ಆಟವಾಡಲು ಬಿಡಿ ಪ್ಲೀಸ್‌

7

ಆಟವಾಡಲು ಬಿಡಿ ಪ್ಲೀಸ್‌

Published:
Updated:

ಕ್ಯಾಂಪಸ್‌ ಒಂದು: ‘ಇದೇ ಶಾಲೆ ಬೇಕು ಅಂತ ಈ ಏರಿಯಾಕ್ಕೆ ಬಂದಿದ್ದೀವಿ’ ಎಂದು ಹೆತ್ತವರು ತಮ್ಮ ಪ್ರತಿಷ್ಠೆಯ ಸಂಕೇತವಾಗಿಸಿಕೊಂಡ ಶಾಲೆ ಅದು. ಶಾಲೆಯ ಟೈಂ ಟೇಬಲ್‌ನಲ್ಲಿ ದಿನಕ್ಕೊಂದು CT ಎಂಬ ಅವಧಿ. ವಾರಕ್ಕೊಂದು ಬಾರಿ PET ಎಂಬ ಅವಧಿ. ಸಿ.ಟಿ ಎಂಬುದು ಕ್ಲಾಸ್‌ ಟೀಚರ್‌ ತಮ್ಮ ವಿವೇಚನೆಗೆ ತಕ್ಕಂತೆ ತರಗತಿಯ ಒಳಗೇ ಮಕ್ಕಳ ಚಟುವಟಿಕೆಗೆ ಬಳಸಿಕೊಳ್ಳಬಹುದಾದ ಅವಧಿಯಾದರೆ, ಪಿಇಟಿ ಎಂಬ ದೈಹಿಕ ಚಟುವಟಿಕೆ ಅವಧಿಯಲ್ಲಿ ಆಗೊಮ್ಮೆ ಈಗೊಮ್ಮೆ ತರಗತಿಯಿಂದಾಚೆ ಚೆಂಡಾಟ ಆಡುವ ಅವಕಾಶ.

ಅಲ್ಲಿನ ಮಕ್ಕಳಿಗೆ ಆಟದ ಮೈದಾನಕ್ಕೆ ಪ್ರವೇಶ ವರ್ಷಕ್ಕೊಮ್ಮೆ. ಅದೂ, ಕ್ರೀಡಾ ಕೂಟಕ್ಕೆ ಅರ್ಹತೆ ಪಡೆದ ಹಾಗೂ ಅಂದು ನೃತ್ಯ ಮಾಡಲು ಅವಕಾಶ ಗಿಟ್ಟಿಸಿಕೊಂಡ ಮಕ್ಕಳಿಗೆ ಮಾತ್ರ. 

‘ಅಮ್ಮ ನನಗೆ ಆಟವಾಡಲು ಇಷ್ಟ. ಅದಕ್ಕೆ ಬೇರೆ ಫೀಸ್‌ ಇದ್ಯಂತೆ. ಕೊಟ್ಟವರಿಗೆ ಆಟ ಆಡಲು ಕರ್ಕೊಂಡು ಹೋಗ್ತಾರಂತೆ’. ಎರಡನೇ ತರಗತಿ ವಿದ್ಯಾರ್ಥಿಗೆ ವರ್ಷಕ್ಕೆ ₹1.25 ಲಕ್ಷ ಶುಲ್ಕ ವಿಧಿಸುವ ಶಾಲೆ ಮೂಲಸೌಕರ್ಯಗಳನ್ನು ಉಪೇಕ್ಷಿಸಿದೆ!

ಕ್ಯಾಂಪಸ್‌ 2: ಆ ಬೀದಿಯಲ್ಲಿ ಅಪಾರ್ಟ್‌ಮೆಂಟ್‌ಗಳ ಮಧ್ಯೆ ಆ ಶಾಲೆಯೂ ಇದೆ. ಒಂಟಿ ನಿವೇಶನದಲ್ಲಿಯೇ ಅದನ್ನೂ ಕಟ್ಟಲಾಗಿದೆ. ಗೇಟು ದಾಟಿದರೆ ರಸ್ತೆ. ಶಿಕ್ಷಕರ ದ್ವಿಚಕ್ರ ವಾಹನಗಳು, ಮಕ್ಕಳ ಸೈಕಲ್‌ಗಳು ಅಲ್ಲಿಯೇ ನಿಲ್ಲುತ್ತವೆ. ಒಂದೂವರೆ ಅಡಿ ಅಗಲದ ಮೆಟ್ಟಿಲುಗಳು ನಾಲ್ಕನೇ ಮಹಡಿವರೆಗೂ ಕರೆದೊಯ್ಯುತ್ತವೆ. ದಿನಕ್ಕೊಂದು ಖಾಲಿ ಪೀರಿಯೆಡ್‌. ಬೆಂಚು–ಮೇಜುಗಳನ್ನು ಹತ್ತಿ ತಮಗಿಷ್ಟದ ಆಟಗಳನ್ನು ಆಡಲು ಮಕ್ಕಳಿಗೆ ಮುಕ್ತ ಅವಕಾಶ ನೀಡಲಾಗಿದೆ. 

ಕ್ಯಾಂಪಸ್‌ 3: ಎಲ್ಲಾ ವರ್ಗದ ಹೆತ್ತವರಿಂದ ಮೆಚ್ಚುಗೆ ಗಳಿಸಿಕೊಂಡಿರುವ ಶಾಲೆಯದು. ಅದರ ದೈಹಿಕ ಶಿಕ್ಷಣ ಶಿಕ್ಷಕರನ್ನು ಭೇಟಿಯಾಗಲು ಶಾಲೆಗೆ ಹೋಗಬೇಕಾಗಿಲ್ಲ. ಶಾಲೆಯ ಮುಂಭಾಗದಲ್ಲೇ ಇರುವ ಪಾಲಿಕೆಯ ಆಟದ ಮೈದಾನದಲ್ಲೇ ಇರುತ್ತಾರೆ ಅವರು. ತಲಾ ಎರಡು ತರಗತಿಗಳ ವಿದ್ಯಾರ್ಥಿಗಳ ಆಟೋಟಗಳ ನಡುವೆ ಅವರು ಊದುವ ವಿಷಲ್‌ ಸದ್ದು ಕೇಳಿಸುತ್ತಲೇ ಇರುತ್ತದೆ.

‘ಮಕ್ಕಳಿಗೆ ದೈಹಿಕ ವ್ಯಾಯಾಮ ಇಲ್ಲದಿದ್ದರೆ ಅವರು ಚೈತನ್ಯಪೂರ್ಣವಾಗಿರುವುದು ಹೇಗೆ, ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕಾದುದು ಶಾಲೆಯೊಳಗೆ ಅಲ್ಲ, ಮೈದಾನದಲ್ಲೇ ಅಲ್ವೇ’ ಎಂದು ನಗುತ್ತಾರೆ ಅವರು.

ಬೆಳವಣಿಗೆಗೆ ಆಟವೇ ಬೇಕು

ಮಕ್ಕಳಿಗೆ ದೈಹಿಕ ಚಟುವಟಿಕೆ ಯಾಕೆ ಬೇಕು? ಆಟದ ಮೈದಾನದಲ್ಲಿ ಆಡುವುದು ತರಗತಿಯಲ್ಲೋ ಒಳಾಂಗಣದಲ್ಲೋ ಆಡುವುದಕ್ಕಿಂತ ಯಾಕೆ ಹೆಚ್ಚು ಪರಿಣಾಮಕಾರಿ? ಮಕ್ಕಳ ತಜ್ಞ ಡಾ.ಬೋಪಣ್ಣ ಸಿ.ಯು. ಅವರು ಹೇಳುವುದು ಹೀಗೆ:

‘ಒಂದೆರಡು ಗಂಟೆ ಪಾಠ ಕೇಳಿದ ಮಕ್ಕಳು ಅರ್ಧ ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ. ಮತ್ತೊಂದು ಸುತ್ತಿನ ಪಾಠ ಪ್ರವಚನದಲ್ಲಿ ತಲ್ಲೀನರಾಗಲು ಅದು ಸಹಕಾರಿ. ಕ್ರೀಡಾ ಚಟುವಟಿಕೆಗಳನ್ನು ಮೈದಾನದಂತಹ ತೆರೆದ ವಾತಾವರಣದಲ್ಲಿ ಮಾಡುವುದರಿಂದ ಮಕ್ಕಳ ಮನಸ್ಸೂ ತೆರೆದುಕೊಳ್ಳುತ್ತದೆ. ತಮ್ಮ ಸಹಪಾಠಿಗಳೊಂದಿಗೆ ಆಟವಾಡುತ್ತಾ ಮಾಡುವ ಸಂವಹನ, ಕಲಿಯುವ ತಂತ್ರಗಾರಿಕೆಗಳೂ ಕಲಿಕೆಯ ಭಾಗವೇ. ದೇಹಕ್ಕೆ ಹೆಚ್ಚು ಹೆಚ್ಚು ಚಟುವಟಿಕೆ ಸಿಕ್ಕಿದಷ್ಟೂ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೂ ಹೆಚ್ಚುತ್ತದೆ. ಹಾಗಾಗಿ ಮಕ್ಕಳಿಗೆ ಪಾಠ ಪ್ರವಚನದ ಮಧ್ಯೆ ಆಟೋಟಗಳು ಇರಲೇಬೇಕು.’

ಹೆಣ್ಣು ಮಕ್ಕಳು ಎಲ್ಲಿ ಆಡಬೇಕು?

ಈ ಪ್ರಶ್ನೆ ಎತ್ತಿದವರು ಯಲಹಂಕ ನಿವಾಸಿ ಉಮಾ ಶ್ರೀಕರ್‌. ಅವರ ಮಗಳು ಅದೇ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಎಂಟನೇ ತರಗತಿಯ ಅವರ ಮಗಳು ತಮಗೆ ಕೇಳಿದ ಪ್ರಶ್ನೆ ಅದು.

‘ನನ್ನ ಮಗಳು ಓದುವ ಶಾಲೆಯಲ್ಲಿ ಆಟದ ಮೈದಾನವೂ ಇಲ್ಲ, ಒಳಾಂಗಣ ಕ್ರೀಡೆಗಳಿಗೂ ಅವಕಾಶವಿಲ್ಲ. ಹುಡುಗರು ಪಕ್ಕದ ಪಾಲಿಕೆ ಮೈದಾನದಲ್ಲಿ ಆಟವಾಡಿಕೊಂಡು ಬರುತ್ತಾರೆ. ಆದರೆ ಹುಡುಗಿಯರಿಗೆ ಅಲ್ಲಿ ಹೋಗಲು ಭಯ. ಹಾಗಾಗಿ ಅವರು ವಾರಕ್ಕೊಮ್ಮೆ ಸಿಗುವ ಪಿಇಟಿ ಪೀರಿಯೆಡ್‌ನಲ್ಲಿ ಕ್ಲಾಸ್‌ನಲ್ಲೇ ಕೂರುತ್ತಾರಂತೆ’ ಎಂದು ಉಮಾ ದೂರುತ್ತಾರೆ.

ಶಿಕ್ಷಣ ಇಲಾಖೆಯ ಮೇಲೆ ಸಾರ್ವಜನಿಕರು ಒತ್ತಡ ಹೇರಿದರೆ ಮೈದಾನದ ಅಲಭ್ಯತೆ ಮತ್ತು ದೈಹಿಕ ಶಿಕ್ಷಣದ ಕೊರತೆಯ ಸಮಸ್ಯೆ ಪರಿಹಾರವಾದೀತು ಎಂಬುದು ವಿಜಯನಗರದ ಸರ್ಕಾರಿ ಶಾಲೆಯೊಂದರ ಶಿಕ್ಷಣ ಶಿವಕುಮಾರ್‌ ಅವರ ಸಲಹೆ.

ಆಟೋಟದ ವ್ಯವಸ್ಥೆಯನ್ನೂ ಪರಿಶೀಲಿಸಬೇಕು

ದೈಹಿಕ ಶಿಕ್ಷಣದ ಅಗತ್ಯವನ್ನು ಶಿಕ್ಷಣ ಕ್ಷೇತ್ರ ಬಹಳ ಅಲಕ್ಷ್ಯ ಮಾಡುತ್ತಿದೆ. ಮೈದಾನಗಳೇ ಇಲ್ಲದ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಎಷ್ಟರಮಟ್ಟಿಗೆ ಸಿಕ್ಕೀತು? ಎಷ್ಟೋ ಶಾಲೆಗಳಲ್ಲಿ ದೈಹಿಕ ಚಟುವಟಿಕೆಗಳಿಗೆ ವಾರಕ್ಕೊಂದು ಪೀರಿಯೆಡ್‌ ಕೂಡಾ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. 

ನಗರದ ಖಾಸಗಿ ಶಾಲೆಗಳು ಆಟದ ಮೈದಾನದ ವಿಷಯವನ್ನು ಬಹಳ ಉಡಾಫೆಯಾಗಿ ಪರಿಗಣಿಸಿವೆ. ಶಿಕ್ಷಣ ಇಲಾಖೆ ಹೊಸ ಶಾಲೆಗಳಿಗೆ ಅನುಮತಿ ನೀಡುವುದಕ್ಕೂ ಮೊದಲೇ ಸ್ಥಳ ಪರಿಶೀಲನೆ ಮಾಡಿ ಅನುಮತಿ ಕೊಡಬೇಕಾಗುತ್ತದೆ. ಆದರೆ ಶಾಲೆ ಆರಂಭವಾದ ಮೂರ್ನಾಲ್ಕು ತಿಂಗಳ ಬಳಿಕ ಅಧಿಕಾರಿಗಳು ಪರಿಶೀಲನೆಗೆ ಹೋಗುತ್ತಾರೆ. ಈ ಹಂತದಲ್ಲಿ ಶಾಲೆಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾದರೆ ಹೆತ್ತವರು ಶಾಲೆಯ ಪರ ವಹಿಸುತ್ತಾರೆ. ಯಾಕೆಂದರೆ ಹೊಸ ಶಾಲೆಯಲ್ಲಿ ಪ್ರವೇಶ ಪಡೆಯುವುದು ಮತ್ತು ಪಾವತಿಸಿದ ದುಬಾರಿ ಶುಲ್ಕ ನಷ್ಟದೊಂದಿಗೆ ಹೊಸದಾಗಿ ಶುಲ್ಕ ಪಾವತಿಸಬೇಕಾದ ಲೆಕ್ಕಾಚಾರ ಅವರದು.

ಒಂದು ವೇಳೆ ಆಟದ ಮೈದಾನಕ್ಕೆ ಸ್ಥಳಾವಕಾಶ ಇಲ್ಲದಿದ್ದರೆ ಹತ್ತಿರದ ಪಾಲಿಕೆ ಮೈದಾನವನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಆದೇಶ ನೀಡಿದೆ. ಆದರೆ ಎಷ್ಟು ಶಾಲೆಗಳಿಗೆ ಈ ಅವಕಾಶ ಸಿಕ್ಕೀತು? ಪಾಲಿಕೆಯ ಮೈದಾನಗಳನ್ನು ಸರ್ಕಾರಿ ಯೋಜನೆಗಳಿಗೋ, ವಾಣಿಜ್ಯ ಉದ್ದೇಶಕ್ಕೋ ಬಳಸುವುದೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಮೈದಾನಗಳನ್ನು ಸಾಮಾನ್ಯವಾಗಿ ಹುಡುಗರೇ ಆಕ್ರಮಿಸಿಕೊಂಡಿರುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಆಟವಾಡಲು ಸ್ಥಳಾವಕಾಶವೇ ಇಲ್ಲ ಎಂಬಂತಾಗಿದೆ.

ನಾಗಸಿಂಹ ಜಿ. ರಾವ್ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !