ಗುರುವಾರ , ಡಿಸೆಂಬರ್ 3, 2020
23 °C

PV Web Exclusive: ತರಗತಿ ಆರಂಭಿಸಲು ಸಜ್ಜಾಗಿರುವ ವಿಶ್ವವಿದ್ಯಾಲಯಗಳು

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರ ಇದೇ 17ರಿಂದ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ತರಗತಿಗಳನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೆ ರಾಜ್ಯದ ವಿಶ್ವವಿದ್ಯಾಲಯಗಳು ‘ಆಫ್‌ಲೈನ್‌’ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಸಿದ್ಧತೆಯಲ್ಲಿ ತೊಡಗಿವೆ. ಕೋವಿಡ್‌ ವ್ಯಾಪಕಗೊಂಡ ಕಾರಣ ಎಂಟು ತಿಂಗಳಿಂದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಕಾಲೇಜುಗಳತ್ತ ಮುಖಮಾಡುವ ದಿನಗಳು ಸಮೀಪಿಸುತ್ತಿವೆ.

ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಕೋವಿಡ್‌–19ರ ಸಂದರ್ಭದಲ್ಲಿ ಪಾಲಿಸಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ತರಗತಿಗಳನ್ನು ನಡೆಸಲು ಬಹತೇಕ ವಿ.ವಿಗಳು ಸಜ್ಜಾಗಿವೆ.

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯಗಳು (ಬೆಂಗಳೂರು  ಕೇಂದ್ರ ವಿ.ವಿ) ತರಗತಿಗಳನ್ನು ಆರಂಭಿಸಲು ಕೈಗೊಂಡಿರುವ ಕ್ರಮ ಮತ್ತು ಸಿದ್ಧತೆ ಕುರಿತು ಆಯಾ ವಿಶ್ವವಿದ್ಯಾಲಯಗಳ ಕುಲಪತಿಗಳು ಇಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ

ಸರ್ಕಾರದ ಸೂಚನೆಯಂತೆ ಇದೇ 17ರಿಂದ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲಾಗುವುದು. ‘ಆಫ್‌ಲೈನ್‌’ ಜತೆಗೆ ‘ಆನ್‌ಲೈನ್‌’ನಲ್ಲೂ ತರಗತಿಗಳೂ ಮುಂದುವರಿಯಲಿವೆ. ಈಗಾಗಲೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಕೆಲ ಪಾಠಗಳು ಮುಗಿದಿವೆ. ಹಾಗಾಗಿ ಪಠ್ಯಕ್ರಮ ಕಡಿತಗೊಳಿಸುವ ಯಾವುದೇ ಚಿಂತನೆ ವಿಶ್ವವಿದ್ಯಾಲಯಕ್ಕೆ ಇಲ್ಲ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್‌.ವೇಣುಗೋಪಾಲ್‌.

ಎಂ.ಎಸ್ಸಿ ವಿದ್ಯಾರ್ಥಿಗಳಿಗೆ ಮೊದಲು ಪ್ರಾಯೋಗಿಕ ತರಗತಿಗಳನ್ನು ಪೂರ್ಣಗೊಳಿಸಲಾಗುವುದು. ಬಳಿಕ ಅವರಿಗೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕ ಥಿಯರಿ ತರಗತಿಗಳನ್ನು ತೆಗೆದುಕೊಳ್ಳಲಾಗುವುದು. ಕಲೆ, ಮಾನವಿಕ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ‘ಆಫ್‌ಲೈನ್‌’ ತರಗತಿಗಳ ಜತೆಗೆ ನಿತ್ಯ ಒಂದರಿಂದ ಒಂದೂವರೆ ಗಂಟೆ ಆನ್‌ಲೈನ್‌ ತರಗತಿಗಳೂ ನಡೆಯುವಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಲಾಗುವುದು. ಎಂಟು ತಿಂಗಳಿಂದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳನ್ನು ಆಲಿಸಿ, ಅದಕ್ಕೆ ಹೊಂದಿಕೊಂಡಿದ್ದಾರೆ. ಹಾಗಾಗಿ ಅದನ್ನು ಕೋವಿಡ್‌ ಕಾಲಘಟ್ಟದ ಜತೆಗೆ ಕೋವಿಡೇತರ ಕಾಲಘಟ್ಟ ಮತ್ತು ಭವಿಷ್ಯದಲ್ಲೂ ಮುಂದುವರಿಸಲು ವಿ.ವಿ ಬಯಸಿದೆ ಎಂದು ಅವರು ವಿವರಿಸಿದರು.

ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶ ಇನ್ನೂ ಆಗಿಲ್ಲದ ಕಾರಣ, ಸದ್ಯಕ್ಕೆ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಜ್ಞಾನಭಾರತಿ ಆವರಣಕ್ಕೆ ಕಲಿಕೆಗೆ ಬರುತ್ತಾರೆ. ಅವರು ಬರುವಾಗ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕಾಗುತ್ತದೆ. ಪ್ರತಿ ವಿದ್ಯಾರ್ಥಿಯನ್ನು ನಿತ್ಯ ಥರ್ಮಲ್‌ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. ತರಗತಿ ಮತ್ತು ವಿ.ವಿ ಆವರಣದಲ್ಲಿ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಪ್ರತಿ ವಿದ್ಯಾರ್ಥಿಗಳು ತಮ್ಮ ಊಟದ ಡಬ್ಬಿ, ನೀರಿನ ಬಾಟಲ್‌ಗಳನ್ನು ತರಬೇಕು. ಕ್ಯಾಂಟಿನ್‌ ಬಳಕೆಯನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು ಎನ್ನುತ್ತಾರೆ ಅವರು.

ಜ್ಞಾನಭಾರತಿ ಆವರಣದಲ್ಲಿ ಇರುವ ವಿದ್ಯಾರ್ಥಿ ನಿಲಯಗಳೂ ಆರಂಭಗೊಳ್ಳಲಿವೆ. ಅಲ್ಲಿ ಪ್ರತಿ ಕೊಠಡಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗುವುದು. ಅಡುಗೆ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೊಳಪಡಿಸುವುದರ ಜತೆಗೆ ಶುಚಿತ್ವಕ್ಕೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿದ್ದಾರೆ. ಕೆಲ ಕಾಲೇಜುಗಳಲ್ಲಿ ಕೊಠಡಿಗಳ ಕೊರತೆ ಇದೆ. ಅಂಥ ಕಾಲೇಜುಗಳಲ್ಲಿ ಕೋರ್ಸ್‌ವಾರು ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಿ.ಕಾಂ ಪದವಿ ವಿದ್ಯಾರ್ಥಿಗಳ ಸಂಖ್ಯೆ ಬಹುತೇಕ ಕಾಲೇಜುಗಳಲ್ಲಿ ಹೆಚ್ಚಿದೆ. ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವಂತೆ ಮಾಡಲು ತರಗತಿಗಳನ್ನು ವಿಭಜಿಸಿ ಬೋಧನೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬರುವ ಮಾರ್ಗಸೂಚಿಯನ್ನು ಕಾಲೇಜುಗಳು ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್‌, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ಗೋವಿಂದರಾಜನಗರ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ; ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಲೇಜುಗಳು ಬರುತ್ತವೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ವಿದ್ಯಾರ್ಥಿಗಳ ಮತ್ತು ಬೋಧಕರ ಆರೋಗ್ಯದ ಬಗ್ಗೆ ಗರಿಷ್ಠ ಕಾಳಜಿವಹಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಇದೇ 17ರಿಂದ ಆರಂಭಿಸಲು ಸಜ್ಜಾಗಿರುವುದಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಡಿ. ಕೆಂಪರಾಜು ಪ್ರತಿಕ್ರಿಯಿಸಿದರು.

ತರಗತಿಗಳು ಆರಂಭಕ್ಕೂ ಮುನ್ನ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿಸಲಾಗುವುದು. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು. ವಿಶ್ವವಿದ್ಯಾಲಯದ ಆವರಣದಲ್ಲಿ ಕೋವಿಡ್‌ ಮಾರ್ಗಸೂಚಿ ಸಮರ್ಪಕವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಲು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಸ್ವಸಹಾಯಕರಂತೆ ಅವರು ಕಾರ್ಯನಿರ್ವಹಿಸುತ್ತಾರೆ. ಮಾಸ್ಕ್‌ ಸರಿಯಾಗಿ ಧರಿಸದ ಅಥವಾ ಅಂತರ ಕಾಯ್ದುಕೊಳ್ಳದ ವಿದ್ಯಾರ್ಥಿಗಳಿಗೆ ನಿಯಮಗಳನ್ನು ಪಾಲಿಸುವಂತೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ತಿಳಿಹೇಳುತ್ತಾರೆ ಎಂದರು.

ಕೋವಿಡ್‌ ಮಾರ್ಗಸೂಚಿಯ ಪಾಲನೆಯ ಅಗತ್ಯ ಮತ್ತು ಮಹತ್ವದ ಕುರಿತು ತರಗತಿಗಳಲ್ಲಿ ಬೋಧಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾರೆ. ವಿ.ವಿಯ ಎಲ್ಲ ಶೌಚಾಲಯ, ಹಾಸ್ಟೆಲ್‌ಗಳಲ್ಲಿನ ಶೌಚಾಲಯ, ಸ್ನಾನಗೃಹ, ಅಡುಗೆ ಮನೆಯಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುವುದು. ಹಾಸ್ಟೆಲ್‌ನ ಪ್ರತಿ ಕೊಠಡಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳಷ್ಟೇ ಇರುವಂತೆ ಎಚ್ಚರವಹಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ನಿತ್ಯ ಥರ್ಮಲ್‌ ಸ್ಕ್ಯಾನ್‌ಗೆ ಒಳಪಡಿಸಲಾಗುವುದು ಎನ್ನುತ್ತಾರೆ ಅವರು.

ವಿಜ್ಞಾನ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಮೊದಲಿಗೆ ಪ್ರಾಕ್ಟಿಕಲ್‌ ತರಗತಿಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗುವುದು. ನಂತರ ಥಿಯರಿ ತರಗತಿಗಳನ್ನು ಆನ್‌ಲೈನ್‌, ಆಫ್‌ಲೈನ್‌ ವಿಧಾನದ ಮೂಲಕ ತೆಗೆದುಕೊಳ್ಳಲಾಗುವುದು. ಸರ್ಕಾರದಿಂದ ಮಾರ್ಗಸೂಚಿ ಬಂದಕೂಡಲೆ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು. ಕೋವಿಡ್‌ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿ ಪ್ರತಿ ವಾರ ವರದಿ ಪಡೆದು, ಪರಿಶೀಲಿಸಲಾಗವುದು ಎಂದು ಅವರು ವಿವರಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕೋಲಾರ ಜಿಲ್ಲೆಯ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ, ಮಾಲೂರು; ಬೆಂಗಳೂರು ಜಿಲ್ಲೆಯ ಕೆ.ಆರ್‌.ಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್‌ನಗರ, ಮಹದೇವಪುರ; ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಬರುತ್ತವೆ.


ಬೆಂಗಳೂರು ನಗರ (ಕೇಂದ್ರ) ವಿಶ್ವವಿದ್ಯಾಲಯ

ಬೆಂಗಳೂರು ನಗರ ವಿಶ್ವವಿದ್ಯಾಲಯ

ಇದೇ 17ರಿಂದ ತರಗತಿಗಳನ್ನು ಆರಂಭಿಸಲು ವಿ.ವಿಯಲ್ಲಿ ತಯಾರಿ ನಡೆದಿದೆ. ಆಫ್‌ಲೈನ್‌ ಮತ್ತು ಆನ್‌ಲೈನ್‌ ತರಗತಿಗಳನ್ನು ನಡೆಸುವ ಜವಾಬ್ದಾರಿ ವಿ.ವಿ ಮತ್ತು ಬೋಧಕರ ಮೇಲಿದೆ. ಕೆಲ ಕಾಲೇಜುಗಳಲ್ಲಿ ಕೋರ್ಸ್‌ವಾರು ಪಾಳಿ ವ್ಯವಸ್ಥೆ ತರಬೇಕಾಗುತ್ತದೆ. ಹಾಸ್ಟೆಲ್‌ಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕಾದ ಅಗತ್ಯವಿದೆ. ಒಟ್ಟಾರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಸ್ಪಷ್ಟ ನಿಯಮ ಮತ್ತು ಮಾರ್ಗಸೂಚಿ ಬರುತ್ತಿದ್ದಂತೆ ಅದರ ಪ್ರಕಾರ ವಿ.ವಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತದೆ ಎನ್ನುತ್ತಾರೆ ಬೆಂಗಳೂಗರ ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌. ಜಾಫೆಟ್‌.

ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್‌, ಜಯನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲೇಜುಗಳು ಬರುತ್ತವೆ.

ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳ ಕುಲಪತಿಗಳು, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ, ಸೂಚನೆಗಳನ್ನು ಪಡೆದಿದೆ. ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ನಿಯಮ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು