ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ‘ಗುರುಪ್ರೇರಣೆ’; ಶಾಲೆಗಳಲ್ಲಿ ತಾಯಂದಿರ ಸಭೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೊಸ ಯೋಜನೆಗಳು
Last Updated 15 ಮೇ 2019, 4:25 IST
ಅಕ್ಷರ ಗಾತ್ರ

‘ಶಿಕ್ಷಣವೆಂದರೆ ಸರ್ಕಾರದ ಜವಾಬ್ದಾರಿ, ಅದರಲ್ಲಿ ನಮ್ಮ ಪಾತ್ರವಿಲ್ಲ ಎಂಬ ಭಾವನೆ ಪಾಲಕರಲ್ಲಿ ಹೆಚ್ಚಿರುವುದರಿಂದಲೇ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಈ ವರ್ಷದಿಂದ ಶಿಕ್ಷಕರಿಗಾಗಿ ‘ಗುರುಪ್ರೇರಣೆ’, ಶಾಲೆಗಳಲ್ಲಿ ಮಕ್ಕಳೊಂದಿಗೆ ‘ತಾಯಂದಿರ ಸಭೆ’ ಹಾಗೂ ‘ಮೊಮ್ಮಕ್ಕಳಿಗೆ ಅಜ್ಜಿಯರ ಪಾಠ’ ಎಂಬ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಸಹಭಾಗಿತ್ವಕ್ಕೆ ಉತ್ತೇಜನ ನೀಡುತ್ತಿದ್ದೇವೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ.

ಹುಬ್ಬಳ್ಳಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌– ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿವಿಧ ಜಿಲ್ಲೆಗಳಿಂದ ಕರೆ ಮಾಡಿದ್ದ ಸಾರ್ವಜನಿಕರ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದರು.

‘ಶಿಕ್ಷಣವೆಂದರೆ ಕೇವಲ ರ‍್ಯಾಂಕ್‌ ತೆಗೆದುಕೊಳ್ಳುವುದಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಎಲ್ಲಕ್ಕಿಂತ ಪವಿತ್ರವಾದ ಈ ಕ್ಷೇತ್ರದಲ್ಲಿ ಶಾಲೆಗಳಿಗೆ ಶಿಕ್ಷಕರೊಂದಿಗೆ ಪೋಷಕರ ಸಹಭಾಗಿತ್ವ ಕೂಡ ಅಷ್ಟೇ ಮಹತ್ವದ್ದು. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಪಾಲಕರ ಸಹಭಾಗಿತ್ವ ಹೆಚ್ಚಿರುವ ‘ಶಿರಸಿ ಶೈಕ್ಷಣಿಕ’ ಜಿಲ್ಲೆಯನ್ನು ಮಾದರಿಯಾಗಿಟ್ಟುಕೊಂಡು ಬಯಲು ಸೀಮೆಯ ಇತರ ಜಿಲ್ಲೆಗಳಲ್ಲಿ ಸಹ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.

ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದಲ್ಲಿ 66 ಸಾವಿರ ಶಿಕ್ಷಕರಿದ್ದು, ಅವರಲ್ಲಿ 30 ಸಾವಿರ ಶಿಕ್ಷಕರಿಗೆ ‘ಗುರು ಪ್ರೇರಣೆ’ ಯೋಜನೆಯಡಿ ಎಲ್ಲ ತಾಲ್ಲೂಕುಗಳಲ್ಲಿ ಜೂನ್‌ನಲ್ಲಿ ಶಾಲೆ ಪ್ರಾರಂಭವಾದ ಮರುದಿನವೇ ಒಂದು ವಾರದ ತರಬೇತಿ ನೀಡಲಾಗುತ್ತಿದೆ. ಒಂದು ಡಯಟ್‌ ವ್ಯಾಪ್ತಿಯಲ್ಲಿ 8 ರಿಂದ 9 ಸಾವಿರ ಶಿಕ್ಷಕರು ಇರುತ್ತಾರೆ. ಅವರಲ್ಲಿ 1,500 ಶಿಕ್ಷಕರಿಗೆ ಮಾತ್ರ ತರಬೇತಿ ಸಿಗುತ್ತಿತ್ತು. ಮರಳಿ ಅವರು ತರಬೇತಿಗೆ ಬರಲು 10 ವರ್ಷ ಕಾಯಬೇಕಿತ್ತು. ಇದನ್ನು ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ಪೂರಕವಾಗಲಿದೆ’ ಎಂದು ಅವರು ವಿವರಿಸಿದರು.

ಈ ವರ್ಷದಿಂದ ಪ್ರತಿ ಜಿಲ್ಲೆಯ ಸುಮಾರು 30 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಹೊಸದಾಗಿ ಕಲಿಸಲಾಗುತ್ತಿದೆ. ಇದಕ್ಕಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ಎಟಿಐ)ಯಿಂದ ತರಬೇತಿ ಪಡೆದುಬಂದಿರುವ ಪ್ರತಿ ಜಿಲ್ಲೆಯ ಇಬ್ಬರು ಮಾಸ್ಟರ್‌ ಟ್ರೈನರ್ಸ್‌ಗಳಿಂದ ಸಂಬಂಧಪಟ್ಟ ಶಾಲೆಗಳ ಆಂಗ್ಲ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುತ್ತದೆ. ಪ್ರತಿ ಶಾಲೆಗಳಲ್ಲಿಯೂ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಾಗಿ ಪ್ರತಿಭಾ ಕಾರಂಜಿ, ಕ್ರೀಡಾ ಚಟುವಟಿಕೆ, ಕಲಾ ಶಿಕ್ಷಣ, ಸಂಗೀತ ಶಿಕ್ಷಣ ಇದ್ದೇ ಇದೆ.

ಜತೆಗೆ, ಪ್ರತಿ ತಿಂಗಳಲ್ಲಿ 2 ದಿನ ‘ಬ್ಯಾಗ್‌ಲೆಸ್‌ ಡೇ’ ಜಾರಿಗೆ ತರುತ್ತಿದ್ದೇವೆ. ಆ ಎರಡು ದಿನ ಮಕ್ಕಳಿಗೆ ಹೊಸ ಹೊಸ ವಿಷಯಗಳನ್ನು ಕಲಿಸಿಕೊಟ್ಟು ಶಿಕ್ಷಕರಿಂದ ಅದನ್ನು ದಾಖಲೀಕರಣ ಮಾಡಿಸಲಿದ್ದೇವೆ ಎಂದು ತಮ್ಮೆಲ್ಲ ಯೋಜನೆಗಳನ್ನು ವಿವರಿಸಿದರು.

ದೇಶವನ್ನು ಕಾಡುತ್ತಿರುವ ಬಡತನ, ನಿರುದ್ಯೋಗ, ಜಾತಿ– ಧರ್ಮ ಇತ್ಯಾದಿ ಹತ್ತಾರು ಸಮಸ್ಯೆಗಳ ಮೂಲೋತ್ಪಾಟನೆಗೆ ಶಿಕ್ಷಣವೊಂದೇ ಪರಿಹಾರ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದು ಒಂದೆಡೆಯಾದರೆ, ಕೇವಲ ಫಲಿತಾಂಶಕ್ಕೋಸ್ಕರವೇ ಮಕ್ಕಳನ್ನು ತಯಾರು ಮಾಡುವುದನ್ನು ಬಿಟ್ಟು, ಅವರ ಸರ್ವತೋಮುಖ ಬೆಳವಣಿಗೆಯಾಗುವತ್ತ ಶೈಕ್ಷಣಿಕ ಪಠ್ಯಕ್ರಮ ರೂಪಿಸುವುದೇ ತಮ್ಮ ಇಲಾಖೆಯ ಉದ್ದೇಶವಾಗಿದೆ. ಅದಕ್ಕೆ ಪೂರಕವಾದ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ ಎನ್ನುವುದು ಅವರ ಒಟ್ಟಾರೆ ಮಾತುಗಳ ಆಶಯವಾಗಿತ್ತು. ಅವರೊಂದಿಗೆ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿವಿಧ ಜಿಲ್ಲೆಗಳಿಂದ ಓದುಗರು ಕೇಳಿದ ಪ್ರಶ್ನೆಗಳ ವಿವರ ಇಲ್ಲಿದೆ.

* ಕೆ.ರಾಜು, ಹುಬ್ಬಳ್ಳಿ: ನನ್ನ ಶಿಕ್ಷಕ ಸ್ನೇಹಿತರೊಬ್ಬರ ಕೆಲಸ ಇಲ್ಲಿನ ಬಿಇಒ ಕಚೇರಿಯಲ್ಲಿ ಆಗಬೇಕಿತ್ತು. ಆದರೆ ಒಂದು ವರ್ಷದಿಂದ ಫೈಲ್‌ ಮುಂದೆ ಹೋಗುತ್ತಲೇ ಇಲ್ಲ. ಇದಕ್ಕೆ ಏನು ಮಾಡಬೇಕು? ಕಚೇರಿಯೊಳಗಿನ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯವೆ?

ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ: ಶಿಕ್ಷಕರ ಸೇವಾ ಸೌಲಭ್ಯಕ್ಕೆ ಸಂಬಂಧಪಟ್ಟು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ. ಅಲ್ಲಿ ಆಗದಿದ್ದರೆ ಡಿಡಿಪಿಐ ಅವರನ್ನು ಭೇಟಿ ಮಾಡಿ. ಅಲ್ಲಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿಲ್ಲವೆಂದರೆ ನನ್ನನ್ನು ಸಂಪರ್ಕಿಸಿ.

* ವಿಶ್ವನಾಥ ಹುಬ್ಬಳ್ಳಿ (ಪಾಲಕ):ಇಲ್ಲಿನ ಎನ್‌.ಕೆ.ಠಕ್ಕರ್‌ ಸ್ಕೂಲಿನಲ್ಲಿ 8ನೇ ತರಗತಿಗೆ ಐಐಟಿ ಕಡ್ಡಾಯ ಮಾಡಿದ್ದಾರೆ. ಅದಕ್ಕೆ ₹8ಸಾವಿರ ಶುಲ್ಕವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಐಐಟಿ ಕಡ್ಡಾಯ ಮಾಡುವುದರಿಂದ ವಿದ್ಯಾರ್ಥಿಗಳ ಓದಿನ ಮೇಲೆ ಒತ್ತಡ ಬೀಳುವ ಆತಂಕ ನಮ್ಮದು. ಇದಕ್ಕೆ ಹೆಚ್ಚಿನ ಪಾಲಕರ ಆಕ್ಷೇಪವಿದೆ. ಈ ವಿಚಾರವಾಗಿ ಇಲಾಖೆ ಕ್ರಮ ಕೈಗೊಳ್ಳಬಹುದೇ?

ಖಂಡಿತ. ಈ ವಿಚಾರವಾಗಿ ಈ ಶಾಲೆಗೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲು ಹೇಳುವೆ. ಅವರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.

* ಮಾಲ್ತೇಶ ರಾಜಗುಳಿ, ಬೈಲಹೊಂಗಲ: ಬೈಲಹೊಂಗಲದ ಶತಮಾನ ಕಂಡ ಶಾಲೆ ನಂ.1ರಲ್ಲಿ 500 ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಕೆಲಸದ ಒತ್ತಡ ನಡುವೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಗಮನ ಕೊಡಲು ಆಗದೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವೆ? ಆರ್‌ಟಿಇ ಮೂಲಕ ಪ್ರವೇಶ ಪಡೆದ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಬಹುದೇ?

500 ವಿದ್ಯಾರ್ಥಿಗಳಿದ್ದರೆ ಅಲ್ಲಿ 18 ಶಿಕ್ಷಕರು ಇರುತ್ತಾರೆ. ಒಂದು ಗುಮಾಸ್ತ ಹುದ್ದೆಯನ್ನು ನೇಮಿಸಿ ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಶತಮಾನ ಕಂಡ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಸಮುದಾಯ ಸಹಭಾಗಿತ್ವದಡಿ ಭಾಗಿಯಾಗಿ ಪುನರುಜ್ಜೀವನಗೊಳಿಸಲು ಮುಂದಾಗಬೇಕು. ಆರ್‌ಟಿಇ ಮೂಲಕ ಪ್ರವೇಶ ಪಡೆದವರು ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಬೇಕೆ ಹೊರತು ಬೇರೆ ಶಾಲೆಗೆ ವರ್ಗಾವಣೆ ಪಡೆಯುವಂತಿಲ್ಲ.

* ಯಲ್ಲಪ್ಪ ಶಿವಳ್ಳಿ, ಬೆಟದೂರ ಕುಂದಗೋಳ: ಇಲ್ಲಿನ ಸರ್ಕಾರಿ ಹೈಸ್ಕೂಲ್‌ನಲ್ಲಿ ಶಿಕ್ಷಕರು ಕಲಿಕಾ ಸಮಯದ ಅಭಾವ ಎದುರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಫಲಿತಾಂಶ ಕಡಿಮೆಯಾಗುತ್ತಲೇ ಸಾಗಿದೆ. ಫಲಿತಾಂಶ ಉತ್ತಮಪಡಿಸಲು ಏನಾದರೂ ಕ್ರಮ ಕೈಗೊಳ್ಳಬಹುದೆ?

ಒಂದೆರಡು ತಿಂಗಳಲ್ಲಿ ಶಾಲೆಗೆ ಕ್ಲರ್ಕ್‌ ಹುದ್ದೆಯನ್ನುಅನುಕಂಪದ ಆಧಾರದಡಿ ನೀಡುವ ಮೂಲಕ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ, ಕಲಿಕೆಯತ್ತ ಗಮನ ವಹಿಸುವಂತೆ ಮಾಡಲಾಗುವುದು.

* ನಾಗರಾಜ ಹುಡೇದ, ಯಲ್ಲಾಪುರ: ಯಲ್ಲಾಪುರ ತಾಲ್ಲೂಕಿನ ಬೈಲಂದೂರು ಗೌಳಿವಾಡದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ವರ್ಗಾವಣೆ ಯಾವಾಗ ಆಗಬಹುದು? ನಮಗೆ ವೇತನ ನಿಯಮಿತವಾಗಿ ಆಗುತ್ತಿಲ್ಲ.

15 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದೀರಿ ಅಂದರೆ ಖಂಡಿತ ಈ ಭಾರಿ ವರ್ಗಾವಣೆ ಭಾಗ್ಯ ಸಿಗಲಿದೆ. ಅರ್ಜಿ ಸಲ್ಲಿಸಿ.

* ಅರ್ಚನಾ ಕುಂಬಾರ ಚಿಕ್ಕೋಡಿ: 2007ರಲ್ಲಿ ಆರಂಭವಾಗಿರುವ ದೊನೆವಾಡಿ ಮರಾಠಿ ಹೈಸ್ಕೂಲ್‌ನಲ್ಲಿ ಇಂಗ್ಲಿಷ್‌ ಶಿಕ್ಷಕರ ಭರ್ತಿ ಯಾವಾಗ? ಇಲ್ಲಿಗೆ ಅತಿಥಿ ಶಿಕ್ಷಕರನ್ನೂ ಕೊಟ್ಟಿಲ್ಲ.

ಎಲ್ಲ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಭರ್ತಿಯಾಗಿದೆ. ನಿಮ್ಮ ಶಾಲೆಯಲ್ಲಿನ ಸಮಸ್ಯೆ ಕುರಿತು ನಿಮ್ಮ ಹೈಸ್ಕೂಲಿನ ಮುಖ್ಯ ಶಿಕ್ಷಕರು ಡಿಡಿಪಿಐ ಅವರನ್ನು ಭೇಟಿ ಮಾಡಿ ವಿಷಯ ಸಂಯೋಜನೆಯಲ್ಲಿರುವ ತಾಂತ್ರಿಕ ಸಮಸ್ಯೆ ಕುರಿತು ಸಮಾಲೋಚನೆ ನಡೆಸಲು ತಿಳಿಸಿ.

* ನಯನಾ ಬಾಂದೇಕರ್, ಯಲ್ಲಾಪುರ: 2007ರಲ್ಲಿ ಹಿಂದೆ ವಿಷಯದ ಶಿಕ್ಷಕಿಯಾಗಿ ನೇಮಕವಾಗಿದ್ದೇನೆ. ಆದರೆ ಹಿಂದಿ ಶಿಕ್ಷಕರಿಗೆ ವರ್ಗಾವಣೆ ಅವಕಾಶ ಇದೆಯೇ?

ಎಲ್ಲ ಭಾಷೆ, ವಿಷಯದ ಶಿಕ್ಷಕರಿಗೂ ವರ್ಗಾವಣೆ ಮಾನದಂಡ ಒಂದೇ ತೆರನಾಗಿದೆ. ನಿಮಗೆ ಬೇಕಾದ ಜಾಗದಲ್ಲಿ ವರ್ಗಾವಣೆ ಸಿಗದಿದ್ದರೂ ಹತ್ತಿರದಲ್ಲೆಲ್ಲಾದರೂ ಖಾಲಿ ಇದ್ದರೆ ಅಲ್ಲಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿ.

ಫೇಸ್‌ಬುಕ್‌ ಲೈವ್‌: ಸ್ಪಂದನೆ ಜೋರು
ಹುಬ್ಬಳ್ಳಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಜಾವಾಣಿ ‘ಫೋನ್‌–ಇನ್‌’ ಕಾರ್ಯಕ್ರಮವನ್ನು ಮೊದಲ ಬಾರಿಗೆ ‘ಫೇಸ್‌ಬುಕ್‌’ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಜನರ ಸ್ಪಂದನೆ ಬಹಳ ಉತ್ತಮವಾಗಿತ್ತು. ಬಹಳಷ್ಟು ವೀಕ್ಷಕರು ಅಲ್ಲಿಯೇ ಪ್ರಶ್ನೆಗಳನ್ನು ಕೇಳಿದರು. ಅವುಗಳನ್ನು ಮೇಜರ್‌ ಸಿದ್ಧಲಿಂಗಯ್ಯ ಅವರ ಗಮನಕ್ಕೆ ತಂದು ತಕ್ಷಣವೇ ಉತ್ತರಗಳನ್ನು ಕೊಡಿಸಲಾಯಿತು.

ಎಸ್‌ಎಸ್‌ಎ ಶಿಕ್ಷಕರ ವೇತನ ಇನ್ನು ನಿಯಮಿತ
ಸರ್ವಶಿಕ್ಷಣ ಅಭಿಯಾನದಡಿ ನೇಮಕವಾದ ಶಿಕ್ಷಕರಿಗೆ ಇನ್ನು ಮುಂದೆ ನಿಯಮಿತವಾಗಿ ವೇತನ ಸಿಗಲಿದೆ. ಇಷ್ಟು ವರ್ಷ ಕೇಂದ್ರದ ಅನುದಾನದೊಂದಿಗೆ ವೇತನ ಲಿಂಕ್‌ ಹೊಂದಿದ್ದರಿಂದ ತೊಂದರೆಯಾಗುತ್ತಿತ್ತು. ಈಗ ಕೇಂದ್ರದಿಂದ ಪ್ರತ್ಯೇಕಗೊಳಿಸಲಾಗಿದೆ. ಇನ್ನು ಮುಂದೆ ಈ ಸಮಸ್ಯೆ ಇರದು ಎಂದು ಸಿದ್ಧಲಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT