ವಿಜ್ಞಾನ, ಗಣಿತ ಕಲಿಯಲು ಪಠ್ಯಪುಸ್ತಕಗಳೇ ಬೇಕೆ?

4

ವಿಜ್ಞಾನ, ಗಣಿತ ಕಲಿಯಲು ಪಠ್ಯಪುಸ್ತಕಗಳೇ ಬೇಕೆ?

Published:
Updated:

ವಿ ದ್ಯಾರ್ಥಿ ಮಿತ್ರರೇ, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಕಲಿಯುವುದು ಕಷ್ಟ ಎಂಬ ಅಭಿಪ್ರಾಯ ನಿಮ್ಮಲ್ಲಿ ಅನೇಕರಿಗೆ ಇರಬಹುದು. ಕೆಲವರಿಗೆ ವಿಜ್ಞಾನವು ಕಬ್ಬಿಣದ ಕಡಲೆಯಾದರೆ, ಕೆಲವರಿಗೆ ಗಣಿತ ಕಬ್ಬಿಣದ ಕಡಲೆ ಎನಿಸಬಹುದು. ಆದರೆ, ಸರಿಯಾದ ರೀತಿಯಲ್ಲಿ ಕಲಿತರೆ ಯಾವುದೂ ಕಷ್ಟವಲ್ಲ. ಯಾವುದೇ ಒಂದು ವಿಷಯದ ಬಗ್ಗೆ ಆಸಕ್ತಿ ಮೂಡುವುದರಲ್ಲಿ ಅದನ್ನು ಕಲಿಯುವ ವಿಧಾನ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಈ ವಿಷಯಗಳನ್ನು ಕಲಿಯಲು ನೀವು ಬಹುತೇಕ ನಿಮ್ಮ ತರಗತಿಯ ಪಠ್ಯಪುಸ್ತಕಗಳನ್ನೇ ಅವಲಂಬಿಸಿರಬಹುದು. ಆದರೆ, ಪಠ್ಯಪುಸ್ತಕಗಳ ಹೊರತಾಗಿಯೂ ಈ ವಿಷಯಗಳನ್ನು ಕಲಿಯುವುದು ಸಾಧ್ಯ. ಏಕೆಂದರೆ, ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ವಿದ್ಯಮಾನದಲ್ಲಿಯೂ ವಿಜ್ಞಾನ ಹಾಗೂ ಗಣಿತ ಹಾಸುಹೊಕ್ಕಾಗಿರುತ್ತದೆ. ಇಂದು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿಯೂ ವಿಜ್ಞಾನದ ಪಾತ್ರ ಇರುವುದನ್ನು ನೀವು ಗುರುತಿಸಬಹುದು. ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜುವ ಪ್ರಕ್ರಿಯೆಯಿಂದ ಪ್ರಾರಂಭಿಸಿ, ರಾತ್ರಿ ಮಲಗುವವರೆಗಿನ ನಿಮ್ಮ ದೈನಂದಿನ ಚಟುವಟಿಕೆಗಳನ್ನೇ ಗಮನಿಸಿ ನೋಡಿ, ಪ್ರತಿಯೊಂದರಲ್ಲಿಯೂ ವಿಜ್ಞಾನದ ಪಾತ್ರವಿದೆ ಎಂಬುದು ನಿಮಗೆ ಮನದಟ್ಟಾಗುತ್ತದೆ.

ಆಸಕ್ತಿ, ಕುತೂಹಲಗಳನ್ನು ಬೆಳೆಸಿಕೊಳ್ಳಿ

ವಿಜ್ಞಾನದಂಥ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ನಿಮ್ಮಲ್ಲಿ ಕಲಿಯುವ ಆಸಕ್ತಿ ಇರಬೇಕಾಗುತ್ತದೆ. ಆಸಕ್ತಿ ಬೆಳೆಯಬೇಕಾದರೆ ಯಾವುದೇ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳುವ ಸಹಜವಾದ ಕುತೂಹಲ ಇರಬೇಕು. ವಸ್ತು ಅಥವಾ ವಿದ್ಯಮಾನವೊಂದರ ಬಗ್ಗೆ ಈಗಾಗಲೇ ಗೊತ್ತಿರಬಹುದಾದ ವಿಷಯಗಳ ಜೊತೆಗೆ ಗೊತ್ತಿರದ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ. ನಮ್ಮಲ್ಲಿ ಕುತೂಹಲ ಬೆಳೆಯಬೇಕಾದಲ್ಲಿ ಯಾವುದೇ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಇರಬೇಕು. ಇಂಥ ಕುತೂಹಲವೇ ಹೆಚ್ಚಿನ ವಿಷಯದ ಸಂಗ್ರಹಕ್ಕೆ ಪ್ರೇರೇಪಣೆ ನೀಡುತ್ತದೆ. ಆಸಕ್ತಿ ಹಾಗೂ ಕುತೂಹಲಗಳನ್ನು ಬೆಳೆಸಿಕೊಳ್ಳದೇ ಹೋದಲ್ಲಿ ನಮ್ಮ ಸುತ್ತಲಿನ ಪ್ರತಿಯೊಂದು ವಿದ್ಯಮಾನವೂ ನಮಗೆ ಯಾಂತ್ರಿಕವಾಗಿ ಕಾಣಿಸುತ್ತದೆ.

ಕುತೂಹಲಗಳನ್ನು ಪಟ್ಟಿ ಮಾಡಿಕೊಳ್ಳಿ

ನಿಮ್ಮ ಮನೆಯಲ್ಲಿ, ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಹಲವಾರು ಕುತೂಹಲಕಾರಿ ಅಂಶಗಳು ನಿಮಗೆ ಗೋಚರಿಸುತ್ತವೆ. ಉದಾಸೀನ ಮಾಡದೆ ಅಂಥ ಅಂಶಗಳನ್ನು ಪುಸ್ತಕದಲ್ಲಿ ಗುರುತುಹಾಕಿಕೊಳ್ಳಿ. ನಿಮ್ಮ ಮನೆಯಲ್ಲಿಯೇ ನೀವು ಗಮನಿಸಿರಬಹುದಾದ ಕೆಲವು ಉದಾಹರಣೆಗಳನ್ನೇ ತೆಗೆದುಕೊಳ್ಳಿ. ಅಡುಗೆಮನೆಯಲ್ಲಿ ನಿಮ್ಮ ತಾಯಿ ಈರುಳ್ಳಿ ಹೆಚ್ಚುತ್ತಿರುವಾಗ ಅವರ ಕಣ್ಣಿನಲ್ಲಿ ನೀರು ಸುರಿಯುವುದನ್ನು ನೀವು ನೋಡಿರಬಹುದು. ಕೇಳಿದಾಗ, ಅದಕ್ಕೆ ಈರುಳ್ಳಿಯ ಘಾಟು ಕಾರಣ ಎಂದು ನಿಮ್ಮ ತಾಯಿ ನಿಮಗೆ ಸಮಜಾಯಿಷಿ ನೀಡಿರಬಹುದು. ನೀವು ಅಷ್ಟಕ್ಕೇ ಸುಮ್ಮನಾಗಿಬಿಡಬಾರದು. ಇದಕ್ಕೆ ವೈಜ್ಞಾನಿಕ ಕಾರಣವನ್ನು ಹುಡುಕುವ ಪ್ರಯತ್ನ ಮಾಡಬೇಕು. ಘಾಟಿಗೆ ಕಾರಣವಾಗುವ ವಸ್ತು ಯಾವುದು? ಅದರ ರಾಸಾಯನಿಕ ಹಿನ್ನೆಲೆ ಏನು? ಅದು ಕಣ್ಣೀರನ್ನು ಉಂಟು ಮಾಡುವುದು ಹೇಗೆ? ಇದರ ಜೈವಿಕ ಹಿನ್ನೆಲೆ ಏನು? ಮುಂತಾದ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಅದೇ ರೀತಿ, ಮಳೆ ಬಂದಾಗ ನೆನೆಯುತ್ತಾ ಖುಶಿಯಿಂದ ಆಟ ಆಡಿರಬಹುದು. ಆದರೆ, ಮಳೆಯ ಹನಿಗಳು ಯಾಕೆ ದುಂಡಾಗಿಯೇ ಇರುತ್ತವೆ? ಅದರ ವೈಜ್ಞಾನಿಕ ಹಿನ್ನೆಲೆ ಏನು? ಎಂದು ಎಂದಾದರೂ ಯೋಚಿಸಿದ್ದೀರೇನು?

ಪ್ರಶ್ನಿಸುವ ಮನೋಭಾವವಿರಲಿ

ವಿಜ್ಞಾನದ ಸುಗಮವಾದ ಕಲಿಕೆಗೆ ನೀವು ಕೇಳಿದ ಅಥವಾ ಗಮನಿಸಿದ ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ‘ಏಕೆ?’, ‘ಯಾವಾಗ?’, ‘ಏನು?’, ‘ಎಲ್ಲಿ?’ ಮತ್ತು ‘ಹೇಗೆ?’ – ಈ ಐದು ಪ್ರಶ್ನೆಗಳು ವಿಜ್ಞಾನದ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೀವು ಗಮನಿಸುವ ಪ್ರತಿಯೊಂದು ವಿದ್ಯಮಾನಕ್ಕೂ ಪೂರಕವಾದ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಉತ್ತರವನ್ನು ಪಡೆಯುವ ಪ್ರಯತ್ನವನ್ನು ಮಾಡಿದಲ್ಲಿ ವಿಜ್ಞಾನದ ಕಲಿಕೆ ಸರಾಗವಾಗಿ ಸಾಗುತ್ತದೆ. ನೀವು ಶಾಲೆಯ ತರಗತಿಯಲ್ಲಿ ಕಲಿತಿರುವ ನಿಮ್ಮ ವಿಜ್ಞಾನದ ಪಾಠದಲ್ಲಿಯೇ ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಇಲ್ಲವಾದಲ್ಲಿ ತಿಳಿದವರಿಂದಲೋ, ನಿಮ್ಮ ಶಿಕ್ಷಕರಿಂದಲೋ, ಗ್ರಂಥಾಲಯದಲ್ಲಿನ ಪುಸ್ತಕದ ಸಹಾಯದಿಂದಲೋ ಉತ್ತರವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬಹುದು. ಅಂತರ್ಜಾಲದಿಂದಲೂ ನಿಮ್ಮ ಸಂದೇಹಗಳಿಗೆ ಸಮಾಧಾನವನ್ನು ಪಡೆದುಕೊಳ್ಳಬಹುದು. ನಿಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ನಿಮ್ಮಲ್ಲಿ ಇಂಥ ನೂರಾರು ಪ್ರಶ್ನೆಗಳು ಮೂಡುತ್ತವೆ. ಈ ರೀತಿಯ ನಿಮ್ಮ ಕುತೂಹಲದ ಪ್ರಶ್ನೆಗಳಿಗೆ ಸಮಾಧಾನ ಪಡೆದುಕೊಳ್ಳುವುದು ವಿಜ್ಞಾನದ ಕಲಿಕೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖವಾದುದು.

ಶಾಲೆಯಲ್ಲಿ ಕಲಿತದ್ದನ್ನು ಅನ್ವಯಿಸಿಕೊಳ್ಳಿ

ಶಾಲೆಯಲ್ಲಿ ನಿಮ್ಮ ವಿಜ್ಞಾನದ ಪಠ್ಯಪುಸ್ತಕದಿಂದ ನೀವು ಹಲವಾರು ವಿಷಯಗಳನ್ನು ಕಲಿತುಕೊಳ್ಳುತ್ತೀರಿ. ಅದಕ್ಕೆ ಪೂರಕವಾದ ಹಲವಾರು ಉದಾಹರಣೆಗಳನ್ನೂ ಕಲಿಯುತ್ತೀರಿ. ಹೀಗೆ ನೀವು ಕಲಿತಿರಬಹುದಾದ ವೈಜ್ಞಾನಿಕ ವಿದ್ಯಮಾನ ಅಥವಾ ನಿಯಮ ನಿಮ್ಮ ದೈನಂದಿನ ಜೀವನದಲ್ಲಿ ಅಥವಾ ನಿಮ್ಮ ಸುತ್ತಲಿನ ಪರಿಸರದಲ್ಲಿ ಎಲ್ಲಿಯಾದರೂ ಅನ್ವಯವಾಗಿದೆಯೇ ಎಂಬುದನ್ನು ಪರಿಶೀಲಿಸಿ. ನಿಮಗೆ ಅಚ್ಚರಿಯಾಗುವಂಥ ಹಲವಾರು ಉದಾಹರಣೆಗಳು ನಿಮಗೆ ಗೋಚರಿಸುತ್ತವೆ. ಶಾಲೆಯಲ್ಲಿ ನೀವು ಕಲಿತಿರುವುದರ ಆಧಾರದ ಮೆಲೆ ನಿಮ್ಮ ಮನೆಯಲ್ಲಿರುವ ರೆಫ್ರಿಜರೇಟರ್ ಅಥವಾ ಇಲೆಕ್ಟ್ರಿಕ್ ಓವನ್ ಕೆಲಸ ಮಾಡುವ ಬಗೆ, ಅದರ ಕಾರ್ಯದ ವೈಜ್ಞಾನಿಕ ಹಿನ್ನೆಲೆ ಇವುಗಳನ್ನು ತಿಳಿದುಕೊಂಡರೆ ನಿಮ್ಮ ಕಲಿಕೆ ಇನ್ನೂ ಸುಲಭವಾದಂತಲ್ಲವೇ? ಹಾಗೆಯೇ, ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ವೈಜ್ಞಾನಿಕ ನಿಯಮಗಳನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಿದಾಗ ನೀವು ಸಂಬಂಧಿಸಿದ ವಿಷಯವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.

ಯಾಂತ್ರಿಕತೆಯಿಂದ ಹೊರಬನ್ನಿ

ನಿಮ್ಮ ಕಲಿಕೆಯನ್ನು ಪಠ್ಯಪುಸ್ತಕಕ್ಕೇ ಸೀಮಿತಗೊಳಿಸಿಕೊಳ್ಳಬೇಡಿ. ಕೇವಲ ಪರೀಕ್ಷೆಯ ದೃಷ್ಟಿಯಿಂದ ವಿಜ್ಞಾನವನ್ನು ಕಲಿಯುವ ಬದಲಿಗೆ, ನೀವು ಕಲಿತದ್ದನ್ನು ನಿಮ್ಮ ಹೊರ ಪ್ರಪಂಚಕ್ಕೆ ಅನ್ವಯಿಸಿಕೊಳ್ಳುವ ಪ್ರಯತ್ನ ಮಾಡಿ. ನೋಡಿದ್ದನ್ನು, ಕೇಳಿದ್ದನ್ನು ಸುಮ್ಮನೆ ಒಪ್ಪಿಕೊಳ್ಳುವ ಬದಲಿಗೆ ಏಕೆ ಹೀಗೆ? ಎಂದು ಪ್ರಶ್ನಿಸಿಕೊಳ್ಳಿ. ಯಾಂತ್ರಿಕವಾಗಿ ನೋಡುವುದನ್ನು ಬಿಟ್ಟು, ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ. ನಿಷ್ಕ್ರಿಯತೆ ಬಿಟ್ಟು ಅನ್ವೇಷಣೆಯ ಹಾದಿಯನ್ನು ಹಿಡಿಯಿರಿ. ಅಂಜಿಕೆಯನ್ನು ದೂರ ಮಾಡಿ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಅಭಿವೃದ್ಧಿಗೆ ನೀವೇ ಹಾದಿಯನ್ನು ನಿರ್ಮಿಸಿಕೊಳ್ಳಿ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !