ಬಿಸಿಲಿನಲ್ಲಿ ಬಿರುಸುಗೊಂಡ ಪ‍್ರಚಾರ ಭರಾಟೆ

ಶನಿವಾರ, ಏಪ್ರಿಲ್ 20, 2019
31 °C
ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಪಕ್ಷಗಳ ಮತಯಾಚನೆ

ಬಿಸಿಲಿನಲ್ಲಿ ಬಿರುಸುಗೊಂಡ ಪ‍್ರಚಾರ ಭರಾಟೆ

Published:
Updated:
Prajavani

ಚಾಮರಾಜನಗರ: ಏಪ್ರಿಲ್‌ 18ರಂದು ನಡೆಯಲಿರುವ ಮತದಾನಕ್ಕೆ ದಿನಗಣನೆ ಅರಂಭವಾಗಿರುವುದರಿಂದ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಮತ್ತಷ್ಟು ಚುರುಕುಗೊಂಡಿದ್ದು, ಅಭ್ಯರ್ಥಿಗಳು ಹಾಗೂ ಮುಖಂಡರು ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಕ್ಷೇತ್ರದಾದ್ಯಂತ ಸುತ್ತುತ್ತಾ ಮತ ಯಾಚನೆಯಲ್ಲಿ ನಿರತರಾಗಿದ್ದಾರೆ. 

ಕಾಂಗ್ರೆಸ್‌, ಬಿಜೆಪಿ ಮತ್ತು ಬಿಎಸ್‌ಪಿಗಳು ತಮ್ಮ ಅಭ್ಯರ್ಥಿ ಪರ ಪೈಪೋಟಿ ಮೇಲೆ ಪ್ರಚಾರ ನಡೆಸುತ್ತಿವೆ. ಚುನಾವಣೆಗಾಗಿ ಆರು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್‌ ಈಗ ಕ್ಷೇತ್ರದಾದ್ಯಂತ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತಿದೆ. ತಡವಾಗಿ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ ಕೂಡ ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರ ಸಭೆ ನಡೆಸಿ, ಈಗ ಹೋಬಳಿಮಟ್ಟದಲ್ಲಿ ಮತಯಾಚನೆ ಮಾಡುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬೇಕು ಎಂದು ಪಣತೊಟ್ಟಿರುವ ಬಹುಜನ ಸಮಾಜಪಕ್ಷ (ಬಿಎಸ್‌ಪಿ) ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಅದರ ಅಭ್ಯರ್ಥಿ ಹಾಗೂ ಮುಖಂಡರು ಕ್ಷೇತ್ರದಾದ್ಯಂತ ಸುತ್ತಾಡಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್‌: ಆರ್‌.ಧ್ರುವನಾರಾಯಣ ಅವರನ್ನು ಮೂರನೇ ಬಾರಿ ಸಂಸತ್ತಿಗೆ ಕಳುಹಿಸಲು ಪಣತೊಟ್ಟಿರುವ ಕಾಂಗ್ರೆಸ್‌, ಅದಕ್ಕಾಗಿ ಶತಃಪ್ರಯತ್ನ ಮಾಡುತ್ತಿದೆ. ಚುನಾವಣೆಗೆ ಮೂರು ತಿಂಗಳು ಇರುವಾಗಲೇ (ಫೆ.16) ಸಂಸದರ ಹತ್ತು ವರ್ಷಗಳ ಸಾಧನೆಯ ಕಿರುಹೊತ್ತಗೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್‌, ಮಾರ್ಚ್‌ 15ರಂದು ಬೃಹತ್‌ ಸಮಾವೇಶ ಮಾಡುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಇಳಿದಿತ್ತು. ಸಾಧನೆಯ ಕಿರುಹೊತ್ತಗೆಯ ಆರು ಲಕ್ಷ ಪ್ರತಿಗಳನ್ನು ಕ್ಷೇತ್ರದ ಪ್ರತಿ ಮನೆಗೂ ಹಂಚಿತ್ತು.

ನಂತರ ವಿಧಾನಸಭಾ ಕ್ಷೇತ್ರವಾರು ಪಕ್ಷದ ಮುಖಂಡರ, ಸಭೆ ನಡೆಸಿ ಬೆಂಬಲ ಕೋರಿತ್ತು. ಈಗ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಮತಯಾಚನೆ ಮಾಡುತ್ತಿದೆ.

14ರಂದು ರೋಡ್‌ ಶೋ: ಇದೇ 14ರಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರ ನಡೆಸಲು ಅದು ಸಿದ್ಧತೆ ನಡೆಸಿದೆ.

‘ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು 14ರಂದು ಕ್ಷೇತ್ರಕ್ಕೆ ಬಂದು ಧ್ರುವನಾರಾಯಣ ಅವರ ಪರ ಮತಯಾಚನೆ ನಡೆಸಲಿದ್ದಾರೆ. ಅಂದು ರೋಡ್‌ ಶೋ ನಡೆಯಲಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ: ಕಾಂಗ್ರೆಸ್‌ಗೆ ಹೋಲಿಸಿದರೆ ಪ್ರಚಾರದಲ್ಲಿ ಬಿಜೆಪಿ ಕೊಂಚ ಹಿಂದೆ ಇದ್ದಂತೆ ಕಂಡು ಬಂದರೂ, ಶ್ರೀನಿವಾಸ ಪ್ರಸಾದ್‌ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಮೇಲೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ವಿಧಾನಸಭಾ ಕ್ಷೇತ್ರವಾರು ಮಟ್ಟದಲ್ಲಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಎರಡು ಮೂರು ಸಭೆಗಳನ್ನು ಅದು ನಡೆಸಿದೆ. ನಾಮಪತ್ರ ಸಲ್ಲಿಕೆಯ ದಿನ (ಮಾರ್ಚ್‌ 26) ಚಾಮರಾಜನಗರದಲ್ಲಿ ಬಹಿರಂಗ ಸಮಾವೇಶವನ್ನೂ ನಡೆಸಿದೆ. ಸದ್ಯ ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್‌ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದು ಇನ್ನಷ್ಟೇ ಪ್ರಚಾರ ನಡೆಸಬೇಕಾಗಿದೆ. ಇದಕ್ಕೆ ಪ‍ಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರನ್ನೇ ಅದು ನಂಬಿದೆ.

ಮಹಾ ಸಂಪರ್ಕ ಅಭಿಯಾನ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷ ಬಹಿರಂಗ ‍ಪ್ರಚಾರ ನಡೆಸದಿದ್ದರೂ, ಚುನಾವಣೆ ಘೋಷಣೆಗೂ ಮುನ್ನವೇ ಆರ್‌ಎಸ್‌ಎಸ್‌ ಸ್ವಯಂ ಸೇವಕರು ಹಾಗೂ ಪಕ್ಷದ ಕಾರ್ಯಕರ್ತರು ಕ್ಷೇತ್ರದಾದ್ಯಂತ ಮನೆಮನೆಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

ಶುಕ್ರವಾರದಿಂದ ಅದು ಕ್ಷೇತ್ರದಾದ್ಯಂತ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ‍ಇದರ ಅಡಿಯಲ್ಲಿ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷರು, ಕಾರ್ಯಕರ್ತರು ಆಯಾ ಬೂತ್‌ಗಳ ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ಐದು ವರ್ಷಗಳ ಸಾಧನೆಯನ್ನು ವಿವರಿಸಿರುವ ಕರಪತ್ರಗಳನ್ನು ಹಂಚಲಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಲಿದ್ದಾರೆ. ಚುನಾವಣೆವರೆಗೂ ಈ ಅಭಿಯಾನ ಮುಂದುವರಿಯಲಿದೆ ಎಂದು ಬಿಜೆಪಿ ತಿಳಿಸಿದೆ.

ಬಿಎಸ್‌ಪಿ: ಬಹುಜನ ಸಮಾಜಪಕ್ಷದ (ಬಿಎಸ್‌ಪಿ) ಮುಖಂಡರು ಕೂಡ ತಮ್ಮ ಅಭ್ಯರ್ಥಿ ಡಾ. ಎಂ. ಶಿವಕುಮಾರ್‌ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ, ನಂತರ ಹೋಬಳಿ ಮಟ್ಟದಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ಎರಡು ಸುತ್ತಿನ ಪ್ರಚಾರ ಪೂರ್ಣಗೊಳಿಸಿರುವ ಬಿಎಸ್‌ಪಿ, ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಲಿದೆ.

‘ನಾವು ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ನಮ್ಮ ಅಭ್ಯರ್ಥಿ ಪರವಾಗಿ ಏಪ್ರಿಲ್‌ 10ರಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ. ಅವರಲ್ಲದೇ ಬಿಎಸ್‌ಪಿ ದಕ್ಷಿಣ ಭಾರತ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್‌, ರಾಜ್ಯ ಉಸ್ತುವಾರಿ ತೋಮರ್‌ ಅವರು ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಲಿದ್ದಾರೆಯೇ ಯೋಗಿ ಆದಿತ್ಯನಾಥ್‌?
ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಪರ ಪ್ರಚಾರಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಮುಖಂಡರು ಇದನ್ನು ಖಚಿತ ಪಡಿಸಿಲ್ಲ. 

‘ಯೋಗಿ ಆದಿತ್ಯನಾಥ್‌ ಅವರು ಪ್ರಚಾರಕ್ಕೆ ಬರುವುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಈಗಲೇ ಏನೂ ಹೇಳಲು ಆಗದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರು ಮುಂದಿನವಾರ ಜಿಲ್ಲೆಗೆ ಪ್ರಚಾರಕ್ಕೆ ಬರಲಿದ್ದಾರೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ’ ಎಂದು ಅವರು ಮಾಹಿತಿ ನೀಡಿದರು. 

ಆದಿತ್ಯನಾಥ್‌ ಅವರು ಕರ್ನಾಟಕಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಚಾಮರಾಜನಗರದಲ್ಲೂ ಸಮಾವೇಶ ನಡೆಸಲು ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕೇಂದ್ರ ಸಚಿವ ಸ್ಮೃತಿ ಇರಾನಿ ಅವರು ಎರಡು ದಿನಗಳ ಹಿಂದೆ ಮಡಿಕೇರಿಗೆ ಭೇಟಿ ನೀಡಿದ್ದಾಗ, ಚಾಮರಾಜನಗರದಲ್ಲೂ ಸಮಾವೇಶ ನಡೆಸಲು ಅವಕಾಶ ಇತ್ತು. ಅವರು ಸಮಯವನ್ನೂ ಕೊಟ್ಟಿದ್ದರು. ಆದರೆ, ರಾಷ್ಟ್ರೀಯ ನಾಯಕರು ಕ್ಷೇತ್ರದಲ್ಲಿ ಪ್ರಚಾರ ಮಾಡುವ ಅಗತ್ಯವಿಲ್ಲ ಎಂದು ಶ್ರೀನಿವಾಸ ಪ್ರಸಾದ್‌ ಹೇಳಿದ್ದರಿಂದ ಸ್ಮೃತಿ ಇರಾನಿ ಅವರು ಬರಲಿಲ್ಲ’ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !