾಧ್ಯವಾದರೆ ಸೆಪ್ಟೆಂಬರ್ ತಿಂಗಳಲ್ಲಿ ಊರಿಗೆ ಬರುತ್ತಾರೆ. ಬರಲು ಸಾಧ್ಯವಾಗದಿದ್ದರೆ, ದೂರದ ದೇಶದಲ್ಲೇ ಕುಳಿತು ತಮ್ಮೂರಿನಲ್ಲಿ ಶಿಕ್ಷಕ ದಿನಾಚರಣೆ ನಡೆಯುವ ಹಾಗೆ ನೋಡಿಕೊಳ್ಳುತ್ತಾರೆ. ಶಿಕ್ಷಕರನ್ನಷ್ಟೇ ಅಲ್ಲದೇ, ಆ ಕ್ಷೇತ್ರಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನೂ ಸನ್ಮಾನಿಸುತ್ತಾರೆ. ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತಾರೆ.

ಊರಿಗೆ ಬಂದಾಗ ಬಳ್ಳಾರಿಯ ರೇಡಿಯೊ ಪಾರ್ಕ್‌ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಾರೆ. ಮಕ್ಕಳೊಂದಿಗೆ ಮಾತನಾಡುತ್ತಾರೆ. ದೇಶ, ಭಾಷೆ ತಿಳಿಯದ ನೆಲದಲ್ಲೂ ಅನ್ನ, ದುಡಿಮೆ, ಹೆಸರು, ಗಳಿಸಬಹುದೆಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸುತ್ತಾರೆ.

ಶಿಕ್ಷಕರ ದಿನಾಚರಣೆ ದಿನ ಶಿಕ್ಷಕರನ್ನು ಸರ್ಕಾರದಿಂದ ಗೌರವಿಸುವುದು, ಸನ್ಮಾನಿಸುವುದು ಬೇರೆ. ವೈಯಕ್ತಿಕವಾಗಿ ಹಲವರು ಶಿಕ್ಷಕರನ್ನು ಸನ್ಮಾನಿಸುವ ಶಿಷ್ಯಂದಿರೂ ಇದ್ದಾರೆ.

ಆದರೆ, ವರ್ಷಾನುಗಟ್ಟಲೇ ಓದಿದ ಶಾಲೆಯಿಂದ ಹೊರಗುಳಿದು ವಿದೇಶದಲ್ಲಿ ನೆಲೆಗೊಂಡ ನಂತರ ತಾನು ಓದಿದ ಶಾಲೆಯಲ್ಲಿ ಶಿಕ್ಷಕರನ್ನು ಅವರ ತಾಯಿ ಮತ್ತು ಶಾಲಾ ಮುಖ್ಯಸ್ಥರಿಂದ ಇತರ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಬಸವರಾಜ್ ಪತ್ರಿ ಅವರ ಶಿಕ್ಷಕ, ಶಿಕ್ಷಣ ಪ್ರೀತಿ ಅಭಿನಂದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT