ದಾವಣಗೆರೆ: ಟಿಕೆಟ್ ಕೈತಪ್ಪಿದ ಅಸಮಾಧಾನದಿಂದ ಭುಗಿಲೆದ್ದಿದ್ದ ಮುಸ್ಲಿಂ ಸಮುದಾಯದ ಬಂಡಾಯವನ್ನು ಕಾಂಗ್ರೆಸ್ ಶಮನ ಮಾಡುತ್ತಿದ್ದಂತೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿಗೆ ಅಖಾಡ ಸಜ್ಜಾಗಿದೆ. ‘ಕೈ’ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಕೇಸರಿಪಡೆ ಶತಪ್ರಯತ್ನ ನಡೆಸುತ್ತಿದೆ.

ಶಾಮನೂರು ಶಿವಶಂಕರಪ್ಪ ನಿಧನದಿಂದ ಎದುರಾಗಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಮೊಮ್ಮಗ ಸಮರ್ಥ್ ಶಾಮನೂರು ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಟಿ. ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿ ಹುರಿಯಾಳು. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ ಅಸಮಾಧಾನದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾದಿಕ್ ಪೈಲ್ವಾನ್, ಕಣದಿಂದ ನಿವೃತ್ತಿ ಘೋಷಿಸಿ ಸಮರ್ಥ್ ಪರ ನಿಂತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಗಳಿಗೆ ಇದು ಮೊದಲ ಚುನಾವಣೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ಅಫ್ಸರ್ ಕೊಡ್ಲಿಪೇಟೆ, ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ, ಕಾಂಗ್ರೆಸ್ ಉಚ್ಚಾಟಿತ ಮುಖಂಡ ಎಚ್.ಸುಭಾನ್ ಸಾಬ್ ಸೇರಿದಂತೆ ಇತರ 13 ಮುಸ್ಲಿಂ ಉಮೇದುವಾರರು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯ ಕಾಂಗ್ರೆಸ್ ಟಿಕೆಟ್ಗೆ ಪಟ್ಟು ಹಿಡಿದ ಪರಿಣಾಮ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದವು. ಆರಂಭದ ತೊಡಕುಗಳನ್ನು ನಿವಾರಿಸಿಕೊಂಡ ಕಾಂಗ್ರೆಸ್ ಮೈಕೊಡವಿ ಬಿರುಸಿನ ಪ್ರಚಾರದಲ್ಲಿ ತಲ್ಲೀನವಾಗಿದೆ. ಬಣಗಳನ್ನು ಒಗ್ಗೂಡಿಸಿಕೊಂಡಿರುವ ಬಿಜೆಪಿ, ಮತದಾರರ ಮನಗೆಲ್ಲಲು ಕಾರ್ಯತಂತ್ರ ಹೆಣೆದಿದೆ. ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿಯುತ್ತಿದ್ದಂತೆ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸೇರಿ ಇತರರು ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಬೆನ್ನಿಗೆ ನಿಂತಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಬಿಗಿಹಿಡಿತ ಹೊಂದಿದ್ದ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಜಯ ಗಳಿಸಿದ್ದರು. ತಾತನ ದಾರಿಯಲ್ಲಿ ಹೆಜ್ಜೆಹಾಕುವ ಉಮೇದು ಸಮರ್ಥ್ ಶಾಮನೂರು ಅವರಲ್ಲಿ ಕಾಣುತ್ತಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಅವರು ಪುತ್ರನ ಗೆಲುವಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.

‘1994ರಿಂದ ಕ್ಷೇತ್ರದಲ್ಲಿ ಶಾಂತಿ ಕಾಪಾಡಿದ್ದೇವೆ. ಸೌಹಾರ್ದ ಬದುಕು, ಸಾಮರಸ್ಯವೇ ಆದ್ಯತೆ’ ಎಂದು ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ. ‘ಗ್ಯಾರಂಟಿ’ ಯೋಜನೆಗಳೂ ಮತದ ‘ಫಲ’ವಾಗಿ ಗೆಲುವಿನ ದಡ ಸೇರಿಸಬಹುದು ಎಂಬ ಲೆಕ್ಕಾಚಾರವೂ ಇದೆ.

ಕಮಲ ಅರಳಿಸಲು ನಿರಂತರವಾಗಿ ಶ್ರಮಿಸಿ ವಿಫಲವಾಗಿರುವ ಬಿಜೆಪಿ, ಉಪಚುನಾವಣೆಯಲ್ಲಿ ಕಾರ್ಯತಂತ್ರ ಬದಲಿಸಿದೆ. ‘ಇದು ಶ್ರೀಮಂತ (ಶಾಮನೂರು) ಹಾಗೂ ಶ್ರೀಸಾಮಾನ್ಯನ (ಶ್ರೀನಿವಾಸ) ನಡುವಿನ ಚುನಾವಣೆ’ ಎಂಬುದನ್ನು ಒತ್ತಿ ಹೇಳುತ್ತಿದೆ. ‘ಹಣ, ತೋಳ್ಬಲದ ನಡುವೆ ಸಾಮಾನ್ಯ ಅಭ್ಯರ್ಥಿಯನ್ನು ಬೆಂಬಲಿಸಿ’ ಎಂದು ಬಿಜೆಪಿ ಮತಯಾಚನೆ ಮಾಡುತ್ತಿದೆ. ಕ್ಷೇತ್ರವು ಅಭಿವೃದ್ಧಿ ಕಾಣದಿರುವ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು ಎಸ್ಡಿಪಿಐ ಮತಯಾಚನೆ ಮಾಡುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-51-178351796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.