ಜನಜೀವನ ಎಂದಿನಂತೆ: ಬಂದ್‌ ಹೆಸರಿನಲ್ಲಿ ಬಸ್‌ಗಳಿಗೆ ಕಲ್ಲು

7
* ತೆರೆದ ಶಾಲಾ–ಕಾಲೇಜುಗಳು * ಮಾರುಕಟ್ಟೆ ಸಹಜಸ್ಥಿತಿಗೆ

ಜನಜೀವನ ಎಂದಿನಂತೆ: ಬಂದ್‌ ಹೆಸರಿನಲ್ಲಿ ಬಸ್‌ಗಳಿಗೆ ಕಲ್ಲು

Published:
Updated:
Prajavani

ಬೆಂಗಳೂರು: ಕಾರ್ಮಿಕ ಸಂಘಟನೆಗಳು ನೀಡಿದ ಬಂದ್‌ ಕರೆಗೆ ಬುಧವಾರವೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಉಳಿದಂತೆ ಜನಜೀವನ ಎಂದಿನಂತೆ ಇತ್ತು.

ಕಲ್ಲು ತೂರಾಟದ ಕಾರಣದಿಂದ ನಗರದಲ್ಲಿ ಬಿಎಂಟಿಸಿ ಬಸ್‌ ಸಂಚಾರ ಮಧ್ಯಾಹ್ನದವರೆಗೆ ಇರಲಿಲ್ಲ. ಬಹುತೇಕ ಶಾಲಾ ಕಾಲೇಜುಗಳು ತೆರೆದಿದ್ದವು. ಕೆಲವೆಡೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಅಂಗಡಿ, ಹೋಟೆಲ್‌ ವಹಿವಾಟಿಗೆ ಧಕ್ಕೆ ಆಗಲಿಲ್ಲ. ಆಟೊರಿಕ್ಷಾ, ಟ್ಯಾಕ್ಸಿಗಳಿಗೆ ಬೇಡಿಕೆ ಇತ್ತು. ರಿಕ್ಷಾ, ಟ್ಯಾಕ್ಸಿ ಚಾಲಕರು ದುಪ್ಪಟ್ಟು ದರ ವಸೂಲು ಮಾಡುತ್ತಿದ್ದ ಪ್ರಸಂಗಗಳೂ ನಡೆದವು. ಮೆಟ್ರೊ ರೈಲುಗಳು ತುಂಬಿ ಸಂಚರಿಸಿದವು. ಮಾರುಕಟ್ಟೆ ವಹಿವಾಟು ಸಹಜಸ್ಥಿತಿಗೆ ಮರಳಿತ್ತು.

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಿದ್ದರು. 

26 ಬಿಎಂಟಿಸಿ ಬಸ್‌ಗಳಿಗೆ ಕಲ್ಲು 
ಕಸ್ತೂರಿನಗರದ ಬಳಿ 3, ಚಿಕ್ಕಜಾಲ ಬಳಿ 5, ಹೆಬ್ಬಾಳ ಎಸ್ಟೀಮ್‌ ಮಾಲ್‌ ಬಳಿ 1, ಸಾದೇನಹಳ್ಳಿ ಗೇಟ್‌ ಬಳಿ 1, ಬಾಪೂಜಿನಗರದ ಬಳಿ 1, ಕಮಾಂಡೊ ಆಸ್ಪತ್ರೆ ಬಳಿ 2, ಕೆಂಗೇರಿ ಪೊಲೀಸ್‌ ಠಾಣೆ ಬಳಿ 1, ಎಚ್‌ಎಎಲ್‌ ಹೆಲಿಕಾಪ್ಟರ್‌ ಸ್ಟಾಪ್ ಬಳಿ 2, ಮೂಡಲಪಾಳ್ಯ ಬಳಿ 3, ದೂಪನಹಳ್ಳಿಯಲ್ಲಿ 1, ಶಿರ್ಕೆ ಬಳಿ 1, ಮಲ್ಯ ಆಸ್ಪತ್ರೆ ಬಳಿ 1, ಕುಂಬಳಗೋಡು ಬಳಿ 3, ರಾಮೋಹಳ್ಳಿ ಬಳಿ 1 ಬಸ್‌ಗೆ ಕಲ್ಲು ತೂರಾಟ ನಡೆದಿದೆ. 

ಚಿಕ್ಕಜಾಲದ ಬಳಿ ನಡೆದ ಎರಡು ಘಟನೆಗಳಲ್ಲಿ ಅಜಿತ್‌, ಚಂದ್ರಶೇಖರ್‌ ಎಂಬ ಇಬ್ಬರು ಚಾಲಕರ ಕಣ್ಣಿಗೆ ಗಾಯಗಳಾಗಿವೆ. ಸಾದೇನಹಳ್ಳಿ ಬಳಿ ನಡೆದ ಘಟನೆಯಲ್ಲಿ ಚಾಲಕ ಪ್ರಕಾಶ್‌ ಅವರ ಕಣ್ಣಿಗೆ ಗಾಯವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳೂ ಹಂತಹಂತವಾಗಿ ಸಂಚಾರ ಆರಂಭಿಸಿದವು. ದೂರ ಪ್ರಯಾಣದ ಬಸ್‌ಗಳು ಎಂದಿನಂತೆ ಸಂಚರಿಸಿವೆ.

‘ಯಾರೂ ಬೆಂಬಲ ನೀಡದ ಬಂದ್‌ಗೆ ಅದರ ಹೆಸರಿನಲ್ಲಿ ಬಸ್‌ಗಳಿಗೆ ಹಾನಿ ಮಾಡಿರುವುದು ಸರಿಯಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಒಂದೆರಡು ಬಸ್‌ ಸಂಚಾರ ನಡೆಸಿದಾಗ ಕಲ್ಲು ತೂರಾಟ ನಡೆಸಿ ಬಸ್‌ಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಚಾಲಕರೂ ಕಾರ್ಮಿಕರೇ ಎಂಬುದನ್ನು ಈ ಕೃತ್ಯ ಎಸಗಿದ ಕಿಡಿಗೇಡಿಗಳು ಗಮನದಲ್ಲಿಡಬೇಕು’ ಎಂದು ಬಿಎಂಟಿಸಿ ಚಾಲಕ ಯೋಗೀಶ್‌ ಗೌಡ ಆಕ್ರೋಶ ವ್ಯಕ್ತಪಡಿಸಿದರು.  

ಕಾರ್ಮಿಕ ಸಂಘಟನೆಗಳ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಅದಕ್ಕೂ ಮುನ್ನ ಪುರಭವನದಿಂದ ಉದ್ಯಾನದವರೆಗೆ ಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !