ಮೋದಿ ‘ಅಲೆ’ಯಲ್ಲಿ ಕೊಚ್ಚಿ ಹೋದ ‘ಅಭಿವೃದ್ಧಿ’

ಬುಧವಾರ, ಜೂನ್ 26, 2019
24 °C
ನುಚ್ಚುನೂರಾದ ಧ್ರುವನಾರಾಯಣ ‘ಹ್ಯಾಟ್ರಿಕ್‌’ ಕನಸು, ಆರನೇ ಬಾರಿಗೆ ಸಂಸದರಾಗಿ ಶ್ರೀನಿವಾಸ ಪ್ರಸಾದ್‌

ಮೋದಿ ‘ಅಲೆ’ಯಲ್ಲಿ ಕೊಚ್ಚಿ ಹೋದ ‘ಅಭಿವೃದ್ಧಿ’

Published:
Updated:
Prajavani

ಚಾಮರಾಜನಗರ: 10 ವರ್ಷಗಳ ಕಾಲ ಸಂಸದರಾಗಿದ್ದ ಕಾಲದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದ ಆರ್‌.ಧ್ರುವನಾರಾಯಣ ಅವರ ಗೆಲುವಿನ ನಾಗಾಲೋಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ತಡೆಯೊಡ್ಡಿದೆ. ಹ್ಯಾಟ್ರಿಕ್‌  ಗೆಲುವು ಸಾಧಿಸುವ ಅವರ ಕನಸು ನುಚ್ಚುನೂರು ಆಗಿದೆ.

‘ಕಾಯಕ ಯೋಗಿ’ ಎಂದೇ ಬಿಂಬಿಸಿಕೊಂಡಿದ್ದ ಧ್ರುವನಾರಾಯಣ ಅವರನ್ನು ‘ಅಭಿವೃದ್ಧಿ’ ಕೆಲಸಗಳು ಕೈಹಿಡಿಲಿವೆ ಎಂದೇ ಹೇಳಲಾಗಿತ್ತು. ಆದರೆ, ದೇಶದಾದ್ಯಂತ ಕಂಡು ಬಂದ ಮೋದಿ ಅಲೆ ಅವರನ್ನು ಸೋಲಿನ ಸುಳಿಗೆ ಸಿಲುಕಿಸಿದೆ. ಐದು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀನಿವಾಸ ಪ್ರಸಾದ್‌ ಅವರು ಈಗ ಆರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಮೋದಿ ಅವರ ಅಲೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹಾಗೂ ತಮ್ಮ ನಾಲ್ಕು ದಶಕಗಳ ರಾಜಕಾರಣ ಪಕ್ಷಕ್ಕೆ ಗೆಲುವು ತಂದು ಕೊಡಲಿದೆ ಎಂದು ವಿ.ಶ್ರೀನಿವಾಸ ಪ್ರಸಾದ್‌ ಹೇಳುತ್ತಲೇ ಇದ್ದರು. ಫಲಿತಾಂಶವನ್ನು ನೋಡಿದಾಗ ಅವರ ಮಾತು ಸತ್ಯವಾದಂತೆ ಕಾಣುತ್ತದೆ. ಅದರಲ್ಲೂ ಮೋದಿ ಅಲೆ ಸ್ವಲ್ಪ ಹೆಚ್ಚೇ ಕೆಲಸ ಮಾಡಿದಂತೆ ತೋರುತ್ತಿದೆ.

ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದರೂ ಸೋಲು: ಚಾಮರಾಜನಗರ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಆರ್‌.ಧ್ರುವನಾರಾಯಣ ಅವರಿಗೆ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ. ಹಾಗಿದ್ದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಎಚ್‌.ಡಿ.ಕೋಟೆ (3,780) ವರುಣಾ (9,002), ತಿ.ನರಸೀಪುರ (6,500), ಹನೂರು (14,250) ಮತ್ತು ಕೊಳ್ಳೇಗಾಲ (194) ಕ್ಷೇತ್ರಗಳಲ್ಲಿ ಧ್ರುವನಾರಾಯಣ ಮುನ್ನಡೆ ಸಾಧಿಸಿ ದ್ದರು. ಆದರೆ, ಚಾಮರಾಜನಗರ (9,681), ಗುಂಡ್ಲುಪೇಟೆ (15,510) ಮತ್ತು ನಂಜನಗೂಡು (9,791) ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ್ದ ಶ್ರೀನಿವಾಸ ಪ್ರಸಾದ್‌ ಅವರು ಧ್ರುವನಾರಾಯಣ ಅವರನ್ನು ಮೀರಿಸಿದರು. 

ಕೈಕೊಟ್ಟ ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕ್ಷೇತ್ರ ಚಾಮರಾಜನಗರದಲ್ಲಿ 9,681 ಮತಗಳ ಹಿನ್ನಡೆ ಸಾಧಿಸಿದ್ದು ಧ್ರುವನಾರಾಯಣ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಹಾಗಾಗಿ ಅಲ್ಲಿ ಶ್ರೀನಿವಾಸ ಪ್ರಸಾದ್‌ ಅವರಿಗೆ ಮುನ್ನಡೆ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಚಾಮರಾಜನಗರದಲ್ಲಿ ಈ ಪ್ರಮಾಣದಲ್ಲಿ ಹಿನ್ನಡೆಯಾಗಲಿದೆ ಎಂದು ಪಕ್ಷ ನಿರೀಕ್ಷಿಸಿರಲಿಲ್ಲ. 

ಹೆಚ್ಚು ಮತಗಳನ್ನು ಪಡೆದ ಬಿಎಸ್‌ಪಿ: ಕಳೆದ ಬಾರಿಯ ಚುನಾವಣೆಯಲ್ಲಿ 34 ಸಾವಿರ ಮತಗಳನ್ನು ಪಡೆದಿದ್ದ ಬಿಎಸ್‌ಪಿ ಈ ಬಾರಿ 87,631 ಮತಗಳನ್ನು ಪಡೆದಿದ್ದು ಕೂಡ ಕಾಂಗ್ರೆಸ್‌ನ ಸೋಲಿಗೆ ಕಾರಣವಾಯಿತು. 

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮುನ್ನಡೆ ತಂದು ಕೊಟ್ಟಿದ್ದ ವರುಣಾ, ಎಚ್‌.ಡಿ.ಕೋಟೆಗಳಲ್ಲಿ ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಅವರು 11 ಸಾವಿರಕ್ಕಿಂತಲೂ ಹೆಚ್ಚು ಮತ ಪಡೆದಿದ್ದಾರೆ. ಕೊಳ್ಳೇಗಾಲದಲ್ಲಿ ಅವರು 13,697 ಮತಗಳನ್ನು ಪಡೆದಿದ್ದಾರೆ. 

ದುಬಾರಿಯಾದ ‘ನೋಟಾ’: ಈ ಬಾರಿಯ ಚುನಾವಣೆಯಲ್ಲಿ 12,716 ‘ನೋಟಾ’ ಮತಗಳು ದಾಖಲಾಗಿದ್ದು ಕೂಡ ಧ್ರುವನಾರಾಯಣ ಅವರಿಗೆ ಮುಳುವಾದಂತೆ ಕಾಣುತ್ತಿದೆ. ಗೆಲವಿನ ಅಂತರಕ್ಕಿಂತ ಏಳು ಪಟ್ಟು ಹೆಚ್ಚು ಮತಗಳು ‘ನೋಟಾ’ಗೆ ಬಿದ್ದಿವೆ.

‘ಪೈಪೋಟಿ ನೀಡಿದ ತೃಪ್ತಿ ಇದೆ’

ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಧ್ರುವನಾರಾಯಣ ಅವರು, ‘ನನ್ನನ್ನು ಬೆಂಬಲಿಸಿದ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಬಿರುಬಿಸಿಲಿನಲ್ಲೂ ನನ್ನ ಜೊತೆ ಕಾರ್ಯಕರ್ತರು ದುಡಿದಿದ್ದಾರೆ’ ಎಂದು ಹೇಳಿದರು.

ಹೋದ ಸಲ 1.41 ಲಕ್ಷದಿಂದ ಗೆದ್ದಿದ್ದಿರಲ್ಲಾ ಎಂದು ಕೇಳಿದ್ದಕ್ಕೆ. ‘ಪ್ರತಿಸ್ಪರ್ಧಿಗೆ ಪ್ರಬಲ ಪೈಪೋಟಿ ಕೊಟ್ಟ ತೃಪ್ತಿ ನನಗಿದೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅತ್ಯಂತ ಕಡಿಮೆ ಅಂತರದಿಂದ ನಾನು ಸೋತಿದ್ದೇನೆ’ ಎಂದಷ್ಟೇ ಹೇಳಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !