‘ಪ್ರಗತಿ’ ವಿಭಿನ್ನ ಪ್ರತಿಭೆಗಳ ಭಿನ್ನ ಪ್ರಪಂಚ !

7
ವಿಶೇಷ ಮಕ್ಕಳಿಗೆ ವಿಶಿಷ್ಟ ಶಾಲೆ

‘ಪ್ರಗತಿ’ ವಿಭಿನ್ನ ಪ್ರತಿಭೆಗಳ ಭಿನ್ನ ಪ್ರಪಂಚ !

Published:
Updated:
Deccan Herald

ಅಲ್ಲಿ ಕೆಲವರು ತನ್ಮಯತೆಯಿಂದ ಕೆಲಸ ಮಾಡುತ್ತಿದ್ದರೆ, ಇನ್ನೊಂದಷ್ಟು ಮಂದಿ ಕಕ್ಕಾಬಿಕ್ಕಿಯಾಗಿ ಅತ್ತಿತ್ತ ನೋಡುತ್ತಿರುತ್ತಾರೆ. ಡಿಜಿಟಲ್ ಯೂನಿಟ್‌ನಲ್ಲಿ ಆದಿತ್ಯ ಒಂದು ಮಗ್ ಮೇಲೆ ಮುದ್ರಿತವಾದ ಚಿತ್ರವನ್ನೂ ಅರವಿಂದ ತಾನು ರಚಿಸಿದ ನೃತ್ಯ, ಹಗ್ಗದಾಟ ಹಾಗೂ ಸೈಕಲಿಂಗ್ ಚಿತ್ರಗಳನ್ನೂ ಉತ್ಸಾಹದಿಂದ ತೋರಿಸುತ್ತಾರೆ.

ಅತ್ತ, ಕಪ್ಪು ಹಿನ್ನೆಲೆಯಲ್ಲಿ ಬಿಳಿ ವೃತ್ತಗಳನ್ನು ಎಳೆದಿರುವ ಸಯಾನಿಗೂ ಅಷ್ಟೇ ಖುಷಿ. ತಮಗೆ ಏನು ಖುಷಿ ಕೊಡುತ್ತದೋ ಅದನ್ನೇ ಅವರು ಮಾಡುತ್ತಾರೆ. ಈ ಕಡೆ ಬಂದರೆ, ಸೃಜನಶೀಲ ವಿಭಾಗದಲ್ಲಿ ಬಟ್ಟೆಯ ಮೇಲೆ ಚೆಂದದ ಹೊಲಿಗೆಗಳು ನಿಮ್ಮ ಗಮನ ಸೆಳೆಯುತ್ತವೆ. ಅದಕ್ಕೆ ಬೇಕಾದ ತಾಳ್ಮೆ ಎಷ್ಟು ಎಂಬುದನ್ನು ನೀವು ನೋಡಿಯೇ ತಿಳಿಯಬೇಕು.

ಇವುಗಳೆಲ್ಲ ‘ಸೃಷ್ಟಿ’ಯಾಗಿರುವುದು ನಮ್ಮ ನಿಮ್ಮಂಥವರಿಂದಲೇ. ಆದರೆ ಅವರು ‘ಆಟಿಸಂ’ ಅಥವಾ ಸ್ವಲೀನತೆಯಿಂದ ಬಳಲುತ್ತಿರುವವರು. ಹಾಗೆಂದು ಅವರೇನೂ ಸಾಮಾನ್ಯರಲ್ಲ. ಒಂದಷ್ಟು ಅವಕಾಶ ಹಾಗೂ ಮಾರ್ಗದರ್ಶನ ಸಿಕ್ಕರೆ, ಅಸಾಮಾನ್ಯರೇ ಆಗುತ್ತಾರೆ.

ಇದು ‘ಪ್ರಗತಿ’ ಎಂಬ ಆಟಿಸಂ ಶಾಲೆಯಲ್ಲಿ ಕಾಣುವ ವಿಶಿಷ್ಟ ನೋಟ. ‘ಆಟಿಸಂ’ನಿಂದ ಬಳಲುವವರಿಗೆ ತರಬೇತಿ ನೀಡುವ ವಿಭಿನ್ನ ಕೇಂದ್ರ. ಈ ಕೇಂದ್ರದಲ್ಲಿ ಕಲಿಯುತ್ತಿರುವ ಇಬ್ಬರು ಆಟಿಸಂ ಮಕ್ಕಳನ್ನು ಉದಾಹರಣೆಯಾಗಿ ಪರಿಗಣಿಸಿದರೆ, ಆ ಇಬ್ಬರ ನಿತ್ಯದ ದಿನಚರಿಗಳು ಸಂಪೂರ್ಣ ವಿಭಿನ್ನವಾಗಿರುತ್ತವೆ. ಈ ಲಕ್ಷಣದಿಂದ ಬಳಲುವವರಿಗೆ ತಮ್ಮ ಸಾಮರ್ಥ್ಯದ ಮೇಲೆ ನೆಲೆ ನಿಲ್ಲುವಂತೆ ಮಾಡಲು ‘ಪ್ರಗತಿ’ ಶ್ರಮಿಸುತ್ತಿದೆ.

ಬೆಂಗಳೂರಿನ ಹೊರವಲಯದ ಕೊತ್ತನೂರು ಬಳಿಯ ಬಿಲಿಶಿವಾಲೆ ಹಳ್ಳಿಯಲ್ಲಿ 2009ರಲ್ಲಿ ಸ್ಥಾಪನೆಯಾದ ‘ಬಿಶ್ವ ಗೌರಿ ಟ್ರಸ್ಟ್’ನ ಒಂದು ಭಾಗವಾಗಿರುವ ‘ಪ್ರಗತಿ’ ಸಂಸ್ಥೆ ಆಟಿಸಂ ಮಕ್ಕಳ ಜೀವನ ಸುಧಾರಣೆಗೆ ಕೆಲಸ ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ‘ಆಟಿಸಂ’ ಕುರಿತು ಹೆಚ್ಚು ಕೇಳಿ ಬರುತ್ತಿದೆ. ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ. 

‘ಆಟಿಸಂ’ ಇರುವವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಅಸಮರ್ಥರು. ಇದೇ ಕಾರಣಕ್ಕಾಗಿಯೇ ಇವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ಮಾಡಲು ಪಾಲಕರೇ ಇಷ್ಟಪಡುವುದು ಕಡಿಮೆ. ಆದರೆ ಸೂಕ್ತ ಮಾರ್ಗದರ್ಶನ ದೊರಕಿದರೆ, ಇದೇನೂ ಗಂಭೀರ ಸಮಸ್ಯೆ ಆಗಲಾರದು.

ಸ್ವಾವಲಂಬನೆ ಕಲಿಕೆ

‘ಟ್ರಸ್ಟ್’ನ ಒಂದು ಮಹತ್ವದ ಅಂಗವಾಗಿರುವ ‘ಬಬಲ್ಸ್ ಸೆಂಟರ್’ನಲ್ಲಿ ಈಗ ಆರರಿಂದ ಹದಿನೆಂಟು ವರ್ಷ ವಯೋಮಾನದ ಒಟ್ಟು 34 ವಿದ್ಯಾರ್ಥಿಗಳು ಇದ್ದಾರೆ. ಅವರ ಸಮಸ್ಯೆಗಳು ಒಬ್ಬರಿಗಿಂತ ಇನ್ನೊಬ್ಬರದು ಭಿನ್ನ. ಆಗಾಗ್ಗೆ ಕಾಡುವ ಹತಾಶೆ, ಉದ್ವೇಗ ಹಾಗೂ ಅನಿಯಂತ್ರಿತ ಭಾವನೆಗಳು ಅವರನ್ನು ಮುಖ್ಯವಾಹಿನಿಯಿಂದ ಬೇರೆಯಾಗಿ ಇಟ್ಟಿರುತ್ತವೆ. ‘ಮಗುವಿನ ಸಹಜ ಭಾವನೆಗಳು ಹೊರಹೊಮ್ಮುವಂತೆ ಮಾಡುವುದೇ ನಮ್ಮ ಗುರಿ. ಅದರ ಜತೆಗೆ ಮಗುವನ್ನು ಸ್ವಾವಲಂಬಿಯಾಗಿ ಮಾಡಲು ನಾವು ಮಧ್ಯಪ್ರವೇಶಿಸಬೇಕಾದ್ದು ಎಲ್ಲಿ ಎಂಬುದನ್ನೂ ಗುರುತಿಸುತ್ತೇವೆ. ಅಂತಿಮವಾಗಿ ಆ ಮಗುವಿನ ಜೀವನ ಉತ್ತಮವಾಗಿ ರೂಪುಗೊಳ್ಳಬೇಕಷ್ಟೇ’ ಎನ್ನುತ್ತಾರೆ, ಟ್ರಸ್ಟ್‌ನ ಸಂಸ್ಥಾಪಕ ನಿರ್ದೇಶಕರಾದ ಸರ್ಬಾನಿ ಮಲಿಕ್.

‘ಪ್ರಗತಿ’ ಅಂದರೆ ಬರೀ ಕಲಿಸುವುದು ಅಷ್ಟೇ ಅಲ್ಲ; ಅದರಲ್ಲಿ ಕಲೆ, ಕ್ರೀಡೆ, ಯೋಗ, ನೃತ್ಯ, ಸಂಗೀತ ಹಾಗೂ ಹೊಸತನದಿಂದ ಕೂಡಿದ ಚಟುವಟಿಕೆಗಳು ಇರುತ್ತವೆ. ಸಂವಾದ, ಪರಸ್ಪರ ದೃಷ್ಟಿ ಸಂಧಿಸಿ ಮಾತಾಡುವುದು, ಮುಖಭಾವ ತೋರ್ಪಡಿಸುವಿಕೆ, ಮಾತಾಡುವ ಧ್ವನಿ, ಭಾವಾರ್ಥ- ಹೀಗೆ ಹತ್ತು ಹಲವು ಕೌಶಲಗಳನ್ನು ಸೂಕ್ಷ್ಮವಾಗಿ ಕಲಿಸಲಾಗುತ್ತದೆ. ನಿತ್ಯದ ಚಟುವಟಿಕೆಗಳನ್ನು ಸರಾಗವಾಗಿ ಮಾಡಲು ಹಾಗೂ ಮಧ್ಯೆ ಮಧ್ಯೆ ಎದುರಾಗುವ ಹಿಂಜರಿಕೆಯನ್ನು ಮೆಟ್ಟಿ ನಿಲ್ಲಲು ಧೈರ್ಯ ತುಂಬಲಾಗುತ್ತದೆ. ಸಂವಹನವೇ ‘ಆಟಿಸಂ’ನ ಬಹುದೊಡ್ಡ ಸಮಸ್ಯೆ. ಅದಕ್ಕಾಗಿ ನಿರ್ದಿಷ್ಟವಾದ ಥೆರಪಿಯನ್ನು ಪಾಲಿಸಿ, ಮಗು ತನ್ನ ಅನಿಸಿಕೆಯನ್ನು ಸಮರ್ಥವಾಗಿ ಹೇಳುವಂಥ ತರಬೇತಿಯೂ ಇಲ್ಲಿದೆ. ಒಂದೊಮ್ಮೆ ಮಕ್ಕಳು ಸಲಹೆ- ಸೂಚನೆಗಳನ್ನು ಪಾಲಿಸಲು ಶುರುಮಾಡಿದ ಮೇಲೆ, ಅವರನ್ನು ಸ್ವಸಾಮರ್ಥ್ಯದ ಕೆಲಸಗಳತ್ತ ಕರೆದೊಯ್ಯಲಾಗುತ್ತದೆ. ಕಂಪ್ಯೂಟರ್, ಕಸೂತಿ ಹಾಗೂ ಮುದ್ರಣ ಕೆಲಸಗಳನ್ನು ಕ್ರಮೇಣ ಕಲಿಸಲಾಗುತ್ತದೆ. ‘ಒಂದೊಂದೇ ಚಟುವಟಿಕೆಯನ್ನು ಸೇರ್ಪಡೆ ಮಾಡುತ್ತ, ಅವರನ್ನು ಕಾರ್ಯತತ್ಪರವಾಗುವಂತೆ ಮಾಡುತ್ತೇವೆ. ಇದರಿಂದಾಗಿಯೇ, ಆ ಮಗುವಿಗೆ ಏನೇನು ಹಾಗೂ ಹೇಗೆ ಕಲಿಸಬೇಕು ಎಂಬ ವಿಷಯದಲ್ಲಿ ಶಿಕ್ಷಕರ ಪಾತ್ರಕ್ಕೆ ಮಿತಿಯೇ ಇಲ್ಲ ಎಂಬಂತೆ ಇರುತ್ತದೆ’ ಎನ್ನುತ್ತಾರೆ, ಕಾರ್ಯಕ್ರಮ ಮುಖ್ಯಸ್ಥೆ ರತ್ನಾ ದಾಸ್.

ತರಬೇತಿ ವಿಧಾನ

‘ಆಟಿಸಂ’ನಿಂದ ಬಳಲುವ ಯುವಕರಿಗೆ ‘ಪ್ರಗತಿ’ಯಲ್ಲಿ ಎರಡು ವರ್ಷಗಳ ಅವಧಿಯ ವೃತ್ತಿಪರ ತರಬೇತಿ ಆಯೋಜಿಸಲಾಗುತ್ತದೆ. ಕಳೆದ ವರ್ಷ ಈ ತರಬೇತಿ ಶುರುವಾಗಿದೆ. ಈಗ ಹದಿನಾರು ಯುವಕರು ಇಲ್ಲಿದ್ದಾರೆ. ‘ಅವರಲ್ಲಿನ ಸಾಮರ್ಥ್ಯ ಹಾಗೂ ಜ್ಞಾನ ಬೆರಗುಗೊಳಿಸುತ್ತದೆ’ ಎನ್ನುವ ಕಾರ್ಯಕ್ರಮ ಸಂಯೋಜಕಿ ಮೀನಾಕ್ಷಿ ಕರಸೆರಿ, ಜೀವನಮಟ್ಟ ಸುಧಾರಿಸುವತ್ತ ತಮ್ಮ ಗಮನವಿದೆ ಎಂದು ಹೇಳುತ್ತಾರೆ. ಡಿಜಿಟಲ್ ತರಬೇತಿ ವಿಭಾಗದಲ್ಲಿ ಮಲ್ಟಿಮೀಡಿಯಾ ಹಾಗೂ ಗ್ರಾಫಿಕ್ ಡಿಸೈನ್ ತರಬೇತಿ ಕೊಡಲಾಗುತ್ತದೆ. ಆಸಕ್ತರಿಗೆ ವಿಡಿಯೊ ಎಡಿಟಿಂಗ್ ಮತ್ತು ಡಿಜಿಟಲ್ ಪ್ರಿಂಟಿಂಗ್ ಕಲಿಯಲೂ ಅವಕಾಶವಿದೆ. ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಮತ್ತಿತರ ಸಾಮಾನ್ಯ ಕಲಿಕೆಗೆ ಆದ್ಯತೆಯಿದೆ.

‘ಅವರಲ್ಲಿ ಸಾಮರ್ಥ್ಯವೇನೋ ಇದೆ; ಆದರೆ ಕೆಲಸಗಳಿಗೆ ಅವರನ್ನು ಸಿದ್ಧಪಡಿಸುವುದೇ ಕಷ್ಟ’ ಎಂದು ಅಭಿಪ್ರಾಯಪಡುತ್ತಾರೆ ಸೃಜನಶೀಲ ವಿಭಾಗದ ವ್ಯವಸ್ಥಾಪಕಿ ಮುಬಿನ್ ತಾಜ್. ಈ ವಿಭಾಗದಲ್ಲಿ ಬಟ್ಟೆಗಳ ಮೇಲೆ ಬ್ಲಾಕ್ ಪ್ರಿಂಟಿಂಗ್, ಜಪಾನಿ ಕಲೆ ಆಧಾರಿತ ಶಿಬೊರಿ ಮುದ್ರಣ ಇತ್ಯಾದಿಗಳ ತರಬೇತಿ ಕೊಡಲಾಗುತ್ತದೆ.

‘ಬಬಲ್ಸ್‌ನಿಂದ ತುಂಬಾ ನೆರವು ಸಿಕ್ಕಿದೆ. ಶಿಕ್ಷಕರು, ಮಕ್ಕಳ ಮನಸ್ಸನ್ನು ತುಂಬಾ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಪೋಷಕರಿಗೆ ಪ್ರತಿ ತಿಂಗಳು ಚರ್ಚೆ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ಇದು ನನ್ನಂತಹ ಪೋಷಕರಿಗೆ ತುಂಬಾ ಅನುಕೂಲವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ಅದ್ವೈತ್‌ನ ತಾಯಿ ಸ್ಮೃತಿ ರಾಜೇಶ್.

ತನ್ನ ಮಗನನ್ನು ಆರು ವರ್ಷಗಳಿಂದ ಇದೇ ಕೇಂದ್ರದಲ್ಲಿ ಓದಿಸುತ್ತಿರುವ ಅವರು, ‘ಮೊದಲು ಮಗ ತುಂಬಾ ಅಳುತ್ತಿದ್ದ. ಇಲ್ಲಿಗೆ ಸೇರಿದ ನಂತರದ ದಿನಗಳಲ್ಲಿ ಅವನು ತುಂಬಾ ಬದಲಾಗಿದ್ದಾನೆ. ಈಗ ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾನೆ. ವಿಶೇಷವಾಗಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾನೆ’ ಎಂದು ಮಗನಲ್ಲಾದ ಬದಲಾವಣೆಯನ್ನು ವಿವರಿಸುತ್ತಾರೆ.

‘ಆಟಿಸಂ’ನಿಂದ ಬಳಲುವವರಿಗೆ ‘ಬಿಶ್ವ ಗೌರಿ ಟ್ರಸ್ಟ್’ನ ಸಿಬ್ಬಂದಿಯ ಅವಿರತ ಶ್ರಮ ಹಾಗೂ ಬದ್ಧತೆಯು ಹೊಸ ಪರಿಹಾರದ ದಿಕ್ಕನ್ನು ತೋರಿಸಿದೆ. ಈ ಕಾಯಿಲೆಯಿದ್ದವರು ಸಮಾಜದಿಂದ ಆದಷ್ಟು ದೂರ ಇರುತ್ತಾರೆ; ಆದರೆ ಅವರನ್ನು ಮುಖ್ಯವಾಹಿನಿಗೆ ಕರೆತರುವುದು ಬಹುಮುಖ್ಯ. ‘ಸ್ವಾವಲಂಬನೆ ಸಾಧಿಸುವುದು ಸಾಮಾನ್ಯರಿಗೆ ಸವಾಲು. ಅಂಥ ಸಮಯದಲ್ಲಿ ‘ಆಟಿಸಂ’ ಇರುವವರಿಗೆ ಅದು ಇನ್ನಷ್ಟು ಕಠಿಣ. ಅಂಥವರಿಗೆ ಪ್ರತಿ ದಿನವೂ ಕಲಿಕೆಗೆ ಸವಾಲು ಒಡ್ಡುವ ದಿನ. ಸಣ್ಣ ಸಣ್ಣ ಕಲಿಕೆಗಳೂ, ಅದನ್ನು ಕಲಿಸುವ ಶಿಕ್ಷಕರೂ ಇದ್ದರೆ ಅದೇನೂ ದೊಡ್ಡ ಹೊರೆ ಅನಿಸಲಾರದು. ಪ್ರಮುಖವಾಗಿ, ನಿನ್ನೆಗಿಂತ ನಾಳೆ ಸುಂದರ ಎಂಬ ಮಾತನ್ನು ಇಲ್ಲಿ ಅನ್ವಯಿಸಿಕೊಳ್ಳಬೇಕು’ ಎಂಬುದು ಸರ್ಬಾನಿ ಮಲಿಕ್ ಅಭಿಮತ.

ಬಬಲ್ಸ್ ಆಟಿಸಂ ಸೆಂಟರ್ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ವಿಳಾಸ: ಬಬಲ್ಸ್ ಸೆಂಟರ್ ಫಾರ್ ಆಟಿಸಂ(ಬಿಸ್ವಾ ಗೌರಿ ಚಾರಿಟಬಲ್ ಟ್ರಸ್ಟ್‌ನ ಭಾಗ), ನಂ. 102, ಬಿದರಹಳ್ಳಿ ಹೋಬಳಿ, ಬಿಲಿಶಿವಾಲೆ ಹಳ್ಳಿ, ಹೆಣ್ಣೂರು ರಸ್ತೆ ಎದುರು, ಕೊತ್ತನೂರು ಪೋಸ್ಟ್, ಬೆಂಗಳೂರು. 080–28465336.

ಚಿತ್ರಗಳು: ಲೇಖಕರವು

**

ರಂಗಭೂಮಿಯಲ್ಲೂ ಸೈ

‘ಪ್ರಗತಿ’ಯಲ್ಲಿ ತರಬೇತಿ ಪಡೆಯುವ ಯುವಕರು ರಂಗಭೂಮಿಯಲ್ಲೂ ‘ಸೈ’ ಅನಿಸಿಕೊಂಡಿದ್ದಾರೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸಾವಿರಾರು ಪ್ರೇಕ್ಷಕರ ಎದುರು ‘ದ ಲಯನ್ ಕಿಂಗ್’ ಹಾಗೂ ‘ಅಲಾದೀನ್’ ನಾಟಕ ಪ್ರದರ್ಶಿಸಿ, ಗಮನ ಸೆಳೆದಿದ್ದಾರೆ. ಮುಂದಿನ ತಿಂಗಳು (ಜನವರಿ 6ರಂದು) ‘ಜಂಗಲ್ ಬುಕ್’ ಪ್ರದರ್ಶನ ನೀಡಲಿದ್ದಾರೆ. ಸಂವಹನದ ಕೊರತೆ ಎದುರಿಸುತ್ತಿದ್ದವರು ಈ ಸಾಧನೆ ಮಾಡಿರುವುದು ಗಮನಾರ್ಹ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !