ಮುಂಗಾರಿನ ಮೇಲೆ ಎಲ್–ನಿನೊ ಸವಾರಿ?

ಶುಕ್ರವಾರ, ಏಪ್ರಿಲ್ 19, 2019
27 °C
‘ಬಾಲ ಕ್ರಿಸ್ತ’ ಇಣುಕಿದರೂ ಸಾಕು, ಮಾನ್ಸೂನನ್ನೇ ಬದಲಾಯಿಸಬಲ್ಲ

ಮುಂಗಾರಿನ ಮೇಲೆ ಎಲ್–ನಿನೊ ಸವಾರಿ?

Published:
Updated:
Prajavani

ಪ್ರತಿವರ್ಷವೂ ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಮಳೆಯ ಚಿತ್ರಣ ಕೊಡುತ್ತದೆ. ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚೋ ಕಡಿಮೆಯೋ ಎಂಬ ಲೆಕ್ಕಾಚಾರ ಅದು. ಜೂನ್ ತಿಂಗಳಿನಿಂದ ಆಗಸ್ಟ್‌ವರೆಗೆ ಆಗುವ ಮುಂಗಾರು ಮಳೆ ಭಾರತದ ಕೃಷಿಯ ಭವಿಷ್ಯವನ್ನೇ ಬರೆಯುತ್ತದೆ. ಶೇಕಡ 80ರಷ್ಟು ಮಳೆ ಈ ಅವಧಿಯಲ್ಲಿ ಆಗಬೇಕು.

ಈ ಬಾರಿಯ ಬಿರುಬೇಸಿಗೆಯ ಹಿಂದಿರುವ ಕಾರಣಗಳನ್ನು ಭಾರತೀಯ ಹವಾಮಾನ ಇಲಾಖೆಯೇ ಅಲ್ಲ, ವಿಶ್ವಸಂಸ್ಥೆಯ ಹವಾಮಾನ ಇಲಾಖೆ, ಆಸ್ಟ್ರೇಲಿಯಾದ ಬ್ಯೂರೊ ಆಫ್ ಮಿಟೀಯರಾಲಜಿ, ಯುರೋಪಿನ ಮೀಡಿಯಂ ರೇಂಜ್ ವೆದರ್ ಫೋರ್‌ಕಾಸ್ಟ್ಎ ಲ್ಲವೂ ಗುರುತಿಸಿದ್ದವು.

ಮಾನ್ಸೂನಿನ ಮುನ್ಸೂಚನೆ ನೀಡುವುದಕ್ಕಿಂತ ಹೆಚ್ಚು ಪ್ರಾಶಸ್ತ್ಯ ‘ಈ ಬಾರಿ ಏಕೆ ಇಷ್ಟೊಂದು ಬಿಸಿಲಿನ ಝಳ’ ಎನ್ನುವ ಕಡೆಗೆ ಕೇಂದ್ರೀಕೃತವಾಗಿತ್ತು. ಈ ಎಲ್ಲ ಸಂಸ್ಥೆಗಳೂ ಮಾಡಿದ ಅಧ್ಯಯನಗಳೆಲ್ಲವೂ ಅದನ್ನೇ ಹೇಳುತ್ತಿವೆ. ಈ ಬಿರುಬಿಸಿಲಿಗೆ ಕಾರಣ ಎಲ್-ನಿನೊ ಎನ್ನುವ ವಿದ್ಯಮಾನ. ಈಗಾಗಲೇ ಅದು ತನ್ನ ಮೂತಿಯನ್ನು ಚಾಚಿದೆ.

ಇಡೀ ಮಾನ್ಸೂನನ್ನು ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದಿಡುತ್ತದೋ ಇಲ್ಲವೋ ಎನ್ನುವುದರ ಬಗ್ಗೆ ಈ ಯಾವ ಸಂಸ್ಥೆಯೂ ಕರಾರುವಾಕ್ಕಾಗಿ ಹೇಳುತ್ತಿಲ್ಲ. 2016ರಲ್ಲೇ 137 ವರ್ಷಗಳಲ್ಲಿ ಅತಿಹೆಚ್ಚು ಉಷ್ಣತೆಯನ್ನು ಭೂಮಿ, ಸಾಗರ ಇವೆರಡೂ ಅನುಭವಿಸಿದ್ದವು. 20ನೇ ಶತಮಾನದ ಸರಾಸರಿ ಉಷ್ಣತೆಗಿಂತ 1.10 ಡಿಗ್ರಿ ಸೆಲ್ಸಿಯಸ್‌ ಹೆಚ್ಚು. ಬರುವ ತಿಂಗಳುಗಳಲ್ಲಿ ಅದನ್ನೂ ಮೀರಿಸಬಹುದೇ ಎಂಬ ಅನುಮಾನವನ್ನೂ ಅಧ್ಯಯನಗಳು ಹುಟ್ಟಿಸಿವೆ.

ಏನಿದು ಎಲ್-ನಿನೊ? ಈ ಕುರಿತು ಜಗತ್ತು ಕಳೆದ 20 ವರ್ಷಗಳಿಂದಲೂ ಗಂಭೀರವಾಗಿ ಯೋಚಿಸುತ್ತಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ‘ಬಾಲ’ (ಬಾಲ ಕ್ರಿಸ್ತ) ಎನ್ನುವುದು ಇದರ ಅರ್ಥ.

ಕ್ರಿಸ್‍ಮಸ್ ಹಬ್ಬದ ಹಿಂದೂಮುಂದು ಪೆರುವಿನ ಭಾಗದ ಪೆಸಿಫಿಕ್ ಸಾಗರದಲ್ಲಿ ಉಷ್ಣತೆ ಏರಿ ಅದು ಮೀನಿನ ಉದ್ಯಮಕ್ಕೇ ಏಟು ಕೊಟ್ಟಿತ್ತು. ನೂರಾರು ವರ್ಷಗಳಿಂದ ಮೀನುಗಾರರು ಇದನ್ನು ಗಮನಿಸಿದ್ದರು. ಆದರೆ ಕಾರಣ ತಿಳಿದಿರಲಿಲ್ಲ. ಈಗ ಎಲ್-ನಿನೊ ಕುರಿತು ಎಲ್ಲ ದೇಶಗಳೂ ಗಲಿಬಿಲಿಗೊಂಡೇ ತೀವ್ರ ಅಧ್ಯಯನಕ್ಕೆ ತೊಡಗಿವೆ. ಎಲ್-ನಿನೊ ಹುಟ್ಟುವ ಸಂದರ್ಭದಲ್ಲಿ ಆಗುವ ಬದಲಾವಣೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತದೆ.

ಪೂರ್ವ ಪೆಸಿಫಿಕ್ ಸಾಗರದಲ್ಲಿ ಉಷ್ಣೋದಕ ಪ್ರವಾಹ ಹುಟ್ಟಿ ನೀರು ಉಬ್ಬುತ್ತದೆ. ಸಾಗರದ ಆ ಭಾಗ ತೊಟ್ಟಿಯಂತೆ ವರ್ತಿಸಿ ಒಂದು ಭಾಗವನ್ನು ಹಿಡಿದೆತ್ತಿದಂತೆ, ನೀರು ಇಂಡೊನೇಷ್ಯಾದ ಕಡೆಗೆ ನುಗ್ಗುತ್ತದೆ. ವಾಯುಗೋಳದಲ್ಲಿ ಭಾರಿ ಬದಲಾವಣೆ ಆಗಿ ವಾಯುಭಾರ ಹೆಚ್ಚುತ್ತದೆ. ಇಷ್ಟು ಸಾಕು, ವಾಣಿಜ್ಯ ಮಾರುತಗಳು ತಿರುಗುಮುರುಗಾಗುತ್ತವೆ. ಇದರ ಪ್ರಭಾವ ಹಿಂದೂ ಮಹಾಸಾಗರದ ಮೇಲೂ ಆಗುತ್ತದೆ. ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ, ಭಾರತ ಉಪಖಂಡದ ಭಾಗಗಳು ಇಂಥ ಸಂದರ್ಭಗಳಲ್ಲಿ ಶುಷ್ಕ ಹವೆ ಎದುರಿಸಬೇಕಾಗಿ ಬಂದು ಬರ ತಲೆದೋರುತ್ತದೆ. ಅತ್ತ ದಕ್ಷಿಣ ಅಮೆರಿಕ, ಸಂಯುಕ್ತ ಸಂಸ್ಥಾನ ಭಾಗಗಳಲ್ಲಿ ಹುಚ್ಚುಮಳೆ ಹೊಯ್ಯುತ್ತದೆ. ಪ್ರತಿ ಮೂರ್ನಾಲ್ಕು ವರ್ಷಗಳಲ್ಲಿ ಇದು ಘಟಿಸುತ್ತಲೇ ಇದೆ.

ಇತ್ತೀಚೆಗೆ ಹವಾಮಾನ ಮುನ್ಸೂಚನೆ ನೀಡುವಲ್ಲಿ ತಪ್ಪದೆ ಎಲ್-ನಿನೊ ಸಂಭವಿಸುವ ಬಗ್ಗೆಯೂ ಒಂದು ಕಣ್ಣು ಇಡಲಾಗುತ್ತದೆ. ಮೊದಲು ಪೂರ್ವ ಪೆಸಿಫಿಕ್ ಭಾಗದ ಸಾಗರದ ಸ್ಥಿತಿ ಹೇಗಿದೆ ಎಂಬುದಕ್ಕೆ ಹವಾಮಾನ ತಂತ್ರಜ್ಞರು ಆದ್ಯತೆ ಕೊಡುತ್ತಾರೆ. ಈ ಬಾರಿ ವಿಶ್ವಸಂಸ್ಥೆಯ ಹವಾಮಾನ ವಿಭಾಗವೇ ಹೇಳಿದೆ. ಪೆಸಿಫಿಕ್‍ನ ಪೂರ್ವ ಭಾಗದಲ್ಲಿ ಈಗಾಗಲೇ 0.9 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆ ಹೆಚ್ಚಿದೆ. ಅದರ ಪರಿಣಾಮ ವಾಯುಗೋಳದ ಮೇಲೂ ಬೀರಿ ಜಾಗತಿಕ ಮಟ್ಟದಲ್ಲಿ ಹಲವು ವ್ಯತ್ಯಾಸಗಳನ್ನು ತರುತ್ತಿದೆ. ದೊಡ್ಡ ಪ್ರಮಾಣದ ಎಲ್-ನಿನೊ ಉಂಟಾಗಲು ಸಾಗರದ ಸಾಮಾನ್ಯ ಉಷ್ಣತೆಗಿಂತ 1.5 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿದರೂ ಸಾಕು. ಆದರೆ ಪ್ರತಿಬಾರಿಯೂ ದೊಡ್ಡ ಪ್ರಮಾಣದ ಎಲ್-ನಿನೊ ಹುಟ್ಟಬೇಕಾಗಿಲ್ಲ. ಅದು ಇಣುಕಿದರೂ ಸಾಕು, ಮಾನ್ಸೂನನ್ನೇ ಬದಲಾಯಿಸಬಲ್ಲದು.

ಭಾರತೀಯ ಹವಾಮಾನ ಇಲಾಖೆ ಈ ಸಲದ ಮಳೆಯ ಸ್ಥಿತಿಗತಿ ಬಗ್ಗೆ ಎಲ್ಲ ಮಾಹಿತಿಯನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಚುನಾವಣೆಯ ನೀತಿಸಂಹಿತೆ ಇದಕ್ಕೆ ಅಡ್ಡಬರಬಹುದು. ಈ ಸಂಸ್ಥೆ ಒಂದೂವರೆ ಶತಮಾನದಿಂದ ಹವಾ ಮುನ್ಸೂಚನೆ ಕೊಡುತ್ತಾ ಬಂದಿದೆ. ಇದರ ಜೊತೆಗೆ ಭಾರತದ ಭೂಕಂಪನ ಕೇಂದ್ರಗಳ ಉಸ್ತುವಾರಿಯ ಹೊಣೆಯೂ ಇದರದೇ. ಉಪಗ್ರಹಗಳ ನೆರವಿನಿಂದ ಕ್ಷಣ ಕ್ಷಣದ ಉಷ್ಣತೆಯ ಮಾಹಿತಿಯನ್ನೂ ನೀಡುತ್ತಿದೆ. ರಾಡಾರ್ ಬಳಸಿ ಮೋಡಗಳ ಸ್ಥಿತಿಗತಿಯನ್ನೂ ವರದಿ ಮಾಡುತ್ತಿದೆ. ಈ ಬೇಸಿಗೆಯ ಶಾಖದ ಅಲೆಗಳ ಕುರಿತು ನಿತ್ಯ ಮಾಹಿತಿ ಕಳಿಸುತ್ತಿದೆ. ಇಡೀ ಬೇಸಿಗೆಯಲ್ಲಿ ಈ ಬಾರಿ ಬಹುತೇಕ ಎಲ್ಲ ಕಡೆಯೂ ಉಷ್ಣತೆ 0.5 ಡಿಗ್ರಿ ಸೆಲ್ಸಿಯಸ್‌ ಹೆಚ್ಚುವ ಸಾಧ್ಯತೆ ಬಗ್ಗೆ ಎಚ್ಚರಿಕೆ ಕೊಟ್ಟಿದೆ.

ಇದರ ಜೊತೆಗೆ ಈಗಾಗಲೇ ಪೆಸಿಫಿಕ್ ಸಮಭಾಜಕ ವೃತ್ತದಲ್ಲಿ ಎಲ್‍–ನಿನೊ ಹುಟ್ಟಿರುವುದನ್ನು ಖಚಿತಪಡಿಸಿದೆ. ಆದರೆ ಇದು ಮುಂಗಾರಿನ ಮೇಲೆ ಹೆಚ್ಚು ಪರಿಣಾಮ ಬೀರದು ಎಂದು ಭರವಸೆ ಕೊಟ್ಟಿದೆ. ಆದರೆ ಸ್ಕೈಮೆಟ್ ಎಂಬ, ದೇಶದ ಏಕೈಕ ಖಾಸಗಿ ಹವಾಮಾನ ಸಂಸ್ಥೆ ಕೆಲವು ದಿನಗಳ ಹಿಂದೆ ಗಾಬರಿ ಹುಟ್ಟಿಸುವ ಮುನ್ಸೂಚನೆಯನ್ನು ನೀಡಿದೆ. ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳಿಗಿಂತ ಇದು ನೀಡುವ ವರದಿ ಹೆಚ್ಚು ವಸ್ತುನಿಷ್ಠವಾದದ್ದು ಎಂದು ಭಾವಿಸಿದರೂ ಈ ಸಂಸ್ಥೆಯ ಉದ್ದೇಶದ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಏಕೆಂದರೆ ಮುನ್ಸೂಚನೆಯನ್ನು ಆಧರಿಸಿಯೇ ಬೆಳೆ ವಿಮೆಯನ್ನು ನಿರ್ಧರಿಸಬಹುದಲ್ಲ? ಆಹಾರ ಸಂಗ್ರಹ, ಆ ಮೂಲಕ ಬೆಲೆ ಹೆಚ್ಚಳ ದೊಡ್ಡ ಪರಿಣಾಮ ಬೀರಬಹುದು. ಈ ವರ್ಷದ ಮುಂಗಾರು ಎಲ್-ನಿನೊ ಹಿಡಿತಕ್ಕೆ ಸಿಕ್ಕಬಹುದು, ಆ ಕಾರಣದಿಂದಾಗಿ ಒಟ್ಟು ಮಳೆಯಲ್ಲಿ ಶೇ 7ರಷ್ಟು ಖೋತಾ ಆಗಬಹುದು ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ. ಆದರೆ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯನ್ನು ನಿರೀಕ್ಷಿಸಬಹುದು ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿದೆ.

ಭಾರತದ ಬರ ಪರಿಸ್ಥಿತಿಯ ಹಳೆಯ ಲೆಕ್ಕಗಳನ್ನು ಗಮನಿಸಿದರೆ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ. ಕಳೆದ 20 ಬರಗಾಲಗಳ ಪೈಕಿ 13 ಬರಗಾಲಗಳಿಗೆ ಎಲ್-ನಿನೊ ಕಾರಣವೆಂದು ಈಗಾಗಲೇ ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ವಾರ್ಷಿಕ 3,200 ಕೋಟಿ ಟನ್ ಕಾರ್ಬನ್ ಡೈ ಆಕ್ಸೈಡನ್ನು ವಾಯುಗೋಳಕ್ಕೆ ಬಿಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ವಿಶ್ವಸಂಸ್ಥೆ ಈಗಾಗಲೇ ಅನೇಕ ಶೃಂಗಸಭೆಗಳನ್ನು ಕರೆದು ಭೂಉಷ್ಣತೆಯನ್ನು ಕೈಗಾರಿಕಾ ಕ್ರಾಂತಿಗೆ ಮೊದಲು ಇದ್ದ ಮಟ್ಟಕ್ಕೆ ತರಲೇಬೇಕೆಂದು ಎಲ್ಲ ದೇಶಗಳನ್ನೂ ಒತ್ತಾಯಿಸಿದೆ.

ವಿಷಾದವೆಂದರೆ ಈಗಲೂ ಅಮೆರಿಕ, ಚೀನಾ, ಭಾರತ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯಲ್ಲಿ ಉಳಿದ ದೇಶಗಳಿಗಿಂತ ಮೇಲಿವೆ.

ಸದ್ಯದ ಸ್ಥಿತಿಯಲ್ಲಿ ದೊಡ್ಡ ಪ್ರಮಾಣದ ಒತ್ತಡಗಳೂ ಕೆಲಸ ಮಾಡುತ್ತಿಲ್ಲ. ಪ್ರಕೃತಿ ಯಾರ ನಿರ್ಣಯಕ್ಕೂ ಕಾಯುತ್ತಿಲ್ಲ, ತಿರುಗಿಬಿದ್ದಿದೆ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !