ಸೋಮವಾರ, ಸೆಪ್ಟೆಂಬರ್ 16, 2019
27 °C

ಪರಿಸರ ವಿಜ್ಞಾನದಲ್ಲಿ ಆಯ್ಕೆಗಳೇನು?

Published:
Updated:
Prajavani

ಸರ್, ನಾನು ಕೆಎಸ್‌ಒಯು ಮೂಲಕ ಪರಿಸರ ವಿಜ್ಞಾನ ವಿಷಯದಲ್ಲಿ ಮೊದಲ ವರ್ಷದ ಎಂ.ಎಸ್‌ಸಿ. ಮಾಡುತ್ತಿದ್ದೇನೆ. ನನಗೆ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ವಿಷಯದ ಮೇಲೆ ವೃತ್ತಿ ಮಾಡಬೇಕು ಎಂಬ ಆಸೆ ಇರುವ ಕಾರಣಕ್ಕೆ ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ಈಗ 45 ವರ್ಷ. ಈ ಕ್ಷೇತ್ರದಲ್ಲಿ ನಾನು ಕೆಲಸ ಮಾಡಲು ಯಾವ ರೀತಿಯ ಅವಕಾಶಗಳಿವೆ. 

ಹೆಸರು, ಊರು ಬೇಡ

ನಿಮ್ಮ ಪದವಿ ಶಿಕ್ಷಣದ ವಿಷಯಗಳು ಯಾವುದು ಮತ್ತು ನೀವು ಈಗ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ತಿಳಿಸದೇ ಇರುವುದರಿಂದ, ನಿಮ್ಮ ಪ್ರಸ್ತುತ ಕ್ಷೇತ್ರದಿಂದ ಪರಿಸರ ವಿಜ್ಞಾನ ಕ್ಷೇತ್ರದ ಕಡೆಗೆ ಹೇಗೆ ಹೋಗಬಹುದು ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೂ ಕೂಡ ಪರಿಸರ ವಿಜ್ಞಾನದ ವಿಷಯ ಓದುತ್ತಿರುವುದರಿಂದ ಒಂದು ವೇಳೆ ನಿಮ್ಮ ಪದವಿ ಶಿಕ್ಷಣದಲ್ಲಿ ನೀವು ವಿಜ್ಞಾನದ ವಿಷಯಗಳನ್ನು ಓದಿದ್ದರೆ, ಅದರ ಮತ್ತು ಎಂ.ಎಸ್‌ಸಿ. ಪರಿಸರ ವಿಜ್ಞಾನದ ಅರ್ಹತೆಯ ಮೇಲೆ ಉದ್ಯೋಗವಕಾಶಗಳನ್ನು ಅರಸಬಹುದು. ಇಲ್ಲವಾದರು ಕೂಡ ನಿಮ್ಮ ಜ್ಞಾನ ಮತ್ತು ಶೈಕ್ಷಣಿಕ ಅರ್ಹತೆಯ ಮೇಲೆ ಸೂಕ್ತ ಉದ್ಯೋಗವಕಾಶಗಳನ್ನು ಪಡೆಯಬಹುದು.

ಸಾಮಾನ್ಯವಾಗಿ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಖಾಸಗಿ, ಸರ್ಕಾರೇತರ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳು ಇರುತ್ತವೆ. ಪರಿಸರ ಸಂರಕ್ಷಣೆಗಾಗಿ ಅಥವಾ ಪರಿಸರ ಸಂಬಂಧಿಸಿದ ಕೆಲಸಗಳನ್ನು ಮಾಡುವ ಎನ್.ಜಿ.ಓಗಳಲ್ಲಿ ಪರಿಸರ ವಿಜ್ಞಾನ ಪರಿಣತರಾಗಿ, ಶಿಕ್ಷಕರಾಗಿ, ಟ್ರೈನರ್, ಎಜುಕೇಟರ್, ಸಂಶೋಧಕರಾಗಿ, ಪ್ರಾಜೆಕ್ಟ್‌ ಸಂಯೋಜಕರಾಗಿ ಕೆಲಸ ನಿರ್ವಹಿಸಬಹುದು.
ಕರ್ನಾಟಕದಲ್ಲಿ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್.ಜಿ.ಓ, ಖಾಸಗಿ ಸಂಸ್ಥೆ ಮತ್ತು ಸರ್ಕಾರಿ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಆ ಸಂಸ್ಥೆಯಲ್ಲಿ ಉದ್ಯೋಗವಕಾಶಗಳಿಗಾಗಿ ವಿಚಾರಿಸಿ. ಆ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಪರ್ಕ ಪಡೆಯಲು ಪ್ರಯತ್ನಿಸಿ, ಇಂಟರ್‌ನೆಟ್‌ ಹಾಗೂ ಇತರ ಮಾಧ್ಯಮ ಬಳಸಿ ಉದ್ಯೋಗವಕಾಶಗಳನ್ನು ಹುಡುಕುವ ಪ್ರಯತ್ನ ಮಾಡಿ.

ನಿಮ್ಮ ವಯಸ್ಸು ಹೊಸ ಅವಕಾಶಗಳನ್ನು ಪಡೆಯಲು ತಡೆಯಾಗಿ ಪರಿಣಮಿಸದು. ಆದರೆ ಸ್ವಲ್ಪ ಪ್ರಯಾಸ ಪಡಬೇಕಾಗಿ ಬರಬಹುದು. ಮೊದಲಿಗೆ ನೀವಂದುಕೊಳ್ಳುವ ರೀತಿಯ ಅವಕಾಶ ಮತ್ತು ವೇತನ ಸಿಗದೆ ಇರಬಹುದು. ನಿಮಗೆ ವಯಸ್ಸಾಗಿದ್ದರು ಕೂಡ ಈ ಕ್ಷೇತ್ರಕ್ಕೆ ನೀವು ಹೊಸಬರಾಗಿ ಇರುವುದರಿಂದ ಹೊಸ ಅವಕಾಶ ಮತ್ತು ಕಲಿಕೆಗೆ ಮುಕ್ತರಾಗಿರಬೇಕಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದನ್ನೆ ಗುರಿಯಾಗಿಸಿಕೊಂಡು ವೇತನ ಮತ್ತು ಉದ್ಯೋಗದ ಸ್ತರವನ್ನು ನೋಡದೆ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. ಮುಂದೆ ಅದರಲ್ಲೆ ಮುಂದುವರೆಯಲು ಬೇಕಾದ ಕೌಶಲ ಮತ್ತು ಶಿಕ್ಷಣವನ್ನು ಪಡೆದು
ಕೊಂಡು ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಶುಭಾಶಯ.

ನಾನು ಮೊದಲ ವರ್ಷದ ಬಿ.ಕಾಂ.ನಲ್ಲಿ ಓದುತ್ತಿದ್ದು ಐ.ಎ.ಎಸ್. ಮಾಡಬೇಕು ಎಂಬ ಗುರಿ ಹೊಂದಿದ್ದೇನೆ. ನಾನು ಡಿಗ್ರಿ ಮುಗಿಸಿದ ಬಳಿಕ ಏನು ಮಾಡಬೇಕು? 

ಹೆಸರು, ಊರು ಬೇಡ

ಐ.ಎ.ಎಸ್, ಐ.ಪಿ.ಎಸ್. ಆಗಬೇಕಾದರೆ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕು. ಯು.ಪಿ.ಎಸ್‌.ಸಿ. ಪರೀಕ್ಷೆ ಬರೆಯಲು ಯಾವುದೇ ಪದವಿ ಶಿಕ್ಷಣವನ್ನು ಪಡೆದಿರಬೇಕು. ಹಾಗಾಗಿ ನಿಮ್ಮ ಬಿ.ಕಾಂ. ಪದವಿ ತೇರ್ಗಡೆ ಆದ ನಂತರ ನೀವು ಯು.ಪಿ.ಎಸ್‌.ಸಿ. ಪರೀಕ್ಷೆ ಬರೆಯಬಹುದು. ನಿಮಗೆ ಪರೀಕ್ಷೆ ಬರೆಯಲು ಇನ್ನು ಮೂರು ವರ್ಷಗಳಿರುವುದರಿಂದ ಆ ಸಮಯದಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಬಹುದು. ಅದಕ್ಕಾಗಿ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಸದ್ಯ ಯು.ಪಿ.ಎಸ್‌.ಸಿ. ವೆಬ್‌ಸೈಟ್‌ ಈ ವರ್ಷದ ಯು.ಪಿ.ಎಸ್‌.ಸಿ. ಪರೀಕ್ಷಾ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿ ಪೂರ್ತಿ ಆಗಿ ಓದಿಕೊಳ್ಳಿ. ಅದರಿಂದ ನಿಮಗೆ ಈ ಪರೀಕ್ಷೆಯ ಹಂತಗಳು ಮತ್ತು ವಿಷಯಗಳ ಕುರಿತು ತಿಳಿಯುತ್ತದೆ. ಸ್ಪರ್ಧಾತ್ಮಕ ಪರೀಕ‍್ಷೆಗಳಿಗೆ ತರಬೇತಿ ನೀಡುವ ಅನೇಕ ಸಂಸ್ಥೆಗಳು ಒಂದು ದಿನದ ಮಾಹಿತಿ ಕಾರ್ಯಗಾರಗಳನ್ನು ನಡೆಸುತ್ತಿರುತ್ತವೆ. ಅವುಗಳಿಗೆ ಹಾಜರಾಗಿ ಅಥವಾ ಯೂಟ್ಯೂಬ್‌ನಲ್ಲಿ ಈ ಪರೀಕ್ಷೆಗಳ ಬಗೆಗಿರುವ ವಿಡಿಯೊಗಳನ್ನು ಓದಿ ಮಾಹಿತಿ ಪಡೆದುಕೊಳ್ಳಿ.

ಸದ್ಯ ನಿಮ್ಮ ಪದವಿ ಮುಗಿಯುವವರೆಗೆ ದಿನನಿತ್ಯ ಒಂದು ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಓದಿ ಸುತ್ತಲಿನ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಿ. ಭಾರತೀಯ ಇತಿಹಾಸ ಮತ್ತು ಸಂವಿಧಾನದ ಕುರಿತು ಇರುವ ಆಸಕ್ತಿಕರ ವಿಷಯಗಳ ಬಗ್ಗೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಜೊತೆಗೆ ವ್ಯಾಯಾಮ ಹಾಗೂ ಆಟದ ಮುಖಾಂತರ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿ. ಆಲ್ ದಿ ಬೆಸ್ಟ್.

ಅಂಕಣಕಾರರು ವೃತ್ತಿ ಮಾರ್ಗದರ್ಶಕರು,
ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ

Post Comments (+)