ಮಕ್ಕಳ ಸ್ಕಾಲರ್‌ಶಿಪ್‌ಗೆ ಆನ್‌ಲೈನ್‌ ಅಪ್‌ಲೋಡ್,ಸರ್ವರ್ ಬ್ಯುಸಿ,ಶಿಕ್ಷಕರು ಹೈರಾಣ!

7
ಹೆಚ್ಚುತ್ತಿರುವ ಶಿಕ್ಷಕರ ಹೊಣೆಗಾರಿಕೆ; ಶೈಕ್ಷಣಿಕ ವಲಯದಲ್ಲಿ ಅಸಮಾಧಾನ

ಮಕ್ಕಳ ಸ್ಕಾಲರ್‌ಶಿಪ್‌ಗೆ ಆನ್‌ಲೈನ್‌ ಅಪ್‌ಲೋಡ್,ಸರ್ವರ್ ಬ್ಯುಸಿ,ಶಿಕ್ಷಕರು ಹೈರಾಣ!

Published:
Updated:

ವಿಜಯಪುರ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಹಾಗೂ ದಾಖಲೆಗಳನ್ನು ಇದೇ 30ರೊಳಗೆ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರನ್ನು ಹೈರಾಣಾಗಿಸಿದೆ.

ಒಂದರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ದೊರೆಯುವಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಆನ್‌ಲೈನ್‌ನಲ್ಲೇ ‘ಸ್ಟೇಟ್‌ ಸ್ಕಾಲರ್‌ಷಿಪ್‌ ಪೋರ್ಟಲ್‌’ಗೆ ಅಪ್‌ಲೋಡ್‌ ಮಾಡಬೇಕು. ಯಾರೊಬ್ಬರೂ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಆಯಾ ಜಿಲ್ಲೆಯ ಡಿಡಿಪಿಐ ನೀಡಿರುವ ಸೂಚನೆ ಪಾಲನೆಗಾಗಿ, ಶಿಕ್ಷಕ ಸಮೂಹ ಇದೀಗ ಹರಸಾಹಸ ನಡೆಸಿದೆ.

ಸೆ 1ರಿಂದ ಆರಂಭವಾಗಿರುವ ಹೊಸ ಹೊಣೆಗಾರಿಕೆ ನಿಭಾಯಿಸುವಲ್ಲಿ ಶಿಕ್ಷಕರು ತಲ್ಲೀನರಾಗಿದ್ದಾರೆ. ನಿತ್ಯವೂ ಲಕ್ಷ, ಲಕ್ಷ ಸಂಖ್ಯೆಯ ವಿದ್ಯಾರ್ಥಿಗಳ ಮಾಹಿತಿ ಪೋರ್ಟ್‌ಲ್‌ಗೆ ಅಪ್‌ಲೋಡ್‌ ಆಗುತ್ತಿದೆ. ಇದರಿಂದ ಸರ್ವರ್‌ ಪದೇ ಪದೇ ಬ್ಯುಸಿ ಎಂಬುದನ್ನು ಪ್ರದರ್ಶಿಸುತ್ತಿದೆ.

ಅನಿವಾರ್ಯವಾಗಿ ತಡರಾತ್ರಿಯಲ್ಲೂ ಶಿಕ್ಷಕರು ವಿದ್ಯಾರ್ಥಿ ಹಾಗೂ ಆತನ ತಂದೆ–ತಾಯಿಯ ಆಧಾರ್‌ ನಂಬರ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಪಾಸ್‌ಬುಕ್‌ನ ವಿವರಗಳನ್ನು ತಮ್ಮ ಲ್ಯಾಪ್‌ಟಾಪ್, ಆ್ಯಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಅಪ್‌ಲೋಡ್‌ ಮಾಡುವುದು ನಡೆದಿದೆ.

ದಿಕ್ಕು ತೋಚದ ಸ್ಥಿತಿ

‘ನಾವು ಈಗಾಗಲೇ ಪಾಠ ಬೋಧನೆ ಮರೆತು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದೇವೆ. ಇದೀಗ ಹೊಸ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಅ.4ರಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭಗೊಳ್ಳಲಿವೆ. ವೇಳಾಪಟ್ಟಿಯಂತೆ ಪಠ್ಯಕ್ರಮದ ಬೋಧನೆ ನಡೆದಿಲ್ಲ. ಒಂದೆಡೆ ಅನಿವಾರ್ಯದ ಒತ್ತಡ. ಇನ್ನೊಂದೆಡೆ ಇಲಾಖೆಯ ಮೇಲಧಿಕಾರಿಗಳ ಕಟ್ಟಪ್ಪಣೆ.

ಇದರ ನಡುವೆ ಸಕಾಲಕ್ಕೆ ಆನ್‌ಲೈನ್‌ ನೆಟ್‌ವರ್ಕ್‌ ಸಿಗ್ತಿಲ್ಲ. ಸಿಕ್ಕರೂ ಸರ್ವರ್‌ ಬ್ಯುಸಿ. ತಡರಾತ್ರಿಯವರೆಗೂ ಅಪ್‌ಡೇಟ್‌ ಮಾಡುತ್ತೇವೆ. ಮತ್ತೆ ನಸುಕಿನಲ್ಲೇ ಮನೆಯಲ್ಲಿ ಮೊಬೈಲ್‌ ಹಿಡಿದು ಕೂರುವ ಸ್ಥಿತಿ ಬಂದಿದೆ. ಕೆಲ ಪಾಲಕರು ಸೂಕ್ತ ಸಹಕಾರ ನೀಡ್ತಿಲ್ಲ. ಮಾಹಿತಿ ಸರಿಯಿಲ್ಲದಿದ್ದರೇ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗಲ್ಲ. ಗುರಿ ಸಾಧಿಸದಿದ್ದರೆ, ಬಿಇಒ ಕಚೇರಿಯಿಂದ ಕಾರಣ ಕೇಳಿ ನೋಟಿಸ್‌ ಬರುತ್ತೆ. ಏನ್‌ ಮಾಡ್ಬೇಕು ಎಂಬುದೇ ದಿಕ್ಕು ತೋಚದಂತಾಗಿದೆ’ ಎಂದು ಹೆಸರು ಬಹಿರಂಗಗೊಳಿಸದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಾವೆದುರಿಸುತ್ತಿರುವ ಅಸಹಾಯಕ ಸನ್ನಿವೇಶದ ಚಿತ್ರಣವನ್ನು ಬಿಚ್ಚಿಟ್ಟರು.

‘ವಿದ್ಯಾರ್ಥಿ ವೇತನ ಬಯಸುವ ಮಕ್ಕಳಿಂದ ಅಗತ್ಯ ದಾಖಲೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಿಂದಿನ ವರ್ಷದವರೆಗೂ ಸಲ್ಲಿಸುತ್ತಿದ್ದೆವು. ಆದರೆ ಈ ಬಾರಿ ‘ಸ್ಟೇಟ್‌ ಸ್ಕಾಲರ್‌ಷಿಪ್‌ ಪೋರ್ಟಲ್‌’ಗೆ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯಡಿ (SATS, Students achievement tracking system) ನಾವೇ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಬೇಕಿದೆ. ಅದರಲ್ಲೂ ಎಲ್ಲಾ ವಿದ್ಯಾರ್ಥಿಗಳ ದಾಖಲಾತಿ ಸಂಗ್ರಹಿಸಿ, ಶೇ 100ರ ಗುರಿ ಸಾಧಿಸಬೇಕು ಎಂಬ ಕಟ್ಟಪ್ಪಣೆಯಿದೆ.

ವಾಸ್ತವದ ಸಮಸ್ಯೆ ಬಗ್ಗೆ ಬಿಇಒ, ಡಿಡಿಪಿಐ ನಡೆಸುವ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಸ್ಪಂದನೆಯೇ ಸಿಗದಾಗಿದೆ. ವೆಬ್‌ ತಂತ್ರಜ್ಞಾನದ ಮಾಹಿತಿ ಇಲ್ಲದ ಶಿಕ್ಷಕರ ಪಾಡು ಹೇಳತೀರದು. ನಿತ್ಯವೂ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ ಎಲ್ಲಾ ಶಾಲೆಗಳ ಗುರಿ, ಸಾಧನೆಯನ್ನು ಪೋರ್ಟಲ್‌ನಲ್ಲಿ ವೀಕ್ಷಿಸಿ, ಕಳಪೆ ಸಾಧನೆಯಿದ್ದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಹೊರತು, ವ್ಯವಸ್ಥೆ ಸರಳೀಕರಣಗೊಳಿಸುವ ಯತ್ನ ನಡೆಸುತ್ತಿಲ್ಲ. ಈಗಾಗಲೇ ಕೆಲ ಶಿಕ್ಷಕರಿಗೆ ವಿಳಂಬಕ್ಕೆ ಕಾರಣ ಕೇಳಿ ನೋಟಿಸ್‌ ಸಹ ನೀಡಿದ್ದಾರೆ’ ಎಂದು ಮತ್ತೊಬ್ಬ ಶಿಕ್ಷಕರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !