ಸುಡು ಬಿಸಿಲಲ್ಲೂ ಬಹಿರಂಗ ಪ್ರಚಾರದ ಅಬ್ಬರ

ಬುಧವಾರ, ಜೂನ್ 26, 2019
25 °C
ರಂಗೇರಿದ ತಾಳಿಕೋಟೆ, ಇಂಡಿ, ಬಸವನಬಾಗೇವಾಡಿ ಪುರಸಭಾ ಅಖಾಡ

ಸುಡು ಬಿಸಿಲಲ್ಲೂ ಬಹಿರಂಗ ಪ್ರಚಾರದ ಅಬ್ಬರ

Published:
Updated:
Prajavani

ವಿಜಯಪುರ: ಪುರಸಭಾ ಚುನಾವಣೆಯ ಬಹಿರಂಗ ಪ್ರಚಾರ ಮೇ 21ರ ಮಂಗಳವಾರ ಅಧಿಕೃತವಾಗಿ ಆರಂಭಗೊಂಡಿತು. ಮುಂಜಾನೆಯಿಂದಲೇ ಇಂಡಿ, ತಾಳಿಕೋಟೆ, ಬಸವನಬಾಗೇವಾಡಿ ಪಟ್ಟಣಗಳಲ್ಲಿ ಸ್ಪರ್ಧಿಗಳು ಮತ ಯಾಚನೆಗೆ ಚಾಲನೆ ನೀಡಿದರು.

ತಮ್ಮ ಬೆಂಬಲಿಗರೊಂದಿಗೆ ಬೀದಿಗಿಳಿದ ಅಭ್ಯರ್ಥಿಗಳು ಮನೆ ಮನೆಗೂ ಎಡತಾಕಿ, ಮತದಾರರ ಮನವೊಲಿಕೆಗೆ ಮುಂದಾದರು. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ವಾರ್ಡ್‌ನಲ್ಲಿ ಸುತ್ತಾಡಿದರು. ಮುಸ್ಸಂಜೆ, ರಾತ್ರಿಯ ವೇಳೆ ಚಟುವಟಿಕೆ ಚುರುಕಿದ್ದವು.

ಮುಸ್ಸಂಜೆ ಮೋಡ ಕವಿದ ವಾತಾವರಣ ಸ್ಪರ್ಧಾಕಾಂಕ್ಷಿಗಳಿಗೆ ಪೂರಕವಾಗಿತ್ತು. ಬಿರುಗಾಳಿ–ಗುಡುಗು–ಮಿಂಚು–ಮಳೆಯ ಅಬ್ಬರದಲ್ಲೂ ಸ್ಪರ್ಧಿಗಳ ಉತ್ಸಾಹ ತಣಿಯಲಿಲ್ಲ. ಮನೆ ಮನೆ ಬಾಗಿಲಿಗೂ ತೆರಳಿ ತಮ್ಮ ಕರಪತ್ರ ಹಂಚುವ ಜತೆ, ಚಿಹ್ನೆ ಪರಿಚಯಿಸುವ ಕೆಲಸವನ್ನು ರಣೋತ್ಸಾಹದಿಂದಲೇ ಪ್ರಚಾರಕರು ನಡೆಸಿದ್ದು ರಾರಾಜಿಸಿತು.

ಅಭ್ಯರ್ಥಿಗಳಷ್ಟೇ ಅಲ್ಲದೇ, ಅವರ ಕುಟುಂಬ ವರ್ಗದವರು, ಸಂಬಂಧಿಕರು, ಆಪ್ತರು, ಒಡನಾಡಿಗಳು, ಬೆಂಬಲಿಗರು ಪುರಸಭೆಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದು, ಮೊದಲ ದಿನದಿಂದಲೇ ತಂತ್ರಗಾರಿಕೆಗೂ ಮುಂದಾಗಿದ್ದು ಎಲ್ಲೆಡೆ ಗೋಚರಿಸಿತು.

ತಮ್ಮ ತಮ್ಮ ವಾರ್ಡ್‌ನಲ್ಲಿನ ಮತದಾರರ ಪಟ್ಟಿ ಹಿಡಿದುಕೊಂಡು, ಯಾವ್ಯಾವ ಮನೆ, ಕುಟುಂಬದ ಮತಗಳು ತಮಗೆ ಖಚಿತ. ಅನುಮಾನಕ್ಕೆಡೆ ಮಾಡಿಕೊಡುವ ಮತಗಳನ್ನು ಯಾವ ರೀತಿ ತಮ್ಮ ಪರ ಸೆಳೆದುಕೊಳ್ಳಬೇಕು. ಉದ್ಯೋಗದ ನಿಮಿತ್ತ ಪರವೂರುಗಳಿಗೆ ತೆರಳಿರುವ ಮತದಾರರ ಸಂಖ್ಯೆ ಎಷ್ಟಿದೆ. ಅವರನ್ನು ಮತದಾನದ ದಿನ ಪಟ್ಟಣಕ್ಕೆ ಕರೆಸಿಕೊಳ್ಳಲು ಏನೇನು ಮಾಡಬೇಕು. ಯಾವ ಸೌಕರ್ಯ ಒದಗಿಸಬೇಕು ಎಂಬ ಲೆಕ್ಕಾಚಾರವೂ ಆರಂಭದ ದಿನವೇ ಬಿರುಸಿನಿಂದ ನಡೆದಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುವ ತಾಣವಾಗುತ್ತಿದೆ.

ಅಖಾಡಕ್ಕೆ ಬೀಗರು:

ತಾಳಿಕೋಟೆ ಪಟ್ಟಣದಲ್ಲಿ ಪಕ್ಷೇತರರೇ ಅಖಾಡದಲ್ಲಿ ಪ್ರಬಲ ಸ್ಪರ್ಧಿಗಳಿದ್ದು, ಜಾತಿ, ವಾರ್ಡ್‌, ಓಣಿ, ಸಂಬಂಧಿಕರು, ಬೀಗರು, ನೆಂಟರು ನೆಪದಲ್ಲಿ ಮತ ಯಾಚನೆ ಬಿರುಸುಗೊಂಡಿದೆ. ಕೆಲ ಅಭ್ಯರ್ಥಿಗಳಂತೂ ಅವ ನಮ್ಮ ಓಣಿಯವಲ್ಲ. ನಿಮ್ಮ ಜತೆ ಇರೋರು ನಾವು. ನಮನ್ನೇ ಬೆಂಬಲಿಸಿ. ನಮಗೆ ಮತ ಹಾಕಿ ಎಂದು ಆರಂಭದಲ್ಲೇ ಮತದಾರರ ಬಳಿ ಅಬ್ಬರಿಸಲಾರಂಭಿಸಿದ್ದಾರೆ.

ಕೆಲ ಪಕ್ಷೇತರ ಅಭ್ಯರ್ಥಿಗಳು ತಮ್ಮ ಚಿಹ್ನೆಯನ್ನು ಮತದಾರರಿಗೆ ಮನದಟ್ಟು ಮಾಡಿಸಿಕೊಡಲು ಕರಪತ್ರ ಮುದ್ರಿಸುವ ಜತೆ, ವಿಭಿನ್ನ ಯತ್ನದ ಮೂಲಕ ಮನಮುಟ್ಟುವ ತಂತ್ರಗಾರಿಕೆ ರೂಪಿಸಿದ್ದಾರೆ. ಇದರ ನಡುವೆಯೇ ಬಹಿರಂಗ ಪ್ರಚಾರ ಆರಂಭದ ಮೊದಲ ದಿನವೇ ಚುನಾವಣಾಧಿಕಾರಿ ನೀತಿ ಸಂಹಿತೆ ಪಾಲನೆ ಬಗ್ಗೆ, ಅಭ್ಯರ್ಥಿಗಳಿಗೆ ಸವಿವರವಾದ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.

ಮಿಂಚಿನಲ್ಲೂ ಪ್ರಚಾರದ ಮಿಂಚು:

ಬಸವನಬಾಗೇವಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ಮೊದಲ ದಿನವೇ ಅಬ್ಬರದಿಂದ ನಡೆಯಿತು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ, ತಮ್ಮ ತಮ್ಮ ಮನೆಗಳಿಗೆ ತೆರಳಿದ ಕಾರ್ಯಕರ್ತರು ಕೊಂಚ ವಿಶ್ರಾಂತಿ ಪಡೆದರು.

ಅಭ್ಯರ್ಥಿಗಳು ಬಿಸಿಲಿಗೆ ಜಗ್ಗದೆ ಸೆಡ್ಡು ಹೊಡೆದವರಂತೆ ಮತದಾರರ ಪಟ್ಟಿ ಮುಂದಿಟ್ಟುಕೊಂಡು, ಇಂದು ಎಷ್ಟು ಮನೆಗಳಿಗೆ ತೆರಳಿ ಮತ ಯಾಚನೆ ಮಾಡಬೇಕು ಎಂದು ಆಪ್ತರೊಟ್ಟಿಗೆ ಲೆಕ್ಕಾಚಾರದಲ್ಲಿ ನಿರತರಾಗಿದ್ದು ಗಮನ ಸೆಳೆಯಿತು.

ಸೂರ್ಯಾಸ್ತದ ಸಮಯವಾಗುತ್ತಿದ್ದಂತೆ, ಮತ್ತೆ ವಾರ್ಡ್‌ಗಳ ರಸ್ತೆಗೆ ಬಂದ ಬೆಂಬಲಿಗರು, ಅಭ್ಯರ್ಥಿಗಳೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಗಾಳಿ, ಗುಡುಗು, ಮಿಂಚಿನ ಅಬ್ಬರದ ನಡುವೆಯೂ ಮತ ಯಾಚನೆ ನಡೆದಿದ್ದು ಗೋಚರಿಸಿತು.

ಬಿಜೆಪಿ, ಜೆಡಿಎಸ್ ಮುಖಂಡರು ಬೀದಿಗಿಳಿಯಲು ಹಿಂಜರಿದರೆ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಓಣಿ ಓಣಿ ಸುತ್ತಿ, ಮತ ಯಾಚಿಸಿದರು.

ಕ್ಷೇತ್ರದಲ್ಲೇ ಠಿಕಾಣಿ:

ಇಂಡಿ ಪುರಸಭಾ ಚುನಾವಣೆ ಜಿದ್ದಾಜಿದ್ದಿಯ ಅಖಾಡವಾಗಿದೆ. ಬಿಜೆಪಿ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ. ತನ್ನ ‘ಕೈ’ ವಶದಲ್ಲೇ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳಲು ಶಾಸಕ ಯಶವಂತರಾಯಗೌಡ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಇಂಡಿಯಲ್ಲೇ ಠಿಕಾಣಿ ಹೂಡಿದ್ದು, ಚುನಾವಣೆಯನ್ನು ಪ್ರತಿಷ್ಠೆಯ ಪಣವನ್ನಾಗಿ ಸ್ವೀಕರಿಸಿದ್ದಾರೆ. ಬೆಂಬಲಿಗರು, ಆಪ್ತರ ಜತೆ ಸಮಾಲೋಚನೆ ನಡೆಸಿದ್ದು, ಗೆಲುವಿಗಾಗಿ ರಣ ತಂತ್ರದ ಮೊರೆ ಹೊಕ್ಕಿದ್ದಾರೆ. ಶಾಸಕರಿಗೆ ಸೆಡ್ಡು ಹೊಡೆಯಲು ಬಿಜೆಪಿ ಸಹ ಪ್ರತಿ ತಂತ್ರ ರೂಪಿಸಿದೆ.

15 ವಾರ್ಡ್‌ಗಳಿಂದ ಸ್ಪರ್ಧಿಸಿರುವ ಜೆಡಿಎಸ್, ಪಕ್ಷೇತರರು ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದು, ಗೆಲುವಿಗಾಗಿ ತಮ್ಮದೇ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಮನೆ ಮನೆಗೆ ಎಡ ತಾಕುವುದು ನಿರಂತರವಾಗಿ ನಡೆದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !