ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತ ಸಾಗರದಾಚೆ ಆಟ–ಪಾಠ...

Last Updated 5 ಜುಲೈ 2018, 20:29 IST
ಅಕ್ಷರ ಗಾತ್ರ

ರಾಷ್ಟ್ರೀಯ, ಅಂತರರಾಷ್ಟ್ರೀಯ ಟೆನಿಸ್‌ ಪಂದ್ಯಗಳಲ್ಲಿ ಆಡಬೇಕು ಎಂದು ಬಯಸಿದ್ದ ಬೆಂಗಳೂರಿನ ಅಭಿಲಾಷ ವಿಶ್ವನಾಥ್‌ ಈಗ ಅಮೆರಿಕದ ಟೆನಿಸ್‌ ಕ್ರೀಡೆಗಳಲ್ಲಿ ಮಿಂಚುತ್ತಿದ್ದಾರೆ. ಅದರ ಜತೆಗೆ ಅಲ್ಲಿಯೇ ಉನ್ನತ ಶಿಕ್ಷಣವನ್ನೂ ಕೈಗೊಂಡಿದ್ದಾರೆ. ಟೆನಿಸ್‌ ಕಲಿಕೆಯ ಮೇಲಿನ ಬದ್ಧತೆಯೇ ಅವರನ್ನು ಅಮೆರಿಕಕ್ಕೆ ಕರೆದೊಯ್ದಿದ್ದು, ಪದವಿ ಶಿಕ್ಷಣಕ್ಕೂ ನೆರವಾಗಿದೆ.

ಅಮೆರಿಕದ ‘ಟೆನ್ನೆಸ್ಸಿ ಸ್ಟೇಟ್‌ ಯುನಿವರ್ಸಿಟಿ’ ಅವರಿಗೆ ಟೆನಿಸ್‌ ಆಡುವುದರ ಜತೆಗೆ ವ್ಯಾಸಂಗಕ್ಕೆ ಪೂರ್ಣ ಪ್ರಮಾಣದ ಸ್ಕಾಲರ್‌ಶಿಪ್‌ ಒದಗಿಸಿ ಪ್ರವೇಶ ನೀಡಿದೆ. ಇದೀಗ ಅಂತಿಮ ವರ್ಷದ ಪದವಿ (ಬಿ.ಎಸ್ಸಿ–ಮನಶಾಸ್ತ್ರ) ಓದುತ್ತಿರುವ ಅವರು ವಿಶ್ವವಿದ್ಯಾಲಯದ ಪ್ರಮುಖ ಟೆನಿಸ್‌ ಆಟಗಾರ್ತಿ. ಹಲವು ಪಂದ್ಯಗಳಲ್ಲಿ ವಿ.ವಿ ತಂಡದ ಗೆಲುವಿನ ರೂವಾರಿ. ಆಟದ ಜತೆ ಓದಿನಲ್ಲೂ ಮುಂದಿರುವ ಅವರು ಬಿ.ಎಸ್ಸಿ ನಂತರ ಅಮೆರಿಕದಲ್ಲಿಯೇ ಸ್ಕಾಲರ್‌ಶಿಪ್‌ ಪಡೆದು ಪಿಎಚ್‌.ಡಿ ವ್ಯಾಸಂಗ ಮಾಡಬಯಸಿದ್ದಾರೆ.

ಬಾಲ್ಯದಿಂದಲೇ ಟಿನಿಸ್‌ ಪ್ರೀತಿ: ವಿಜಯನಗರದ ನಿವಾಸಿ, ಸಿವಿಲ್‌ ಎಂಜಿನಿಯರ್‌ ವಿಶ್ವನಾಥ್‌ ಮತ್ತು ಸುಮಲತಾ ದಂಪತಿಯ ಪುತ್ರಿಯಾದ ಅಭಿಲಾಷಗೆ ಚಿಕ್ಕಂದಿನಿಂದಲೇ ಟೆನಿಸ್‌ ಮೇಲೆ ಪ್ರೀತಿ. 12ನೇ ವಯಸ್ಸಿನಿಂದ ಟೆನಿಸ್‌ ಕಲಿಕೆಗೆ ಮುಂದಾದ ಅವರಿಗೆ ಅಪ್ಪನೇ ಮೊದಲ ಗುರು. ಬಳಿಕ ಮನೆಯ ಹತ್ತಿರದ ಕ್ಲಬ್‌ನಲ್ಲಿ ತರಬೇತಿ ಪಡೆದರು.

1ರಿಂದ 7ನೇ ತರಗತಿವರೆಗೆ ಬಸವೇಶ್ವರನಗರದ ಕಾರ್ಮೆಲ್‌ ಶಾಲೆಯಲ್ಲಿ, 8ರಿಂದ 10ನೇ ತರಗತಿವರೆಗೆ ಕುಮಾರಸ್ವಾಮಿ ಬಡಾವಣೆಯ ಡಿಎವಿ ಪಬ್ಲಿಕ್‌ ಶಾಲೆಯಲ್ಲಿ ಓದಿದರು. 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಅವರಿಗೆ ಟೆನಿಸ್‌ ಕಲಿಕೆ ಮತ್ತು ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಅನಿಸಿತು. ಇದಕ್ಕಾಗಿ ಮೈಸೂರಿನ ತೆರೆಸಾ ಕಾಲೇಜಿನಲ್ಲಿ ಪಿಯುಸಿ (ಆರ್ಟ್ಸ್‌) ಪ್ರವೇಶ ಪಡೆದರು. ಅಲ್ಲಿ ಕೋಚ್‌ ಮಾರ್ಗದರ್ಶನದಲ್ಲಿ ಟೆನಿಸ್‌ನ ವಿಭಿನ್ನ ಕೌಶಲಗಳನ್ನು ಕಲಿತರು. ದ್ವಿತೀಯ ಪಿಯು ಕೂಡ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಅವರಿಗೆ ಕ್ರಮೇಣ ಟೆನಿಸ್‌ನಲ್ಲಿ ಇನ್ನಷ್ಟು ಕಲಿಯುವ ಆಸಕ್ತಿ ಮೂಡಿತು.

ಈ ಕುರಿತು ವೆಬ್‌ಸೈಟ್‌ಗಳಲ್ಲಿ ಹುಡುಕಾಡಿದಾಗ ಅಮೆರಿಕದಲ್ಲಿ ಟೆನಿಸ್‌ ಜತೆಗೆ ಉನ್ನತ ಶಿಕ್ಷಣಕ್ಕೆ ಸ್ಕಾಲರ್‌ಶಿಪ್‌ ದೊರೆಯುತ್ತದೆ ಎಂಬುದು ಗೊತ್ತಾಯಿತು. ಆಗ ಕೆಲ ವಿ.ವಿಗಳಿಗೆ ತನ್ನ ಟೆನಿಸ್‌ ಆಟದ ವಿಡಿಯೊಗಳೊಂದಿಗೆ ಅವರು ಅರ್ಜಿ ಸಲ್ಲಿಸಿದರು. ಕೆಲ ತಿಂಗಳ ಪ್ರಯತ್ನಗಳ ನಂತರ ‘ಟೆನ್ನೆಸ್ಸಿ ಸ್ಟೇಟ್‌ ಯುನಿವರ್ಸಿಟಿ’ಯಿಂದ ಕರೆ ಬಂದಿತು. ಬಳಿಕ ಅಲ್ಲಿ ಪ್ರವೇಶವೂ ದೊರೆಯಿತು. ಅಲ್ಲಿಯೇ ಈಗ ಆಟದ ಜತೆಗೆ ಓದು ನಡೆಯುತ್ತಿದೆ.

ಪಡೆದಿರುವ ಸ್ಕಾಲರ್‌ಶಿಪ್‌, ಅವಾರ್ಡ್‌ಗಳು: ಡಾ. ಮ್ಯಾಕ್‌ಡೊನಾಲ್ಡ್‌ ವಿಲಿಯಮ್ಸ್‌ ಸೀನಿಯರ್‌ ಹಾನರ್ಸ್‌ ಅವಾರ್ಡ್‌, ಪ್ರೆಸಿಡೆಂಟ್ಸ್‌ ಚಾಲೆಂಜ್‌, ಅಕಾಡೆಮಿಕ್‌ ಎಕ್ಸ್‌ಲೆನ್ಸ್‌ ಅವಾರ್ಡ್‌ (ವುಮೆನ್ಸ್‌ ಟೆನಿಸ್‌ ಟೀಂ), ಟಾಪ್‌ ಕೋ–ವುಮೆನ್‌ ಅಕಾಡೆಮಿಕ್‌ ಎಕ್ಸ್‌ಲೆನ್ಸ್‌ ಅವಾರ್ಡ್‌, ಜನರಲ್‌ ಸ್ಕಾಲರ್‌ಶಿಪ್‌, ಪ್ರೆಸಿಡೆಂಟ್ಸ್‌ ಲಿಸ್ಟ್‌ ಸೇರಿದಂತೆ ಹಲವು ಗೌರವಗಳು ಅಭಿಲಾಷ ಅವರಿಗೆ ಸಂದಿವೆ.

ಅಲ್ಲದೆ ಟೆನ್ನೆಸ್ಸಿ ವಿ.ವಿಯ ಪ್ರತಿಭಾವಂತ ಮತ್ತು ಉದಯೋನ್ಮುಖ ಟೆನಿಸ್‌ ಆಟಗಾರ್ತಿ, ಕೋಚಸ್‌ ಅವಾರ್ಡ್‌, ಫ್ರೆಶ್‌ಮ್ಯಾನ್‌ ಅವಾರ್ಡ್‌, ಟಿಎಸ್‌ಯು ಅಥ್ಲೆಟಿಕ್‌ ಸ್ಕಾಲರ್‌ಶಿಪ್‌ ಗೌರವಗಳು ಇವರಿಗೆ ದೊರೆತಿವೆ.

‘ಜೀವನದ ಕೌಶಲ ಕಲಿಸಿತು’: ‘ಟೆನಿಸ್‌ ಅತ್ಯುತ್ತಮ ಕ್ರೀಡೆ. ಇದು ನನ್ನ ಜೀವನವನ್ನೇ ಬದಲಿಸಿತು. ಆಟದ ಜತೆಗೆ ಜೀವನದ ಕೌಶಲಗಳನ್ನು ಕಲಿಸಿತು. ಬೆಂಗಳೂರಿನಿಂದ 9000 ಕಿ.ಮೀ ದೂರದ ಅಪರಿಚಿತ ಊರಿಗೆ ಬರಲೂ, ಇಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಟೆನಿಸ್‌ ಕಾರಣ. ಅಮೆರಿಕಕ್ಕೆ ಬಂದ ಮೇಲೆ ಟೆನಿಸ್‌ ಜತೆ ಜತೆಗೆ ಓದಿನಲ್ಲಿ ನನ್ನ ಆಸಕ್ತಿ ಹೆಚ್ಚಾಗಿದೆ. ಹಾಗಂತ ಟೆನಿಸ್‌ ಅನ್ನು ಕಡೆಗಣಿಸಿಲ್ಲ. ಆದರೆ ಅದನ್ನು ಮುಂದೆ ವೃತ್ತಿಯಾಗಿ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ನನಗೆ ಮನಃಶಾಸ್ತ್ರದಲ್ಲಿ ಅತೀವ ಆಸಕ್ತಿ ಬೆಳೆದಿದ್ದು, ಈ ವಿಷಯದಲ್ಲಿಯೇ ಪಿಎಚ್‌.ಡಿ ವ್ಯಾಸಂಗ ಮಾಡಬಯಸಿದ್ದೇನೆ’ ಎನ್ನುತ್ತಾರೆ ಅಭಿಲಾಷ.

‘ಪಿಎಚ್‌.ಡಿ ನಂತರ ಭಾರತಕ್ಕೆ ಬಂದು ಯುವ ಟೆನಿಸ್‌ ಆಟಗಾರರಿಗೆ ಕೋಚ್‌ ಆಗಬೇಕು ಅಥವಾ ಟೆನಿಸ್‌ ಅಕಾಡೆಮಿ ತೆರೆಯಬೇಕು ಎಂಬ ಉದ್ದೇಶವೂ ಇದೆ’ ಎನ್ನುವ ಅವರಿಗೆ, ಟೆನಿಸ್‌ ಆಟಗಾರರಾದ ರೋಜರ್‌ ಫೆಡರರ್‌, ಲಿಯಾಂಡರ್‌ ಪೇಸ್‌, ಸರೇನಾ ವಿಲಿಯಮ್ಸ್‌, ಸಾನಿಯಾ ಮಿರ್ಜಾ ಅವರ ಆಟದ ವೈಖರಿ ಬಲು ಇಷ್ಟವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT