ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿ-ಕಲಿಸು ಪ್ರಯೋಗ: ಸರಳ ಕಲಿಕೆಗೆ ಸೃಜನಶೀಲ ಕಲೆ

Last Updated 31 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಕ್ಲಿಷ್ಟಕರವಾದ ಅಂಶಗಳನ್ನು ಸರಳಗೊಳಿಸುವುದಕ್ಕಾಗಿ ಏನೆಲ್ಲ ಯತ್ನಗಳು ನಡೆಯುತ್ತಿವೆ! ಇದರ ಮಧ್ಯೆ ಶಿಕ್ಷಕರು ಕೂಡ ತಮ್ಮದೇ ಆದ ಕಲಿಕಾ ಯೋಜನೆಗಳ ಮೂಲಕ ಸ್ಥಳೀಯ ಜಾನಪದ ಸಾಹಿತ್ಯ, ಆಚರಣೆಗಳು, ಬೊಂಬೆಗಳು, ಕಿರು ನಾಟಕಗಳನ್ನು ಸರಳ ಕಲಕೆಯ ಸೇತುವೆಗಳನ್ನಾಗಿಸಿಕೊಂಡಿದ್ದಾರೆ.

ಪಠ್ಯದಲ್ಲಿರುವ ವಿಷಯವನ್ನು ಯಥಾವತ್ ಬೋಧನೆ ಮಾಡುವುದರ ಬದಲು ವಿಷಯಗಳನ್ನು ಹಾಡಿಗೆ, ಕಥೆಗೆ ಇಳಿಸಿ. ಅದಕ್ಕೆ ತಕ್ಕಂತೆ ತೊಗಲು ಗೊಂಬೆಗಲನ್ನು ತಕತಕ ಕುಣಿಸುವುದರ ಮೂಲಕ ಪಾಠ ಮಾಡುವುದು ಒಂದು ಕಲಿಕಾ ಆಯಾಮ. ಭಾಷಾ ವಿಷಯಗಳ ಕಲಿಕೆಯ ಜೊತೆಗೆ ಅದರಲ್ಲಿ ಬರುವ ಹಾಡುಗಳನ್ನು ರೂಪಕಕ್ಕೆ ಬದಲಾಯಿಸಿ. ಇದನ್ನು ಬೊಂಬೆಗಳ ಮೂಲಕ ಪಾಠ ಮಾಡಿದರೆ ಮಕ್ಕಳ ಏಕಾಗ್ರತೆ ಬೊಂಬೆಗಳತ್ತ ಹರಿದು ಬರುತ್ತದೆ. ಇಲ್ಲಿ ಮಕ್ಕಳು ತಮ್ಮ ವಿವೇಚನಾ ಸಾಮರ್ಥ್ಯದೊಂದಿಗೆ ಕ್ಲಿಷ್ಟ ವಿಷಯಗಳನ್ನು ಅರಿತುಕೊಳ್ಳುತ್ತಾರೆ. ಕ್ರಮೇಣ ಮಕ್ಕಳೇ ಪರದೆಯ ಹಿಂದೆ ನಿಂತು ಬೊಂಬೆಗಳನ್ನು ಕುಣಿಸಲು ಬಿಡಿ. ಈ ಕಥಾ ರೂಪಕ್ಕೆ ಬಂದ ಪಠ್ಯ ವಿಷಯವನ್ನು ಹಿನ್ನೆಲೆಯಲ್ಲಿ ಉಚ್ಚಾರಣೆ ಮಾಡುವುದರಿಂದ ಅವರಿಗೆ ಹೊಸ ಪದಗಳ ಪರಿಚಯವಾಗುತ್ತದೆ.

ಇತಿಹಾಸದ ಪಾಠ ಬೋಧನೆ ಮಾಡುವಾಗ ಪಾಠಗಳಲ್ಲಿ ಬರುವ ಐತಿಹಾಸಿಕ ಪಾತ್ರಗಳನ್ನು ಬೊಂಬೆಗಳಿಗೆ ನೀಡಿ. ಈ ಬೊಂಬೆಗಳ ಮೂಲಕವೇ ಬೋಧನೆ ಮಾಡಿದರೆ ಮಕ್ಕಳು ತಮಗರಿವಿಲ್ಲದಂತೆಯೆ ಬೇಗ ಇತಿಹಾಸ ಅರ್ಥೈಸಿಕೊಳ್ಳುತ್ತಾರೆ. ರಂಜನೆ ನೀಡುತ್ತಾ ಶಿಕ್ಷಕರು ಬೊಂಬೆಗಳನ್ನು ಕುಣಿಸಿ ಪಾಠ ಮಾಡುತ್ತಾರೆ ಎಂದರೆ ಕೇಳಬೇಕೆ! ಮಕ್ಕಳು ಶಾಲೆಗೆ ಓಡೋಡಿ ಬರುತ್ತಾರೆ.

ಹುಟ್ಟು ಕಲಾವಿದರು

ಮಕ್ಕಳೆಲ್ಲರೂ ಹುಟ್ಟುತ್ತಲೇ ಕಲಾವಿದರು ಎನ್ನಬಹುದು. ಅವರು ಈಗಾಗಲೆ ತಮ್ಮ ಬಾಲ್ಯದ ದಿನಗಳಲ್ಲಿ ಅಪ್ಪ, ಅಮ್ಮ, ಮಾವ, ಕಾಕ, ಬೀದಿಯಲ್ಲಿ ಕಾಣುವ ತರಕಾರಿ ಮಾರುವವ, ಗೆಳೆಯ, ಗೆಳತಿಯರೆಲ್ಲರನ್ನೂ ಅನುಕರಣೆ ಮಾಡಿ ಆಟವಾಡುತ್ತಿರುತ್ತಾರೆ. ಅವುಗಳನ್ನೇ ಮೂಲವಾಗಿಟ್ಟುಕೊಂಡು ಶಾಲೆಗಳಲ್ಲಿ ವಿಜ್ಞಾನ, ಇತಿಹಾಸದ ಪಠ್ಯವನ್ನು ಪುಟ್ಟ ನಾಟಕಗಳ ಮೂಲಕ ಸರಳೀಕರಣಗೊಳಿಸಬಹುದು. ಮಕ್ಕಳು ಚಿಕ್ಕವರಿದ್ದಾಗ ಯಾವುದೇ ಸಾಮಾನುಗಳಿಲ್ಲದೆ ಕಲ್ಲು ಮತ್ತು ಮಣ್ಣಿನಲ್ಲಿಯೇ ಆಟವಾಡುತ್ತಾರೆ. ಮನೆಯ ಎಲ್ಲ ಸಾಮಾನುಗಳನ್ನು ಸೃಷ್ಟಿ ಮಾಡಿ ತಾವೇ ಪಾತ್ರಧಾರಿಗಳಾಗಿ ಇತರ ಗೆಳೆಯರನ್ನು ಸೇರಿಸಿಕೊಂಡು ‘ನೀನು ಹೀಗೆ ಮಾಡು, ಹಾಗೆ ಇರು’ ಎಂದು ಹೇಳುತ್ತಲೇ ಅವರೊಳಗೊಬ್ಬ ಕಲಾವಿದ, ನಾಯಕ, ನಿರ್ದೇಶಕ, ವಿನ್ಯಾಸಕ ಹುಟ್ಟಿಕೊಳ್ಳುತ್ತಾನೆ. ಆ ಕಲೆಗೆ ಮತ್ತಷ್ಟು ರಂಗು ಲೇಪನ ಮಾಡುವುದು ಮಾತ್ರ ಶಿಕ್ಷಕರ ಕೆಲಸ.

ನಮ್ಮ ಆಹಾರ, ಆರೋಗ್ಯ, ಪರಿಸರ ಸಂರಕ್ಷಣೆ, ಜೀವಸಂಕುಲಗಳಂತಹ ವಿಜ್ಞಾನ ಪಾಠಗಳನ್ನು, ಸಮುದಾಯ, ಕುಟುಂಬ, ಸಂಸತ್ ಪರಿಚಯದಂತಹ ಸಮಾಜ ಪಾಠಗಳನ್ನು, ಲೆಕ್ಕಾಚಾರ, ವ್ಯವಹಾರವನ್ನು ನಾಟಕದ ಮೂಲಕ ಮಕ್ಕಳಿಗೆ ತಿಳಿಸಿಕೊಡುವುದು ಬಹು ಸುಲಭ. ಈ ಚಟುವಟಿಕೆಗಳಿಂದ ಪದ ಉಚ್ಚಾರಣೆ ಮಾಡುವುದು, ಓದುವುದು, ಅಭಿನಯಿಸುವ ಸಭಾ ಧೈರ್ಯ ಎಲ್ಲವನ್ನೂ ಕಲಿಯಬಹುದು. ಈ ಕಲೆಗಾಗಿ ಪಠ್ಯಕ್ರಮದಿಂದ ಬಹಳ ದೂರ ಇರಬೇಕಾಗಿಲ್ಲ, ಅರ್ಥೈಸಿಕೊಳ್ಳುವ ದೃಷ್ಟಿಕೋನ ಮಾತ್ರ ಬದಲಾಗಬೇಕು ಅಷ್ಟೆ.

ಜನಪದ ಸಾಹಿತ್ಯ ಪಠ್ಯಕ್ಕೆ ಪೂರಕ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪರಿಚಿತವಾಗಿರುವ ಲಾವಣಿ, ಜಾನಪದ, ಹಂತಿಪದ, ಸೋಬಾನೆಪದ, ಬೀಸುವ ಕಲ್ಲಿನ ಪದ, ಕುಟ್ಟೋಪದ, ರಿವಾಯತ್ ಪದ (ಮೊಹರಂ ಆಚರಣೆಯಲ್ಲಿ ಹಾಡುವ ಪದ) ಗಳಲ್ಲಿ ಪರಿಸರ, ನೀರು, ಸಂಬಂಧ, ಅನುಕಂಪ, ಅನ್ಯೋನ್ಯತೆ, ಪರೋಪಕಾರ, ಮಾನವೀಯತೆ ಮೊದಲಾದ ವಿಷಯಗಳಿವೆ. ಈ ಜನಪದ ಸಾಹಿತ್ಯವು ಕಥೆಗಳು, ಹಾಡುಗಳು, ಒಗಟುಗಳ ರೂಪದಲ್ಲಿದೆ. ಅವುಗಳನ್ನು ಪಠ್ಯಕ್ಕೆ ಪೂರಕ ಚಟುವಟಿಕೆಯನ್ನಾಗಿ ಮಾಡಿಕೊಂಡು ಬೋಧಿಸಲು ಸಾಧ್ಯವಿದೆ.

ಅಂತಹ ಸಾಹಿತ್ಯವನ್ನು ಸಂಗ್ರಹ ಮಾಡಲು, ಶಾಲೆಯಲ್ಲಿಯೇ ಪ್ರದರ್ಶನ ಮಾಡಲು, ಜನಪದಕಲಾವಿದರನ್ನು ಸಂದರ್ಶನ ಮಾಡುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು.

ಪರಿಸರಕ್ಕೆ ಸಂಬಂಧಪಟ್ಟಂತೆ ಮಳೆ ನೀರಿನ ಮಹತ್ವವನ್ನು ಸಾರುವ ಜನಪದೀಯ ಆಚರಣೆಗಳಾದ ಗುಳ್ಳವ್ವ, ಗುರ್ಜಿಪೂಜೆ, ಜೋಕಪ್ಪನ ಮೆರವಣಿಗೆಯಂತಹ ಜನಪದ ಆಚರಣೆಗಳಲ್ಲಿ ಅಡಗಿರುವ ತಿರುಳನ್ನೇ ಎತ್ತಿಕೊಂಡು ಜಲಸಂರಕ್ಷಣೆಯ ಪಾಠ ಮಾಡಬಹುದು. ಅಡುಗೆ ಮನೆಯಲ್ಲಿ ಡಬ್ಬಗಳನ್ನು ಹೊಂದಿಸುವುದರ ಮೂಲಕ ಸಾಮಾನ್ಯ ಹಾಗೂ ಸರಳ ವಿಧಾನಗಳನ್ನು ಬಳಸಿ ಗಣಿತ ವಿಷಯವನ್ನು ಬೋಧನೆ ಮಾಡಬಹುದು. ದೊಡ್ಡ ಹಾಗೂ ಸಣ್ಣ ಡಬ್ಬಿಗಳನ್ನು ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸಿಡುವುದರ ಕ್ರಿಯೆಯಿಂದ ಏರಿಕೆ, ಇಳಿಕೆ ಕ್ರಮವನ್ನು ತಿಳಿಸಬಹುದು. ಜೇಡರ ಬಲೆ, ಔಡಲ ಎಲೆಯ ವಿನ್ಯಾಸ, ದಾಸವಾಳದ ಹೂವಿನ ಪಕಳೆಗಳ ಆಧಾರ ಇಟ್ಟುಕೊಂಡು ಜಾಲಾಕೃತಿಗಳನ್ನು ತಿಳಿಸಬಹುದು.

ಹೀಗೆ ದೃಶ್ಯ ಮಾಧ್ಯಮ, ನೃತ್ಯ, ರಂಗಭೂಮಿ, ಸಂಗೀತ, ಗೊಂಬೆಯಾಟದ ಮೂಲಕ ಶಾಲೆಗಳಲ್ಲಿ ಪಾಠ ಮಾಡುವ ಸುಲಭ ಕಲಿಕೆಯ ಆಯಾಮಗಳನ್ನು ‘ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆ’ಯ (ಐಎಫ್‌ಎ) ಕಲಿ– ಕಲಿಸು ಕಾರ್ಯಕ್ರಮ ಪರಿಚಯಿಸುತ್ತಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಸೃಜನಶೀಲ ಕಲೆಯನ್ನು ಸಮರ್ಥವಾಗಿ ಬಳಸಿಕೊಂಡು ಮಕ್ಕಳಲ್ಲಿನ ಅಂತರ್ಗತ ಕಲಿಕೆಯ ಸೂಕ್ಷ್ಮತೆಗಳನ್ನು ಹೊರತೆಗೆಯುವುದು ಇದರಿಂದ ಸಾಧ್ಯ.

(ಲೇಖಕರು ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ
ಸಮಾಜ ವಿಜ್ಞಾನ ಶಿಕ್ಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT