ಇದು ಕತೆ ಹೇಳುವ ಸಮಯ

7

ಇದು ಕತೆ ಹೇಳುವ ಸಮಯ

Published:
Updated:

ಅಜ್ಜ- ಅಜ್ಜಿ ಹೇಳಿದ ಕತೆಗಳು ನಿಜಕ್ಕೂ ರೋಚಕ. ಅವು ಇಂದಿಗೂ ನೆನಪಿನಾಳದಲ್ಲಿ ನಳನಳಿಸುತ್ತಿವೆ. ಎಂದೂ ಮರೆಯದ ಕತೆಯಾಗಿ ಸದಾ ಹಸಿರಾಗಿವೆ. ಇಂದಿನ ಮಕ್ಕಳಿಗೆ ಅಜ್ಜ- ಅಜ್ಜಿ ಹೇಳುವ ಕತೆಗಳೆಂದರೇನೆಂಬುದೇ ಗೊತ್ತಿಲ್ಲ. ಕಾರಣ ಕಾಲ ಬದಲಾಗಿದೆ. ಅವರ ಸ್ಥಳವನ್ನು ಕಾರ್ಟೂನ್ ವಾಹಿನಿಗಳು ಆಕ್ರಮಿಸಿಕೊಂಡಿವೆ. ಅವರೂ ಬೇರೆ ಕೆಲಸಗಳಲ್ಲಿ ಮಗ್ನರಾಗಿದ್ದಾರೆ.

ಕತೆ ಓದುವುದು ಹಾಗೂ ಕೇಳುವುದು ಒಂದು ವಿಭಿನ್ನ ಅನುಭವ. ಆ ಎರಡೂ ಕ್ರಿಯೆಗಳು ಮಗುವಿನ ಆಲೋಚನಾ ಶಕ್ತಿಯನ್ನು ಹಿಗ್ಗಿಸುತ್ತವೆ. ಕಲ್ಪನಾ ಶಕ್ತಿ ವಿಸ್ತರಿಸುತ್ತವೆ ಎಂಬುದು ಮನೋವಿಜ್ಞಾನಿಗಳ ಅಂಬೋಣ.

ನೈತಿಕತೆ ಹಾಗೂ ಜೀವನ ಪಾಠಗಳನ್ನೇ ಮೂಲಾಧಾರವಾಗಿಟ್ಟು ಕೊಂಡಿದ್ದ ಅಂದಿನ ಅಜ್ಜ- ಅಜ್ಜಿ ಹೇಳಿದ ಕತೆಗಳು ವ್ಯಕ್ತಿತ್ವವನ್ನು ರೂಪಿಸುವಂಥವು ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಅಜ್ಜ- ಅಜ್ಜಿಯರು ಆ ರೀತಿಯ ಕತೆಗಳನ್ನು ಹೇಳಿದರೆ ಅದೆಷ್ಟು ಚೆನ್ನ? ಹಳೆಯ ಕಾಲದ ಅಜ್ಜ- ಅಜ್ಜಿಯರು ಇಂದು ಇದ್ದಿದ್ದರೆ ಅದೆಷ್ಟು ಚೆನ್ನ? ಖಂಡಿತವಾಗಿಯೂ ಆ ಕೊರಗು ಇದೆ. 
ಅಂತಹ ಕೊರಗನ್ನು ಮರೆಯಾಗಿಸ ಲೆಂದೇ ಹಾಗೂ ಅಜ್ಜ- ಅಜ್ಜಿ ಹೇಳಿದ ಅಂದಿನ ಕತೆಗಳಗೆ ಮರುಹುಟ್ಟು ಕೊಡಲೆಂದೇ ಬೆಂಗಳೂರಿನ ಪರಂಪರಾ ಕಲ್ಚರಲ್ ಫೌಂಡೇಷನ್ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಸಾಹಿತ್ಯ, ಸಾಂಸ್ಕ್ರತಿಕ ಚಟುವಟಿಕೆ ಗಳಿಗಾಗಿ ಸಮಾನ ಮನಸ್ಕರು ಹಾಗೂ ಆಸಕ್ತರು ರಚಿಸಿಕೊಂಡಿರುವ ಕೂಟವೇ ಪರಂಪರಾ ಕಲ್ಚರಲ್ ಫೌಂಡೇಷನ್. ಇದರಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಹಾಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂದು ತುಡಿತ ಉಳ್ಳವರು ಸದಸ್ಯರಾಗಿದ್ದಾರೆ.

ಈ ಸಮಾನ ಮನಸ್ಕರು ಆರಂಭಿಸಿರುವ ಪ್ರಯೋಗದ ಹೆಸರೇ 'ಕತೆ ಹೇಳುವೆ'. ಇದು ತಿಂಗಳಿನ ಒಂದು ಶನಿವಾರದಂದು ಯಾವುದಾದರೊಂದು ಪ್ರಾಥಮಿಕ ಶಾಲೆಯಲ್ಲಿ ಎರಡು ಗಂಟೆಗಳ ಕಾಲ ನೆಡೆಯುವ ಕಾರ್ಯಕ್ರಮ.

‘ಕನ್ನಡ ಭಾಷೆಗಾಗಿ ತಳಮಟ್ಟದಲ್ಲಿ ಆಗುತ್ತಿರುವ ಪ್ರಯತ್ನಗಳು ಕಡಿಮೆ. ಮಕ್ಕಳಿಗೆ ಇಂದು ಶುದ್ಧವಾಗಿ ಕನ್ನಡ ಓದುವಂತೆ ಹಾಗೂ ಬರೆಯುವಂತೆ ಮಾಡುವ ಅಗತ್ಯವಿದೆ. ಅಂತಹ ಕ್ರಿಯಗಳೇ ಕನ್ನಡ ಭಾಷೆಯನ್ನು ಬಲಿಷ್ಠಗೊಳಿಸಬಲ್ಲವು’ ಎಂಬುದು ಫೌಂಡೇಷನ್ ಅ ಧ್ಯಕ್ಷ ಜಿ.ಪಿ.ರಾಮಣ್ಣ ಅವರ ಅಭಿಮತ.

ಕನ್ನಡವನ್ನು ಬಲಿಷ್ಠಗೊಳಿಸುವ ಹಾಗೂ ಮರೆತುಹೋದ ಕತೆಗಳಿಗೆ ಮರುಹುಟ್ಟು ಕೊಟ್ಟು ಮಕ್ಕಳಲ್ಲಿ ಜೀವನಪಾಠಗಳನ್ನು ಹೇಳುವ ಒಂದು ಚಿಕ್ಕ ಪ್ರಯತ್ನವಿದು ಎಂದು ರಾಮಣ್ಣ ಹೇಳುತ್ತಾರೆ.

ಕಾರ್ಯಕ್ರಮದ ಸ್ವರೂಪ: ಕತೆ ಹೇಳುವ ಸಲುವಾಗಿಯೇ ಸಾಹಿತಿಯೊಬ್ಬರನ್ನು ಆಹ್ವಾನಿಸ ಲಾಗುತ್ತದೆ. ಕತೆಯೊಂದು ಆಯ್ಕೆಯಾದ ತಕ್ಷಣ ಅದರ ಪ್ರತಿಗಳನ್ನು ಈಗಾಗಲೇ ಗುರುತಿಸಿರುವ ಶಾಲೆಯ ಮಕ್ಕಳಿಗೆ ಮುಂಚಿತವಾಗಿ ಕೊಡಲಾಗುತ್ತದೆ. ಕಾರ್ಯಕ್ರಮದ ದಿನ, ಮಕ್ಕಳು ಕತೆಯನ್ನು ಓದಿ ಸರಿಯಾಗಿ ಅರ್ಥೈಸಿ ಕೊಂಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೋಡದಯೆ ನೆನಪಿನಾಳದಿಂದ ಎಲ್ಲರ ಸಮ್ಮುಖದಲ್ಲಿ ಕತೆಯನ್ನು ಹೇಳುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತದೆ.

ಕಾರ್ಯಕ್ರಮದ ಎರಡನೇ ಭಾಗವಾಗಿ, ಇಬ್ಬರು ಮಕ್ಕಳನ್ನು ಕರೆದು ಅವರಿಗೆ ಬೇರೆ ಬೇರೆ ಕತೆಗಳನ್ನು ಎಲ್ಲರ ಸಮ್ಮುಖದಲ್ಲಿ ಓದಿ ಹೇಳಲು ಸೂಚಿಸಲಾಗುತ್ತದೆ. ಹಾಗೆ ಓದುವಾಗ ಅಥವಾ ಹೇಳುವಾಗ ಅವರ ಶಬ್ಧ ಉಚ್ಛಾರಣೆ, ಪದ ಪ್ರಯೋಗ ಹಾಗೂ ಧ್ವನಿ ಏರಿಳಿತ ಸರಿಯಾಗಿದೆಯೇ ಎಂಬುದನ್ನು ಗಮನಿಸಲಾಗುತ್ತದೆ. ತಪ್ಪಿದ್ದಲ್ಲಿ ಅದನ್ನು ಹೇಗೆ ಸರಿಮಾಡಿಕೊಳ್ಳಬೇಕೆಂಬುದನ್ನು ಹೇಳಲಾಗುತ್ತದೆ.

ಕಾರ್ಯಕ್ರಮದ ಮೂರನೆಯ ಭಾಗದಲ್ಲಿ ಕತೆ ಹೇಳುವ, ಓದುವ, ಕೇಳುವ ಹಾಗೂ ಬರೆಯುವ ಕಲೆಗಳನ್ನು ಕುರಿತಾಗಿ ತಿಳಿಹೇಳಲಾಗುತ್ತದೆ. ನೋಡದಯೇ ನೆನಪಿನಾಳದಿಂದ ಕತೇ ಹೇಳಿದ ವಿದ್ಯಾರ್ಥಿಗೆ ₹ 500 ಬಹುಮಾನ ಹಾಗೂ ಬೇರೆ- ಬೇರೆ ಕತೆ ಓದಿದ ಇಬ್ಬರೂ ಮಕ್ಕಳಿಗೆ ತಲಾ ₹ 200 ಬಹುಮಾನ ವಿತರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿ ಮಗುವಿಗೂ ಉಚಿತವಾಗಿ ಕತೆಗಳ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ತಗುಲುವು ವೆಚ್ಚವನ್ನು ಫೌಂಡೇಷನ್‍ನ ಸದಸ್ಯರೇ ಭರಿಸುತ್ತಾರೆ. ಇದು ನಮ್ಮಿಂದ ಸಾಧ್ಯವಿರುವ ಕನ್ನಡದ ಏಳಿಗೆಗಾಗಿನ  ಪ್ರಯತ್ನ’ ಎಂದು ರಾಮಣ್ಣ ನುಡಿಯುತ್ತಾರೆ.

‘ಕತೆ ಹೇಳುವೆ' ಕಾರ್ಯಕ್ರಮ ಪ್ರಸ್ತುತ ಬೆಂಗಳೂರಿಗೆ ಮಾತ್ರ ಸಿಮೀತವಾಗಿದೆ.  ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಇದೇ ರೀತಿ ಕಾರ್ಯಕ್ರಮ ನೆಡೆಸುವ ಆಲೋಚನೆಯಿದೆ ಎನ್ನುತ್ತಾರೆ ಅವರು.

ರಾಮಣ್ಣ ಅವರನ್ನು ಸಂಪರ್ಕ ಸಂಖ್ಯೆ 9448202708


ಕತೆ ಹೇಳುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !