ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಯೂ ಒಂದು ಕಲೆ

Last Updated 5 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನಿಮ್ಮ ಮಗುವಿಗೆ ಓದಿನ ಹವ್ಯಾಸವಿದೆಯೇ? ಅದು ತನ್ನ ಮೆಚ್ಚಿನ ಲೇಖಕನಂತೆ ಬರಹಗಾರನಾಗಲು ಯತ್ನಿಸುತ್ತಿದೆಯೇ? ಹಾಗಿದ್ದರೆ ಅದಕ್ಕೆ ಎಳವೆಯಿಂದಲೇ ಒಂದಿಷ್ಟು ಪ್ರೋತ್ಸಾಹ, ಇನ್ನೊಂದಿಷ್ಟು ಟಿಪ್ಸ್‌ ನೀಡಿದರೆ ಖಂಡಿತ ಭವಿಷ್ಯದಲ್ಲಿ ಒಳ್ಳೆಯ ಬರಹಗಾರ ಆಗಬಹುದು.

ನಾನೂ ಏನಾದರೂ ಬರೆಯಬೇಕು ಎಂದುಕೊಳ್ಳುವುದು ಸುಲಭ. ಆದರೆ ಬರೆಯಬೇಕು ಎಂದು ಕುಳಿತ ಮೇಲೆನೇ ಗೊತ್ತಾಗೋದು ಅದೆಷ್ಟು ಕಷ್ಟ ಅಂತ. ಶಾಲಾ– ಕಾಲೇಜಿಗೆ ಹೋಗುವ ಮಕ್ಕಳಿರಲಿ, ಪ್ರಬಂಧ ಮಂಡಿಸುವವರಿರಲಿ ಅಥವಾ ವೃತ್ತಿಪರ ಬರಹಗಾರರಿರಲಿ ಎಲ್ಲರಿಗೂ ಅವರದೇ ಆದ ಒಂದು ರೀತಿ–ನೀತಿ ಇರುತ್ತದೆ. ಆ ರೀತಿಯೇ ಅವರು ಬರೆಯಬೇಕಾಗುತ್ತದೆ. ಹಾಗಾದರೆ ಅದಕ್ಕೆ ಕೆಲವು ಮೂಲಭೂತವಾದ ಪೂರಕ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಬರವಣಿಗೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವುದರಿಂದ ಮಕ್ಕಳಿಗೆ ಹಲವು ರೀತಿಯಲ್ಲಿ ಅನುಕೂಲವಾಗಬಹುದು. ಅವರ ವಿವಿಧ ಅನುಭವಗಳನ್ನು ಒರೆಗೆ ಹಚ್ಚಬಹುದು.

ಸುಂದರ ಕೈಬರಹ
ಎಂತಹ ನೀರಸ ವಿಷಯವಿದ್ದರೂ ಸುಂದರ ಕೈಬರಹ ಓದಿಸಿಕೊಂಡು ಹೋಗುತ್ತದೆ. ಅದೇ ಅಕ್ಷರಗಳು ಸರಿಯಾಗಿರದಿದ್ದರೆ ರಸವತ್ತಾಗಿ ಬರೆದಿದ್ದರೂ ಗಮ್ಮತ್ತು ಸಿಗುವುದಿಲ್ಲ. ಸುಂದರ ಅಕ್ಷರಗಳಿಗೆ ಮಹತ್ವ ಕೊಡಬೇಕಾಗುತ್ತದೆ. ನಿಧಾನವಾಗಿ ಗಮನ ಕೊಟ್ಟು ಬರೆದರೆ ಇದರಲ್ಲಿ ಪ್ರಭುತ್ವವನ್ನು ಸಾಧಿಸಬಹುದು.

ಸುಲಭವಾಗಿ ಓದುವಂತಾಗಲು ಸ್ಫುಟವಾಗಿ ಬರೆದಿರಬೇಕು. ಸುಂದರವಾಗಿ ಬರೆಯಲು ಆಗದಿದ್ದರೂ ಶಬ್ದಗಳು ಒಂದಕ್ಕೊಂದು ಕೂಡಿ ಬೇರೊಂದು ಅರ್ಥ ಕೊಡದಂತೆ ಅಪಾರ್ಥವನ್ನು ತಡೆಯಬೇಕು. ಕೆಲವೊಮ್ಮೆ ಅವಸರವಿದ್ದ ಸಂದರ್ಭಗಳಲ್ಲಿ ಕೂಡಾ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಗಟ್ಟಿಯಾದ ಭಾಷಾ ಪ್ರೌಢಿಮೆ ಇದ್ದರೆ ನಿರರ್ಗಳವಾಗಿ ಬರೆಯಬಹುದು.

ವಿಸ್ತರಣೆ ಮತ್ತು ಸಂಕ್ಷೇಪ
ಪರೀಕ್ಷೆಗಳಲ್ಲಿ ಪ್ರಬಂಧಗಳನ್ನು ಬರೆಯುವುದು ವಿಸ್ತಾರದ ಒಂದು ರೂಪ. ಅಲ್ಲಿ ಒಂದು ವಿಷಯವನ್ನೋ, ಗಾದೆ ಮಾತನ್ನೋ ಕೊಡಲಾಗುತ್ತದೆ. ಅದರ ಬಗ್ಗೆ ಒಂದು ಪುಟಕ್ಕಾಗುವಷ್ಟು ಪ್ರಬಂಧ ಬರೆಯಿರಿ ಎಂದು ಕೇಳಿರುತ್ತಾರೆ. ಆಗ ಯಾವುದೇ ವಿಷಯದ ಒಳ, ಆಳ ಗೊತ್ತಿದ್ದರೆ ಅದನ್ನು ವಿಸ್ತರಿಸಿ ಬರೆದರೆ ಮುಗಿಯಿತು. ಹಾಗೆ ಬರೆಯಬೇಕಾದರೆ ಆ ವಿಷಯಕ್ಕೆ ಸಂಬಂಧಿಸಿದ ಪೂರಕ ವಿಚಾರಗಳು, ಅಂಕಿ– ಅಂಶಗಳು, ಉದಾಹರಣೆಗಳು, ವೈಜ್ಞಾನಿಕ ಕಾರಣಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಒಂದು ಸಣ್ಣ ವಿಷಯವನ್ನು ದೊಡ್ಡದಾಗಿಸುವಿಕೆಯಲ್ಲಿ ಇದು ಮುಖ್ಯ. ಭಾಷೆಯ ಕೌಶಲವಿಲ್ಲದಿದ್ದರೆ ಯಾವುದೇ ವಿಷಯವನ್ನು ಬರೆಯಲು ಸಾಧ್ಯವಾಗುವುದಿಲ್ಲ. ಆಗ ನೀವೇನೇ ಬರೆದರೂ ಅದು ನೀರಸ ಎಂದೆನ್ನಿಸಿ ಬಿಡುತ್ತದೆ. ಅದಕ್ಕಾಗಿ ಮನಸ್ಸಿನಲ್ಲಿ ಮೂಡುವ ವಿಚಾರಗಳನ್ನು ಸ್ವತಂತ್ರವಾಗಿ ಅಕ್ಷರದ ಮೂಲಕ ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ಸಂಕ್ಷಿಪ್ತಗೊಳಿಸುವುದೆಂದರೆ ಇರುವ ಒಂದು ವಿಷಯದಲ್ಲಿ ಒಂದೆರಡು ಪದಗಳನ್ನು ಅಥವಾ ವಾಕ್ಯಗಳನ್ನು ತೆಗೆದು ಹಾಕುವುದು ಎಂದರ್ಥವಲ್ಲ. ಮೂಲ ವಿಷಯಕ್ಕೆ, ಅರ್ಥಕ್ಕೆ ಎಲ್ಲೂ ಧಕ್ಕೆ ಆಗದ ರೀತಿಯಲ್ಲಿ ಅದನ್ನು ಕಡಿಮೆಗೊಳಿಸುವುದು. ಸಾಮಾನ್ಯವಾಗಿ ಪತ್ರಿಕೆಗಳ ಸುದ್ದಿಯೂ ಹೀಗೆಯೇ ಇರುತ್ತದೆ. ಇರುವಷ್ಟು ಜಾಗದಲ್ಲಿ ಒಟ್ಟು ಭಾವಾರ್ಥ ಬರಬೇಕು. ಹಾಗೆ ಅದನ್ನು ಸಂಕ್ಷಿಪ್ತಗೊಳಿಸಬೇಕಾಗುತ್ತದೆ. ಕೆಲವೊಮ್ಮೆ ಪದ, ವಾಕ್ಯಗಳು ಹೊರಟು ಹೋಗಬಹುದು. ಹೊಸ ಪದ ಹುಟ್ಟಬಹುದು. ರೂಪಾಂತರಗೊಳ್ಳಬಹುದು.

ಮಾಹಿತಿ ಸಂಗ್ರಹ
ಏನೇ ಬರೆಯಬೇಕಾದರೂ ಅದಕ್ಕೆ ಸಂಪೂರ್ಣ ಮಾಹಿತಿ ತಿಳಿದಿರಬೇಕು. ದಿನಪತ್ರಿಕೆಗಳು, ಗ್ರಂಥಾಲಯದ ಪುಸ್ತಕಗಳು, ಸುದ್ದಿ ಸಮಾಚಾರಗಳು, ಸಾಮಾಜಿಕ ಜಾಲತಾಣಗಳು ಮುಂತಾದವುಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಪೂರಕ ಮಾಹಿತಿ ಹುಡುಕುತ್ತ ಹೊರಟಂತೆಲ್ಲ ನಮ್ಮ ಪ್ರೌಢಿಮೆಯೂ ಬೆಳೆಯುತ್ತದೆ. ಬರಿ ಮಾಹಿತಿ ಮತ್ತು ಅಂಕಿ– ಅಂಶ ಇವೆ ಎಂದಾಕ್ಷಣ ಮುಗಿಯಲಿಲ್ಲ. ಅದನ್ನು ಶಬ್ದದಲ್ಲಿ ಹಿಡಿದಿಡುವ, ಅಭಿವ್ಯಕ್ತಗೊಳಿಸುವ ಕಲೆಗಾರಿಕೆ ಹೆಚ್ಚು ಪ್ರಮುಖವಾಗಿರುತ್ತದೆ. ನೀವು ವಿಮರ್ಶಾ ಪ್ರಬಂಧಗಳನ್ನು ಬರೆಯುತಿದ್ದೀರೋ ಅಥವಾ ಸಂಶೋಧನಾ ಪ್ರಬಂಧಗಳನ್ನು ಬರೆಯುತಿದ್ದೀರೋ ಎನ್ನುವುದರ ಮೇಲೆ ಅದರ ವಿಸ್ತಾರ, ವ್ಯಾಪ್ತಿ ಬೇರೆಯಾಗಿರುತ್ತದೆ. ಆ ಮಟ್ಟದಲ್ಲಿ ಅವುಗಳನ್ನು ಪ್ರತಿಪಾದಿಸಬೇಕಾಗುತ್ತದೆ.

ಒಟ್ಟಾರೆ ಬರವಣಿಗೆ ಕೌಶಲವು ಒಮ್ಮೆ ಬಂದರೆ ಅದು ಶಾಶ್ವತವಾಗಿ ಉಳಿದುಬಿಡುತ್ತದೆ. ಅದೊಮ್ಮೆ ನಮ್ಮನ್ನು ಅಪ್ಪಿಕೊಂಡರೆ ಆಯಿತು. ಮುಂದಿನ ಎಲ್ಲಾ ಹಂತಗಳಲ್ಲಿಯೂ ನೀವು ಸಾಫಲ್ಯವನ್ನು ಹೊಂದುತ್ತೀರಿ. ಯಾವುದೇ ರೀತಿಯ ಪ್ರಬಂಧ ಮಂಡನೆಯನ್ನು ಲೀಲಾಜಾಲವಾಗಿ ಮುಗಿಸಬಹುದು. ಇದು ನಮ್ಮನ್ನು ಹೆಚ್ಚು ಪ್ರೌಢತೆಗೆ ಒಯ್ಯಬಲ್ಲದು. ಎಲ್ಲರಿಗೂ ತಿಳಿಯುವ ಹಾಗೆ ಸ್ಪಷ್ಟತೆಯನ್ನು ಒದಗಿಸುತ್ತದೆ.

(ಲೇಖಕರು ಉಪನ್ಯಾಸಕರು, ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ, ಮಂಡಲಗಿರಿ)

**
ಹೆಚ್ಚು ಓದಿ
ಒಳ್ಳೆಯ ಬರವಣಿಗೆ ಶೈಲಿ ಎನ್ನುವುದು ಹೆಚ್ಚಾಗಿ ಓದುವುದರಿಂದ ಬರುತ್ತದೆ. ಜೊತೆಗೆ ಓದಿದ್ದನ್ನು ಅರ್ಥ ಮಾಡಿಕೊಳ್ಳಬೇಕು, ವಿಶ್ಲೇಷಿಸಬೇಕು, ಚಿಂತಿಸಬೇಕು. ಆಗ ಮಾತ್ರ ನೀವು ಹೆಚ್ಚು ಹೆಚ್ಚು ಬರೆಯಬಹುದು. ಇದು ಒಬ್ಬರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಮಾತ್ರವಲ್ಲ, ಸೃಜನಶೀಲತೆ ಹೆಚ್ಚಿಸುತ್ತದೆ; ಒತ್ತಡ ಕಮ್ಮಿ ಮಾಡುತ್ತದೆ; ಸಂವಹನ ಕೌಶಲವನ್ನು ಹೆಚ್ಚಿಸುತ್ತದೆ; ಚಿಂತನೆಗಳನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಮಾರ್ಗ.
ಬರವಣಿಗೆ ಕೌಶಲ
ಚೆನ್ನಾಗಿ ಓದುವುದನ್ನು ರೂಢಿಸಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಯಾವ ರೀತಿಯ ಸಾಹಿತ್ಯದಲ್ಲಿ, ಓದಿನಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ. ಕವನ, ಕಥೆ, ಜನರಲ್‌ ಅಥವಾ ವೈಜ್ಞಾನಿಕ ಕಥೆ.. ಹೀಗೆ ಅವರ ಆಸಕ್ತಿ ತಿಳಿದುಕೊಂಡು ಪ್ರೋತ್ಸಾಹಿಸಿ. ಒಳ್ಳೆಯ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ. ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಡಿ.

ಹೆಚ್ಚು ಶಬ್ದಗಳನ್ನು ಪರಿಚಯಿಸಿ. ಅದರ ಅರ್ಥ ವಿವರಿಸಿ. ಶಬ್ದಕೋಶ ಓದಲು ಹೇಳಿ. ಇದರಿಂದ ಮಕ್ಕಳ ಶಬ್ದಭಂಡಾರ ವಿಸ್ತಾರವಾಗುತ್ತದೆ.

ಬರವಣಿಗೆ ಕೌಶಲ ಕರಗತವಾಗಲು ಮತ್ತೆ ಮತ್ತೆ ಬರೆಯಲು ಹೇಳಿ. ಇದರಿಂದ ಶೈಲಿ ಸುಧಾರಿಸುತ್ತದೆ. ಡೈರಿಯನ್ನು ಇಟ್ಟುಕೊಂಡು ತಮ್ಮಲ್ಲಿ ಬರುವ ಆಲೋಚನೆಗಳನ್ನು ದಾಖಲಿಸಲಿ. ಇದರಿಂದ ಕ್ರಿಯಾಶೀಲತೆ ಹೆಚ್ಚಾಗುತ್ತದೆ.

ವ್ಯಾಕರಣ ಮತ್ತು ಶಬ್ದಗಳ ವರ್ಕ್‌ಶೀಟ್‌ ಅಭ್ಯಾಸ ಮಾಡಲಿ. ‘ಸ್ಟ್ಯಾಂಡರ್ಡ್‌ ಆಫ್ಟಿಟ್ಯೂಡ್‌ ಟೆಸ್ಟ್‌’ ಅಭ್ಯಾಸ ಮಾಡಬಹುದು. ಇದು ಮಗುವಿನ ಬರವಣಿಗೆ ಸಾಮರ್ಥ್ಯದ ಕುರಿತು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬರವಣಿಗೆ ಶೈಲಿಯನ್ನು ಹರಿತಗೊಳಿಸಲು ಸಹಾಯ ಮಾಡುತ್ತದೆ.

ಒಂದು ವಾಕ್ಯ ರಚಿಸಲು ಹಲವಾರು ವಿಧಾನಗಳಿವೆ. ಯಾವುದೂ ತಪ್ಪಲ್ಲ. ಆದರೆ ಅದನ್ನು ಹೆಚ್ಚು ಆಕರ್ಷಕವಾಗುವಂತೆ ಮಾಡುವ ಕಲೆ ಒಲಿಸಿಕೊಳ್ಳಬೇಕು. ಮಗು ಬರೆದಿರುವುದನ್ನು ಓದಿ. ಮೆಚ್ಚುಗೆಯ ಮಾತನಾಡಿ. ಯಾವ ವಿಷಯದ ಬಗ್ಗೆ ಬರೆದರೂ ಅದು ಯಾಕೆಂದು ಪ್ರಶ್ನಿಸಿ, ಮಗುವಿನ ಆಸಕ್ತಿ ಗುರುತಿಸಿ.

- ಎಸ್. ತುಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT