ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಳಸಂಗಿಯ ಕನ್ನಡ ಸ.ಕಿ.ಪ್ರಾ. ಪಾಠ ಶಾಲೆ: ಹಸಿರ ಸಿರಿಯ ಮಡಿಲಲ್ಲಿ ದಶಕದ ಸಂಭ್ರಮ..!

Last Updated 21 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ನಿಡಗುಂದಿ:ಹನ್ನೆರೆಡು ವರ್ಷಗಳಿಂದ ಹಲವು ಕೊರತೆಗಳ ಮಧ್ಯೆಯೂ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ, ನಿಸರ್ಗಮಯವಾಗಿ ಕಂಗೊಳಿಸುತ್ತಿದೆ ತಾಲ್ಲೂಕಿನ ಗೊಳಸಂಗಿ ಗ್ರಾಮದ ಮಾದರಿ ಬಡಾವಣೆಯ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ.

1ರಿಂದ 5ನೇ ತರಗತಿ ಹೊಂದಿದ ಈ ಶಾಲೆಯಲ್ಲಿ 32 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇಬ್ಬರು ಶಿಕ್ಷಕರಿದ್ದಾರೆ. 1ರಿಂದ 3ನೇ ತರಗತಿ ಮಕ್ಕಳಿಗೆ ನಲಿ-ಕಲಿ ಶಿಕ್ಷಣ, ಮಕ್ಕಳ ಮನ ಮುಟ್ಟುವಂತೆ ಮಾಡುವಲ್ಲಿ ಜಿ.ಎಸ್.ಕಾಳಗಿ, 4 ಮತ್ತು 5ನೇ ವರ್ಗ ಓದುತ್ತಿರುವ ಮಕ್ಕಳಿಗೆ ಪಠ್ಯದ ಜತೆಗೆ ಶಾರೀರಿಕ ಶಿಕ್ಷಕರಾಗಿಯೂ, ನವೋದಯ, ಮೊರಾರ್ಜಿ ದೇಸಾಯಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೂ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕ ಶ್ರೀನಿವಾಸ ಕತ್ನಳ್ಳಿಯವರ ಸೇವೆ ಶ್ಲಾಘನೀಯವಾಗಿದೆ.

ಗೊಳಸಂಗಿ ಕ್ಲಸ್ಟರ್ ವ್ಯಾಪ್ತಿಯ 21 ಶಾಲೆಗಳ ಪೈಕಿ ಈ ಶಾಲೆ ನಲಿ–ಕಲಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಶಿಕ್ಷಕರ ದಿನಾಚರಣೆಯಂದು ಈ ಶಾಲೆ ‘ಬಸವನ ಬಾಗೇವಾಡಿ ತಾಲ್ಲೂಕಿನ ಅತ್ಯುತ್ತಮ ಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರ ಜತೆಗೆ ಶಾಲಾ ಮಕ್ಕಳಿಗೆ ಕುಡಿಯಲು ಪರಿಶುದ್ಧ ನೀರು, ಶೌಚಗೃಹದ ಶುಚಿತ್ವ, ರುಚಿ ಮತ್ತು ಶುಚಿಕರವಾದ ಬಿಸಿಯೂಟ ನೀಡುತ್ತಿರುವುದು ಸಹ ಈ ಶಾಲೆಯ ವೈಶಿಷ್ಟ್ಯ ಎನ್ನಲೇಬೇಕು.

ನಿಸರ್ಗಮಯ ಶಾಲೆ

ಶಾಲೆಯ ಸುತ್ತಲಿನ ಆವರಣ ಸಂಪೂರ್ಣ ನಿಸರ್ಗಮಯ. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಕಾಳಜಿ ಅಪಾರ. ಇದೀಗ ಇತರ ಶಾಲೆಗಳಿಗೆ ಮಾದರಿಯಾಗಿ ಕಂಗೊಳಿಸುವಂತಿದೆ ಇಲ್ಲಿನ ನಿಸರ್ಗ.

ಮಕ್ಕಳ ಪಾಲಕರಿಂದಲೂ ಒಂದೊಂದರಂತೆ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ದಾನವಾಗಿ ಪಡೆದು, ಶಾಲಾ ಆವರಣದಲ್ಲಿ ನೆಟ್ಟಿರುವುದು ವಿಶೇಷ. ಇವುಗಳಲ್ಲಿ ಕೆಲವೊಂದು ಗಿಡಗಳು ಫಲ ಕೊಡುತ್ತಿವೆ. ಶಾಲೆಗೆ ಯಾರಾದರೂ ವಿಶೇಷ ಅತಿಥಿಗಳು ಭೇಟಿ ನೀಡಿದಾಗ, ಶಾಲಾ ಆವರಣದಲ್ಲಿಯೇ ಬೆಳೆದಂತ ತೆಂಗಿನಕಾಯಿಯನ್ನು ನೀಡಿ ಅವರನ್ನು ಗೌರವಿಸುವುದು ಶಾಲಾ ಸಂಪ್ರದಾಯದಲ್ಲೊಂದು.

ಇದರ ಜತೆಗೆ ಅಶೋಕ ವೃಕ್ಷ, ಸೀತಾಫಲ, ಪಪ್ಪಾಯಿ, ಬದಾಮಿ, ಪೇರಲ ಮತ್ತಿತರ ಹಣ್ಣಿನ ಮರಗಳನ್ನು ಶಿಕ್ಷಕರು ಶಾಲಾ ಆವರಣದಲ್ಲಿ ನೆಟ್ಟು ಮಲೆನಾಡ ಸಿರಿಯ ಪ್ರತಿರೂಪವನ್ನಾಗಿ ರೂಪಿಸಲಾಗಿದೆ. ಶಾಲಾ ಕೈ ತೋಟದಲ್ಲಿ ನಿತ್ಯ ಬಿಸಿಯೂಟಕ್ಕೆ ಅಗತ್ಯವಿರುವ ಕರಿ ಬೇವು, ನುಗ್ಗೆ, ಹಾಗಲಕಾಯಿ ಹೀಗೆ... ಹಲವು ಬಗೆಯ ತರಕಾರಿಗಳನ್ನು ಸಹ ಇಲ್ಲಿ ಬೆಳೆಯಲಾಗುತ್ತಿದೆ. ಒಟ್ಟಾರೆ ಈ ಶಾಲೆ ನಂದನವನವಾಗಿ ಗೋಚರಿಸಿ, ಸರ್ಕಾರಿ ಶಾಲೆ ಬಗ್ಗೆ ಇರುವ ಅಸಡ್ಡೆಯ ಮನೋಭಾವವನ್ನು ಹೋಗಲಾಡಿಸಿದೆ.

ನಿರಂತರ ಪ್ರತಿಭಾ ಪುರಸ್ಕಾರ

ಸರ್ಕಾರಿ ಶಾಲೆಗಳಲ್ಲಿ ನಿರಂತರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ತೀರಾ ಅಪರೂಪ. ಆದರೆ ಗೊಳಸಂಗಿ ಮಾದರಿ ಬಡಾವಣೆಯ ಈ ಶಾಲೆಯಿಂದ ಕಲಿತು ಮುಂದೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಆಗಸ್ಟ್ 15 ರಂದು ಪುರಸ್ಕರಿಸಿ ಪ್ರೋತ್ಸಾಹಿಸಲಾಗುತ್ತಿದೆ.

ಈ ಯೋಜನೆಯಡಿ ಅದೆಷ್ಟೋ ಜನ ಶಿಕ್ಷಣ ಪ್ರೇಮಿಗಳು ದತ್ತಿನಿಧಿಯನ್ನು ನೀಡಿ ಕೈ ಜೋಡಿಸಿದ್ದಾರೆ. ಆ ದಾನಿಗಳು ನೀಡಿದ ದತ್ತಿನಿಧಿ ಹಣವನ್ನು ಬ್ಯಾಂಕ್‌ನಲ್ಲಿ ಡಿಪಾಜಿಟ್ ಮಾಡಿ ಬಂದಂಥ, ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT