ಚಾಮರಾಜನಗರ: ಯಾರೆಡೆಗೆ ಕ್ಷೇತ್ರದ ಜನರ ಒಲವು? ಗುಟ್ಟು ಬಿಡದ ಮತದಾರ ಪ್ರಭು

ಭಾನುವಾರ, ಮೇ 26, 2019
32 °C
ರಾಜಕೀಯ ವಲಯದಲ್ಲಿ ಕುತೂಹಲ, ಪಕ್ಷಗಳಿಂದ ಕೊನೆಕ್ಷಣದ ಕಸರತ್ತು

ಚಾಮರಾಜನಗರ: ಯಾರೆಡೆಗೆ ಕ್ಷೇತ್ರದ ಜನರ ಒಲವು? ಗುಟ್ಟು ಬಿಡದ ಮತದಾರ ಪ್ರಭು

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ರಾಜಕೀಯ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮತದಾರ ಯಾರಿಗೆ ಒಲಿಯುತ್ತಾನೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ. 

10 ಅಭ್ಯರ್ಥಿಗಳು ಕಣದಲ್ಲಿರುವ ಈ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಅವರು ಪೈಪೋಟಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಮೇಲ್ನೋಟಕ್ಕೆ ಇಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ ಹಾಗೂ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ಅವರ ನಡುವೆಯೇ ಸ್ಪರ್ಧೆ ಇದೆ. 

ಹ್ಯಾಟ್ರಿಕ್‌ ಗೆಲುವಿನ ಕನಸಿನಲ್ಲಿರುವ ಆರ್‌.ಧ್ರುವನಾರಾಯಣ ಮತ್ತು ಕ್ಷೇತ್ರವನ್ನು ಐದು ಬಾರಿ ಸಂಸತ್ತಿನಲ್ಲಿ ಪ್ರತಿನಿಧಿಸಿದ್ದ ಅನುಭವಿ ರಾಜಕಾರಣಿ ವಿ.ಶ್ರೀನಿವಾಸ ಪ‍್ರಸಾದ್‌ ಇಬ್ಬರೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಿಎಸ್‌ಪಿಯ ಶಿವಕುಮಾರ್‌ ಕೂಡ ಇಬ್ಬರು ಪ್ರತಿಸ್ಪರ್ಧಿಗಳಿಗೆ ಬಲವಾದ ಏಟು ನೀಡುವ ವಿಶ್ವಾಸದಲ್ಲಿದ್ದಾರೆ. 

ಕೆಲವು ವಾರಗಳಿಂದ ಈಚೆಗೆ ಕ್ಷೇತ್ರದ ಮತದಾರರನ್ನು ಓಲೈಸಲು ಈ ಮೂರೂ ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರಾದರೂ ಮತದಾರ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ. 

ಪ್ರತಿ ವರ್ಷ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳು, ನಗರ ಹಾಗೂ ಪಟ್ಟಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಇವೆ. ಆದರೆ, ಇದ್ಯಾವುದೂ ಚುನಾವಣೆಯ ವಿಷಯವಾಗಿಲ್ಲ. ಅಭಿವೃದ್ಧಿ ವಿಚಾರ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಡುವಿನ ಆರೋಪ – ಪ್ರತ್ಯಾರೋಪಗಳೇ ಹೆಚ್ಚು ಸದ್ದು ಮಾಡಿವೆ. 

ಧ್ರುವನಾರಾಯಣ ಅವರು ತಮ್ಮ 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರು ತಮ್ಮ 42 ವರ್ಷಗಳ ರಾಜಕೀಯ ಅನುಭವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿದ್ದಾರೆ. ಈಗಾಗಲೇ ಸಂಸದರಾಗಿರುವ ಇಬ್ಬರಿಗೂ ವಯಸ್ಸಾಯಿತು, ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು ತಮಗೆ ಒಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಶಿವಕುಮಾರ್‌ ಮನವಿ ಮಾಡಿಕೊಂಡಿದ್ದಾರೆ. 

ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವುದಕ್ಕೂ ಮುನ್ನ ಕಾಂಗ್ರೆಸ್‌ಗೆ ಈ ಕ್ಷೇತ್ರ ಸುಲಭ ತುತ್ತಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಆದರೆ, ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್‌ ಕಣಕ್ಕಿಳಿಯುತ್ತಿದ್ದಂತೆಯೇ ಚಿತ್ರಣವೇ ಬದಲಾಗಿ ಹೋಯಿತು ಎಂದು ಹೇಳುತ್ತಾರೆ ಪಕ್ಷಗಳ ಮುಖಂಡರು.

ದಲಿತ ಮತ್ತು ಲಿಂಗಾಯತ ಸಮುದಾಯದ ಮತದಾರರು ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ನಾಯಕ, ಉಪ್ಪಾರ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತದಾರರನ್ನು ಪಕ್ಷಗಳು ನಿರ್ಲಕ್ಷಿಸುವಂತಿಲ್ಲ. ಕ್ಷೇತ್ರದಲ್ಲಿ ದಲಿತ ಸಮುದಾಯದವರು ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ‘ದಲಿತ ನಾಯಕ’ ಎಂದೇ ಗುರುತಿಸಿಕೊಂಡಿರುವ ಶ್ರೀನಿವಾಸ ಪ್ರಸಾದ್‌ ಅವರು ಅಖಾಡದಲ್ಲಿರುವುದರಿಂದ ಸಮುದಾಯದ ಮತಗಳನ್ನು ಅವರು ಸೆಳೆಯಬಹುದು ಎಂಬ ಆತಂಕ ಕಾಂಗ್ರೆಸ್‌ ಅನ್ನು ಕಾಡುತ್ತಿದೆ.

ಕೊಳ್ಳೇಗಾಲದಲ್ಲಿ ಶಾಸಕರನ್ನು ಹೊಂದಿರುವ ಬಿಎಸ್‌ಪಿ ಕೂಡ ದಲಿತ ಮತಗಳನ್ನು ಹೆಚ್ಚು ಸೆಳೆದರೆ ಅದರಿಂದ ಕಾಂಗ್ರೆಸ್‌ಗೇ ನಷ್ಟವಾಗಲಿದೆ ಎಂದು ಕ್ಷೇತ್ರದ ರಾಜಕೀಯ ಬಲ್ಲವರು ಹೇಳುತ್ತಾರೆ. ಜೆಡಿಎಸ್ ಬೆಂಬಲಿಸಿರುವುದರಿಂದ ಕಾಂಗ್ರೆಸ್‌ನ ಬಲ ಕೊಂಚ ಹೆಚ್ಚಿರುವುದೂ ಸುಳ್ಳಲ್ಲ. ಬಿಜೆಪಿಯ ಮತಬ್ಯಾಂಕ್‌ ಎಂದೇ ಬಣ್ಣಿಸಲಾಗುತ್ತಿರುವ ವೀರಶೈವ– ಲಿಂಗಾಯತ ಸಮುದಾಯಗಳ ಮತಗಳನ್ನು ಸೆಳೆಯಲೂ ಅದು ಈ ಬಾರಿ ಪ್ರಯತ್ನಿಸಿದೆ.

‘ಚಾಮರಾಜನಗರವು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಇನ್ನೂ ಕಳಚಿಕೊಂಡಿಲ್ಲ. ಜಿಲ್ಲೆ ಅಭಿವೃದ್ಧಿಯಾಗಬೇಕು. ಜಿಲ್ಲೆ/ಕ್ಷೇತ್ರದ ಪ್ರಗತಿಯ ದೂರದೃಷ್ಟಿಯುಳ್ಳಂತಹ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಬೇಕು’ ಎಂದು ಹೇಳುವ ಮತದಾರರು ಇಲ್ಲಿದ್ದಾರೆ. ‘ರಾಷ್ಟ್ರ ರಕ್ಷಣೆ, ಜನರ ಸುಭದ್ರತೆಗೆ ಒತ್ತು ನೀಡುವವರು ನಮ್ಮ ನಾಯಕರಾಗಿರಬೇಕು’ ಎಂದು ಹೇಳುವವರೂ ಇದ್ದಾರೆ. ಇವರ ಜೊತೆಗೆ ತಟಸ್ಥ ನಿಲುವು ಹೊಂದಿರುವವರೂ ಇದ್ದಾರೆ. 

ಮತ ಸೆಳೆಯಲು ಎಲ್ಲ ‘ಪ್ರಯತ್ನ’ಗಳನ್ನು ಮಾಡಿದ ನಂತರವೂ ಮತದಾರನ ಒಲವು ಯಾರ ಕಡೆಗೆ ಇದೆ ಎಂಬುದನ್ನು ನಿಖರವಾಗಿ ಅರಿಯಲು ಪಕ್ಷಗಳಿಗೆ ಸಾಧ್ಯವಾಗಿಲ್ಲ. ಗುರುವಾರ (ಏಪ್ರಿಲ್‌ 18) ಮತಯಂತ್ರದ ಎದುರು ನಿಂತುಕೊಂಡ ಸಂದರ್ಭದಲ್ಲಿ ಮತದಾರ ತೆಗೆದುಕೊಳ್ಳುವ ನಿರ್ಧಾರವು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಇದಕ್ಕಾಗಿ ಮೇ 23ರವರೆಗೆ ಕಾಯಲೇಬೇಕಾಗಿದೆ.

ಕೊನೆ ಕ್ಷಣದ ಕಸರತ್ತು

ಪಕ್ಷದ ಅಭ್ಯರ್ಥಿಗಳು ಮತ್ತು ಮುಖಂಡರು ಬುಧವಾರ ಮತದಾರರನ್ನು ಸೆಳೆಯಲು ಕೊನೆ ಕ್ಷಣದ ಕಸರತ್ತು ನಡೆಸಿದರು.

ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ತೆರೆ ಬಿದ್ದಿರುವುದರಿಂದ ಮತದಾನದ ಹಿಂದಿನ ದಿನ ವಿವಿಧ ಊರುಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಒಳ ಏಟಿನ ಭಯ: ಚುನಾವಣೆಗೆ ಒಂದೆರಡು ದಿನಗಳು ಇರುವಾಗ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾದ ನಿದರ್ಶನಗಳು ಹಲವು ಇವೆ. ಕೊನೆಯ ಒಂದೆರಡು ದಿನ ಪಕ್ಷದ ಅಭ್ಯರ್ಥಿಗಳು ಒಳ ತಂತ್ರ ಮಾಡುವುದರಲ್ಲಿ ನಿರತರಾಗುತ್ತಾರೆ. ಎದುರಾಳಿ ಪಕ್ಷದ ಮುಖಂಡರನ್ನು ತಮ್ಮ‌ತ್ತ ಸೆಳೆಯಲು ಅಥವಾ ಅವರನ್ನು ತಟಸ್ಥರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಇದರಲ್ಲಿ ಅವರು ಯಶಸ್ವಿಯಾದರೆ ಚುನಾವಣೆಯಲ್ಲಿ ಒಳ ಏಟು ಖಚಿತ. ಹಾಗಾಗಿ, ಅಭ್ಯರ್ಥಿಗಳಿಗೆ ಯಾವಾಗಲೂ ಒಳ ಏಟಿನ ಭಯ ಇದ್ದೇ ಇರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !