ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಮ್ ಟೇಬಲ್ ಎಂಬ ಸಮಯ ಪರಿಪಾಲಕ

Last Updated 14 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಬೇಸಿಗೆ ರಜೆಯ ನಂತರ ಶಾಲೆ ರಿ-ಓಪನ್‌ ಸಮಯದಲ್ಲಿ, ಹೊಸದಾಗಿ ಬೈಂಡ್ ಹೊದೆಸಿಕೊಂಡು ಮಿಂಚುವ ಹೊಸ ಪುಸ್ತಕಗಳಲ್ಲಿರುವ ಹೊಸತನವನ್ನು ಖುಷಿಯಿಂದ ಅನುಭವಿಸುವುದು ಮಕ್ಕಳ ಕೆಲಸವಾದರೆ, ಈ ವರ್ಷ ಮತ್ತಿಷ್ಟೊಂದು ಹೇಗೆ ಕಲಿಸೋದಪ್ಪಾ, ಹೋದ ವರ್ಷಕ್ಕಿಂತ ಗಣಿತ ಕಷ್ಟ ಇದ್ದ ಹಾಗಿದೆ, ಸೋಷಿಯಲ್ ಬುಕ್ ಸಿಕ್ಕಾಪಟ್ಟೆ ದಪ್ಪ, ಇಷ್ಟೆಲ್ಲಾ ನಮ್ಮ ಮಕ್ಕಳು ಒಂದೇ ವರ್ಷದಲ್ಲಿ ಕಲಿಯೋಕೆ ಸಾಧ್ಯಾನಾ? ಎಂದು ಹಲವಾರು ಪೋಷಕರು ತಲೆಬಿಸಿ ಮಾಡಿಕೊಳ್ಳುತ್ತಿರುತ್ತಾರೆ. ಆದರೆ, ಅದೇ ವರ್ಷದ ಕೊನೆಗೆ ಶಿಕ್ಷಕರು ಸುಲಭವಾಗಿ ಸುಲಲಿತವಾಗಿ ಅಷ್ಟೂ ಪೋರ್ಷನ್‌ ಮುಗಿಸಿ, ನಮ್ಮ ಮಕ್ಕಳಿಗೆ ಅರೆದು ಕುಡಿಸಿರುತ್ತಾರಲ್ಲವೇ? ವರ್ಷದ ಆರಂಭದಲ್ಲಿ ‘ಎಷ್ಟೆಲಾ ಅನ್ನಿಸಿದ್ದು ವರ್ಷದ ಕೊನೆಗೆ ‘ಇಷ್ಟೇ’ ಅನ್ನಿಸೋಕೆ ಕಾರಣ ಸಮಯದ ಸದ್ಬಳಕೆ; ಇದೇ ಕಾರಣಕ್ಕೇ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಯಾವುದು ತಯಾರಿರಲಿ, ಬಿಡಲಿ, ವೇಳಾಪಟ್ಟಿಯಂತೂ ತಯಾರಿರುತ್ತೆ. ಎಷ್ಟೊಂದು ಮಕ್ಕಳು, ಎಷ್ಟೊಂದು ತರಗತಿಗಳು, ಎಷ್ಟೊಂದು ವಿಷಯಗಳು, ಓದಿನ ಜೊತೆಗೆ ಹಾಗೂ ಅದರಾಚೆಗೆ ಎಷ್ಟೊಂದು ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳು, ರಜೆ, ಶಾಲಾ ಪ್ರವಾಸ, ವಾರ್ಷಿಕೋತ್ಸವ, ಕ್ರೀಡಾದಿನಾಚರಣೆ - ಹೀಗೆ ಶಾಲೆಯಲ್ಲಿ ಒಂದು ವರ್ಷದಲ್ಲಿ ನಡೆಯಬೇಕಾಗಿರುವುದು ಒಂದೆರಡಲ್ಲ. ಇಷ್ಟೆಲ್ಲವನ್ನೂ ಸಮರ್ಪಕವಾಗಿ ಪೂರೈಸಲು ಒಂದು ಸಮರ್ಥ ವೇಳಾಪಟ್ಟಿಯ ಆವಶ್ಯಕತೆಯಿದೆ ಅಲ್ಲವೇ?

ಹಿಮಾಲಯದಂತಹ ಬೃಹತ್ ಪರ್ವತವನ್ನು ಏರಲು, ಸಿಕ್ಕಾಪಟ್ಟೆ ತಯಾರಿ ಬೇಕಿರಬಹುದು; ಆದರೂ ಆ ಶ್ರೇಣಿಯ ಬೃಹತ್ ಬೆಟ್ಟಗಳನ್ನು ಹತ್ತಿ ಗೆಲ್ಲುವ ಚೈತ್ರಯಾತ್ರೆಯು, ಪ್ರಾರಂಭವಾಗುವುದು ಒಂದು ಹೆಜ್ಜೆಯಿಂದಲೇ! 42.195 ಕಿಲೋಮೀಟರ್‌ಗಳ ಮ್ಯಾರಥಾನ್ ಓಡಿ ಮುಗಿಸುವವರೂ, ಅದನ್ನು ಪ್ರಾರಂಭಿಸುವುದು ಒಂದು ಹೆಜ್ಜೆಯಿಂದಲೇ; ಪರ್ವತಾರೋಹಿಗಳಿಗಾಗಲೀ ಓಡುವವರಿಗಾಗಲೀ ಯಾವುದೇ ಕ್ಷೇತ್ರದ ಸಾಧಕರಿಗಾಗಲೀ ಎರಡು ವಿಷಯ ಮಾತ್ರ ಅತ್ಯಂತ ಕರಾರುವಾಕ್ಕಾಗಿ ಗೊತ್ತಿರುತ್ತದೆ: ಮೊದಲನೆಯದು, ತಮ್ಮ ದೊಡ್ಡ ಟಾಸ್ಕ್‌ ಅನ್ನು ಚಿಕ್ಕ ಚಿಕ್ಕ ಹಂತಗಳಾಗಿ, ಘಟಕಗಳಾಗಿ ವಿಭಾಗಿಸಿಕೊಳ್ಳುವುದು; ಎರಡನೆಯದಾಗಿ ಆ ಪ್ರತಿಯೊಂದು ಘಟಕಕ್ಕೂ ಇಂತಿಷ್ಟೇ ಸಮಯ ಎಂದು ಮೊದಲೇ ನಿರ್ಧರಿಸಿ, ಅದನ್ನು ಪಾಲಿಸುವುದು. ಇಷ್ಟು ಮಾಡಿದರೆ ಸಾಕು, ಬೆಟ್ಟದಷ್ಟು ದೊಡ್ಡ ಕೆಲಸ ಎಂದು ಕಂಡುಬಂದದ್ದು ಹೂವೆತ್ತಿದಷ್ಟು ಸರಾಗವಾಗಿ ಪೂರ್ಣಗೊಂಡಿರುತ್ತದೆ.

ಶಾಲೆಯಲ್ಲಿ ಸಮಯದ ಸದ್ಬಳಕೆಗೆ ಟೈಮ್‍ಟೇಬಲ್ ಹೇಗೆ ಅವಶ್ಯವೋ, ಮನೆಯಲ್ಲೂ ಓದಿಗೆ ಒಂದು ಟೈಮ್‍ಟೇಬಲ್ ಅವಶ್ಯ; ನಮ್ಮ ಮಗುವು ಎಲ್.ಕೆ.ಜಿ.ಯಲ್ಲಿರಲಿ, ಎಂ.ಬಿ.ಬಿ.ಎಸ್. ಓದುತ್ತಿರಲಿ, ಇದು ಬೇಕೇಬೇಕು. ಏಕೆಂದರೆ, ವೇಳಾಪಟ್ಟಿಯು ಕೇವಲ ಬೃಹತ್ ಸಿಲೆಬಸ್‍ ಅನ್ನು ನಮ್ಮ ಅಂಗೈಗೆರೆಯಷ್ಟು ಪರಿಚಿತ ಮಾಡಿಕೊಳ್ಳಲು ಮಾತ್ರವಲ್ಲ; ಚಿಕ್ಕಂದಿನಿಂದಲೇ ಶಿಸ್ತು ಮೂಡುವುದಕ್ಕೂ ಅಗತ್ಯ; ಪುಟ್ಟ ಮಕ್ಕಳಾಗಲೀ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿರುವವರಾಗಲೀ ಅವರವರಿಗೆ ಇರುವ ಓದಿನ ಹೊರೆಯನ್ನು, ಹೊರೆಯಲ್ಲವೆನಿಸಲು ವೇಳಾಪಟ್ಟಿಯ ಸಹಾಯ ಅನಿವಾರ್ಯ. ದಿನದ ಯಾವ ಹೊತ್ತಿಗೆ ಏಳಬೇಕು ಎಂಬಲ್ಲಿಂದ ಪ್ರಾರಂಭವಾಗಿ, ಮಲಗುವ ಮುನ್ನ ಎಷ್ಟೆಲ್ಲಾ ಕೆಲಸಗಳಿಗೆ ತನ್ನ ಬಳಿ ಸಮಯವುಂಟು ಎಂಬುದನ್ನು ದಾಖಲಿಸುವ ಜೊತೆಗೆ ಮಲಗುವುದು ಇಷ್ಟೋತ್ತಿಗೆ ಎಂದು ಡೆಡ್‌ಲೈನ್‌ ಹಾಕಿಕೊಳ್ಳುವವರೆಗೆ ಟೈಮ್‍ಟೇಬಲ್ ಸಾಗುತ್ತದೆ; ನಮ್ಮ ಕ್ಷಣಕ್ಷಣವೂ ಈ ವೇಳಾಪಟ್ಟಿಗೆ ಪರಿಚಿತ! ಈ ಸಮಯಕ್ಕೇ ಏಳಬೇಕು ಎಂಬಲ್ಲಿ ಮಕ್ಕಳಿಗೊಂದು ಶಿಸ್ತು ರೂಢಿಯಾಗುತ್ತದೆ. ಇಂತಿಷ್ಟೇ ಸಮಯಕ್ಕೆ ಮಲಗಬೇಕು ಎಂಬಲ್ಲಿ, ತನ್ನ ಕೆಲಸಗಳನ್ನು ಪೂರೈಸಲು ಒಂದು ನಿಗದಿತ ಸಮಯ ಮಾತ್ರವೇ ತಾನು ತೆಗೆದುಕೊಂಡು, ಅಷ್ಟರ ಒಳಗೇ ಮುಗಿಸಬೇಕು ಎಂಬುದು ಅರ್ಥವಾಗುತ್ತದೆ. ಪ್ರತಿಯೊಂದು ಶೈಕ್ಷಣಿಕ ಹಾಗೂ ಶಿಕ್ಷಣೇತರ ವಿಷಯಕ್ಕೂ ಇಂತಿಷ್ಟು ಎಂದು ಸಮಯ ನಿಗದಿಯಾಗಿರುವ ಕಾರಣ, ಎಲ್ಲಾ ವಿಷಯಗಳಲ್ಲೂ ಪರಿಣತಿ ಹೊಂದಲು ಸಾಧ್ಯವಾಗುತ್ತದೆ ಮತ್ತು ಒಂದು ವಿಷಯವನ್ನು ಓದುವಾಗ ಮತ್ತೊಂದು ಬಾಕಿ ಇದೆ, ಯಾವಾಗಪ್ಪಾ ಅದನ್ನು ಮುಗಿಸೋದು ಎಂಬ ಚಿಂತೆ ಕಾಡುವುದಿಲ್ಲ. ಆ ವಿಷಯಕ್ಕೂ ಮತ್ತೊಂದು ನಿಗದಿತ ಸಮಯ ವೇಳಾಪಟ್ಟಿಯಲ್ಲಿ ಇದೆಯಲ್ಲ? ಹಾಗಾಗಿ ನಿರಾತಂಕವಾಗಿ ಯಾವ ಸಮಯಕ್ಕೆ ಏನು ಮಾಡಬೇಕು ಎಂದು ನಿರ್ಧರಿಸಿಯಾಗಿದೆಯೋ, ಅದನ್ನು ಮಾಡಿದರೆ ಸಾಕು, ಹೀಗೆ ಕನ್ನಡ, ಇಂಗ್ಲಿಷ್‌, ಗಣಿತ, ವಿಜ್ಞಾನ, ಸಮಾಜ, ಕಂಪ್ಯೂಟರ್ ಸೇರಿದಂತೆ ಎಲ್ಲ ವಿಷಯಗಳಿಗೂ ಸಮಯ ಮೀಸಲಿಡುವುದಲ್ಲದೇ ಸಂಗೀತ, ಚಿತ್ರಕಲೆ, ನೃತ್ಯ, ಆಟಗಳಿಗೂ ಇಂತಿಷ್ಟೇ ಎಂದು ಸಮಯ ಮೀಸಲಿಡುವುದರಿಂದ, ಇವೆಲ್ಲವೂ ದಿನಚರಿಯ ಭಾಗವಾಗಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ.

ಆದರೆ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಭಾಗವಾಗಿ, ಮಕ್ಕಳು ಶಾಲೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ, ಮನೆಯಲ್ಲಿರುವ ಸಮಯವೇ ಕಡಿಮೆ; ಅದಕ್ಕೂ ಟೈಮ್‍ಟೇಬಲ್ ಬೇಕೇ ಎನ್ನುತ್ತೀರಾ? ಕಡಿಮೆ ಸಮಯವಿರುವಾಗಲೇ ಅದರ ಸದ್ಬಳಕೆಯಾಗಬೇಕು ಅಲ್ಲವೇ? ಇರುವ ಸ್ವಲ್ಪ ಸಮಯವನ್ನೇ ‘ಅದೂ ಇದೂ’ ಎಂದು ಕಾಲಹರಣ ಮಾಡುತ್ತಾ, ಸಮರ್ಪಕವಾಗಿ ಬಳಸಿಕೊಳ್ಳದೇ, ಪರೀಕ್ಷೆಯ ಸಮಯದಲ್ಲಿ ಅನಪೇಕ್ಷಿತ ಒತ್ತಡಕ್ಕೆ ನಮ್ಮ ಮಕ್ಕಳು ಈಡಾಗಬೇಕೇ? ಬೆಳೆಯುತ್ತಿರುವ ಮಕ್ಕಳಲ್ಲಿ ಒತ್ತಡ ಎಂಬುದು ಇಂದಿನ ದಿನಮಾನದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಎಂದು ಸಮೀಕ್ಷೆಗಳು ವರದಿ ಮಾಡುತ್ತಲೇ ಇವೆ; ಇಂತಹ ತೊಂದರೆಗೆ ನಮ್ಮ ಮಕ್ಕಳು ಈಡಾಗಬಾರದಾದ್ದರಿಂದ, ನಮ್ಮ ಮಾರ್ಗದರ್ಶನದಲ್ಲಿ ಅವರಿಗೆ ಮನೆಯಲ್ಲಿ ಪಾಲಿಸಲು ಒಂದು ವೇಳಾಪಟ್ಟಿಯನ್ನು ತಯಾರಿಸಲು ನಾವು ಪ್ರೋತ್ಸಾಹಿಸಬೇಕು. ಪ್ರತಿಯೊಂದು ಮಗು, ಅದರ ಕಲಿಕಾ ಸಾಮರ್ಥ್ಯ, ಅದರ ಆಹಾರ-ನಿದ್ದೆ-ವಿರಾಮದ ಅವಶ್ಯಕತೆಗಳು ವಿಭಿನ್ನ; ಪ್ರತಿ ಮನೆಯ ದೈನಂದಿನ ಕಾರ್ಯಕ್ರಮಗಳೂ ವಿಭಿನ್ನ; ಒಂದು ಮನೆಯಲ್ಲಿ ಐ.ಟಿ. ಕಂಪನಿಯ ತಾಯಿಗೆ ನೈಟ್‍ಶಿಫ್ಟ್ ಇರಬಹುದು; ಮತ್ತೊಂದು ಮನೆಯಲ್ಲಿ ಸದಾ ಕಾಯಿಲೆ, ಆಸ್ಪತ್ರೆ ಎಂದು ಓಡಾಡಬೇಕಾದ ಅನಿವಾರ್ಯತೆಯಿರಬಹುದು. ಒಂದು ಮನೆಯಲ್ಲಿ ಎಲ್ಲರೂ ಬೆಳಿಗ್ಗೆ ಬೇಗ ಎದ್ದು ಚುರುಕಾಗಿ ತಮ್ಮ ಕೆಲಸಗಳನ್ನು ನಿರ್ವಹಿಸುವ ಜನರಿದ್ದರೆ, ಮತ್ತೊಂದರಲ್ಲಿ ಎಲ್ಲರೂ ಕುಂಭಕರ್ಣರೇ! ಹೀಗಿರುವಾಗ, ತಮ್ಮ ಮನೆಯ ಸಂವಿಧಾನಕ್ಕೆ, ಮಕ್ಕಳ ಶಾಲೆಯ ಟೈಮಿಗೆ, ಮಕ್ಕಳ ಡ್ಯಾನ್ಸ್ ಕ್ಲಾಸ್, ಕರಾಟೆ ಕ್ಲಾಸ್ ಸಮಯಕ್ಕೆ ಅನುಗುಣವಾಗಿ ದೈನಂದಿನ ವೇಳಾಪಟ್ಟಿಯನ್ನು ತಯಾರಿಸಬೇಕಾಗುತ್ತದೆ. ಜೊತೆಗೇ, ನಮ್ಮ ವೇಳಾಪಟ್ಟಿಯನ್ನೂ ಸಾಧ್ಯವಾದಷ್ಟೂ ಮಕ್ಕಳ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾಗುತ್ತದೆ; ಅಂದರೆ, ನಾವು ಜೋರಾಗಿ ಟಿ.ವಿ. ನೋಡುತ್ತಾ ಇರುವ ಸಮಯದಲ್ಲಿ, ಮಕ್ಕಳ ಓದುವ ಸಮಯವನ್ನು ಹೊಂದಿಸಿದ್ದರೆ, ವಾಲ್ಯೂಮ್ ಕಡಿಮೆ ಮಾಡುವುದನ್ನೋ ಮೂರ್ಖರ ಪೆಟ್ಟಿಗೆಯನ್ನು ಆಫ್ ಮಾಡುವುದನ್ನೋ ರೂಢಿಸಿಕೊಳ್ಳಬೇಕಾಗುತ್ತದೆ. ಮಕ್ಕಳ ವೇಳಾಪಟ್ಟಿಯು ದಿನಾ ಬೇಗೆದ್ದು ಓದುವ ಅನಿವಾರ್ಯತೆಯನ್ನು ಸೂಚಿಸುತ್ತಿದ್ದರೆ, ಅವರಿಗಿಂತ ಮೊದಲು ನಾವೆದ್ದು, ಅವರನ್ನು ಬೇಗ ಏಳುವ ಹಾಗೂ ಓದುವ ರೂಢಿಗೆ ಹಚ್ಚಬೇಕಾಗುತ್ತದೆ. ಹೀಗೆ, ಒಮ್ಮೆ ವೇಳಾಪಟ್ಟಿಯ ಸುವ್ಯವಸ್ಥಿತ ದಿನಚರಿಗೆ ಒಗ್ಗಿಕೊಂಡ ಮಗು, ಅದನ್ನು ಪಾಲಿಸುವುದು ಅನಿವಾರ್ಯಕರ್ಮ ಎಂದು ಭಾವಿಸುವುದಿಲ್ಲ; ಅಕಸ್ಮಾತ್, ವೇಳಾಪಟ್ಟಿಯನ್ನು ಪಾಲಿಸಲು ಪ್ರಾರಂಭಿಸಿದ ದಿನಗಳಲ್ಲಿ ಮಗುವಿಗೆ ಹೊಂದಿಕೊಳ್ಳಲು ಕಷ್ಟವೆನಿಸಿ, ಯಾರಿಗೆ ಬೇಕು ಈ ಟೈಮ್‍ಟೇಬಲ್ ತಾಪತ್ರಯ ಎಂದು ಮೂಗುಮುರಿದರೆ, ಟೈಮ್‍ಟೇಬಲ್‍ನ ಪ್ರಾಮುಖ್ಯವನ್ನು ನಾವು ಅರ್ಥ ಮಾಡಿಸುವುದು ಬಹುಮುಖ್ಯ ಹೀಗೆ, ಒಮ್ಮೆ ವೇಳಾಪಟ್ಟಿಯ ಸುವ್ಯವಸ್ಥಿತ ದಿನಚರಿಗೆ ಒಗ್ಗಿಕೊಂಡ ಮಗು, ತನ್ನ ಬಗ್ಗೆ ತಾನು ಹೆಚ್ಚು ಅರಿಯುತ್ತಾ ಸಾಗುತ್ತದೆ; ಯಾವ ವಿಷಯದಲ್ಲಿ ತಾನು ಪರಿಣತ, ಯಾವ ವಿಷಯದಲ್ಲಿ ತಾನು ಹೆಚ್ಚು ಪರಿಶ್ರಮ ಹಾಕಬೇಕಾಗಿದೆ ಎಂಬುದನ್ನು ಮನನ ಮಾಡಿಕೊಳ್ಳುತ್ತದೆ. ತನ್ನ ಸಾಮರ್ಥ್ಯವು ಕಡಿಮೆ ಎಂದು ಅರಿವಾದಾಗ, ಅದನ್ನು ವೃದ್ಧಿಸುವ ಕಡೆಗೆ ಗಮನ ತಾನೇತಾನಾಗಿ ಹರಿದು, ನಿಜಾರ್ಥದ ಬೆಳವಣಿಗೆ ಸಾಧ್ಯವಾಗುತ್ತದೆ. ಹಾಗೆಂದು, ವೇಳಾಪಟ್ಟಿಯನ್ನು ಹುಚ್ಚು ಶಿಸ್ತಿನಿಂದ ಪಾಲಿಸಲೇಬೇಕೆಂದು ಅಥವಾ ಒಂದು ದಿನ ಅರ್ಧ ಗಂಟೆ ಆಚೀಚೆ ಆದರೆ ಆಕಾಶವೇ ತಲೆಮೇಲೆ ಬಿತ್ತೆಂದು ತಲೆಕೆಡಿಸಿಕೊಳ್ಳಲು ವೇಳಾಪಟ್ಟಿಯೇನೂ ಸರ್ವಾಧಿಕಾರಿ ಅಲ್ಲ; ನಮ್ಮನ್ನು ನಾವು ಹೆಚ್ಚು ಅರಿಯಲು, ಹೆಚ್ಚು ಸಮರ್ಥರಾಗಿಸಿಕೊಳ್ಳಲು, ಒತ್ತಡವಿಲ್ಲದೇ ಬದುಕಿನ ಮುಖ್ಯ ಅಮುಖ್ಯಗಳ ನಡುವೆ ಗೆರೆ ಎಳೆದುಕೊಂಡು ಶಿಸ್ತುಬದ್ಧವಾಗಿ ಸಂತೃಪ್ತರಾಗಿ ಬೆಳೆಯಲು ಸಹಕಾರಿಯಾದ ಸನ್ಮಿತ್ರ. ಅದರ ಪ್ರಾಮುಖ್ಯವನ್ನು ಅರಿತರೆ, ಅದರ ಪಾಲನೆ ಸುಲಭಸಾಧ್ಯ. ವೇಳಾಪಟ್ಟಿಯನ್ನು ಸರ್ವಾಧಿಕಾರಿಯೆನ್ನಬೇಕೋ, ಸನ್ಮಿತ್ರನೆನ್ನಬೇಕೋ, ಆಯ್ಕೆ ನಮ್ಮದೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT