ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ವರ್ಕ್‌ಶೀಟ್‌ ನೆರವು

Last Updated 23 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಆಕೆ ಚುರುಕು ಹುಡುಗಿ. ಸದಾ ಲವಲವಿಕೆಯಿಂದ ಇರುವ ಬುದ್ದಿವಂತೆ. 6ನೇ ತರಗತಿಗೇ ಮುಖದಲ್ಲಿ ಪ್ರೌಢಿಮೆ. ಶಾಲೆಯಲ್ಲೂ ಕ್ಲಾಸಿಗೆ ಫಸ್ಟ್. ಪರೀಕ್ಷೆಗೆ ಪುನರ್‌ಮನನ ಮಾಡಿಸುವಾಗ ಪುಸ್ತಕದ ಕೊನೆಯಲ್ಲಿ ಕಂಡ ಪ್ರಶ್ನೆಯನ್ನು ಕೇಳಿದರೆ ಒಂದತ್ತು ಸೆಕೆಂಡ್‌ಗಳಾದರೂ ಉತ್ತರ ಹೇಳಲು ಸಾಧ್ಯವಾಗಲಿಲ್ಲ.

‘ಮೊದಲಿಂದ ಕೇಳಿ. ಮಧ್ಯದಲ್ಲಿ ಕೇಳಿದ್ರೆ ನನಗೆ ಕನ್‌ಫ್ಯೂಸ್ ಆಗುತ್ತೆ’ ಎಂಬ ಉತ್ತರ. ಉತ್ತರ ಗೊತ್ತಿದ್ದವಳಿಗೆ ಮೊದಲು ಯಾವ ಪ್ರಶ್ನೆಯಾದರೇನು? ಪ್ರಶ್ನೆಪತ್ರಿಕೆಯಲ್ಲಿ ಹೀಗೆ ಕೊಡ್ತಾರೆ ಅಂತಿಲ್ಲವಲ್ಲ ಎಂದರೆ ‘ನಾನು ಕಂಠಪಾಠ ಮಾಡಿರೋದು ಹಾಗೇನೆ. ಸ್ಕೂಲಲ್ಲೂ ಹಾಗೆ ಕೊಡ್ತಾರೆ’ ಅಂದಾಗ ನಿಜದ ದರ್ಶನವಾಗಿತ್ತು. ನೋಟ್ ಪುಸ್ತಕದಲ್ಲಿದ್ದ ಸೀರೀಸ್ ಅನ್ನು ಚೂರೂ ತಪ್ಪದಂತೆ ಕೇಳಿದಾಗ, ಅಷ್ಟೂ ಪ್ರಶ್ನೆಗಳಿಗೆ ಒಂಚೂರು ತಪ್ಪಿಲ್ಲದ ಉತ್ತರವೇ ಸಿಕ್ಕಿತು.

ಚಿಕ್ಕವರಿದ್ದಾಗ ಬಹುತೇಕ ಮಂದಿ ಬಹುಶಃ ಇದೇ ರೀತಿಯಾಗಿ ಕಂಠಪಾಠ ಮಾಡಿರಬಹುದು. ಪದ್ಯಗಳನ್ನೋ, ಮಗ್ಗಿಗಳನ್ನೋ ಹೀಗೆ ಕಂಠಪಾಠ ಮಾಡಬೇಕಿತ್ತು, ನಿದ್ರೆಯಲ್ಲಿ ಎಬ್ಬಿಸಿ ಕೇಳಿದರೂ ಹೇಳುವಂತಿರಬೇಕೆನ್ನುವ ಶಿಕ್ಷಕರ ಮಾತು ಅಷ್ಟರಮಟ್ಟಿಗೆ ಪ್ರಭಾವ ಬೀರುತ್ತಿತ್ತು. ಆದರೆ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳದೆ ಬರಿ ಪ್ರಶ್ನೆಯ ನಂಬರ್‌ಗಳನ್ನು ನೆನಪಿನಲ್ಲಿಕೊಂಡು ಅಥವಾ ಉತ್ತರಗಳಿಗೆ ಮನಸ್ಸಿನಲ್ಲಿಯೇ ನಂಬರ್‌ಗಳನ್ನು ನೀಡಿ ಕಂಠಪಾಠ ಮಾಡಿಲ್ಲದಿರಬಹುದು. ಈಗಿನ ಮಕ್ಕಳ ಅಂಕ ಪಟ್ಟಿಗಳ ಜೀವಾಳವೇ ಕಂಠಪಾಠ ಮಾಡುವುದು ಎನ್ನುವಂತಾಗಿದೆ. ಮಗುವು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದೆ ಎನ್ನುವುದೇ ಒಂದು ಯಕ್ಷ ಪ್ರಶ್ನೆ. ಸಾಮಾನ್ಯವಾಗಿ ಬಹುತೇಕ ಮಕ್ಕಳು ಮಾಧ್ಯಮಿಕ ಹಂತಕ್ಕೆ ಬರುವಷ್ಟರಲ್ಲಿ ಸ್ವಂತವಾಗಿ ಬರೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಅದನ್ನು ಗುರುತಿಸದೆ ಕಂಠಪಾಠವನ್ನೆ ಮುಂದುವರೆಸುವುದು ತಪ್ಪು. ಇದು ಮಾತೃಭಾಷೆಯ ವಿಷಯದಲ್ಲೂ ಕಾಣುವುದು ಬೇಸರದ ಸಂಗತಿ.

ಕಂಠಪಾಠದಿಂದ ಮರೆವು

ಕಂಠಪಾಠ ಮಾಡಿದ ವಿಷಯಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯದು. ಹೆಚ್ಚೆಂದರೆ ಪರೀಕ್ಷೆಗಳನ್ನು ಬರೆಯುವವರೆಗೂ ನಮ್ಮ ಜೊತೆಯಲ್ಲಿರಬಹುದು ಅಷ್ಟೆ. ಮರೆವು ಮನುಷ್ಯನ ಸಹಜ ಗುಣ ಹೌದು. ಆದರೆ ಎಲ್ಲದರಲ್ಲೂ ಮರೆವು ಸರಿಯಲ್ಲ. ಕಲಿಕೆಯಲ್ಲಿ ವಿಷಯ ಸಂಪೂರ್ಣವಾಗಿ ಅರ್ಥವಾದರೆ ಕಂಠಪಾಠದ ಅವಶ್ಯಕತೆಯೇ ಇಲ್ಲ. ಕಲಿತ ವಿಷಯ ಜೀವನದುದ್ದಕ್ಕೂ ನೆನಪಿನಲ್ಲಿರುತ್ತದೆ. ಇನ್ನು ಕೆಲವರಿಗೆ ಸ್ಟಾರ್ಟಿಂಗ್ ಟ್ರಬಲ್ ಬೇರೆ. ಎಷ್ಟೆ ಚೆನ್ನಾಗಿ ಕಂಠಪಾಠ ಮಾಡಿದರೂ ಮೊದಲ ವಾಕ್ಯ ಅಥವಾ ಮೊದಲ ಪದವೇನಾದರೂ ನೆನಪಾಗದಿದ್ದರೆ ಉಳಿದದ್ದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ.

ತಾವು ಹೇಳಿಕೊಟ್ಟಂತೆಯೋ ಅಥವಾ ನೋಟ್ಸ್ ಬರೆಸಿದಂತೆಯೋ ಉತ್ತರಿಸಬೇಕೆನ್ನುವ ಶಿಕ್ಷಕರೂ ಇದ್ದಾರೆ. ಇದು ಕೂಡ ಕಂಠಪಾಂಠಕ್ಕೆ ಅಡಿಪಾಯವಾಗಬಹುದು. ಹಾಗಾಗಿ ಯಾವುದೇ ವಿಷಯವಾದರೂ ಅದನ್ನು ಕಂಠಪಾಠ ಮಾಡಿಸುವ ಬದಲು ಮಕ್ಕಳಿಗೆ ಅರ್ಥಮಾಡಿಸಲು ಇಲ್ಲೊಂದಿಷ್ಟು ಉಪಾಯಗಳಿವೆ.

ವರ್ಕ್‌ಶೀಟ್‌ ಬಳಕೆ

ಮಕ್ಕಳಿಗೆ ವಿಷಯದಲ್ಲಿ ಆಸಕ್ತಿ ಮೂಡಿಸಲು ವರ್ಕ್ ಶೀಟ್‌ಗಳನ್ನು ಬಳಸಬಹುದು. ಆಕರ್ಷಕವಾದ ವರ್ಕ್‌ಶೀಟ್‌ಗಳಿಂದ ಮಕ್ಕಳಿಗೆ ಕುತೂಹಲದ ಜೊತೆಗೆ ಆಸಕ್ತಿಯೂ ಬೆಳೆಯುತ್ತದೆ. ಶಾಲೆಗಳಲ್ಲಿ ಇದರ ಪ್ರಯೋಗ ಮಾಡುತ್ತಾರಾದರೂ, ವರ್ಕ್‌ಶೀಟ್‌ಗಳನ್ನು ಮನೆಯಲ್ಲಿಯೇ ನೀವೆ ತಯಾರಿಸಬಹುದು, ಅಥವಾ ಈಗಾಗಲೇ ಸಿದ್ಧಪಡಿಸಿರುವ ಶೀಟ್‌ಗಳನ್ನು ಅಂತರ್ಜಾಲದಲ್ಲಿಯೂ ಡೌನ್‌ಲೋಡ್ ಮಾಡಬಹುದು.

ವರ್ಕ್‌ಶೀಟ್‌ಗಳಲ್ಲಿ ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ ಚಿತ್ರಗಳ ಮೂಲಕವೂ ಪ್ರಸ್ತುತಪಡಿಸುವುದರಿಂದ ಮಗುವನ್ನು ಆಕರ್ಷಿಸುವುದರ ಜೊತೆಗೆ ವಿಷಯ ಸಂಪೂರ್ಣವಾಗಿ ಅರ್ಥ ಮಾಡಿಸಬಹುದು. ಉದಾಹರಣೆಗೆ ಸಂಕಲನವನ್ನೆ ತೆಗೆದುಕೊಂಡರೆ ಎಷ್ಟು ಸಾಧ್ಯವೋ ಅಷ್ಟನ್ನೂ ಚಿತ್ರಗಳ ಮೂಲಕ ಹಾಕಿಕೊಡಬಹುದು.

ಇನ್ನು ವಿಜ್ಞಾನ, ಸಮಾಜದಂತಹ ವಿಷಯಗಳಾದರೂ ಸಹ ಅಲ್ಲಿ ಕೊಟ್ಟಿರುವ ಚಿತ್ರಗಳನ್ನು ವಿವರಣೆಯ ಜೊತೆ ಹೊಂದಿಸುವ, ಕಲಿತ ವಿಷಯಗಳನ್ನು ನಮ್ಮ ದೈನಂದಿನ ಜೀವನಕ್ಕೆ ಹೋಲಿಸಿ ಯೋಚಿಸಿ ಉತ್ತರ ಬರೆಯುವಂತಹ ಪ್ರಶ್ನೆಗಳಿಂದ ವಿಷಯ ಬಹುಬೇಗ ಅರ್ಥವಾಗುವುದರ ಜೊತೆಗೆ ಮಗು ಪ್ರಾಯೋಗಿಕವಾಗಿಯೂ ಯೋಚಿಸುವುದನ್ನು ಕಲಿಯುತ್ತದೆ.

ಉದಾಹರಣೆಗೆ- ವಿಷಯ: ಪ್ರಾಣಿಗಳ ವಿವಿಧ ವಾಸಸ್ಥಾನಗಳು ಮತ್ತು ಅದಕ್ಕೆ ಹೊಂದಿಕೊಳ್ಳಲು ಅದರ ದೇಹದಲ್ಲಿಲಾಗಿರುವ ಬದಲಾವಣೆಗಳು. ಇದೆಲ್ಲದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ನಂತರ ವರ್ಕ್‌ಶೀಟ್‌ಗಳಲ್ಲಿ ಪ್ರಾಣಿಗಳು ಮತ್ತದರ ವಾಸಿಸುವ ಜಾಗಗಳ ಚಿತ್ರಗಳನ್ನು ನೀಡಿ ಹೊಂದಿಸುವಂತೆ ಹೇಳಬಹುದು. ಜೊತೆಗೆ ಹಿಮ ಕರಡಿ ಅಥವಾ ಒಂಟೆಯನ್ನೋ ತಂದು ಬೆಂಗಳೂರಲ್ಲಿ ಬಿಟ್ಟರೆ, ಇಲ್ಲಿರುವ ನಾಯಿಯನ್ನು ಹಿಮಾಲಯದಲ್ಲಿ ಬಿಟ್ಟರೆ ಬದುಕತ್ತವೆಯೇ? ಇಲ್ಲವೆಂದಾದರೆ ಕಾರಣಗಳೇನು? ಎನ್ನುವಂತಹ ಪ್ರಶ್ನೆಗಳು ಮಕ್ಕಳನ್ನು ಯೋಚನೆಗೆ ಒಡ್ಡುತ್ತವೆ. ಸ್ವಂತವಾಗಿ ಉತ್ತರಗಳನ್ನು ಬರೆಯಲು ಪ್ರೇರೇಪಿಸುತ್ತವೆ.

ಕಥೆಗಳನ್ನೂ ಹೇಳಬಹುದು..!

ವರ್ಕ್‌ಶೀಟ್‌ಗಳನ್ನು ತಯಾರಿಸುವ ಸಾಕಷ್ಟು ವಿಡಿಯೋಗಳು ಯೂಟ್ಯೂಬ್‌ನಲ್ಲಿಯೂ ಲಭ್ಯವಿದ್ದು ಅದನ್ನು ಕೂಡ ಅನುಸರಿಸಬಹುದು. ಇದರಿಂದ ಮಗುವಿನ ಯೋಚನಾಶಕ್ತಿ, ಸ್ಮರಣಾಶಕ್ತಿ ಹೆಚ್ಚಾಗುವುದರ ಜೊತೆಗೆ ಲವಲವಿಕೆಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತದೆ.
ಓದಿದ್ದನ್ನು ಮುಚ್ಚಿಟ್ಟು ಇನ್ನೊಂದು ಪುಸ್ತಕದಲ್ಲಿ ಬರೆಸುವುದು ಒಳ್ಳೆಯದು. ಇದರಿಂದ ಬರವಣಿಗೆಯ ಜೊತೆಗೆ ವಿಷಯವೂ ನೆನಪಿನಲ್ಲಿ ಉಳಿಯುತ್ತದೆ.

ಕಥೆಗಳನ್ನು ಬಳಸಿ ಅಥವಾ ಘಟನೆಗಳನ್ನು ಉದಾಹರಣೆಗಳಾಗಿ ಹೇಳುವ ಮೂಲಕವೂ ವಿಷಯವನ್ನು ಅರ್ಥಮಾಡಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಹೆಚ್ಚು ಅಂಕ ಗಳಿಸುವುದೊಂದೆ ಜೀವನದ ಮುಖ್ಯ ಉದ್ದೇಶ ಎಂಬ ಭಾವನೆ ಬೆಳೆಯದಂತೆ ನೋಡಿಕೊಳ್ಳಿ. ವಿಷಯಗಳೆಡೆಗಿನ ಜ್ಞಾನ, ತಿಳಿವಳಿಕೆಯೇ ಕಲಿಕೆಯ ಪರಮ ಗುರಿಯಾಗಬೇಕು ಎನ್ನುವುದನ್ನು ಅರ್ಥಮಾಡಿಸಿ.

- ಲೇಖಕಿ ಉಪನ್ಯಾಸಕಿ, ವಿಶ್ವವಿದ್ಯಾಲಯ ಕಲಾಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT