ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ವತ್‌’ ಆ್ಯಪ್‌ ಬಿಡುಗಡೆಗೊಳಿಸಿದ ರಮೇಶ್‌ ಅರವಿಂದ್‌

Last Updated 17 ಡಿಸೆಂಬರ್ 2019, 13:11 IST
ಅಕ್ಷರ ಗಾತ್ರ

ಡಿಜಿಟಲ್‌ ಶಿಕ್ಷಣ ತಂತ್ರಜ್ಞಾನದ ಆಧಾರದ ಮೇಲೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮ ತಲುಪಿಸಲು ವಿದ್ವತ್‌ ಇನ್ನೋವೇಟಿವ್‌ ಸಲ್ಯೂಷನ್ಸ್ ಕಂಪನಿಯು ‘ವಿದ್ವತ್‌’ ಆ್ಯಪ್‌ ರೂಪಿಸಿದೆ.

ಕಂಪನಿಯ ಪ್ರಧಾನ ಕಚೇರಿ ಇರುವುದು ಮೈಸೂರಿನಲ್ಲಿ. ಬೆಳಗಾವಿ, ಬಳ್ಳಾರಿ, ಗದಗ ಮತ್ತು ಬಾಗಲಕೋಟೆಯಲ್ಲಿ ಉಪ ಶಾಖೆಗಳನ್ನು ಹೊಂದಿದೆ.ಆಂಗ್ಲ ಮಾಧ್ಯಮದ ಜೊತೆಗೆ ಕನ್ನಡ, ಉರ್ದು ಭಾಷೆಗೂ ಪ್ರಾಧಾನ್ಯ ನೀಡುವ ಆಶಯವನ್ನು ವಿದ್ವತ್‌ ಆ್ಯಪ್‌ ಹೊಂದಿದೆ. ಇದರಲ್ಲಿ 1ರಿಂದ 10ನೇ ತರಗತಿವರೆಗೆ ವಿನ್ಯಾಸಗೊಳಿಸಿದ ಪಠ್ಯಕ್ರಮ ಲಭ್ಯವಿದೆ.

ಕಡಿಮೆ ದರದಡಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಶಿಕ್ಷಣ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ತಮಗೆ ಅಗತ್ಯವಿರುವ ಪಾಠಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅಭ್ಯಸಿಸಬಹುದು. ದೃಶ್ಯಮಾಧ್ಯಮ ಕಲಿಕೆ, 2ಡಿ ಮತ್ತು 2ಡಿ ಅನಿಮೇಷನ್‌ಗಳನ್ನು ಅತ್ಯುನ್ನತ ತಂತ್ರಜ್ಞಾನದೊಂದಿಗೆ ನೀಡುವ ಗುರಿ ಹೊಂದಿದೆ.

ನಟ ರಮೇಶ್‌ ಅರವಿಂದ್‌ ‘ವಿದ್ವತ್‌’ ಆ್ಯಪ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ ಆ್ಯಪ್‌ಗೆ ಚಾಲನೆ ನೀಡಿದ ಅವರು, ‘ಬಹಳಷ್ಟು ಪೋಷಕರಿಗೆ ಸಮಯವಿಲ್ಲ. ಹಾಗಾಗಿ, ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆಯನ್ನು ಆ್ಯಪ್‌ ನೀಗಿಸಲಿದೆ. ಇದರಲ್ಲಿರುವ ಕಂಟೆಂಟ್‌ ನನಗೆ ಇಷ್ಟವಾಯಿತು. ಹಾಗಾಗಿಯೇ, ರಾಯಭಾರಿಯಾಗಲು ಒಪ್ಪಿಕೊಂಡೆ’ ಎಂದು ಹೇಳಿದರು.

ಕಂಪನಿಯ ಸಿಇಒ ರೋಹಿತ್‌ ಎಂ. ಪಾಟೀಲ್‌, ‘ಐದು ವರ್ಷದ ಫಲವಾಗಿ ಈ ಆ್ಯಪ್‌ ರೂ‍ಪುಗೊಂಡಿದೆ. ರಾಜ್ಯದ ಮೂಲೆ ಮೂಲೆಗೂ ಈ ಸೌಲಭ್ಯ ತಲುಪಿಸುವುದೇ ನಮ್ಮ ಉದ್ದೇಶ. ಇದರಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿ ವೃದ್ಧಿಸಲು ಪರಿಕಲ್ಪನಾ ಆಧಾರಿತ ಅನಿಮೇಷನ್‌ಗಳನ್ನೂ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಶ್ನೋತ್ತರಗಳ ಮೂಲಕ ಪಠ್ಯಪುಸ್ತಕದ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಪ್ರಶ್ನೆಕೋಠಿಯಲ್ಲಿ ಹೆಚ್ಚುವರಿ ಪ್ರಶ್ನೋತ್ತರಗಳು ಇವೆ. ಅಭ್ಯಾಸ ಪುಸ್ತಕಗಳೂ ಇವೆ. ಕಲಿಕೆಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಮಾದರಿ ಪ್ರಶ್ನೆಪತ್ರಿಕೆಗಳನ್ನೂ ಒದಗಿಸಲಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT