ವಿಜ್ಞಾನದ ಬಗ್ಗೆ ನಮಗೇಕೆ ಅಜ್ಞಾನ?

7

ವಿಜ್ಞಾನದ ಬಗ್ಗೆ ನಮಗೇಕೆ ಅಜ್ಞಾನ?

Published:
Updated:
Prajavani

ದೇಶದ ಸಾಮಾಜಿಕ ಸ್ಥಿತಿ-ಗತಿ, ಶೈಕ್ಷಣಿಕ ಕ್ಷೇತ್ರದ ಭ್ರಷ್ಟಾಚಾರ ಮತ್ತು ಅಸಮರ್ಪಕ ಶಿಕ್ಷಣ ನೀತಿಯು ಮೂಲಭೂತ ವಿಜ್ಞಾನ ಪ್ರಗತಿಗೆ ತೊಡರುಗಾಲಾಗುತ್ತಿದೆಯಲ್ಲದೆ, ಪ್ರತಿಭಾ ಪಲಾಯನಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂಬುದನ್ನು ಅವಲೋಕಿಸುತ್ತದೆ ಈ ಲೇಖನ.

ಭಾರತದ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು ತೋರ್ಪಡಿಸುವಲ್ಲಿ ಮತ್ತು ವಿಶ್ವಮಾನ್ಯತೆಯನ್ನು ಪಡೆಯುವಲ್ಲಿ ಸತತವಾಗಿ ಸೋಲುತ್ತಿವೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಉನ್ನತ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರು ತಮ್ಮ ಪ್ರಕಟಿತ ಸಂಶೋಧನಾ ಲೇಖನಗಳನ್ನು ಹಿಂಪಡೆದ ಆಘಾತಕಾರಿ ಸುದ್ದಿಯೂ ಆಗಾಗ ಬರುತ್ತದೆ. ಉನ್ನತ ಅಧ್ಯಯನಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು, ಯುವಪೀಳಿಗೆಯನ್ನು ಮೂಲಭೂತ ಸಂಶೋಧನೆ ಕೈಗೊಳ್ಳಲು ಪ್ರೇರೇಪಿಸಬೇಕು ಮತ್ತು ಪ್ರತಿಭಾ ಪಲಾಯನ ತಪ್ಪಿಸಬೇಕು ಎಂಬ ಅಭಿಪ್ರಾಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಸೇರಿದಂತೆ ಅನೇಕ ಅಧಿವೇಶನಗಳಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದಲ್ಲದೆ ಅಷ್ಟೇ ವೇಗದಲ್ಲಿ ಮರೆಯಾಗುತ್ತದೆ. ಕಳೆದ ವಾರ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವನ್ನು ಉದ್ಘಾಟಿಸಿ ದೇಶದ ಪ್ರಧಾನಿ ಹೇಳಿದ ಮಾತು ಇಲ್ಲಿ ಉಲ್ಲೇಖಾರ್ಹ: ಶೇ 95ರಷ್ಟು ವಿದ್ಯಾರ್ಥಿಗಳು ದೇಶದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿದ್ದು, ಅಲ್ಲಿ ಸಂಶೋಧನೆಗೆ ಪೂರಕವಾದ ವಾತಾವರಣ ನಿರ್ಮಾಣದ ಅಗತ್ಯವಿದೆ.

ದೇಶದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸ್ವಾತಂತ್ರ್ಯ ದೊರೆತು 70 ವರ್ಷವಾದರೂ, ಜಾಗತಿಕ ಮಟ್ಟದಲ್ಲಿ ನಾವು ಹೆಮ್ಮೆ ಪಡುವಂಥ ಒಂದೇ ಒಂದು ವಿಶ್ವವಿದ್ಯಾಲಯವನ್ನೂ ನಿರ್ಮಿಸಲು ಆಗದ ಸ್ಥಿತಿಯಲ್ಲಿ ನಾವಿದ್ದೇವೆ. ಹೇಳಿಕೊಳ್ಳುವಂಥ ಯಾವ ಸಂಶೋಧನಾ ಅನುದಾನವೂ ಇರದ ಕಾಲದಲ್ಲಿ, ಜಗದೀಶ್ ಚಂದ್ರ ಬೋಸ್ ಮಹತ್ತರ ಸಂಶೋಧನೆ ಕೈಗೊಂಡಿದ್ದರು. ಅತಿ ಸರಳ ಪರಿಕರಗಳ, ಯಂತ್ರಗಳ ಸಹಾಯದಿಂದ ಸಿ. ವಿ. ರಾಮನ್ ಮಹತ್ತರ ಸಂಶೋಧನೆ ನಡೆಸಿ ಭೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆಯಲು ಸಾಧ್ಯವಾದ ಈ ದೇಶದಲ್ಲಿ, ಈಗ ಇಷ್ಟೊಂದು ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅನುದಾನ, ಪ್ರಾಧ್ಯಾಪಕರ ತಂಡವೇ ಇರುವ ಸನ್ನಿವೇಶದಲ್ಲೂ ಮೂಲಭೂತ ಸಂಶೋಧನೆಯಲ್ಲಿ ನಾವು ಇನ್ನೂ ಹಿಂದುಳಿದಿದ್ದೇವೆ ಎನ್ನುವುದು ವಾಸ್ತವ. ದೇಶದ ಸಾಮಾನ್ಯ ಪ್ರಜೆ ನೀಡುವ ತೆರಿಗೆ ಹಣವನ್ನು ಕಳೆದ ಎಪ್ಪತ್ತು ವರ್ಷಗಳಲ್ಲಿ ಕೋಟಿ, ಕೋಟಿ ಮೊತ್ತದಲ್ಲಿ ವ್ಯಯಿಸಿದ ಮೇಲೂ ದೇಶದ ವಿಜ್ಞಾನ ಕ್ಷೇತ್ರದ ಸ್ಥಿತಿಗತಿ ಶೋಚನೀಯವಾಗಿರುವುದು, ನಮ್ಮ ಶ್ರದ್ಧೆಗೆ, ಕರ್ತವ್ಯನಿಷ್ಠೆಗೆ ಹಿಡಿದ ಕನ್ನಡಿ.

ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಮೂಲಭೂತ ವಿಜ್ಞಾನಕ್ಷೇತ್ರವನ್ನು ಯುವಪೀಳಿಗೆಗೆ ಹೆಚ್ಚು ಆಕರ್ಷಕವೆನಿಸುವಂತೆ ಮಾಡುವಲ್ಲಿ ನಾವು ಪ್ರಯತ್ನಿಸಿಯೇ ಇಲ್ಲ. ಸ್ಥಳೀಯ ಅನಕ್ಷರಸ್ಥ ರಾಜಕಾರಣಿಗೆ ಸಿಗುವ ಜನಮನ್ನಣೆ ದೇಶದ ಒಬ್ಬ ವಿಜ್ಞಾನಿಗೆ ಸಿಗುವುದಿಲ್ಲ. ವಿಜ್ಞಾನಕ್ಷೇತ್ರವನ್ನು ಆಕರ್ಷಣೀಯಗೊಳಿಸುವಲ್ಲಿ ನಾವು ವಿಫಲರು. ಧಾರ್ಮಿಕ ನಂಬಿಕೆಗಳನ್ನು ವಿಜ್ಞಾನದೊಟ್ಟಿಗೆ ಸೇರಿಸುವ ಅಪಾಯಕಾರಿ ಕೆಲಸದಲ್ಲಿ ನಮಗಿರುವ ಆಸಕ್ತಿ ಮೂಲಭೂತ ವಿಜ್ಞಾನಕ್ಷೇತ್ರದ ಪ್ರಗತಿಗಾಗಿನ ಪ್ರಾಮಾಣಿಕ ಪ್ರಯತ್ನದಲ್ಲಿ ಇದೆಯೇ? ಸ್ವಾತಂತ್ರ್ಯಾ ನಂತರ ತಂತ್ರಜ್ಞಾನ ಮತ್ತು ವಿತ್ತೀಯ ಅಭಿವೃದ್ಧಿಯೇ ದೇಶದ ಪ್ರಗತಿಗೆ ಪೂರಕ ಎಂಬ ನಿಲುವು ತಾಳಿದ ಆಡಳಿತಗಳು ಮೂಲಭೂತ ಸಂಶೋಧನಾ ಕ್ಷೇತ್ರವನ್ನು ಹಂತ ಹಂತವಾಗಿ ಕಡೆಗಣಿಸುತ್ತಲೇ ಬಂದಿವೆ. ಸಮಾಜದಲ್ಲಿ, ‘ವೈಜ್ಞಾನಿಕ ಮನೋಭಾವ’ ಎಂಬ ಪದಕ್ಕೆ ಸೀಮಿತ ಅರ್ಥ ಕಲ್ಪಿಸಿ, ಹೆಚ್ಚಿನ ಸಂದರ್ಭಗಳಲ್ಲಿ ಸಮಾಜದ ಮೂಢ ಆಚರಣೆಯನ್ನೋ ಅಥವಾ ಯಾವುದೋ ಧಾರ್ಮಿಕ ನಂಬಿಕೆಗಳನ್ನೋ ವಿರೋಧಿಸುವುದಷ್ಟೆ ವೈಜ್ಞಾನಿಕ ಮನೋಭಾವ ಎಂಬ ಸೀಮಿತ ಚೌಕಟ್ಟು ಹಾಕಿಕೊಂಡವರು ನಾವು. ಇಂಥ ನಡೆಗಳು ವಿಜ್ಞಾನದ ಮೂಲಸ್ವರೂಪವನ್ನು, ವೈಶಾಲ್ಯವನ್ನು ಸಮಾಜಕ್ಕೆ ಮನದಟ್ಟು ಮಾಡುವಲ್ಲಿ ತೊಡಕುಂಟುಮಾಡುವಂಥದು. ವಿಜ್ಞಾನ ಎನ್ನುವುದು ಎಲ್ಲವನ್ನೂ ಪ್ರಶ್ನಿಸಿ, ಪ್ರಾಮಾಣೀಕರಿಸಿಯೇ ಒಪ್ಪಿಕೊಳ್ಳುವ ಎಲ್ಲ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುತ್ತದೆ ಎಂಬ ವಾಸ್ತವವನ್ನು ಅರಿತೂ ಅದನ್ನು ಕಡೆಗಣಿಸಿದವರು ನಾವು. ಸಮಾಜ ಬೆಳೆದು ಬಂದ ಬಗೆ, ಶ್ರೇಣೀಕೃತ ವ್ಯವಸ್ಥೆ ಮತ್ತು ಅದಕ್ಕಂಟಿದ ನಮ್ಮ ಮಾನಸಿಕ ಸ್ಥಿತಿ ಇವೆಲ್ಲವೂ ಒಟ್ಟಾರೆ ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ನೈಜ ಸ್ವರೂಪದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ತೊಡರುಗಾಲಾಗುವಂಥದು. ಇಂಥ ಸಾಮಾಜಿಕ ಪರಿಸ್ಥಿತಿ ಹೊಂದಿರುವ ದೇಶದಲ್ಲಿ ಮೂಲಭೂತ ಸಂಶೋಧನೆಯ ಉನ್ನತಿ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಬೇಕು ಎಂದು ಅಪೇಕ್ಷಿಸುವುದು ಎಷ್ಟು ಸರಿ? ದೇಶದ ಸಾಮಾಜಿಕ ವಲಯದಲ್ಲಿ, ವೈಜ್ಞಾನಿಕ ಸಂಸ್ಕೃತಿಯನ್ನು ಬೆಳೆಸಲು ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಪ್ರಯತ್ನ ಏತಕ್ಕೂ ಸಾಲದು.

ಮೂಲಭೂತ ವಿಜ್ಞಾನರಂಗದ ವೈಫಲ್ಯದ ಜಾಡು ಹಿಡಿದು ಹೊರಟೆವಾದರೆ, ನಾವು ತಲುಪುವುದು ಶಾಲಾ ಶಿಕ್ಷಣದ ಹಂತಕ್ಕೆ. ನಮ್ಮ ಶಾಲಾ ಹಂತದಿಂದಲೇ ಮೂಲಭೂತ ಶಿಕ್ಷಣದ ಅಡಿಪಾಯವೇ ಗಟ್ಟಿಯಾಗಿಲ್ಲ. ನಿಸರ್ಗ ನಿಯಮಗಳ ಬಗ್ಗೆ ಮಕ್ಕಳಲ್ಲಿ ಕುತೂಹಲ ಕೆರಳಿಸಿದೆವಾದಲ್ಲಿ, ಅವರು ಮುಂದೆ ಮೂಲಭೂತ ವಿಜ್ಞಾನವನ್ನು ಅತಿ ಆಸಕ್ತಿಯಿಂದ ಅಧ್ಯಯನ ಮಾಡಿಯೇ ಮಾಡುತ್ತಾರೆ. ದೇಶದ ವಿವಿಧ ಭಾಗಗಳಲ್ಲಿನ ಮತ್ತು ವಿವಿಧ ರೀತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಡೆಯುತ್ತಿರುವ ವಿಜ್ಞಾನಶಿಕ್ಷಣದಲ್ಲಿನ ತಾರತಮ್ಯವನ್ನು ಹೋಗಲಾಡಿಸಲೂ ನಮ್ಮಿಂದ ಸಾಧ್ಯವಾಗಿಲ್ಲ. ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಸೂಕ್ಷ್ಮದರ್ಶಕವನ್ನು ನೋಡಿಯೂ ಇರದಂಥ ಸ್ಥಿತಿ ಇದೆ, ಇನ್ನು ವಿಜ್ಞಾನದ ಪ್ರಯೋಗಗಳಂತೂ ದೂರವೇ ಉಳಿಯಿತು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಸಾಮಾನ್ಯ ಜೀವಕೋಶದ ಕುರಿತು ಎಲ್ಲ ವಿವರ ಕೊಡಬಲ್ಲ ಒಂದೇ ಒಂದು ಆಕರ ಗ್ರಂಥ ಕನ್ನಡದಲ್ಲಿ ಇಲ್ಲ! ಬೇರೆ ರಾಜ್ಯಗಳ ಪರಿಸ್ಥಿತಿ ವಿಭಿನ್ನವಾಗಿಯೇನೂ ಇಲ್ಲ. ಇಂಥ ಸ್ಥಿತಿಯಲ್ಲಿ ಶಾಲೆಯ ಮಕ್ಕಳ ವಿಜ್ಞಾನ ಕಲಿಕೆ ಸಾಗಿದೆ. ಇಂಥ ಶೋಚನೀಯ ಸ್ಥಿತಿಯನ್ನು ಸರಿಪಡಿಸಬೇಕೆಂಬ ಹಂಬಲವೂ ನಮಗಿಲ್ಲ. ವಾಸ್ತವ ಹೀಗಿರುವಾಗ, ಈ ವಿದ್ಯಾರ್ಥಿಗಳು ಮುಂದೆ ವಿಜ್ಞಾನಿ ಆಗಬೇಕೆಂದು ಅಪೇಕ್ಷಿಸುವವರು ನಾವು!

ಕಾಲೇಜು ಮತ್ತು ವಿಶ್ವವಿದ್ಯಾಲಯ ಹಂತದಲ್ಲಿಯೂ ಪರಿಸ್ಥಿತಿ ವಿಭಿನ್ನವಾಗಿಯೇನೂ ಇಲ್ಲ. ವಿಜ್ಞಾನದ ಅಧ್ಯಯನಕ್ಕೆ ಪೂರಕವಾದ ಆಕರ ಗ್ರಂಥಗಳ ಕೊರತೆ, ಸೂಕ್ತ ಪರಿಕರ ಮತ್ತು ಪ್ರಯೋಗಾಲಯಗಳ ಅಭಾವ, ಸೀಮಿತ ಜ್ಞಾನದ ಶಿಕ್ಷಕ ವರ್ಗ ಇಂಥ ಅನೇಕ ಸಂಗತಿಗಳು ಉನ್ನತ ಅಧ್ಯಯನಕ್ಕೆ ತೊಡಕಾಗಿ ಪರಿಣಮಿಸುತ್ತವೆ. ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಪರೀಕ್ಷೆಯಲ್ಲಿ ಮಕ್ಕಳು ಗಳಿಸುವ ಅಂಕವೇ ಪ್ರಧಾನವಾದರೆ, ಪದವಿ ಗಳಿಸಿದ ವಿದ್ಯಾರ್ಥಿಗೆ ಮುಂದಿನ ಉದ್ಯೋಗವೇನು ಎಂಬ ಜೀವನದ ಪ್ರಶ್ನೆಯೇ ಎದುರಾಗಿರುತ್ತದೆ. ಜಾತಿವಾದ, ಪಕ್ಷಪಾತ, ರಾಜಕೀಯ ಇಂಥವೇ ವಿಚಾರಗಳಲ್ಲಿ ಮುಳುಗಿರುವ ಅನೇಕ ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ವಿಜ್ಞಾನದ ಓದು, ಸಂಶೋಧನೆ ಸಾಗಲು ಸಾಧ್ಯವೇ? ವಿದ್ಯಾರ್ಥಿ ತನಗನ್ನಿಸಿದ ವಿಚಾರವನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುವ ಮತ್ತು ಪ್ರಶ್ನಿಸುವ ಅವಕಾಶ ಒದಗಿಸುವ ಮುಕ್ತ ಶೈಕ್ಷಣಿಕ ವ್ಯವಸ್ಥೆಯೇ ನಮ್ಮಲ್ಲಿಲ್ಲ. ವಿಜ್ಞಾನದ ಮೂಲಸ್ವರೂಪಕ್ಕೆ ಧಕ್ಕೆ ತರುವ ಇಂಥ ಪರಿಪಾಠವನ್ನು ಪಾಲಿಸುತ್ತಲೇ ವೈಜ್ಞಾನಿಕ ಕ್ಷೇತ್ರದ ಉನ್ನತಿ ಸಾಧಿಸುವುದು ಅಸಾಧ್ಯ. ಮೂಲಭೂತ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ದೇಶಗಳ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಣವ್ಯವಸ್ಥೆಯನ್ನು ಕಣ್ಣು ತೆರೆದು ನೋಡಿದವರೂ ನಾವಲ್ಲ.

ವಿಜ್ಞಾನಕ್ಷೇತ್ರ ಪ್ರಗತಿ ಹೊಂದದಿರಲು ಇನ್ನೊಂದು ಕಾರಣ, ಅರ್ಹರು ಅವಕಾಶ ವಂಚಿತರಾಗಿರುವುದು. ಅರ್ಹರು ಎಂದಾಕ್ಷಣ ಅವರೆಲ್ಲ ಉನ್ನತ ಪದವೀಧರರೇ ಆಗಬೇಕೆಂದೇನಿಲ್ಲ. ಯಾವುದೇ ವಿಶ್ವವಿದ್ಯಾಲಯಗಳ ಅನುಮೋದನೆ ಹೊಂದಿರದ ಅನೇಕ ವಿದ್ಯಾರ್ಥಿಗಳಲ್ಲಿ, ಕೃಷಿಕರಲ್ಲಿ, ಇನ್ನಿತರರಲ್ಲಿ ಒಂದಲ್ಲ ಒಂದು ತೆರನ ಸಂಶೋಧನಾ ಪ್ರವೃತ್ತಿ ಮನೆಮಾಡಿರುತ್ತದೆ. ಅಂಥ ಮಾನವ ಸಂಪನ್ಮೂಲವನ್ನು ನಾವೆಂದಾದರೂ ಬೆಂಬಲಿಸಿದ್ದಿದೆಯೇ? ಅನುದಾನ, ಮೂಲಸೌಕರ್ಯವಂಚಿತ – ಇಂಥ ಬುದ್ಧಿವಂತರ ಯೋಜನೆಗಳ ಸ್ವತಂತ್ರ ಅನುಷ್ಠಾನಕ್ಕೆ ಪೂರಕವಾಗಲು ಪ್ರಾದೇಶಿಕ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕೆಂದು ನಮಗೆ ಅನಿಸಿದ್ದಿದೆಯೇ?

ದೇಶದ ಭ್ರಷ್ಟವ್ಯವಸ್ಥೆ ಕೊನೆಗೊಳ್ಳುವವರೆಗೂ ಪ್ರತಿಭಾ ಪಲಾಯನ ಇದ್ದೇ ಇರುತ್ತದೆ. ಶೈಕ್ಷಣಿಕ ಆಡಳಿತಗಳಿಗಾಗಲಿ, ಸರಕಾರಕ್ಕಾಗಲಿ, ವಿದ್ವತ್ ವರ್ಗಕ್ಕಾಗಲಿ ನಮ್ಮ ಈ ಅವಸ್ಥೆಯನ್ನು ಎಂದಾದರೂ ಸರಿಪಡಿಸಬೇಕು ಎಂದು ಅನಿಸಿದ್ದಿದೆಯೇ? ನಮ್ಮ ಸರಕಾರ ನೀಡುವ ಸಂಶೋಧನಾ ಅನುದಾನ ತಾರತಮ್ಯವಿಲ್ಲದೆ ವಿತರಣೆಯಾಗುತ್ತಿದೆಯೇ, ಕೊಟ್ಟ ಅನುದಾನಕ್ಕೆ ಸರಿಯಾಗಿ ಸಂಶೋಧನೆ ಫಲ ನೀಡಿದೆಯೇ, ಸಂಶೋಧಕರ ಕಷ್ಟಗಳೇನು ಮತ್ತು ಲಿಂಗ ತಾರತಮ್ಯವಿಲ್ಲದ ವ್ಯವಸ್ಥೆಯ ನಿರ್ಮಾಣವಾಗಿದೆಯೇ – ಎನ್ನುವ ಕುರಿತು ಚಿಂತಿಸುವ ವ್ಯವಧಾನವೂ ನಮಗಿಲ್ಲ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಾಣಸಿಗುವ ಸಂಶೋಧನಾ ಸಂಸ್ಕೃತಿ ನಮ್ಮಲ್ಲಿ ಇಲ್ಲವೇ ಇಲ್ಲ. ಅಲ್ಲಿನ ಹೆಚ್ಚಿನ ಪ್ರಯೋಗಾಲಯಗಳಲ್ಲಿ ವಿವಿಧ ದೇಶದ, ವಿವಿಧ ರೀತಿಯ ಪದವಿ ಹೊಂದಿರುವ ಯುವ ಸಂಶೋಧಕರ ತಂಡವೇ ಕಾಣಸಿಗುತ್ತದೆ. ಅಂಥ ವೈವಿಧ್ಯವು ಮುಕ್ತವಿಚಾರ ವಿನಿಮಯದಲ್ಲಿ, ಹೊಸ ಆವಿಷ್ಕಾರಗಳಲ್ಲಿ ವಿನೂತನ ಮಾರ್ಗವನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ. ನಮ್ಮಲ್ಲಿ ಮುಕ್ತ ಮನಸ್ಸಿನಿಂದ, ಶೈಕ್ಷಣಿಕ ವಿಚಾರಗಳನ್ನು ಚರ್ಚಿಸುವ, ಪ್ರಶ್ನಿಸುವ ಸಂಶೋಧನಾ ವಿದ್ಯಾರ್ಥಿ ಹೆಚ್ಚಿನವರ ಕಣ್ಣಿಗೆ ‘ಅಧಿಕಪ್ರಸಂಗಿ’ ಯಾಗಿಯೇ ಕಾಣುವುದುಂಟು. ಯಾರು ಮೂಲಭೂತ ಸಂಶೋಧನೆ ಕೈಗೊಳ್ಳಲು ಅರ್ಹರು ಮತ್ತು ಅವರ ಅಗತ್ಯಗಳೇನು ಎಂಬುದನ್ನು ಅರಿತು ನಾವು ವ್ಯವಹರಿಸಬೇಕಿದೆ. ಆಗ ನಾವೂ ಮೂಲಭೂತ ಸಂಶೋಧನೆ ಕ್ಷೇತ್ರದಲ್ಲಿ ಸಾಧಕರು ಎಂದು ಜಗತ್ತಿಗೇ ಸಾರಿ ಹೇಳುವ ದಿನ ಬಂದೀತು.

**

ಮೂಲಭೂತ ವಿಜ್ಞಾನ ರಂಗದ ವೈಫಲ್ಯದ ಜಾಡು ಹಿಡಿದು ಹೊರಟೆವಾದರೆ, ನಾವು ತಲುಪುವುದು ಶಾಲಾ ಶಿಕ್ಷಣದ ಹಂತಕ್ಕೆ. ನಮ್ಮ ಶಾಲಾ ಹಂತದಿಂದಲೇ ಮೂಲಭೂತ ಶಿಕ್ಷಣದ ಅಡಿಪಾಯವೇ ಗಟ್ಟಿಯಾಗಿಲ್ಲ. ನಿಸರ್ಗ ನಿಯಮಗಳ ಬಗ್ಗೆ ಮಕ್ಕಳಲ್ಲಿ ಕುತೂಹಲ ಕೆರಳಿಸಿದೆವಾದಲ್ಲಿ, ಅವರು ಮುಂದೆ ಮೂಲಭೂತ ವಿಜ್ಞಾನವನ್ನು ಅತಿ ಆಸಕ್ತಿಯಿಂದ ಅಧ್ಯಯನ ಮಾಡಿಯೇ ಮಾಡುತ್ತಾರೆ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !